varthabharthi


ನಿಮ್ಮ ಅಂಕಣ

ಶೇ.10ರ ಮೀಸಲಾತಿ: ರಾಜ್ಯದಲ್ಲಿ ಅನುಷ್ಠಾನ ಸಾಧ್ಯವೇ?

ವಾರ್ತಾ ಭಾರತಿ : 18 Sep, 2021
ಕೆ.ಎನ್. ಲಿಂಗಪ್ಪ (ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಎಲ್ಲಾ ಜಾತಿ-ಉಪಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ದಿಸೆಯಲ್ಲಿ, ಸರಕಾರ ಋಜುಮಾರ್ಗ ಅನುಸರಿಸಿ, ಹೊಸದಾಗಿಯೇ ಹಿಂದುಳಿದ ವರ್ಗಗಳ ಯಾದಿಯನ್ನು ಆಮೂಲಾಗ್ರವಾಗಿ 2015ರ ಸಮೀಕ್ಷೆಯ ದತ್ತಾಂಶಗಳ ಸಹಾಯದಿಂದ ಸಿದ್ಧಪಡಿಸಬಹುದು. ಇಲ್ಲವೇ, ಕಳೆದ 27 ವರ್ಷಗಳಿಂದಲೂ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಯಾದಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಕಾಯ್ದೆ ರೂಪಿತಗೊಂಡು ಕರ್ನಾಟಕದಲ್ಲೂ ಅದು ಜಾರಿಯಲ್ಲಿದೆ. ಕಾಯ್ದೆಯಂತೆಯೇ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಯಾದಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ. ಆದರೆ ಈ ನಿಟ್ಟಿನಲ್ಲಿ ಸರಕಾರ ಮತ್ತು ಆಯೋಗ ದಿವ್ಯ ನಿರ್ಲಕ್ಷ ವಹಿಸಿವೆ.

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ಹಲವು ಶತಮಾನಗಳಿಂದಲೂ ಬೇರೂರಿರುವುದಕ್ಕೆ ತಳಸಮುದಾಯಗಳ ಬದುಕು-ಬವಣೆಯೇ ಸಾಕ್ಷಿ ಎಂಬುದನ್ನು ಗಮನಿಸಿ, ಅಂತಹ ಸಾಮಾಜಿಕ ಅಸಮಾನತೆಯನ್ನು ತೊಲಗಿಸಿ ಸಮಸಮಾಜ ಕಟ್ಟಲೂ ಸಂವಿಧಾನ ಜನಕರು ಅಡಿಪಾಯ ಹಾಕಿಕೊಟ್ಟರು. ಅದು, ಅವರಿಗಿದ್ದ ದೂರದೃಷ್ಟಿ! ಆ ದೂರದೃಷ್ಟಿಯ ಫಲಶ್ರುತಿ ಎಂಬಂತೆ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮತ್ತು ಸಾರ್ವಜನಿಕ ವಲಯಗಳಲ್ಲಿ ನೌಕರಿ ಪಡೆಯಲು ‘ಆದ್ಯತಾ ಉಪಚಾರ ತತ್ವ’ದ (preferential treatment policy)ಮೇರೆಗೆ ಹಿಂದುಳಿದ ವರ್ಗಗಳಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿ ಕೊಟ್ಟರು. ಜಾತಿಯನ್ನು ಆಧರಿಸಿದ ಈ ವರ್ಗಗಳಿಗೆ ‘ಸಾಕಷ್ಟು ಪ್ರಾತಿನಿಧ್ಯ’(adequate representation)ಸಿಗುವಂತೆ ಅವಕಾಶ ನೀಡಿರುವುದಕ್ಕೆ ನಮ್ಮ ಮುಂದಿರುವ ಸಂವಿಧಾನದ ವಿಧಿಗಳೇ ಸಾಕ್ಷಿ.

