varthabharthi


ಪ್ರಚಲಿತ

ಎಲ್ಲಾ ಮಾಡುವುದು ದೇವರ ಹೆಸರಿನಲ್ಲಿ

ವಾರ್ತಾ ಭಾರತಿ : 20 Sep, 2021
ಸನತ್ ಕುಮಾರ ಬೆಳಗಲಿ

ತೊಂಭತ್ತರ ದಶಕದಲ್ಲಿ ಅಂದರೆ 1992 ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಸುಪ್ರೀಂಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ ಕೆಡವಿದ ನಂತರ ದೇವರು, ಧರ್ಮಗಳನ್ನು ವಾಣಿಜ್ಯ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಚಾಳಿ ಆರಂಭವಾಯಿತು. ಆ ನಂತರ ಸಾರ್ವಜನಿಕ ಜಾಗಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವ, ಆ ಮೂಲಕ ಹಣ ಮಾಡಿಕೊಳ್ಳುವ, ಓಟು ಬಾಚಿಕೊಳ್ಳುವ ಪ್ರವೃತ್ತಿ ಹೆಚ್ಚಾಯಿತು.

ದೇಹವೇ ದೇಗುಲ ಎಂದು ಸಾರಿದ ಬಸವಣ್ಣನವರ ನಾಡಿನಲ್ಲಿ ಅನಧಿಕೃತ ಧಾರ್ಮಿಕ ಸ್ಥಾವರ ಕಟ್ಟಡಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿದರೆ ತಪ್ಪೇನು? ಇದರಿಂದ ಕೆಲವರ ಆದಾಯ, ಓಟು, ಅಕ್ರಮ ಸಕ್ರಮ ನಿಲ್ಲಬಹುದಷ್ಟೆ. ನ್ಯಾಯಾಲಯಗಳ ಆದೇಶಗಳ ಜಾರಿಗೆ ಮುಖ್ಯಮಂತ್ರಿಯವರ ನಿರ್ದೇಶನ ಈಗ ಅಡ್ಡಿಯಾಗಿದೆ. ಮೈಸೂರಿನ ಘಟನೆಗಳನ್ನು ಗಮನಿಸಿದಾಗ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಇಂತಹದೇ ಪ್ರಸಂಗಗಳು ನೆನಪಿಗೆ ಬಂದವು.

ಆಗ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಓಡಾಡುವ ಫುಟ್‌ಪಾತ್ ಗಳಲ್ಲಿ ಅನಧಿಕೃತ ದೇವಾಲಯಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದವು. ಇಲ್ಲಿ ದೇವರ ಭಕ್ತಿಗಿಂತ ದೇವರನ್ನು ಮಾರಾಟಕ್ಕೆ ಇಟ್ಟು ಕಾಸು ಮಾಡಿಕೊಳ್ಳುವ ಮಾಫಿಯಾದ ಚಟುವಟಿಕೆ ವ್ಯಾಪಕವಾಗಿ ನಡೆದಿತ್ತು. ಆಗ ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿತ್ತು.

ಕೊನೆಗೆ ಹೈಕೋರ್ಟ್ ಇಂತಹ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿತು. ಮುಖ್ಯಮಂತ್ರಿಯವರು ತಡಮಾಡದೇ ಫುಟ್‌ಪಾತ್‌ನಲ್ಲಿ ತಲೆ ಎತ್ತಿದ್ದ ಇಂತಹ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿದರು. ಆದರೂ ಕೆಲ ಕಟ್ಟಡಗಳು ಉಳಿದುಕೊಂಡವು.

