varthabharthi


ವಿಶೇಷ-ವರದಿಗಳು

Thewire.in ವರದಿ

ಅಸ್ಸಾಂ: ಪೂರ್ವ ಬಂಗಾಳ ಮೂಲದ ಮುಸ್ಲಿಮರೇ ಹೆಚ್ಚಿರುವ ಗ್ರಾಮದಿಂದ 800ಕ್ಕೂ ಹೆಚ್ಚಿನ ಕುಟುಂಬಗಳ ತೆರವು

ವಾರ್ತಾ ಭಾರತಿ : 23 Sep, 2021

ಹೊಸದಿಲ್ಲಿ, ಸೆ.23: ಅಸ್ಸಾಂ ಸರಕಾರವು ಸೋಮವಾರ ದರಾಂಗ್ ಜಿಲ್ಲೆಯಲ್ಲಿ ಪೂರ್ವ ಬಂಗಾಳ ಮೂಲದ ಮುಸ್ಲಿಮರು ಬಹುಸಂಖ್ಯಾತರಾಗಿರುವ ಧಾಲ್ಪುರ ಗ್ರಾಮದಲ್ಲಿ ಬೃಹತ್ ತೆರವು ಕಾರ್ಯಾಚರಣೆಯನ್ನು ನಡೆಸಿದ್ದು,ಕನಿಷ್ಠ 800 ಕುಟುಂಬಗಳು ನಿರ್ವಸಿತಗೊಂಡಿವೆ. ಇದು ಈ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ನಡೆಸಲಾದ ಎರಡನೇ ಸುತ್ತಿನ ತೆರವು ಕಾರ್ಯಾಚರಣೆಯಾಗಿದೆ.

ಕಳೆದ ಜೂನ್ ನಲ್ಲಿ ಮೊದಲ ಸುತ್ತಿನ ತೆರವು ಕಾರ್ಯಾಚರಣೆ ನಡೆದ ಬೆನ್ನಿಗೇ ಗ್ರಾಮಕ್ಕೆ ಭೇಟಿ ನೀಡಿದ್ದ ಸುದ್ದಿ ಜಾಲತಾಣ 'ದಿ ವೈರ್'ನ ಸತ್ಯಶೋಧನಾ ತಂಡವು 49 ಮುಸ್ಲಿಂ ಮತ್ತು ಒಂದು ಹಿಂದು ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಅದೇ ವೇಳೆ 'ಇತಿಹಾಸಪೂರ್ವ 'ಕಾಲದ ಶಿವ ದೇವಸ್ಥಾನಕ್ಕೆ ಸೇರಿದ 120 ಬಿಘಾ ಜಮೀನನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ಸೆ.20ರಂದು ನಡೆಸಲಾದ ಕಾರ್ಯಾಚರಣೆ ಮೊದಲ ಸುತ್ತಿಗಿಂತ ದೊಡ್ಡ ಪ್ರಮಾಣದಲ್ಲಿತ್ತು. ಧಾಲ್ಪುರ ನಂ.1 ಮತ್ತು ಧಾಲ್ಪುರ ನ.3 ಪ್ರದೇಶಗಳಲ್ಲಿಯ ಸರಕಾರಿ ಜಾಗದಿಂದ ಇಷ್ಟೊಂದು ದೊಡ್ಡ ಪ್ರಮಾಣದ ಬೃಹತ್ ತೆರವು ಕಾರ್ಯಾಚರಣೆಯನ್ನು ರಾಜ್ಯವು ಹಿಂದೆಂದೂ ನೋಡಿರಲಿಲ್ಲ ಎಂದು 'ದಿ ಸೆಂಟಿನೆಲ್'ದೈನಿಕವು ಬಣ್ಣಿಸಿದೆ. 900ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸಿದ್ದು, ಕನಿಷ್ಠ 20,000 ಜನರು ನಿರ್ವಸಿತರಾಗಿದ್ದಾರೆ ಎಂದು ಧಾಲ್ಪುರದ ಕೆಲವು ನಿವಾಸಿಗಳು ತಿಳಿಸಿರುವುದನ್ನು ʼದಿ ವೈರ್ʼ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Photo: Debananda Medak/Thewire.in

ತೆರವುಗೊಂಡ ಕುಟುಂಬಗಳು ಭಾರೀ ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಶೆಡ್ ಗಳಲ್ಲಿ ಆಶ್ರಯ ಪಡೆದಿರುವ ಚಿತ್ರಗಳು ಮತ್ತು ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವಾಗಲೇ ಅಸ್ಸಾಂ ಸರಕಾರವು ತೆರವು ಕಾರ್ಯಾಚರಣೆಯನ್ನು ನಡೆಸಿದೆ.

ದರಾಂಗ್ ಜಿಲ್ಲಾಡಳಿತ ಮತ್ತು ಉದ್ದೇಶಿತ ಗೋರುಖುಟಿ ಬಹುಉದ್ದೇಶ ಯೋಜನೆಯ ಅಧ್ಯಕ್ಷರಾಗಿರುವ ಶಾಸಕ ಪದ್ಮ ಹಝಾರಿಕಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಯೋಧರನ್ನು ನಿಯೋಜಿಸಲಾಗಿತ್ತು. ತೆರವುಗೊಂಡ ಬೆನ್ನಲ್ಲೇ ಜಿಲ್ಲಾಡಳಿತವು 22 ಟ್ರಾಕ್ಟರ್ಗಳನ್ನು ಬಳಸಿ ಭೂಮಿಯನ್ನು ಕೃಷಿಗೆ ಹದಗೊಳಿಸಿದೆ. ಜೂ.7ರಂದು ಮೊದಲ ಸುತ್ತಿನ ತೆರವು ಕಾರ್ಯಾಚರಣೆ ನಡೆದ ಮರುದಿನ ಧಾಲ್ಪುರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಗೋರುಖುಟಿ ಯೋಜನೆಯನ್ನು ಪ್ರಕಟಿಸಿದ್ದರು.

ದರಾಂಗ್ ಜಿಲ್ಲೆಯ ಗೋರುಖುಟಿ,ಸಿಪಾಜಪುರ ಪ್ರದೇಶಗಳಲ್ಲಿ ಅತಿಕ್ರಮಣದಿಂದ ಮುಕ್ತಗೊಂಡ 77,000 ಬಿಘಾ ಭೂಮಿಯನ್ನು ಕೃಷಿಗಾಗಿ ಬಳಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.

ಹಝಾರಿಕಾಗೆ ಯೋಜನೆಯ ಹೊಣೆಯನ್ನು ವಹಿಸುವುದರೊಂದಿಗೆ ಸಂಪುಟ ಸಚಿವರ ದರ್ಜೆಯನ್ನು ನೀಡಲಾಗಿದೆ. ಬಿಜೆಪಿ ಸಂಸದ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ದಿಲೀಪ್ ಸೈಕಿಯಾ, ಬಿಜೆಪಿ ಶಾಸಕರಾದ ಮೃಣಾಲ್ ಸೈಕಿಯಾ ಮತ್ತು ಪದ್ಮಾನಂದ ರಾಜಬಂಘ್ಷಿ ಅವರು ಯೋಜನಾ ಸಮಿತಿಯಲ್ಲಿದ್ದಾರೆ.

ಗೋರುಖುಟಿ ಯೋಜನೆಯನ್ನು ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ (ಆಸು) ಬೆಂಬಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.