ಸಂವಿಧಾನ ಕರ್ತೃಗಳ ಆಶಯವು ಕೂಡಾ ಸಾಮಾಜಿಕ ಅನಿಷ್ಟಕ್ಕೆ ಪರಿಹಾರವಾಗಿ, ಮೀಸಲಾತಿ ಕಲ್ಪಿಸುವುದಾಗಿತ್ತೇ ವಿನಃ, ಅದು ಬಡತನ ಹೋಗಲಾಡಿಸುವ ಕಾರ್ಯಕ್ರಮವಾಗಿ ಅಲ್ಲ. ಹಾಗಾಗಿ, ಮೀಸಲಾತಿ ಪರಿಕಲ್ಪನೆಯ ಮುನ್ನೆಲೆಗೆ ಕಾರಣ ಜಾತಿ ಎಂಬ ಅನಿಷ್ಟ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಮತ್ತು ಬಡತನಗಳೆರಡೂ ಒಟ್ಟಿಗೆ ಸಾಗುತ್ತಿವೆ. ಜಾತಿ ಎಂಬುದು ಧರ್ಮ ಮತ್ತು ಸಾಮಾಜಿಕ ವ್ಯವಸ್ಥೆಯೊಳಗೆ ನೆಲೆಗೊಂಡಿದ್ದರೆ, ಅಧಿಕಾರ ಸೂತ್ರ ಹಿಡಿದವರ ಅಸಮರ್ಪಕ ಆರ್ಥಿಕ ನೀತಿ ಮತ್ತು ದೂರದೃಷ್ಟಿ ಇಲ್ಲದೇ ರೂಪಿತವಾಗುತ್ತಿರುವ ಕಾರ್ಯಯೋಜನೆಗಳ ಫಲದಿಂದ ಬಡತನವಿದೆ. ಬಡತನ ಹೋಗಲಾಡಿಸಲು ಸಾಧ್ಯವಿದೆ; ಆದರೆ, ಜನ್ಮತಃ ಅಂಟಿಕೊಂಡೇ ಇರುವ ಜಾತಿಗೆ ಅವಸಾನವಿಲ್ಲ.ಅಸ್ಪೃಶ್ಯವರ್ಗ ಮತ್ತು ಹಿಂದುಳಿದ ವರ್ಗಗಳನ್ನು ಗುರುತಿಸಿ ಅವಕ್ಕೆ ಪರಿಹಾರ ರೂಪದ ಪ್ರಾತಿನಿಧ್ಯ ನೀಡಲು ಕರಡು ಸಂವಿಧಾನದಲ್ಲಿಯೇ ಅವಕಾಶ ಕೊಡಲಾಗಿತ್ತು.

ವಸ್ತುಸ್ಥಿತಿ ಹೀಗಿದ್ದಾಗ್ಯೂ, ಸಂವಿಧಾನ ಜಾರಿಗೆ ಬಂದ ನಂತರ, ಆ ದಿನಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇನೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಉತ್ಸುಕತೆ ತೋರಿಸಲಿಲ್ಲ. 1979ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿತು. ಆಯೋಗ ಕೊಟ್ಟ ವರದಿ ಆಧರಿಸಿ 1990ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಕೋಟಾ ನಿಗದಿಪಡಿಸಿ ಕೇಂದ್ರ ಸರಕಾರ ಮೀಸಲಾತಿ ಜಾರಿಗೊಳಿಸಿತು ಹಾಗೂ ಮೀಸಲಾತಿಗೆ ಒಳಪಡದ, ಆರ್ಥಿಕ ದುರ್ಬಲ ವರ್ಗಗಳಿಗೂ ಮೀಸಲಾತಿ ನೀಡಿ ಆದೇಶ ಹೊರಡಿಸಿತು. ಕೇಂದ್ರ ಸರಕಾರ ಹಿಂದುಳಿದ ವರ್ಗಗಳಿಗೆ ಕೊಟ್ಟ ಮೀಸಲಾತಿಯನ್ನು ಮಾತ್ರ ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿಯಿತು(ಇಂದ್ರಾ ಸಹಾನಿ vs ಭಾರತ ಸರಕಾರ). ಆದರೆ, ಆರ್ಥಿಕ ದುರ್ಬಲ ವರ್ಗಗಳಿಗೆ ಕಲ್ಪಿಸಿದ ಮೀಸಲಾತಿಯನ್ನು ಸಂವಿಧಾನ ವಿರೋಧಿ ಎಂದು ರದ್ದುಗೊಳಿಸಿತು. ಇಷ್ಟಾದರೂ, ಗುಜರಾತ್ ಒಳಗೊಂಡಂತೆ ಕೆಲವು ರಾಜ್ಯಗಳು ಮೇಲ್ವರ್ಗದವರ ಕಣ್ಣೊರೆಸುವ ತಂತ್ರವಾಗಿ, ಮೀಸಲಾತಿ ಜಾರಿಗೊಳಿಸಿದವು. ಈ ಆದೇಶಗಳು ಸ್ವಾಭಾವಿಕವಾಗಿ ನ್ಯಾಯಾಲಯಗಳಲ್ಲಿ ಅಸಿಂಧು ಎಂದು ಆದೇಶಿಸಲ್ಪಟ್ಟವು ಎಂಬುದನ್ನು ಹೇಳುವ ಅಗತ್ಯವೇ ಇಲ್ಲ.

