varthabharthi


ಕರ್ನಾಟಕ

ಹ್ಯಾಪಿನೆಸ್ ಇಂಡೆಕ್ಸ್ ಆಧಾರದಲ್ಲಿ ಅಭಿವೃದ್ಧಿಗೆ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

ವಾರ್ತಾ ಭಾರತಿ : 17 Sep, 2021

ಕಲಬುರಗಿ, ಸೆ. 17: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹ್ಯಾಪಿನೆಸ್ ಇಂಡೆಕ್ಸ್ ಆಧರಿಸಿ, ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕುಟುಂಬದ ಸಂತೃಪ್ತಿಯ ಮಾನದಂಡವನ್ನು ಆಧರಿಸಿ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ನಿಗದಿ ಪಡಿಸಲಾಗುತ್ತದೆ. ಈ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಈ ಕುರಿತು ಯೋಜನಾ ಮಂಡಳಿಯ ಸದಸ್ಯರು ಹಾಗೂ ಇತರ ಪರಿಣತರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಮ್ಮ ನಾಯಕ ಯಡಿಯೂರಪ್ಪ ಈ ಭಾಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ನೈತಿಕವಾಗಿ ಕಲ್ಯಾಣವಾಗಬೇಕು ಎಂಬ ಆಶಯದೊಂದಿಗೆ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿ ಮಾಡುವುದಕ್ಕೆ ತಮಗೆ ದೊರೆತಿರುವ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಇಚ್ಛೆ ನನ್ನದು ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ಈ ಭಾಗವನ್ನು ಎರಡು ಸ್ತರಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ. ಜನೋಪಯೋಗಿ ಬೃಹತ್ ನೀರಾವರಿ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಯೋಜನೆಗಳ ಅನುಷ್ಠಾನದೊಂದಿಗೆ ಉದ್ಯೋಗ ಸೃಜನೆ ಮಾಡಬೇಕಾಗಿದೆ. ಇದರೊಂದಿಗೆ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಅದರ ಜೊತೆಗೆ ಕೃಷ್ಣಾಮೇಲ್ದಂಡೆ ಹಂತ 3ರಡಿ ಕಲಬುರಗಿ, ರಾಯಚೂರು, ವಿಜಾಪುರ ಜಿಲ್ಲೆಯ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗುವುದು. ಎನ್‍ಆರ್‍ಬಿಸಿ, ಎನ್‍ಎಲ್‍ಬಿಸಿ, ಮಲ್ಲಬಾದ್, ಜೇವರ್ಗಿ ಶಾಖಾ ಕಾಲುವೆ ಮೊದಲಾದವುಗಳನ್ನು ಪೂರ್ಣಗೊಳಿಸುವ ಚಿಂತನೆ ನಮ್ಮದು ಎಂದು ಅವರು ತಿಳಿಸಿದರು.

ಕೈಗಾರಿಕೆಯಲ್ಲಿ ಜವಳಿ, ಔಷಧಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಹೂಡಿಕೆದಾರರ ಸಭೆ ಕರೆದು, ಈ ಭಾಗದ ಯೋಜನೆಗಳಿಗೆ ಅನುಮೋದನೆ ನೀಡಿ, ದೊಡ್ಡ ಪ್ರಮಾಣದ ಹೂಡಿಕೆ ಆಕರ್ಷಿಸಲು ಉದ್ದೇಶಿಸಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದು. ಉದ್ಯೋಗ ಸೃಜನೆಯನ್ನು ಆಧರಿಸಿ ಕೈಗಾರಿಕೆಗಳಿಗೆ ಪ್ರೋತ್ಸಾಹಕ ನೀಡಲು ನಿರ್ಧರಿಸಲಾಗಿದೆ. ಈ ವರೆಗೆ ಬಂಡವಾಳದ ಪ್ರಮಾಣವನ್ನು ಆಧರಿಸಿ ಪ್ರೋತ್ಸಾಹ ನೀಡಲಾಗುತ್ತಿತ್ತು ಎಂದು ಅವರು ವಿವರಿಸಿದರು.

ಕಲ್ಯಾಣ ಕರ್ನಾಟಕ ಮಂಡಳಿ 13 ಸಾವಿರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಕಳೆದ ವರ್ಷ ಹಾಗೂ ಈ ವರ್ಷದ 1,500 ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ವರ್ಷ 400 ಕೋಟಿ ರೂ.ಬಿಡುಗಡೆಯಾಗಿದೆ. ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಮುಂದಿನ ಮಾರ್ಚ್ ವೇಳೆಗೆ ಮಂಜೂರಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗುರಿ ನೀಡಲಾಗಿದೆ. ಮಂಡಳಿಯ ಅನುಷ್ಠಾನ ಸಾಮಥ್ರ್ಯವನ್ನು ಗಮನಿಸಿ, ಅನುದಾನ ದ್ವಿಗುಣಗೊಳಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.

ನಂಜುಂಡಪ್ಪ ವರದಿ ಪರಿಷ್ಕರಣೆ ಮಾಡಲು ಉದ್ದೇಶಿಸಿದೆ. ಅಂದಿನ ನಂಜುಂಡಪ್ಪ ವರದಿಯ ಮಾನದಂಡಗಳು, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧರಿಸಿ, ವಿಶೇಷ ಅಭಿವೃದ್ಧಿ ಯೋಜನೆಯನ್ನು ಹೊಸ ಗುರಿ ನಿಗದಿಯೊಂದಿಗೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರಕಾರದಲ್ಲಿ ಆರ್ಥಿಕ ಶಿಸ್ತನ್ನು ತರಬೇಕು. ಆದ್ಯತೆಗಳನ್ನು ಗುರುತಿಸಬೇಕಾಗಿದೆ. ಬದ್ಧ ವೆಚ್ಚ ಕಡಿಮೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸುವ ಅವಕಾಶ ಸೃಷ್ಟಿ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇದುವರೆಗೆ ಮಾಡಿರುವ ವೆಚ್ಚದ ಭೌತಿಕ ಪ್ರಗತಿಯ ಮೌಲ್ಯ ಮಾಪನ ಮಾಡಲಾಗುವುದು ಎಂದು ತಿಳಿಸಿದರು.

ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಕುರಿತು, ಇದು ದೂರಗಾಮಿ ಪರಿಣಾಮ ಬೀರುವ ವಿಷಯವಾಗಿದ್ದು, ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಕೊಡುವ ಬಗ್ಗೆ ಚರ್ಚೆ ಮಾಡಲಾಗುವುದು. ಆದರೆ ಡಿಪಿಎಆರ್‍ನ ವಿಶೇಷ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು. 371 (ಜೆ) ಅನುಷ್ಠಾನಕ್ಕೆ ರಚಿಸಲಾದ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)