varthabharthi


ಕರ್ನಾಟಕ

ಲಿಂಗಾಯತ ವೀರಶೈವ ಸಮಾಜದ ಮೇಲೆ ರಾಮಕೃಷ್ಣ ಮಠದ ಸಾಂಸ್ಕೃತಿಕ ದಾಳಿ: ದಿಂಗಾಲೇಶ್ವರ ಸ್ವಾಮಿ ಆರೋಪ

ವಾರ್ತಾ ಭಾರತಿ : 18 Sep, 2021

ಧಾರವಾಡ, ಸೆ. 18: ‘ಎಲ್ಲ ವರ್ಗದ ಜನರಿಗೂ ಶಿಕ್ಷಣ, ದಾಸೋಹದ ಮೂಲಕ ಆಶ್ರಯ ನೀಡುವ ವೀರಶೈವ ಲಿಂಗಾಯತ ಸಮಾಜದ ಮೇಲೆ ವಿವೇಕಾನಂದ ರಾಮಕೃಷ್ಣ ಮಠದವರು ಸಾಂಸ್ಕೃತಿಕ ದಾಳಿ ನಡೆಸುತ್ತಿದ್ದಾರೆ' ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು ನಗರದಲ್ಲಿ 200 ವರ್ಷಗಳ ಹಿಂದೆ ಆರಂಭವಾದ ಲಿಂಗಾಯತ ಸಮಾಜಕ್ಕೆ ಸೇರಿದ ಶಿವಾನಂದ ಮಠದಲ್ಲಿ 1892ರಲ್ಲಿ ಕೆಲ ದಿನಗಳ ಕಾಲ ಸ್ವಾಮಿ ವಿವೇಕಾನಂದರು ತಂಗಿದ್ದರು. ಆದರೆ, ರಾಮಕೃಷ್ಣ ಮಠದವರು ಈ ಜಾಗವೇ ನಮ್ಮದು ಎಂದಿದ್ದು, ಉಳಿಯಲು ಜಾಗ ಕೊಟ್ಟರೆ ಮನೆಯೇ ನನ್ನದು ಎಂಬಂತೆ ಆಗಿದೆ' ಎಂದು ಟೀಕಿಸಿದರು.

ಲಿಂಗಾಯತ ಮಠಕ್ಕೆ ಸೇರಿದ ಜಾಗವನ್ನು ಸದಾನಂದಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಅವರಿಗೆ ನೀಡಿದ್ದು, ಜೊತೆಗೆ 5 ಕೋಟಿ ರೂ.ಹಣವನ್ನು ಕೊಟ್ಟಿದ್ದಾರೆ. ಇದು ಮೂರ್ಖತನದ್ದು, ಈ ಕುರಿತು ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

‘ವಾಸ್ತವವನ್ನು ಮರೆಮಾಚಿ ಮತ್ತೊಂದು ಇತಿಹಾಸ ಸೃಷ್ಟಿಸುವ ಆಕ್ರಮಣಗಳನ್ನು ಲಿಂಗಾಯತ ಸಮಾಜ ಸಹಿಸುವುದಿಲ್ಲ. ರಾಮೃಕೃಷ್ಣ ಮಠಕ್ಕೆ ಸರಕಾರ ಬೇರೆ ಜಾಗ ಬೇಕಿದ್ದರೆ ಕೊಡಲಿ. ರಾಮಕೃಷ್ಣ ಮಠವು ಎಲ್ಲ ವರ್ಗದ ಹಿತ ಬಯಸುವಂತಿದ್ದರೆ ತಮ್ಮ ಮಠಗಳಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಲಿ ಎಂದು ಸಲಹೆ ಮಾಡಿದರು.

ಜನತೆ ಉತ್ತರ ಕೊಡಲಿದ್ದಾರೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಗುಲಗಳ ತೆರವು, ವೀರಶೈವ ಲಿಂಗಾಯತ ಮಠಗಳನ್ನು ಕೆಡವಲು ಮುಂದಾಗಿದೆ. ಚುನಾವಣೆಗೆ ಮೊದಲು ಸ್ವಾಮೀಜಿಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಪಕ್ಷ ಇದೀಗ ದೇಗುಲ, ಮಠ ಮತ್ತು ಸ್ವಾಮಿಗಳ ವಿರುದ್ಧ ಪ್ರಹಾರ ಪ್ರಾರಂಭಿಸಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಉತ್ತರ ನೀಡಲಿದ್ದಾರೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಸರಕಾರ ನಿರ್ಧರಿಸಿದ್ದೇ ಆಗಿದ್ದರೆ, ಮೊದಲು ಸಿಎಂ ಬಸವರಾಜ ಬೊಮ್ಮಾಯಿ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿನ ದೇಗುಲಗಳನ್ನು ತೆರವು ಮಾಡಬೇಕು ಎಂದು ಶ್ರೀಗಳು ಸವಾಲು ಹಾಕಿದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2-ಎ ಮೀಸಲಾತಿ ಹೋರಾಟಕ್ಕೆ ಸಹಮತ ಇದೆ. ಜತೆಗೆ ಇದರ ಉಳಿದ ಪಂಗಡಗಳಿಗೂ ಮೀಸಲಾತಿ ವಿಸ್ತರಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ ಎಂದ ಅವರು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)