ಮೀಸಲಾತಿಯನ್ನು ಮೂದಲಿಸುತ್ತಿದ್ದ ಮೇಲ್ವರ್ಗದ ಜನ, ಆರ್ಥಿಕ ದುರ್ಬಲ ವರ್ಗಗಳಿಗೂ ಮೀಸಲಾತಿ ನೀಡಬೇಕೆಂದೂ ತೆರೆಮರೆಯಲ್ಲಿ ಒತ್ತಡ ಹಾಕುತ್ತಲೇ ಇದ್ದರು. ಆಗಿನ ಸರಕಾರಗಳು ಮಾತ್ರ ಜಾಣ ಕಿವುಡುತನಕ್ಕೆ ಮೊರೆಹೋದವು.ಆದರೆ, ಆ ಕಾಲವೂ ದೂರವೇನಿರಲಿಲ್ಲ. ಮೇಲ್ವರ್ಗದ ಪಕ್ಷವೆಂದೇ ಆರೋಪ ಹೊತ್ತಿರುವ ಬಿಜೆಪಿ 2014ರಲ್ಲಿ ಕೇಂದ್ರ ಸರಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ, ಆರ್ಥಿಕ ದುರ್ಬಲ ವರ್ಗಗಳಿಗೂ ಮೀಸಲಾತಿ ನೀಡಬೇಕೆಂಬ ಕೂಗಿಗೆ ಮರುಜೀವ ಬಂದಿತು. ಇದನ್ನು ತನ್ನ ಆಂತರ್ಯದಲ್ಲೇ ಹುದುಗಿಸಿಕೊಂಡು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಬಿಜೆಪಿಯು ಜಾಗೃತವಾಯಿತು. ಮುಂಬರುವ 2019ರ ಚುನಾವಣೆಗಾಗಿ, ಮೇಲ್ವರ್ಗಗಳ ಮತಗಳ ಮೇಲೆ ಕಣ್ಣಿಟ್ಟು, ಅದನ್ನು ಜಾರಿಗೊಳಿಸುವ ಅನಿವಾರ್ಯತೆ ಎದುರಾದುದರಿಂದ, 2019ರ ಜನವರಿ ತಿಂಗಳಲ್ಲಿ ಸಂವಿಧಾನ ತಿದ್ದುಪಡಿಗೆ ಸರಕಾರ ಮಸೂದೆಯೊಂದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಮಿಂಚಿನೋಪಾದಿಯಲ್ಲಿ ಅನುಮೋದನೆ ಪಡೆದುಕೊಂಡಿತು.

103ನೇ ತಿದ್ದುಪಡಿ ನಿಮಿತ್ತ, ಉಪವಿಧಿಗಳಾದ 15(6) ಮತ್ತು16(6) ಹೊಸದಾಗಿ ಸಂವಿಧಾನದಲ್ಲಿ ಸ್ಥಾನ ಪಡೆದವು. ತತ್ಕಾರಣ ಆರ್ಥಿಕ ದುರ್ಬಲರಿಗೆ ಗರಿಷ್ಠ ಶೇ.10ರಷ್ಟು ಮೀಸಲಾತಿ ನೀಡಲು ಸಂವಿಧಾನದ ಮಾನ್ಯತೆ ಸಿಕ್ಕಂತಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನೂ ಮೇಲ್ವರ್ಗದವರು ವಿರೋಧಿಸಿ ತೀಕ್ಷ್ಣ ಸ್ವರೂಪದ ಹೋರಾಟಕ್ಕಿಳಿದು, ನಾಲ್ಕಾರು ಅಮಾಯಕರ ಪ್ರಾಣಕ್ಕೂ ಎರವಾಗಿದ್ದವರು ಸಂವಿಧಾನ ತಿದ್ದುಪಡಿಯನ್ನು ಮರುಮಾತಿಲ್ಲದೆ ಒಪ್ಪಿಬಿಟ್ಟರು.