Photo: Debananda Medak/Thewire.in

'ಐತಿಹಾಸಿಕ ಅಸ್ಸಾಂ ಆಂದೋಲನದ ಸಂದರ್ಭದಲ್ಲಿ ನಮ್ಮ ರಾಜ್ಯವನ್ನು ಎಲ್ಲ ವಿಷಯಗಳಲ್ಲಿ ಸ್ವಾವಲಂಬಿಯನ್ನಾಗಿಸುವುದು ಮತ್ತು ನಮ್ಮ ಯುವಜನರನ್ನು ಕೃಷಿಯಲ್ಲಿ ತೊಡಗಿಸುವುದು ನಮ್ಮ ಕನಸಾಗಿತ್ತು. ಆದರೆ ಎಜಿಪಿಯ ಎರಡು ಅಧಿಕಾರಾವಧಿಗಳಲ್ಲಿ ಇಂತಹ ಯೋಜನೆಯನ್ನು ಕೈಗೆತ್ತಿಕೊಂಡಿರಲಿಲ್ಲ. ಈಗ ಮುಖ್ಯಮಂತ್ರಿಗಳು ಪ್ರಾಯೋಗಿಕವಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು,ಕ್ರಮೇಣ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಾರಿಗೊಳ್ಳಲಿದೆ. ರಾಜ್ಯದ ಮೂಲನಿವಾಸಿಗಳಿಗೆ ಸೇರಿದ ಭೂಮಿಯನ್ನು ಸಂಘಟಿತ ಅತಿಕ್ರಮಣಕಾರರ ಗುಂಪು ವ್ಯವಸ್ಥಿತ ಸಂಚು ನಡೆಸಿ ಭಾರೀ ಪ್ರಮಾಣದಲ್ಲಿ ಅತಿಕ್ರಮಿಸಿಕೊಂಡಿತ್ತು. ಈ ಅತಿಕ್ರಮಣಕಾರರು ಮೂಲನಿವಾಸಿಗಳ ಅನನ್ಯತೆ ಮತ್ತು ಅಸ್ತಿತ್ವಕ್ಕೆ ಬೆದರಿಕೆಯಾಗಿದ್ದಾರೆ ' ಎಂದು ಹಝಾರಿಕಾರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1980ರ ದಶಕದ ಆರಂಭದಿಂದಲೇ ಈ ಪ್ರದೇಶದಲ್ಲಿ ಗ್ರಾಮಸ್ಥರು ನೆಲೆಸಿದ್ದರು. 1983ರ ಅಸ್ಸಾಂ ಪ್ರತಿಭಟನೆ ಸಂದರ್ಭ ಹಿಂಸಾಚಾರದಿಂದ ಪಾರಾಗಲು ಅವರು ಇಲ್ಲಿಗೆ ಸ್ಥಳಾಂತರಗೊಂಡಿದ್ದಿರಬೇಕು. 2016ರಲ್ಲಿ ಒಮ್ಮೆ ಮತ್ತು 2021ರಲ್ಲಿ ಎರಡು ಬಾರಿ, ಹೀಗೆ ಒಟ್ಟೂ ಮೂರು ಸಲ ಗ್ರಾಮಸ್ಥರನ್ನು ಅವರ ಮನೆಗಳಿಂದ ತೆರವುಗೊಳಿಸಲಾಗಿದೆ ಎಂದು ಸತ್ಯಶೋಧನಾ ತಂಡವು ತನ್ನ ವರದಿಯಲ್ಲಿ ತಿಳಿಸಿತ್ತು. ಸಾಮಾಜಿಕ ಹೋರಾಟಗಾರರಾದ ಪೂಜಾ ನಿರಾಲಾ, ಮೆಹಝಬೀನ್ ರೆಹಮಾನ್, ಪ್ರಸೂನ ಗೋಸ್ವಾಮಿ ಮತ್ತು ಕಶ್ಯಪ ಚೌಧುರಿ,ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್ ನ ವಕೀಲ ಶೌರದೀಪ್ ಡೇ ಅವರು ಸಮಿತಿಯ ಸದಸ್ಯರಾಗಿದ್ದರು.

Photo: Debananda Medak/Thewire.in

ಬಿಜೆಪಿ ಸರಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಅನುಗುಣವಾಗಿ ಗೋರುಖುಟಿ ಯೋಜನೆಯ ಮೂಲಕ ತನ್ನ ಕಾರ್ಪೊರೇಟ್ ಪರ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಮತ್ತು ಅತಿಕ್ರಮಣ ಮುಕ್ತಗೊಂಡ ಭೂಮಿಯ ಹೆಚ್ಚಿನ ಭಾಗ ಶಿವ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂದು ಹೇಳುವ ಮೂಲಕ ಕೋಮು ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಆರೋಪಿಸಿತ್ತು. 1980ರ ದಶಕದಲ್ಲಿ ಈ ಪ್ರದೇಶದಲ್ಲಿ ವಾಸವಿದ್ದ ಹಿಂದು ಕುಟುಂಬವೊಂದು 'ಇತಿಹಾಸಪೂರ್ವ ' ದೇವಸ್ಥಾನವನ್ನು ಸ್ಥಾಪಿಸಿತ್ತು ಎಂದು ಅದು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)