ಬಸವಣ್ಣನವರು ದೇಹದಲ್ಲಿ ದೇಗುಲ ಕಂಡರೆ ನಮ್ಮ ಪರಂಪರೆಯ ಅನೇಕ ಮಹಾತ್ಮರು ಅಣು ರೇಣು ತೃಣಕಾಷ್ಟದಲ್ಲಿ ದೇವರಿದ್ದಾನೆ ಎಂದು ಹೇಳಿದ್ದಾರೆ. ಆದರೂ ಮಾನಸಿಕ ನೆಮ್ಮದಿಗಾಗಿ ಒಂದು ತಾಣವಿರಲಿ ಎಂದು ಮನುಷ್ಯ ಧಾರ್ಮಿಕ ಪೂಜಾ ಸ್ಥಳಗಳನ್ನು, ಪ್ರಾರ್ಥನಾಲಯಗಳನ್ನು ಮಾಡಿಕೊಂಡ. ಅವುಗಳ ಬಗ್ಗೆ ಅಭ್ಯಂತರವಿಲ್ಲ. ಆದರೆ ಈಗ ವಿವಾದ ಉಂಟಾಗಿರುವುದು ಸಾರ್ವಜನಿಕ ಜಾಗಗಳಲ್ಲಿ ನಿರ್ಮಾಣವಾದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ. 2009 ಮೊದಲು ನಿರ್ಮಾಣಗೊಂಡಿರುವ ಎಲ್ಲಾ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್ ನಿರ್ದೇಶನ ಸ್ವಾಗತಾರ್ಹವಾಗಿದೆ. ತೊಂಭತ್ತರ ದಶಕದಿಂದ ಈಚೆಗೆ ನಮ್ಮ ದೇಶದ ಮತ್ತು ನಾಡಿನ ಸಾರ್ವಜನಿಕ ಸ್ಥಳಗಳಲ್ಲಿ ತಲೆ ಎತ್ತಿರುವ ಧಾರ್ಮಿಕ ಕಟ್ಟಡಳಲ್ಲಿ ಭಕ್ತಿಗಿಂತ ವಾಣಿಜ್ಯ ಉದ್ದೇಶ ಮುಖ್ಯವಾಗಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಯಾವುದೇ ನಗರದ ಸಾರ್ವಜನಿಕ ಉದ್ಯಾನಗಳಲ್ಲಿ ಇಂತಹ ಅಕ್ರಮ ಮಂದಿರಗಳು ತಲೆ ಎತ್ತಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಅನೇಕ ಕಡೆ ಇಡೀ ಉದ್ಯಾನವನ್ನೇ ನುಂಗಿ ದೇವಸ್ಥಾನ, ಮಂದಿರಗಳನ್ನು ನಿರ್ಮಿಸಿದ ಉದಾಹರಣೆಗಳಿವೆ.

ಸಾರ್ವಜನಿಕ ಜಾಗಗಳಲ್ಲಿ ಧಾರ್ಮಿಕ ಕಟ್ಟಡವೆಂದರೆ ಬರೀ ಮೂರ್ತಿಯನ್ನು ಇಡುವ ಪುಟ್ಟ ಮಂದಿರ ಆಗಿರುವುದಿಲ್ಲ. ಮೊದಲು ದೇವಾಲಯ ನಿರ್ಮಿಸುತ್ತಾರೆ. ನಂತರ ಅಲ್ಲೊಬ್ಬ ಪುರೋಹಿತ ಬರುತ್ತಾನೆ. ಸುತ್ತಲಿನ ಜಾಗವನ್ನು ಕಬಳಸಿ ಕಲ್ಯಾಣ ಮಂಟಪ ನಿರ್ಮಿಸಿ ಬಾಡಿಗೆ ಕೊಡಲು ಆರಂಭಿಸುತ್ತಾರೆ. ಗುಡಿಯ ಸುತ್ತಲೂ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ವಸೂಲಿ ಮಾಡುತ್ತಾರೆ. ಹೀಗಾಗಿ ಸಾರ್ವಜನಿಕರ ಬಳಕೆಯ ಜಾಗ ದೇವರ ಹೆಸರಿನಲ್ಲಿ ಕಬಳಿಕೆಯಾಗಿ ಹಣ ಮಾಡಿಕೊಳ್ಳುವ ದಂಧೆ ಶುರುವಾಗುತ್ತದೆ. ಅದಕ್ಕೊಂದು ಟ್ರಸ್ಟ್ ಕಮಿಟಿ ರಚನೆಯಾಗುತ್ತದೆ. ಒಂದೇ ಕುಟುಂಬದ ಸದಸ್ಯರು ಟ್ರಸ್ಟ್ ಸದಸ್ಯರಾಗಿರುತ್ತಾರೆ. ಇದು ವಾಸ್ತವ ಸಂಗತಿ.

ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ಈ ರೀತಿ ಸಾರ್ವಜನಿಕ ಉದ್ಯಾನವನ್ನು ಇಡಿಯಾಗಿ ನುಂಗಿ ನೀರು ಕುಡಿದಿದ್ದನ್ನು ನಾನು ಕಣ್ಣಾರೆ ಕಂಡಿರುವೆ. ಮೊದಲು ಪುಟ್ಟ ವೆಂಕಟೇಶ್ವರ ದೇವಾಲಯ ನಿರ್ಮಿಸಲಾಯಿತು. ನಂತರ ದೇವಾಲಯದ ಪಕ್ಕದ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಬಾಡಿಗೆ ವಸೂಲಿ ಶುರುವಾಯಿತು. ಇದು ಸಾಲದೆಂಬಂತೆ ದೇವಾಲಯದ ೆುೀಲೆ ಇನ್ನೊಂದು ಕಲ್ಯಾಣ ಮಂಟಪ ನಿರ್ಮಾಣವಾಯಿತು. ಈಗ ಅದರ ಮೇಲೆ ಇನ್ನೊಂದು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಾಡಿಗೆ ವಸೂಲಿ ಜೋರಾಗಿ ನಡೆದಿದೆ. ಇದು ಸಾಲದೆಂಬಂತೆ ವೆಂಕಟೇಶ್ವರ ದೇವಾಲಯದ ಒಳ ಆವರಣದಲ್ಲಿ ವೀರಾಂಜನೆಯ ಮತ್ತು ಗಣಪತಿ ದೇವರ ಪುಟ್ಟ ಮಂದಿರಗಳನ್ನು ನಿರ್ಮಿಸಲಾಗಿದೆ. ಈ ಮೂರೂ ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳಿಗೆ ದರ ನಿಗದಿ ಮಾಡಿ ಬೋರ್ಡ್ ಹಾಕಲಾಗಿ

 ದೆ. ಇದರ ಜೊತೆಗೆ ಮೇಲ್ಮಧ್ಯಮ ವರ್ಗದ ಈ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆಯ ಜನ ಯಾವುದೇ ಹೊಸ ವಾಹನ ಖರೀದಿ ಮಾಡಿದರೆ ಇಲ್ಲಿ ಬಂದು ಪುರೋಹಿತನ ಕೈಗೆ 500 ಇಲ್ಲವೇ 1,000 ರೂ. ದಕ್ಷಿಣೆ ನೀಡಿ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಈ ದೇವಾಲಯಕ್ಕೆ ಶಿಕ್ಷಣ ವ್ಯಾಪಾರಿಯೊಬ್ಬ ಟ್ರಸ್ಟ್ ಮಾಡಿ ಪುರೋಹಿತರಿಗೆ ಒಂದಿಷ್ಟು ಸಂಬಳ ಕೊಟ್ಟು ಸಾರ್ವಜನಿಕ ಜಾಗದಲ್ಲಿ ಆದಾಯದ ಹೊಸ ಮೂಲವನ್ನು ಸೃಷ್ಟಿಸಿಕೊಂಡಿದ್ದಾನೆ. ಇದು ಒಂದು ಉದಾಹರಣೆ ಮಾತ್ರ. ರಾಜ್ಯದ ನಾನಾ ಕಡೆ ಈ ರೀತಿಯ ಧಾರ್ಮಿಕ ವಾಣಿಜ್ಯ ಕೇಂದ್ರ ಗಳು ಸಾರ್ವಜನಿಕ ಜಾಗಗಳಲ್ಲಿ ತಲೆ ಎತ್ತಿವೆ.ಸುಪ್ರೀಂ ಕೋರ್ಟ್ ಹೇಳಿರುವುದು ಇಂತಹ ಅಕ್ರಮ ದೇವಾಲಯಗಳ ಬಗ್ಗೆ.

