varthabharthi


ನಿಮ್ಮ ಅಂಕಣ

ಇದು ಎಂತಹ ಅಣ್ವಸ್ತ್ರ ನೀತಿ?

ವಾರ್ತಾ ಭಾರತಿ : 18 Sep, 2021
ಗರಿಮೆಲ್ಲ ಸುಬ್ರಮಣ್ಯಮ್

2018ರ ಡಿಸೆಂಬರ್‌ನಲ್ಲಿ ಕಾರ್ಯಾಚರಣೆಗಳನ್ನು ನಿಲ್ಲಿಸಿದ ಬಳಿಕ, ಉತ್ತರ ಕೊರಿಯಾ ಅಣುಬಾಂಬ್ ಉತ್ಪಾದಿಸಲು ಬಳಸುವ ಸಾಮಗ್ರಿಗಳನ್ನು ಉತ್ಪಾದಿಸುವ ಅತ್ಯಂತ ದೊಡ್ಡ ಅಣುಸ್ಥಾವರದ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದು ಅದರ ನಿಜವಾದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಯಾಂಗ್ ಬಿಯಾನ್‌ನಲ್ಲಿ ಅದು ಹೀಗೆ ಅಣುಸ್ಥಾವರವನ್ನು ಪುನರಾರಂಭಿಸಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಹೇಳಿದೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ 2019ರಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಒಂದು ದ್ವಿಪಕ್ಷೀಯ ಶೃಂಗಸಭೆಯಲ್ಲಿ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಹೇಳಿದ್ದ ಅಣುಸ್ಥಾವರ ಇದೇ ಅಣುಸ್ಥಾವರವಾಗಿದೆ. ಅಂತರ್‌ರಾಷ್ಟ್ರೀಯ ಆರ್ಥಿಕ ನಿಷೇಧಗಳನ್ನು ಸಂಪೂರ್ಣವಾಗಿ ರದ್ದು ಪಡಿಸುವುದಕ್ಕೆ ಬದಲಾಗಿ ಮಾಡಿಕೊಂಡ ಒಪ್ಪಂದ ಅದಾಗಿತ್ತು. ಈಗ ಹಳೆಯದಾಗಿರುವ ಐದು ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರವು ಅಣುಬಾಂಬ್ ತಯಾರಿಸಲು ಬೇಕಾಗುವ ಪ್ಲುಟೋನಿಯಂ ಉತ್ಪಾದನೆಗೆ ಬಹಳ ಮುಖ್ಯವಾಗಿದೆ. ಉತ್ತರ ಕೊರಿಯಾದ ಯಾಂಗ್ ಬಿಯಾನ್‌ನಲ್ಲಿರುವ ಈ ಸ್ಥಾವರದ ಅಪಾರದರ್ಶಕ ಕಾರ್ಯಾಚರಣೆಯು ಉತ್ತರ ಕೊರಿಯಾದ ಉದ್ದೇಶಗಳ ಹಿಂದಿರುವ ಗೊಂದಲವನ್ನು ಸ್ಪಷ್ಟಪಡಿಸುತ್ತದೆ. 2008ರ ಜೂನ್‌ನಲ್ಲಿ ಅಮೆರಿಕ ಮತ್ತು ಇತರ ನಾಲ್ಕು ದೇಶಗಳಿಗೆ ತನ್ನ ಪರಮಾಣು ನಿಶಸ್ತ್ರೀಕರಣದ ಬದ್ಧತೆಯನ್ನು ಸಾಬೀತುಪಡಿಸಲಿಕ್ಕಾಗಿ ಉತ್ತರ ಕೊರಿಯಾವು ಯಾಂಗ್ ಬಿಯಾನ್ ಸಂಕೀರ್ಣದಲ್ಲಿದ್ದ ಕೂಲಿಂಗ್ ಟವರ್ ಅನ್ನು ಧ್ವಂಸಗೊಳಿಸಿತ್ತು. ಆದರೆ ಇದು ಉತ್ತರ ಕೊರಿಯಾ ಅದಾಗಲೇ ದಾಸ್ತಾನು ಮಾಡಿದ್ದ ಪ್ಲುಟೋನಿಯಂ ಕುರಿತಾಗಲಿ ಅಥವಾ ಅದರ ರಹಸ್ಯವಾದ ಅಣ್ವಸ್ತ್ರ ಉತ್ಪಾದನೆ ಕುರಿತಾಗಲಿ ವಿಶ್ವದ ಶಾಂತಿ ಪ್ರಿಯರು ನಿರೀಕ್ಷಿಸಿದ್ದ ಭರವಸೆಯನ್ನು ಈಡೇರಿಸುವುದರಲ್ಲಿ ಸಫಲವಾಗಲಿಲ್ಲ. ಆದರೆ ಉತ್ತರ ಕೊರಿಯಾದ ಈ ಕ್ರಮವು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್‌ರವರು ಉತ್ತರ ಕೊರಿಯಾದ ಮೇಲಿದ್ದ ಕೆಲವು ನಿಷೇಧಗಳನ್ನು ಸಡಿಲಿಸಲು ನೆರವಾಯಿತು. 2002ರಲ್ಲಿ ಇದೇ ಉತ್ತರ ಕೊರಿಯಾವನ್ನು ಬುಷ್‌ರವರು ‘‘ದುಷ್ಟಕೂಟದ ಒಂದು ಭಾಗ’’ವೆಂದು ಕರೆದಿದ್ದರು. ಇದಕ್ಕಿಂತ ಹೆಚ್ಚು ವಿವಾದಾಸ್ಪದವಾದ ಕ್ರಮವೆಂದರೆ, ಉತ್ತರ ಕೊರಿಯಾ 2006ರಲ್ಲಿ ಮೊದಲ ಪರಮಾಣು ಸ್ಫೋಟ ನಡೆಸಿ ಎರಡು ವರ್ಷ ಕಳೆಯುವುದರೊಳಗಾಗಿಯೇ ಉತ್ತರ ಕೊರಿಯಾವನ್ನು ‘‘ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ರಾಷ್ಟ್ರ’’ ಎಂಬ ಹಣೆಪಟ್ಟಿಯಿಂದ ಅಮೆರಿಕ ಕಿತ್ತುಹಾಕಿತು. 1987ರಲ್ಲಿ ದಕ್ಷಿಣ ಕೊರಿಯಾದ ವಿಮಾನ ಒಂದನ್ನು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿದ ಘಟನೆಯ ಬಳಿಕ ಉತ್ತರ ಕೊರಿಯಾವನ್ನು ಭಯೋತ್ಪಾದಕ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.