ತಿದ್ದುಪಡಿ ಅನ್ವಯ, ಆರ್ಥಿಕ ದುರ್ಬಲ ವರ್ಗಗಳಿಗೆ ಒಳಪಟ್ಟಂತೆ ‘ಸಂವಿಧಾನ (103ನೇ ತಿದ್ದುಪಡಿ) ಕಾಯ್ದೆ, 2019’ ದಿ: 14.1.2019ರಿಂದ ಜಾರಿಗೆ ಬಂದಿದೆ. ವಿಧಿ15(6)ರ ರೀತಿಯ ಸರಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಹಾಗೂ 16(6)ರಂತೆ ಸರಕಾರದ ಹುದ್ದೆಗಳ ನೇಮಕಾತಿಗಾಗಿ ಮೀಸಲಾತಿ ಕಲ್ಪಿಸಬೇಕು ಎಂಬುದೂ ನಿಶ್ಚಿತವಾಯಿತು.

ಈ ಎರಡೂ ಹೊಸ ತಿದ್ದುಪಡಿಗಳ ರೀತಿಯ, ಕೇಂದ್ರ ಸರಕಾರದ ನಾಗರಿಕ ಹುದ್ದೆಗಳ ನೇಮಕಾತಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಮೀಸಲಾತಿ ಕಲ್ಪಿಸಲು ಕೇಂದ್ರ ಸರಕಾರದ ಸಿಬ್ಬಂದಿ, ಕುಂದುಕೊರತೆ ಮತ್ತು ಪಿಂಚಣಿ ಮಂತ್ರಾಲಯ ದಿ: 19.11.2019ರಂದು ಅಧಿಸೂಚನೆ ಹೊರಡಿಸಿದೆ.ಉತ್ತರ ಭಾರತದ ಕೆಲವು ರಾಜ್ಯಗಳು, ತಮ್ಮ ರಾಜ್ಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಹಾಗೂ ಹುದ್ದೆಗಳ ನೇಮಕಾತಿಗಾಗಿ ಆದೇಶ ಹೊರಡಿಸಿವೆ. ಕರ್ನಾಟಕ ರಾಜ್ಯ ಕೇಂದ್ರ ಸರಕಾರದ ಅಧಿಸೂಚನೆ ಆಧರಿಸಿ, ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೇ.10ರ ಮೀಸಲಾತಿಗೆ ಒಳಪಡುವ ಜಾತಿಗಳ ಪಟ್ಟಿಯನ್ನು ದಿ: 14.5.2019ರ ಆದೇಶದಲ್ಲಿ ಪ್ರಕಟಿಸಿದೆ(ಕೇಂದ್ರ ಸರಕಾರದ ಹುದ್ದೆಗಳಿಗೆ ಸಂಬಂಧಿಸಿದಂತೆ). ಆದೇಶದಲ್ಲಿ ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿರುವ ಜಾತಿ-ಉಪಜಾತಿಗಳನ್ನು ಹೊರತುಪಡಿಸಿ, ಅನುಬಂಧ-2ರಲ್ಲಿ ‘ಆರ್ಥಿಕ ದುರ್ಬಲ ವರ್ಗಗಳು’(ews) ಎಂದೂ 144 ಜಾತಿ-ಉಪಜಾತಿಗಳನ್ನು ಪಟ್ಟಿ ಮಾಡಿತ್ತು. ಆದರೆ, ಪಟ್ಟಿ ಆಕ್ಷೇಪಣೆಗೆ ಒಳಪಟ್ಟಿದ್ದರಿಂದ(ಇದೇ ಲೇಖಕನ ‘ಶೇ.10ರ ಮೀಸಲಾತಿ: ಜಾತಿಗಳ ಅಸಮರ್ಪಕ ಸೇರ್ಪಡೆ’ ಎಂಬ ಲೇಖನ ‘ವಾರ್ತಾಭಾರತಿ’ಯಲ್ಲಿ 23.10.20 ರಂದು ಪ್ರಕಟವಾಗಿದೆ) ಅದನ್ನು ಸರಕಾರ ಹಿಂಪಡೆದಿದೆ(ಹಿಂವಕ 75ಬಿಸಿಎ 2019 ಬೆಂ, ದಿ:31.7.21).