ರಾಜ್ಯದಲ್ಲಿ ವಿವಿಧ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಾಕಷ್ಟಿವೆ. ಮಂಗಳೂರಿನ ಗೋಕರ್ಣಾಥೇಶ್ವರ ದೇವಾಲಯ, ಉಡುಪಿಯ ಅಷ್ಟ ಮಠಗಳು, ಕೃಷ್ಣ ಮಂದಿರ, ಶೃಂಗೇರಿಯ ಶಾರದಾಂಬೆ, ಧರ್ಮಸ್ಥಳ, ಹುಬ್ಬಳ್ಳಿಯ ಸಿದ್ದಾರೂಢ  ಮಠ, ಕಲಬುರಗಿಯ ಬಂದೇ ನವಾಜ ದರ್ಗಾ, ಹರಿಹರದ ಆರೋಗ್ಯ ಮಾತೆ ಚರ್ಚ್, ಬೆಂಗಳೂರಿನ ರಾಮಕೃಷ್ಣ ಆಶ್ರಮ ಹೀಗೆ ಸಾವಿರಾರು ಸಂಖ್ಯೆಯಲ್ಲಿ ಇರುವ ಮಠ, ಮಂದಿರ, ಚರ್ಚ್, ದರ್ಗಾಗಳ ಬಗ್ಗೆ ಯಾರ ಅಭ್ಯಂತರವೂ ಇಲ್ಲ. ನಾನು ಕೂಡ ಹುಬ್ಬಳ್ಳಿಗೆ ಹೋದಾಗ ಸಿದ್ದಾರೂಢ ಮಠಕ್ಕೆ ಹೋಗಿ ಬರುತ್ತೇನೆ. ಎಲ್ಲ ಧರ್ಮಗಳ ಜನ ಬರುವಂತಹ ತಾಣಗಳಿಗೆ ಹೋಗಿ ಬರುವುದೇ ಒಂದು ನೆಮ್ಮದಿಯ ಸಂಗತಿ. ನಾನು ಬಾಲ್ಯದಲ್ಲಿ ಕೋಮುವಾದದ ವೈರಸ್ ಅಂಟಿ ಕೊಳ್ಳದಂತೆ ಬೆಳೆದದ್ದು ಬಿಜಾಪುರ ಜಿಲ್ಲೆಯ ಇಂಚಗೇರಿ ಮಠದ ಮಹಾದೇವರ ಒಡನಾಟದಿಂದ. ಇವು ಅನಧಿಕೃತ ನಿರ್ಮಾಣಗಳಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆ ಸುರಕ್ಷಿತವಾಗಿ ನಡೆಯಬೇಕಾದರೆ ಅದರ ಆಧಾರ ಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಈಗ ಸುಪ್ರೀಂಕೋರ್ಟ್ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಇಲ್ಲವೇ ಸ್ಥಳಾಂತರ ಮಾಡಲು ಅಥವಾ ಸಕ್ರಮಗೊಳಿಸಲು ನಿರ್ದೇಶನ ನೀಡಿದೆ. ಇದನ್ನು ಜಾರಿಗೆ ತರುವುದು ಚುನಾಯಿತ ಸರಕಾರದ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟ್ ಆದೇಶ ನೀಡಿ ಹನ್ನೊಂದು ವರ್ಷಗಳಾದರೂ ಸರಕಾರ ತೆಪ್ಪಗಿದೆ ಅಂದರೆ ಅದರ ಅರ್ಥವೇನು? ಈ ಬಗ್ಗೆ ಅಂದರೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆಮೆ ವೇಗದಲ್ಲಿ ಸಾಗಿದೆ ಎಂದು ಹೈಕೋರ್ಟ್ ಆತಂಕವನ್ನು ವ್ಯಕ್ತಪಡಿಸಿದ ನಂತರ ಎಚ್ಚೆತ್ತ ರಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ವಾರ ಒಂದಾದರೂ ಅನಧಿಕೃತ ಧಾರ್ಮಿಕ ಕಟ್ಟಡವನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರು. ಈ ಹಂತದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಸರಕಾರ ದೇಗುಲಗಳನ್ನು ತೆರವುಗೊಳಿಸಲು ಅವಸರ ಬೇಡ ಎಂದು ಅಡ್ಡಗಾಲು ಹಾಕಿರುವುದೇಕೆ? ನ್ಯಾಯಾಂಗದ ಆದೇಶದ ಜಾರಿಗೆ ಮುಂದಾದ ಅಧಿಕಾರಿಗಳ ಕೈ ಕಟ್ಟಿ ಹಾಕಿರುವುದೇಕೆ? ಈ ವಿಷಯದಲ್ಲಿ ಮೈಸೂರಿನ ಬಿಜೆಪಿ ಸಂಸದರ ವರ್ತನೆ ಅತ್ಯಂತ ಪ್ರಚೋದನಕಾರಿಯಾಗಿದೆ ಅಂದರೆ ತಪ್ಪಿಲ್ಲ.

ತೊಂಭತ್ತರ ದಶಕದಲ್ಲಿ ಅಂದರೆ 1992 ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಸುಪ್ರೀಂಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ ಕೆಡವಿದ ನಂತರ ದೇವರು , ಧರ್ಮಗಳನ್ನು ವಾಣಿಜ್ಯ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಚಾಳಿ ಆರಂಭವಾಯಿತು. ಆ ನಂತರ ಸಾರ್ವಜನಿಕ ಜಾಗಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವ ಆ ಮೂಲಕ ಹಣ ಮಾಡಿಕೊಳ್ಳುವ ಓಟು ಬಾಚಿಕೊಳ್ಳುವ ಪ್ರವೃತ್ತಿ ಹೆಚ್ಚಾಯಿತು.

ಈ ವರ್ಷದ ಜುಲೈ 1ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಂಖ್ಯೆ 6,385. ಕಳೆದ ಹನ್ನೆರಡು ವರ್ಷಗಳಲ್ಲಿ ಕರ್ನಾಟಕ ಸರಕಾರ ತೆರವುಗೊಳಿಸಿದ ಇಲ್ಲವೇ ಸ್ಥಳಾಂತರ ಗೊಳಿಸಿದ ಅಥವಾ ಸಕ್ರಮಗೊಳಿಸಿದ ಅನಧಿಕೃತ ಪೂಜಾ ಸ್ಥಳಗಳ ಸಂಖ್ಯೆ 2,887. ಈ ನಿಧಾನ ಗತಿಯ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದು ಸಹಜವಾಗಿದೆ. ಹೀಗೆ ಬಿಟ್ಟಿರುವ ಪರಿಣಾಮವಾಗಿ ರಾಜ್ಯದ ಉದ್ಯಾನಗಳು, ಮೈದಾನಗಳು, ಕ್ರೀಡಾಂಗಣಗಳು ಆಕ್ರಮಿಸಲ್ಪಟ್ಟು ಅನಧಿಕೃತ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ. ಸುಪ್ರೀಂಕೋರ್ಟ್ ತೀರ್ಪಿಗೆ ಬೆಲೆಯೇ ಇಲ್ಲದಂತಾಗಿದೆ. ಅದರ ತೀರ್ಪಿನ ನಂತರವೂ ರಾಜ್ಯದ ಸಾರ್ವಜನಿಕ ಜಾಗಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ.ಇದು ನಿಜಕ್ಕೂ ಕಳವಳಕಾರಿ ಸಂಗತಿ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮಂದಿರ, ಮಸೀದಿ, ಚರ್ಚ್ ಹಾಗೂ ದರ್ಗಾಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ವಾಸ್ತವಾಂಶ ಹೀಗಿರುವಾಗ ದೇವಾಲಯಗಳನ್ನು ಮಾತ್ರ ಕೆಡವಲಾಗುತ್ತಿದೆ ಎಂದು ಜನರ ಭಾವನೆಗಳನ್ನು ಕೆರಳಿಸುತ್ತಿರುವುದು ಸಂಸದರಿಗೆ ಶೋಭೆ ತರುವುದಿಲ್ಲ. ಇಂತಹ ಸೂಕ್ಷ್ಮ ಪ್ರಶ್ನೆಯಲ್ಲಿ ಯಾವುದೇ ಕೋಮು ಭಾವನೆಯನ್ನು ಕೆರಳಿಸುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಜನಪ್ರತಿನಿಧಿಗಳ ಕೆಲಸ ಜನಸಾಮಾನ್ಯರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿರಬೇಕು.

ಇಂತಹ ಸಂದರ್ಭದಲ್ಲಿ ಜನರಿಗೆ ತಿಳುವಳಿಕೆ ನೀಡಿ ಸಾರ್ವಜನಿಕ ಜಾಗ ಅತಿಕ್ರಮಣವಾಗದಂತೆ ಸುಪ್ರೀಂಕೋರ್ಟ್ ತೀರ್ಪು ಜಾರಿಗೆ ಬರುವಂತೆ ನೋಡಿಕೊಳ್ಳಬೇಕಾದುದು ಸರಕಾರದ ಮತ್ತು ಜನಪ್ರತಿನಿಧಿಗಳ ಕರ್ತವ್ಯ. ಇದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಂದು ಅಗ್ನಿ ಪರೀಕ್ಷೆಯಾಗಿದೆ. ಅವರು ಸಂಯಮದಿಂದ ವರ್ತಿಸುವಂತೆ ತಮ್ಮ ಪಕ್ಷದ ಶಾಸಕರು, ಮತ್ತು ಸಂಸದರಿಗೆ ತಿಳಿ ಹೇಳಬೇಕು. ಪ್ರಜಾಪ್ರಭುತ್ವದಲ್ಲಿ ಸರಕಾರ ಎಂಬುದು ಯಾವುದೇ ಜಾತಿ, ಮತಕ್ಕೆ ಸೇರಿದ್ದಲ್ಲ. ಎಲ್ಲರನ್ನೂ ಪ್ರತಿನಿಧಿಸುವ ಸರಕಾರ ಸಾರ್ವಜನಿಕ ಜಾಗದ ದುರ್ಬಳಕೆಯನ್ನು ತಡೆದು ಸಂವಿಧಾನಾತ್ಮಕ ಕರ್ತವ್ಯವನ್ನು ನಿಭಾಯಿಸಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

ರಾಜ್ಯದ ಸಾರ್ವಜನಿಕ ಜಾಗಗಳನ್ನು ಕಾಪಾಡುವ ಜವಾಬ್ದಾರಿ ಜನ ಪ್ರತಿನಿಧಿಗಳ ಮೇಲಿದೆ. ಈಗ ವಿವಾದಕ್ಕೆ ಕಾರಣವಾಗಿರುವ ಮೈಸೂರಿನಲ್ಲಿ 93 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸರಕಾರ ಗುರುತಿಸಿದೆ. ನ್ಯಾಯಾಲಯದ ಆದೇಶದಂತೆ ಅವುಗಳ ತೆರವಿಗೆ ಸರಕಾರಿ ಅಧಿಕಾರಿಗಳು ಮುಂದಾದರೆ ಮೈಸೂರು ಕೊಡಗು ಬಿಜೆಪಿ ಸಂಸದ ಪ್ರತಾಪಸಿಂಹ ಅಡ್ಡಗಾಲು ಹಾಕಿದ್ದಾರೆ. ಒಬ್ಬ ಜನಪ್ರತಿನಿಧಿಾಗಿ ನಡೆದುಕೊಳ್ಳಬೇಕಾದ ಅವರು ಬರೀ ಹಿಂದೂ ಮಂದಿರಗಳನ್ನು ನೆಲಸಮಗೊಳಿಸುತ್ತಿದ್ದಾರೆ ಎಂದು ತಮ್ಮದೇ ಸರಕಾರದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವುದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವಲ್ಲದೇ ಬೇರೇನೂ ಅಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿದೆ. ಅವರ ಸರಕಾರದ ಆದೇಶಗಳನ್ನು ಅಧಿಕಾರಿಗಳು ಜಾರಿಗೆ ತರುತ್ತಿದ್ದಾರೆ. ಇಂತಹ ಸನ್ನಿವೇಶದಲಿ್ಲ ಬಿಜೆಪಿ ಸಂಸದರ ದೇವಸ್ಥಾನ ಉಳಿಸಿ ಚಳವಳಿ ಯಾರ ವಿರುದ್ಧ ಎಂಬುದನ್ನು ಸ್ಪಷ್ಟ ಪಡಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)