 2008ರಲ್ಲಿ ಕೂಲಿಂಗ್ ಟವರ್ ಅನ್ನು ಧ್ವಂಸಗೊಳಿಸಿದ ಕೆಲವು ತಿಂಗಳುಗಳ ಬಳಿಕ ಉತ್ತರ ಕೊರಿಯಾ ತನ್ನ ಅಣು ಸ್ಥಾವರವನ್ನು ಐಎಇಎಯ ಪರೀಕ್ಷಕರು ಸಂದರ್ಶಿಸಿ ಪರೀಕ್ಷಿಸದಂತೆ ಅವರನ್ನು ತಡೆಯಿತು. 2010ರ ನವೆಂಬರ್‌ನಲ್ಲಿ ಅಮೆರಿಕನ್ ವಿಜ್ಞಾನಿ ಈಜ್‌ಫ್ರೈಡ್ ಹೆೆಕ್ಕರ್ ಉತ್ತರ ಕೊರಿಯಾ ಯಾಂಗ್ ಬಿಯಾನ್‌ನಲ್ಲಿ ಅವಸರವಸರದಲ್ಲಿ ಒಂದು ಯುರೇನಿಯಂ ಉತ್ಪಾದಕ ಸ್ಥಾವರವನ್ನು ನಿರ್ಮಿಸಿರುವುದು ನಿಜವೆಂದು ದೃಢಪಡಿಸಿದರು. ಈ ಮೇಲಿನ ಬೆಳವಣಿಗೆಗಳು ಅಣ್ವಸ್ತ್ರ ನೀತಿಯ ನಿಜ ಬಣ್ಣವನ್ನು ತೋರಿಸುತ್ತವೆ. 1994ರಲ್ಲಿ ನಡೆದ ಮತ್ತು ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಸಹಿ ಮಾಡಿದ್ದ ಒಂದು ಒಪ್ಪಂದದ ಪ್ರಕಾರ ಉತ್ತರ ಕೊರಿಯಾ ತನ್ನ ಎಲ್ಲ ಅಣ್ವಸ್ತ್ರ ತಯಾರಿಕಾ ಚಟುವಟಿಕೆಗಳನ್ನು ಸ್ತಂಭನಗೊಳಿಸಬೇಕಾಗಿತ್ತು ಮತ್ತು ಎರಡು ಲಘು ಜಲ ಸ್ಥಾವರಗಳ ನಿರ್ಮಾಣಕ್ಕೆ ಪ್ರತಿಯಾಗಿ ಅಂತರ್‌ರಾಷ್ಟ್ರೀಯ ಪರೀಕ್ಷಕರಿಗೆ ತನ್ನ ಮಿಲಿಟರಿ ನಿವೇಶನಗಳನ್ನು ಪರೀಕ್ಷಿಸಲು ಅವಕಾಶ ನೀಡಬೇಕಾಗಿತ್ತು. ಆದರೆ 2002ರಲ್ಲಿ ಈ ಒಪ್ಪಂದ ಮುರಿದುಬಿತ್ತು.

ಅಮೆರಿಕದ ಈಗಿನ ಬೈಡನ್ ಸರಕಾರ ಉತ್ತರ ಕೊರಿಯಾದ ಜೊತೆ ಮಾತುಕತೆ ನಡೆಸಲು ತಾನು ಸಿದ್ಧನಿದ್ದೇನೆ ಎಂದು ಘೋಷಿಸುವ ಮೂಲಕ ಒಂದು ಪ್ರಾಯೋಗಿಕವಾದ ಹಾದಿಯನ್ನು ಆಯ್ದುಕೊಂಡಿದೆ. ಆದರೆ ಇದೇ ವೇಳೆ, ತನ್ನ ದೇಶದ ಮೇಲೆ ಹೇರಲಾಗಿರುವ ನಿಷೇಧಗಳಿಂದ ತನ್ನ ದೇಶಕ್ಕೆ ಬಿಡುಗಡೆ ಸಿಗುವವರೆಗೆ ಇಂತಹ ಯಾವ ಮಾತುಕತೆಗಳೂ ತನಗೆ ಬೇಡವೆಂದು ಅಧ್ಯಕ್ಷ ಕಿಮ್ ಹೇಳಿದ್ದಾರೆ. ಆರ್ಥಿಕ ನಿಷೇಧಗಳಂತಹ ಕ್ರಮಗಳಿಂದ ದೇಶದ ಅಮಾಯಕ ಜನರನ್ನು ದಂಡಿಸಿದಂತಾಗುತ್ತದೆಯಲ್ಲದೆ, ಉತ್ತರ ಕೊರಿಯಾವನ್ನು ದೀರ್ಘಕಾಲದವರೆಗೆ ಅಂತರ್‌ರಾಷ್ಟ್ರೀಯ ಸಮುದಾಯದಿಂದ ಬೇರ್ಪಡಿಸಿ ನಿಲ್ಲಿಸುವುದರಿಂದ ಅಣ್ವಸ್ತ್ರ ನೀತಿಯ ಟೊಳ್ಳುತನವನ್ನು ಇನ್ನಷ್ಟು ಜಾಹೀರುಪಡಿಸಿದಂತಾಗುತ್ತದೆ. ಹಾಗಾದರೆ ಅಣ್ವಸ್ತ್ರ ರಾಷ್ಟ್ರಗಳು ಕೇವಲ ತಮ್ಮ ಪ್ರಾಬಲ್ಯವನ್ನು ಮುಂದುವರಿಸುವುದಕ್ಕಾಗಿ ಅಣ್ವಸ್ತ್ರ ಪ್ರಸರಣವನ್ನು ಎಂದಾದರೂ ತಡೆಯಲಾದೀತೇ? ತಡೆಯಲು ಸಾಧ್ಯವೇ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಅಣ್ವಸ್ತ್ರಗಳ ಸಂಪೂರ್ಣ ನಿಷೇಧ ಹಾಗೂ ರದ್ದತಿಯ ಕುರಿತಾದ ವಿಶ್ವಸಂಸ್ಥೆಯ ಒಪ್ಪಂದ ಈ ನಿಟ್ಟಿನಲ್ಲಿ ನೈತಿಕವಾಗಿ ಒಂದು ಉತ್ತಮ ಬದಲಿ ವ್ಯವಸ್ಥೆಯಾಗಿದೆ.

ಕೃಪೆ: TheHindu

 (ಲೇಖಕರು ಸ್ಟ್ರಾಟಜಿಕ್ ಇನಿಶಿಯೇಟಿವ್, ಆಗ್ನೊಶಿನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)