ಕೇಂದ್ರ ಸರಕಾರವೇನೋ ಸಂವಿಧಾನ ತಿದ್ದುಪಡಿ ತಂದಿರುವುದಾದರೂ, ರಾಜ್ಯ ಸರಕಾರದ ಹುದ್ದೆಗಳಿಗಷ್ಟೇ ಅನ್ವಯಿಸುವ ಹಾಗೆ ನೇಮಕ ಮಾಡಲು ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಲೂ ಕರ್ನಾಟಕ ಈ ತನಕ ಮುಂದಾಗಿಲ್ಲ. ಇತರ ಹಲವು ರಾಜ್ಯಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಂಡಿರುವ ಬಗ್ಗೆ ವರದಿಗಳಿವೆ. ಬಹುಶಃ ಮೀಸಲಾತಿಗೆ ಒಳಪಡದ ಸಮುದಾಯಗಳ ಒತ್ತಡದ ಹಿನ್ನೆಲೆಯಲ್ಲಿ ಆ ರಾಜ್ಯಗಳು ಆದೇಶ ಹೊರಡಿಸಿರಲೂಬಹುದು. ಆದರೆ ಕರ್ನಾಟಕದಲ್ಲಿ ಮಾತ್ರ ಶೇ.10ರ ಮೀಸಲಾತಿ ಅನುಷ್ಠಾನಕ್ಕೆ ಅಷ್ಟಾಗಿ ಹಕ್ಕೊತ್ತಾಯ ಇಲ್ಲದಿರಬಹುದು. ಹೀಗಾಗಿ ಸರಕಾರ ಸುಖಾಸುಮ್ಮನೆ ತಲೆಬೇನೆ ತಂದುಕೊಳ್ಳುವುದು ಬೇಡ ಎಂಬ ನಿಲುವಿಗೆ ಅಂಟಿಕೊಂಡಿರುವ ಸಾಧ್ಯತೆಯೂ ಇದೆ. ಹಾಗಾದರೆ ಆರ್ಥಿಕ ದುರ್ಬಲ ವರ್ಗಗಳಿಗೆ ಸಂವಿಧಾನ ತಿದ್ದುಪಡಿಯ ಹೊರತಾಗಿಯೂ ಮೀಸಲಾತಿ ಕಲ್ಪಿಸದಿರುವುದು ನ್ಯಾಯೋಚಿತವಲ್ಲ ಎಂಬ ಅನಿಸಿಕೆ ಆ ವರ್ಗಗಳಿಗೆ ಇಲ್ಲ ಎಂದೂ ಹೇಳಲಾಗದು.

ಸರಕಾರ ಈ ದಿಸೆಯಲ್ಲಿ ಆಸಕ್ತವಾಗಿದೆಯೋ ಇಲ್ಲವೋ ತಿಳಿಯದು.ಆಸಕ್ತಿ ಇದ್ದಲ್ಲಿ ಮೀಸಲಾತಿ ನೀಡಿ ಆದೇಶ ಹೊರಡಿಸಲು ಸರಕಾರಕ್ಕೆ ಇರುವ ಸಮಸ್ಯೆಯಾದರೂ ಏನು ಎಂಬುದು. ಅದನ್ನೇ ಮುಂದಿಟ್ಟುಕೊಂಡು ಅವಲೋಕಿಸಿದಾಗ ಕೆಲವು ಅಂಶಗಳು ಗೋಚರಿಸುತ್ತವೆ.

ಕರ್ನಾಟಕದಲ್ಲಿ ಸದ್ಯ 3 ವರ್ಗಗಳಿಗೆ ಅನ್ವಯಿಸುವ ಮೀಸಲಾತಿ ಅನುಷ್ಠಾನದಲ್ಲಿದೆ. ಅವು, 1.ಪರಿಶಿಷ್ಟ ಜಾತಿ ಮತ್ತು 2.ಪರಿಶಿಷ್ಟ ಪಂಗಡ ಹಾಗೂ 3. ಹಿಂದುಳಿದ ವರ್ಗ. ಪರಿಶಿಷ್ಟ ಜಾತಿಯಲ್ಲಿ 181, ಪರಿಶಿಷ್ಟ ಪಂಗಡದಲ್ಲಿ 103 ಜಾತಿ-ಉಪಜಾತಿಗಳಿವೆ. ಅಂತೆಯೇ, ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿ 385, ಪ್ರವರ್ಗ-2ಎಯಲ್ಲಿ 365, ಪ್ರವರ್ಗ-2ಬಿಯಲ್ಲಿ 1(ಮುಸ್ಲಿಂ), ಪ್ರವರ್ಗ-3ಎಯಲ್ಲಿ 34 ಹಾಗೂ ಪ್ರವರ್ಗ-3ಬಿಯಲ್ಲಿ 43 ಜಾತಿ-ಉಪಜಾತಿಗಳು ಸೇರಿವೆ. ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಜಾತಿಗಳನ್ನು ಹೊರತುಪಡಿಸಿ, ಬಹುತೇಕ ಜಾತಿ-ಉಪಜಾತಿಗಳು ಒಂದಲ್ಲ ಒಂದು ವರ್ಗಗಳಲ್ಲಿ ಅವಕಾಶ ಪಡೆದು ಮೀಸಲಾತಿಗೆ ಒಳಪಟ್ಟಿವೆ. ಒಂದು ಅಂದಾಜಿನಂತೆ, ಶೇ. 95ಕ್ಕೂ ಹೆಚ್ಚು ಜನಸಂಖ್ಯೆಯನ್ನೊಳಗೊಂಡ ಜಾತಿ-ಉಪಜಾತಿಗಳು ಮೀಸಲಾತಿಗೆ ಒಳಪಟ್ಟಿವೆ. ಕರ್ನಾಟಕದಲ್ಲಿ ಬಹುಕಾಲದಿಂದ ನೆಲೆನಿಂತ, ಆದರೆ ಯಾವುದೇ ವಿಧದ ಮೀಸಲಾತಿಗೂ ಒಳಪಡದ ಜಾತಿಗಳು: 1.ಬ್ರಾಹ್ಮಣ 2.ಜೈನ ( ಶ್ವೇತಾಂಬರ, ಬಣಜಿಗ, ಚತುರ್ಥ, ಜವೇರಿ, ಂಚಮ) 3.ಮೊದಲಿಯಾರ್ 4.ನಗರ್ಥ(ಚೆಟ್ಟಿ ಜಾತಿಯ ಉಪಜಾತಿ) 5.ನಾಯರ್ 6.ಆರ್ಯವೈಶ್ಯ...

ಹೊಸ ಉಪವಿಧಿ16(6)ರ ರೀತಿಯ ಮೀಸಲಾತಿಗೆ ಒಳಪಡದ ಆರ್ಥಿಕ ದುರ್ಬಲ ವರ್ಗಗಳಿಗೆ ಗರಿಷ್ಠ ಶೇ.10ರಷ್ಟು ಮೀಸಲಾತಿ ಕೋಟಾ ನಿಗದಿ ಪಡಿಸಲು ಅವಕಾಶವಿದೆ. ಆ ನಿಮಿತ್ತ ಕರ್ನಾಟಕವೂ ಆದೇಶ ಹೊರಡಿಸಿ ಮೀಸಲಾತಿ ನೀಡಬಹುದಾಗಿದೆ. ಆದರೆ ಗರಿಷ್ಠ ಶೇ.10ರಷ್ಟು ಮೀಸಲಾತಿ ಕೋಟಾ ಲಭ್ಯವಿದ್ದರೂ, ಆರ್ಥಿಕ ದುರ್ಬಲ ವರ್ಗಗಳಿಗೆ ಯಾವ ಅಳತೆಗೋಲನ್ನು ಅನುಸರಿಸಿ ಶೇಕಡವಾರು ಕೋಟಾ ನಿಗದಿ ಮಾಡಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೀಸಲಾತಿಗೆ ಒಳಪಡದ ಆರ್ಥಿಕ ದುರ್ಬಲ ವರ್ಗಗಳ ಜನಸಂಖ್ಯೆ ಶೇ. 5ರ ಆಸುಪಾಸು ಇದೆ ಎಂದು ಇಟ್ಟುಕೊಂಡರೂ, ಶೇಕಡವಾರು ಮೀಸಲಾತಿ ಕೋಟಾವನ್ನು 5ಕ್ಕೆ ನಿಗದಿಪಡಿಸಲಾಗುವುದಿಲ್ಲ. ಏಕೆಂದರೆ, ಹಿಂದುಳಿದ ವರ್ಗಗಳಿಗೆ ಜನಸಂಖ್ಯಾ ಪ್ರಮಾಣಕ್ಕನುಸಾರ ಕೋಟಾ ನಿಗದಿಗೊಳಿಸಲಾಗಿಲ್ಲ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.77ರಷ್ಟು ಇರುವ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಕೋಟಾ ಎಲ್ಲಾ ಪ್ರವರ್ಗಗಳೂ ಸೇರಿ ಶೇ. 32ರಷ್ಟು ಮಾತ್ರ. ಹಿಂದುಳಿದ ವರ್ಗಗಳು ಎಂದು ಗುರುತಿಸಿರುವ ಅಷ್ಟೂ ಜನಸಂಖ್ಯೆಗೆ ನಿಗದಿಪಡಿಸಲಾಗಿರುವ ಪ್ರಮಾಣ(ಅನುಪಾತ) ಶೇ. 41ರಷ್ಟು ಮಾತ್ರ. ಆದುದರಿಂದ, ಅದೇ ಪ್ರಮಾಣದಲ್ಲಿ ಅಳವಡಿಸುವುದಾದರೆ, ಆರ್ಥಿಕ ದುರ್ಬಲ ವರ್ಗಗಳಿಗೆ ನಿಗದಿಪಡಿಸಬಹುದಾದ ಕೋಟಾ ಕೇವಲ ಶೇ. 2 ಮಾತ್ರ.

ವಾಸ್ತವಾಂಶ ಹೀಗಿರಬೇಕಾದರೆ, ಸರಕಾರ ಈ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಾಧ್ಯತೆ ಬಗ್ಗೆ ಯುಕ್ತ ಆಲೋಚಿಸಬೇಕಾಗಿದೆ. ಒಂದು ವೇಳೆ ಮೀಸಲಾತಿ ಕಲ್ಪಿಸಲು ಅವಕಾಶವಿದೆಯೆಂದೂ, ಶೇ. 2ರಷ್ಟು ಕೋಟಾ ನಿಗದಿಪಡಿಸಿ ಆದೇಶ ಹೊರಡಿಸಿದರೆ ನಿಷ್ಕಾರಣವಾಗಿ ಶೇ. 8ರಷ್ಟು ಕೋಟಾ ವ್ಯರ್ಥವಾಗುತ್ತದೆ. ಹಾಗಾದರೆ, ಸರಕಾರದ ಮುಂದಿರುವ ಆಯ್ಕೆಗಳೇನು ಎಂಬ ಪ್ರಶ್ನೆ ಹುಟ್ಟುವುದು ಸಹಜ.

ಎಲ್ಲಾ ಜಾತಿ-ಉಪಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ದಿಸೆಯಲ್ಲಿ, ಸರಕಾರ ಋಜುಮಾರ್ಗ ಅನುಸರಿಸಿ, ಹೊಸದಾಗಿಯೇ ಹಿಂದುಳಿದ ವರ್ಗಗಳ ಯಾದಿಯನ್ನು ಆಮೂಲಾಗ್ರವಾಗಿ 2015ರ ಸಮೀಕ್ಷೆಯ ದತ್ತಾಂಶಗಳ ಸಹಾಯದಿಂದ ಸಿದ್ಧಪಡಿಸಬಹುದು. ಇಲ್ಲವೇ, ಕಳೆದ 27 ವರ್ಷಗಳಿಂದಲೂ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಯಾದಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಕಾಯ್ದೆ ರೂಪಿತಗೊಂಡು ಕರ್ನಾಟಕದಲ್ಲೂ ಅದು ಜಾರಿಯಲ್ಲಿದೆ. ಕಾಯ್ದೆಯಂತೆಯೇ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಯಾದಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ. ಆದರೆ ಈ ನಿಟ್ಟಿನಲ್ಲಿ ಸರಕಾರ ಮತ್ತು ಆಯೋಗ ದಿವ್ಯ ನಿರ್ಲಕ್ಷ ವಹಿಸಿವೆ. ಈ ಶಾಸನಬದ್ಧ ಪ್ರಕಾರ್ಯವನ್ನೂ ಕೈಗೊಳ್ಳದಿರುವ ಸರಕಾರ ಮತ್ತು ಆಯೋಗದ ನಡೆಯನ್ನು ಯಾವ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳೂ ನ್ಯಾಯಾಲಯದಲ್ಲಿ ಪ್ರಶ್ನಿಸುವ ಗೊಡವೆಗೆ ಹೋಗಿಲ್ಲದಿರುವುದೂ ಆ ವರ್ಗಗಳ ಬಗೆಗಿರುವ ನಿಷ್ಕಾಳಜಿಗೆ ಕಾರಣವಾಗಿದೆ. ಕಾಯ್ದೆಯನ್ವಯ ನಾಗರಿಕರ ಯಾವುದೇ ವರ್ಗವು, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಲು ಅರ್ಹತೆ ಇದ್ದಲ್ಲಿ ಸೇರಿಸಲು ಮತ್ತು ಅನರ್ಹತೆ ಇದ್ದಲ್ಲಿ ಪಟ್ಟಿಯಿಂದ ಹೊರಗಿಡಲು ಕೂಡಾ ಸರಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕೆ ಇದೆ. ಸಂವಿಧಾನದ ವಿಧಿ16(4)ರ ಆಜ್ಞಾರ್ಥಕದಂತೆ, ಹಿಂದುಳಿದ ವರ್ಗಗಳ ಯಾದಿಯಲ್ಲಿದ್ದೂ ‘ಸಾಕಷ್ಟು ಪ್ರಾತಿನಿಧ್ಯ’ ಪಡೆದಿರುವ ವರ್ಗಗಳನ್ನು ‘ದ್ವಿತೀಯ ಮೂಲದ ಮಾಹಿತಿ’ಯನ್ನು (secondary source of information) ಆಧರಿಸಿ ಗುರುತಿಸಬಹುದು. ಈ ಪ್ರಕಾರ್ಯವನ್ನು ನಿಷ್ಕಾಪಟ್ಯದಿಂದ ಸರಕಾರ ಮಾಡಿದ್ದೇ ಆದರೆ ಕೆಲವು ವರ್ಗಗಳು ಯಾದಿಯಿಂದ ಹೊರಗುಳಿಯುತ್ತವೆ. ಹಾಗಾದಾಗ, ಅವು ಸ್ವಾಭಾವಿಕವಾಗಿ ಆರ್ಥಿಕ ದುರ್ಬಲ ವರ್ಗಗಳ ಯಾದಿಯಲ್ಲಿ ಸ್ಥಾನ ಪಡೆಯುತ್ತವೆ. ಇದರಿಂದಾಗಿ ಶೇ.10ರ ಮೀಸಲಾತಿ ಕೋಟಾ ವ್ಯರ್ಥವಾಗದೆ ಸದುಪಯೋಗವಾಗುತ್ತದೆ.

ಇತ್ತ, ಶೇ.50ರ ಕೋಟಾ ಮಿತಿಯನ್ನು ಮೀರಲಾಗದ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಸ್ಥಿತಿ ಅಯೋಮಯ. ಅನರ್ಹ ವರ್ಗಗಳ ಒಳ ನುಸುಳುವಿಕೆಯ ಭಾರದಲ್ಲಿ, ಅರ್ಹ ಹಿಂದುಳಿದ ವರ್ಗಗಳು ತಿಣುಕುತ್ತಿವೆ; ಅಲ್ಲದೆ, ನ್ಯಾಯೋಚಿತ ಮೀಸಲಾತಿ ಕೋಟಾ ಪಡೆಯಲೂ ಆಗದೆ ನಿಶ್ಚೇಷ್ಟಿತವಾಗಿವೆ.ಮೇಲೆ ಹೇಳಿರುವ ಕಾರ್ಯವಿಧಾನವನ್ನು ಸರಕಾರ ಅನುಸರಿಸಿದಾಗ ಮಾತ್ರ ಪ್ರಸ್ತುತ ಮೀಸಲಾತಿಗೆ ಒಳಪಟ್ಟಿರುವ ಎಲ್ಲಾ ವರ್ಗಗಳೂ ನಿಟ್ಟುಸಿರುಬಿಟ್ಟು, ಸಮಾನ ಅವಕಾಶ ಪಡೆಯಲೂ ಸಾಧ್ಯವಾಗುತ್ತದೆ. ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಕೋಟಾ ನಿಗದಿಪಡಿಸುವುದರ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ನ್ಯಾಯ ಒದಗಿಸಬಹುದು. ಹಾಗೆಯೇ ಅರ್ಹ ಹಿಂದುಳಿದ ವರ್ಗಗಳಿಗೂ ಸುಧಾರಿತ ಕೋಟಾ ನಿಗದಿಗೊಳಿಸಲೂ ಬಹುದು.

ಸರಕಾರ, ಇಲ್ಲಿ ಪ್ರಸ್ತಾಪಿಸಿರುವ ಕಾರ್ಯವಿಧಾನವನ್ನು ಅವಶ್ಯವಾಗಿ ಕಾರ್ಯರೂಪಕ್ಕೆ ತಂದರೆ, ಅದರ ಮುಂದಿರುವ ಜಟಿಲ ಸಮಸ್ಯೆಯೊಂದು ನಿವಾರಣೆಯಾಗಿ ಸರ್ವಜನರೂ ನಿಡುಸುಯ್ವರು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)