varthabharthi


ರಾಷ್ಟ್ರೀಯ

ಮಧ್ಯಪ್ರದೇಶದಲ್ಲಿ ಯುವಕನ ಸಜೀವ ದಹನ: ನಾಲ್ವರ ಸೆರೆ

ವಾರ್ತಾ ಭಾರತಿ : 18 Sep, 2021

ಹೊಸದಿಲ್ಲಿ,ಸೆ.18: ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ)ಗೆ ಸೇರಿದ 23ರ ಹರೆಯದ ಯುವಕನೋರ್ವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ತನ್ನ ಮಾಜಿ ಪ್ರೇಯಸಿಯ ಕುಟುಂಬ ಸದಸ್ಯರಿಂದ ಸಜೀವ ದಹನಗೊಂಡ ಬರ್ಬರ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸೆಮ್ರಾ ಲಹರಿಯಾ ಗ್ರಾಮದಲ್ಲಿ ಸಂಭವಿಸಿದೆ.

ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಮಹಿಳೆಯ ಕುಟುಂಬದ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅತುಲ್ ಸಿಂಗ್ ಅವರು ಶನಿವಾರ ತಿಳಿಸಿದರು.
ಮೃತ ರಾಹುಲ್ ಯಾದವ್ ಜೊತೆ ಸಂಬಂಧವನ್ನು ಹೊಂದಿದ್ದ ಚಂಚಲ ಶರ್ಮಾ (23)ಗೆ ಕೂಡ ಸುಟ್ಟಗಾಯಗಳಾಗಿವೆ. ತನ್ನ ಮನೆಗೆ ಬಂದಿದ್ದ ರಾಹುಲ್ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಆತನ ಮೈಗೆ ಬೆಂಕಿ ಹತ್ತಿಕೊಂಡಿತ್ತು ಮತ್ತು ತನ್ನ ಕುಟುಂಬದ ಸದಸ್ಯರು ತಮ್ಮಿಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ್ದರು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ‌

ಯಾದವ್ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮಾತುಕತೆಗಾಗಿ ಮಹಿಳೆಯ ಮನೆಗೆ ಬರುವಂತೆ ಗುರುವಾರ ರಾತ್ರಿ ತನಗೆ ದೂರವಾಣಿ ಮೂಲಕ ತಿಳಿಸಲಾಗಿತ್ತು. ತಾನು ಅಲ್ಲಿಗೆ ಹೋದಾಗ ಕುಟುಂಬದ ನಾಲ್ವರು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಆತ ತನ್ನ ಮರಣ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಯಾದವ್ ಕುಟುಂಬದವರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರು.

ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಸಿಂಗ್ ತಿಳಿಸಿದರು. ಮೃತನ ಕುಟುಂಬದ ಸದಸ್ಯರು ಮಹಿಳೆಯ ಕುಟುಂಬದ ಮನೆಯನ್ನು ನೆಲಸಮಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಶುಕ್ರವಾರ ಸಂಜೆ ಸಾಗರ-ಬಿನಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದ್ದರು. ತಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಮಧ್ಯಪ್ರದೇಶದ ನಗರಾಡಳಿತ ಸಚಿವ ಭೂಪೇಂದ್ರ ಸಿಂಗ್ ಭರವಸೆಯ ಬಳಿಕ ಅವರು ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದರು.
 
ಯಾದವ್ ಮತ್ತು ಚಂಚಲ ಕೆಲ ವರ್ಷಗಳ ಕಾಲ ಸಂಬಂಧವನ್ನು ಹೊಂದಿದ್ದರು. ಆದರೆ ಆಕೆಯ ಹೆತ್ತವರು ಇದಕ್ಕೆ ಸಮ್ಮತಿಸಿರಲಿಲ್ಲ ಮತ್ತು ಕಳೆದ ವರ್ಷ ಬೇರೆ ಯುವಕನ ಜೊತೆ ಆಕೆಯ ಮದುವೆಯನ್ನು ನೆರವೇರಿಸಿದ್ದರು. ಕೆಲವು ದಿನಗಳ ಹಿಂದೆ ತವರುಮನೆಗೆ ಆಗಮಿಸಿದ್ದ ಚಂಚಲಳ ಆಹ್ವಾನದ ಮೇರೆಗೆ ಆಕೆಯನ್ನು ಭೇಟಿಯಾಗಲು ಯಾದವ್ ಆಕೆಯ ಮನೆಗೆ ತೆರಳಿದ್ದ ಮತ್ತು ಅವರು ಒಟ್ಟಿಗೆ ಇರುವುದು ಶರ್ಮಾ ಕುಟುಂಬದ ಕಣ್ಣಿಗೆ ಬಿದ್ದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
 ‌
‘ಚಂಚಲ ಕೊನೆಯ ಬಾರಿಗೆ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ ಎಂದು ರಾಹುಲ್ ಗುರುವಾರ ಸಂಜೆ ತಿಳಿಸಿದ್ದ. ಕಳೆದ ಮೂರು ದಿನಗಳಿಂದಲೂ ಆಕೆ ಆತನಿಗೆ ಕರೆಗಳನ್ನು ಮಾಡುತಿದ್ದಳು. ಕೊನೆಯ ಬಾರಿ ಆಕೆಯನ್ನು ಭೇಟಿಯಾಗಲು ರಾಹುಲ್ ಅಲ್ಲಿಗೆ ತೆರಳಿದ್ದ,ಆದರೆ ಅವರು ಆತನನ್ನು ಕೊಲ್ಲುತ್ತಾರೆ ಎನ್ನುವುದು ನಮಗೆ ಗೊತ್ತಿರಲಿಲ್ಲ ’ ಎಂದು ಮೃತನ ಚಿಕ್ಕಪ್ಪ ಸುದ್ದಿಗಾರರಿಗೆ ತಿಳಿಸಿದರು.
 
ಆರೋಪಿಗಳು ಯಾದವನ ಕೈಗಳನ್ನು ಕಟ್ಟಿಹಾಕಿ ನಿರ್ದಯವಾಗಿ ಆತನನ್ನು ಥಳಿಸಿದ್ದರು,ಬಳಿಕ ಆತನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಛಾವಣಿಯಿಂದ ಕೆಳಕ್ಕೆ ತಳ್ಳಿದ್ದರು. ಆತ ಮನೆಯ ಕೊಟ್ಟಿಗೆಯಲ್ಲಿ ಬಿದ್ದಿದ್ದ ಎಂದು ಸಿಂಗ್ ಹೇಳಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)