ಶಾಲೆಯಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮಹಿಳೆಗೆ 20 ವರ್ಷ ಜೈಲುಶಿಕ್ಷೆ
ಹೈದರಾಬಾದ್,ಸೆ.17: ಬಾಲಕನೋರ್ವನಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಕ್ಕಾಗಿ ಹೈದ್ರಾಬಾದ್ನ ಶಾಲೆಯೊಂದರಲ್ಲಿ ಕೇರ್ ಟೇಕರ್ ಆಗಿದ್ದ ಮಹಿಳೆಗೆ ಇಲ್ಲಿಯ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಮತ್ತು 20,000 ರೂ.ಗಳ ದಂಡವನ್ನು ವಿಧಿಸಿದೆ.
ಕೆ.ಜ್ಯೋತಿ ಅಲಿಯಾಸ್ ಮಂಜುಳಾ (27) ಶಿಕ್ಷೆಗೆ ಗುರಿಯಾಗಿರುವ ಮಹಿಳೆ.
ಸಂತ್ರಸ್ತ ಬಾಲಕನ ದೂರಿನ ಮೇರೆಗೆ ಚಂದ್ರಾಯನಗುಟ್ಟಾ ಪೊಲೀಸರು ಮಂಜುಳಾ ವಿರುದ್ಧ ಪೊಕ್ಸೊ ಕಾಯ್ದೆ ಮತ್ತು ಐಪಿಸಿಯಡಿ ಪ್ರಕರಣವನ್ನು ದಾಖಲಿಸಿದ್ದರು.
ತನ್ನ ಮಗನ ಶರೀರದ ಮೇಲೆ ಸುಟ್ಟಗಾಯಗಳ ಗುರುತುಗಳು ಕಂಡು ಬಂದಿದ್ದು,ಈ ಬಗ್ಗೆ ಆತನನ್ನು ವಿಚಾರಿಸಿದಾಗ ಶಾಲೆಗೆ ಹೊಸದಾಗಿ ಬಂದಿರುವ ಕೇರ್ಟೇಕರ್ ತಾನು ನಿಸರ್ಗದ ಕರೆಗೆ ಉತ್ತರಿಸಲು ತೆರಳುತ್ತಿದ್ದಾಗ ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಳು. ಪ್ರತಿಬಾರಿಯೂ ಆಕೆ ತನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಳು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆಕೆ ಬೆದರಿಕೆ ಒಡ್ಡಿದ್ದಳು. ಉರಿಯುತ್ತಿರುವ ಸಿಗರೇಟಿನಿಂದ ಶರೀರವನ್ನು ಸುಟ್ಟಿದ್ದಲ್ಲದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಳು ಎಂದು ಆತ ಬಹಿರಂಗಗೊಳಿಸಿದ್ದ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದರು.