varthabharthi


ವಿಶೇಷ-ವರದಿಗಳು

► ಪ್ರಯಾಣಿಕರ ಸಂಖ್ಯೆಯಲ್ಲಿ ಕಾಣದ ಪ್ರಗತಿ ► ಚಾಲಕ-ನಿರ್ವಾಹಕರಿಗೆ ಸಂಬಳ ನೀಡಲಾಗದ ದುಸ್ಥಿತಿ

ದ.ಕ.ದಲ್ಲಿ ನೆಲಕಚ್ಚಿದ ಖಾಸಗಿ ಬಸ್ ಸಾರಿಗೆ ಉದ್ಯಮ

ವಾರ್ತಾ ಭಾರತಿ : 23 Sep, 2021
ಹಂಝ ಮಲಾರ್

► ಲಾಕ್ ಡೌನ್ ಅನಂ(ವಾಂ)ತರ..!

ಮಂಗಳೂರು, ಸೆ.22: ದ.ಕ.ಜಿಲ್ಲೆಯ ಜೀವನಾಡಿಯಂತಿದ್ದ ಮತ್ತು ಆರ್ಥಿಕವಾಗಿ ಸರಕಾರದ ಮೇಲೂ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿದ್ದ ಖಾಸಗಿ ಬಸ್ ಸಾರಿಗೆ ಉದ್ಯಮವು ಕೋವಿಡ್-19 ಮೊದಲ ಮತ್ತು ದ್ವಿತೀಯ ಅಲೆಯಿಂದಾಗಿ ಸಂಪೂರ್ಣ ನೆಲಕಚ್ಚಿದೆ.

ಕೋವಿಡ್ ಮೊದಲ ಅಲೆಯ ವೇಳೆ ಎರಡು-ಮೂರು ತಿಂಗಳು ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕೋವಿಡ್ ಎರಡನೇ ಅಲೆಯ ಸಂದರ್ಭವೂ ಮೂರು ತಿಂಗಳವರೆಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮೊದಲ ಅಲೆಯ ಸಂದರ್ಭ ಭಾರೀ ನಷ್ಟದ ಹೊಡೆತದಿಂದ ಸ್ವಲ್ಪ ಪಾರಾಗಿದ್ದ ಬಸ್ ಮಾಲಕರು ಎರಡನೇ ಅಲೆಯ ವೇಳೆ ನಷ್ಟದ ಹೊಡೆತದಿಂದ ಪಾರಾಗಲಾರದಷ್ಟು ಅವನತಿಗೆ ತಲುಪಿದ್ದಾರೆ. ಇದೀಗ ಬಸ್ ಸಾರಿಗೆ ಸಂಚಾರವು ಪುನಃ ಆರಂಭಗೊಂಡು ಒಂದುವರೆ ತಿಂಗಳಾದರೂ ಕೂಡ ಚೇತರಿ ಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ಬಸ್ ಮಾಲಕರು ಹೇಳು ತ್ತಿದ್ದಾರೆ.

 ಒಂದೆಡೆ ಏರುತ್ತಿರುವ ಡೀಸೆಲ್ ಬೆಲೆ, ಬಸ್ಸಿನ ಬಿಡಿಭಾಗಗಳ ದರ, ಪ್ರಯಾಣಿಕರ ಕೊರತೆಯಿಂದಾಗಿ ಬಸ್ ಸಾರಿಗೆ ವ್ಯವಸ್ಥೆಯು ಭಾಗಶಃ ಹಳಿ ತಪ್ಪಿವೆ. ಹಾಗಾಗಿ ಬಹುತೇಕ ರೂಟ್‌ಗಳಲ್ಲಿ ಅದರಲ್ಲೂ ಮುಂಜಾನೆ ಮತ್ತು ರಾತ್ರಿಯ ಟ್ರಿಪ್‌ಗಳನ್ನು ಕಡಿತ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಸದ್ಯ ಮಂಗಳೂರು ನಗರ ಮತ್ತು ಹೊರವಲಯದ ಸುತ್ತಮುತ್ತ ಲಿನ ರೂಟ್‌ಗಳಲ್ಲಿ ಸುಮಾರು 342 ಬಸ್‌ಗಳು ಸಂಚರಿಸುತ್ತಿವೆ. ಇನ್ನು ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕೂಡ ಸಾಕಷ್ಟು ಬಸ್‌ಗಳು ಸಂಚರಿಸುತ್ತಿವೆ. ಬಹುತೇಕ ಮಾಲಕರಿಗೆ ಕೇವಲ ಒಂದೊಂದು ಬಸ್‌ಗಳಿವೆ. ಮನೆಮಂದಿಯ ಚಿನ್ನಾಭರಣ ಅಡವಿಟ್ಟೋ, ಫೈನಾನ್ಸ್, ಬ್ಯಾಂಕ್‌ನಿಂದ ಸಾಲ ಮಾಡಿಯೋ ಬಸ್ ಖರೀದಿಸಿದವರೇ ಅಧಿಕ. ಕನಿಷ್ಠ 3 ತಿಂಗಳ ರಸ್ತೆ ತೆರಿಗೆಯನ್ನು ಮೊದಲೇ ಪಾವತಿಸಬೇಕಾಗಿರುವುದರಿಂದ ಒಂದೊಂದು ಬಸ್ ಹೊಂದಿದ ಮಾಲಕರು ಅವುಗಳ ನಿರ್ವಹಣೆ ಮತ್ತು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲು ಹೆಣಗಾಡುವ ಸ್ಥಿತಿ ಎದುರಾಗಿದೆ.

ಹಿಂದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಿಗಳು, ಸಾರ್ವಜನಿಕ ಎಂದೆಲ್ಲಾ ಪ್ರತಿಯೊಂದು ಬಸ್ಸು ಗಳಲ್ಲೂ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡರೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಇನ್ನೂ ತರಗತಿಗಳಿಗೆ ಪ್ರವೇಶಿಸಿಲ್ಲ. ಆರ್ಥಿಕ ಸಂಕಷ್ಟದಿಂದ ಕೂಲಿ ಕೆಲಸವೂ ಕಡಿಮೆಯಾಗಿದೆ. ವಿವಿಧ ಸ್ತರದ ಉದ್ಯಮಗಳು ಕೂಡ ಬಂದ್ ಆಗಿದ್ದು, ಉದ್ಯೋಗವೂ ಇಲ್ಲ ವಾಗಿದೆ. ಜನರ ಕೈಯಲ್ಲಿ ಹಣ ಚಲಾವಣೆಯು ಕಡಿಮೆಯಾಗಿರುವ ಕಾರಣ ನಗರ/ಪೇಟೆಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಇಳಿಮುಖವಾಗಿದೆ. ಹಾಗಾಗಿ ಬೆಳಗ್ಗೆ ಮತ್ತು ಸಂಜೆ ಹೊರತುಪಡಿಸಿದರೆ ಮಧ್ಯಾಹ್ನದ ವೇಳೆ ಸಂಚರಿಸುವ ಬಸ್‌ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಇವೆಲ್ಲದರ ನೇರ ಪರಿಣಾಮ ಖಾಸಗಿ ಬಸ್ ಸಾರಿಗೆ ಉದ್ಯಮದ ಮೇಲಾಗಿದೆ. ಬಹುತೇಕ ಮಾಲಕರಿಗೆ ಬಸ್ ಚಾಲಕ-ನಿರ್ವಾಹಕರಿಗೆ ದಿನದ ಸಂಬಳ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಅಂದರೆ ದಿನದ ಆದಾಯವು ಡೀಸೆಲ್ ಮತ್ತಿತರ ವೆಚ್ಚಕ್ಕೆ ಸರಿ ಹೋಗುತ್ತದೆ. ಹಾಗಾಗಿ ಕೆಲವು ಬಸ್‌ಗಳ ಮಾಲಕರು ಚಾಲಕನಿಗೋ, ನಿರ್ವಾಹಕನಿಗೋ ಬಸ್‌ಗಳ ನಿರ್ವಹಣೆಯ ಜವಾಬ್ದಾರಿ ಹೊರಿಸಿ ಬಿಡುತ್ತಾರೆ ಎಂದು ತಿಳಿದು ಬಂದಿದೆ.

ಬಸ್ ಮಾಲಕರು ಮಾತ್ರವಲ್ಲ ಬಸ್ಸಿನಲ್ಲಿ ದುಡಿಯುವ ಚಾಲಕ, ನಿರ್ವಾಹಕರು ಕೂಡ ಬೇರೆ ಬೇರೆ ಕಾರಣಕ್ಕೆ ಬ್ಯಾಂಕ್, ಫೈನಾನ್ಸ್, ಸೊಸೈಟಿಯಿಂದ ಮಾಡಿದ ಸಾಲ ತೀರಿಸಲು ಹೆಣಗಾಡುತ್ತಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವು ಏಕಾಏಕಿ ಹೆಚ್ಚಳಗೊಂಡ ಕಾರಣ ಪ್ರಯಾಣಿಕರಿಗೆ ಅದು ಹೊರೆಯಾಗಿ ಪರಿಣಮಿಸಿದ್ದು, ಹೆಚ್ಚಿ ನ ಪ್ರಯಾಣಿಕರು ಸರಕಾರಿ ಬಸ್‌ಗಳನ್ನು ಅವಲಂಬಿಸತೊಡಗಿದ್ದಾರೆ. ಇನ್ನು ಕೆಲವರು ದ್ವಿಚಕ್ರ ವಾಹನವನ್ನು ಬಳಸತೊಡಗಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಇದು ಕೂಡ ಪ್ರಬಲ ಕಾರಣವಾಗಿದೆ.

ಒಟ್ಟಿನಲ್ಲಿ ಕೋವಿಡ್ ಎರಡನೇ ಅಲೆಯ ಸಂದರ್ಭ ಸ್ಥಗಿತಗೊಂಡಿದ್ದ ಬಸ್ ಸಾರಿಗೆ ಸಂಚಾರವು ಆರಂಭಗೊಂಡು ಒಂದುವರೆ ತಿಂಗಳಾಗುತ್ತಾ ಬಂದರೂ ಕೂಡ ಆರ್ಥಿಕವಾಗಿ ಸಂಪೂರ್ಣ ಚೇತರಿಸಿಕೊಂಡಿಲ್ಲ. ಬಸ್ ಮಾಲಕರು ಮಾತ್ರವಲ್ಲ ಸಿಬ್ಬಂದಿ ವರ್ಗದ ಮೇಲೂ ಭಾರೀ ಹೊಡೆತ ನೀಡಿವೆ.

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಸಂಚರಿಸುವ 342 ಬಸ್‌ಗಳ ಪೈಕಿ ಶೇ.85ರಷ್ಟು ಬಸ್‌ಗಳು ಮಾತ್ರ ಸಂಚಾರ ಆರಂಭಿಸಿವೆ. ಜಿಲ್ಲಾಡಳಿತವು ಬಸ್ ಪ್ರಯಾಣ ದರ ಏರಿಸಲು ಅವಕಾಶ ಕಲ್ಪಿಸಿದ್ದರೂ ಕೂಡ ಸದ್ಯದ ಡೀಸೆಲ್ ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಳಗೊಂಡಿಲ್ಲ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ದರ ಹೆಚ್ಚಿಸಿದ್ದರೂ ಕೂಡ ಡೀಸೆಲ್ ಮತ್ತಿತರ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಅನೇಕ ಮಾಲಕರು ಸಾಲ ಮಾಡಿ ಬಸ್‌ಗಳನ್ನು ಖರೀದಿಸಿದ್ದಾರೆ. ಫೈನಾನ್ಸ್, ಬ್ಯಾಂಕ್‌ನಿಂದ ಸಾಲದ ಬಾಕಿ ಕಂತು ಕಟ್ಟಲು ನೋಟಿಸ್ ಬರುತ್ತಿದೆ. ಉತ್ತಮ ಆದಾಯ ಬಾರದ ಕಾರಣ ನಾವೀಗ ನಷ್ಟದಲ್ಲೇ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಸರಕಾರವು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದರೆ ನಷ್ಟದಲ್ಲಿರುವ ಉದ್ಯಮದಲ್ಲಿ ಚೇತರಿಕೆ ಕಂಡು ಬಂದೀತು.

 ಜಯಶೀಲ ಅಡ್ಯಂತಾಯ

ಅಧ್ಯಕ್ಷರು, ದ.ಕ. ಜಿಲ್ಲಾ ಬಸ್ ಮಾಲಕರ ಸಂಘ

ನಾನು ಹಲವು ವರ್ಷದಿಂದ ಬಸ್ ಚಾಲಕನಾಗಿ ದುಡಿಯುತ್ತಿದ್ದೇನೆ. ಈ ಹಿಂದೆ ಪ್ರತಿಯೊಬ್ಬ ಚಾಲಕರು ದಿನನಿತ್ಯ 800ರಿಂದ 1,000 ರೂ. ವರೆಗೆ ಮತ್ತು ನಿರ್ವಾಹಕರು 500ರಿಂದ 700 ರೂ.ವರೆಗೆ ದುಡಿಯುತ್ತಿದ್ದರು. ಕೋವಿಡ್‌ನಿಂದಾಗಿ ಈ ವೇತನಕ್ಕೆ ಹೊಡೆತ ಬಿದ್ದಿದೆ. ಚಾಲಕನ ವೇತನ 500ರಿಂದ 600 ರೂ. ಮತ್ತು ನಿರ್ವಾಹಕನ ವೇತನ 300ರಿಂದ 400 ರೂ.ಗೆ ಇಳಿಕೆಯಾಗಿದೆ. ಮೊದಲು ತಿಂಗಳಿಗೆ ಎಷ್ಟು ಸಾಧ್ಯವೋ ಅಷ್ಟು ಡ್ಯೂಟಿ ಮಾಡಬಹುದಾಗಿತ್ತು. ಈಗ ನಿಗದಿತ ಡ್ಯೂಟಿ ಸಿಗುತ್ತಿಲ್ಲ. ಸಿಬ್ಬಂದಿಯ ಮಧ್ಯೆ ಡ್ಯೂಟಿಗಾಗಿ ಪೈಪೋಟಿ ಶುರುವಾಗಿದೆ. ಕೆಲಸವಿಲ್ಲದ ಕಾರಣ ಕಡಿಮೆ ಸಂಬಳಕ್ಕೆ ದುಡಿಯುವ ಚಾಲಕ/ನಿರ್ವಾಹಕರ ಸಂಖ್ಯೆಯೂ ಹೆಚ್ಚಿದೆ. ಕಡಿಮೆ ಸಂಬಳಕ್ಕೆ ದುಡಿಯುವವರಿಗೇ ಮಾಲಕರು ಕೆಲಸ ಕೊಡುತ್ತಾರೆ. ಒಟ್ಟಿನಲ್ಲಿ ಬಸ್ ಚಾಲಕ-ನಿರ್ವಾಹಕರ ಪರಿಸ್ಥಿತಿ ಶೋಚನೀಯವಾಗಿದೆ.

 ಉಸ್ಮಾನ್ ಅಲ್ತಾಫ್ ಮುಡಿಪು

ಅಧ್ಯಕ್ಷರು, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ, ದೇರಳಕಟ್ಟೆ

ಮಂಗಳೂರಿನ ಅಂಗಡಿಯೊಂದರಲ್ಲಿ ಕೆಲಸದಲ್ಲಿರುವ ನಾನು ದಿನನಿತ್ಯ ಬಸ್ಸನ್ನೇ ಆಶ್ರಯಿಸಿರುವೆ. ಆದರೆ ಈಗ ಬಸ್ ಪ್ರಯಾಣ ದರದಲ್ಲಿ ವಿಪರೀತ ಹೆಚ್ಚಳವಾಗಿರುವ ಕಾರಣ ನಮ್ಮಂತಹವರಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವುದು ಕಷ್ಟವಾಗಿದೆ. ಸರಕಾರಿ ಬಸ್ಸಿನಲ್ಲಿ ಪ್ರಯಾಣ ದರ ಕಡಿಮೆಯಿದೆ. ಆದರೆ ನಮ್ಮೂರಿಗೆ ಸರಕಾರಿ ಬಸ್ಸೇ ಇಲ್ಲ. ಒಟ್ಟಿನಲ್ಲಿ ಖಾಸಗಿ ಬಸ್ ಪ್ರಯಾಣ ದರವು ನಮ್ಮಂತಹವರಿಗೆ ದುಬಾರಿಯಾಗಿದೆ.

 ಇಜಾಝ್

ಪ್ರಯಾಣಿಕ, ಇನೋಳಿ ಪಾವೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)