varthabharthi


ನಿಮ್ಮ ಅಂಕಣ

ಚಾಣಕ್ಯನಿದ್ದುದಕ್ಕೆ ಐತಿಹಾಸಿಕ ಪುರಾವೆ ಇದೆಯೇ?

ವಾರ್ತಾ ಭಾರತಿ : 23 Sep, 2021
-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು

ಮಾನ್ಯರೇ,
ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಹರಳೂರು ಗ್ರಾಮದಲ್ಲಿ ರೂ.400 ಕೋಟಿ ಬೆಲೆ ಬಾಳುವ ಸರಕಾರಿ ಜಮೀನನ್ನು, ಕರ್ನಾಟಕದ ಬಿಜೆಪಿ ಸರಕಾರವು ಆರೆಸ್ಸೆಸ್ ಸಹ ಸಂಸ್ಥೆಗೆ ಕೇವಲ ರೂ.50 ಕೋಟಿಗೆ ಕೊಟ್ಟು ಅಲ್ಲಿ ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪಿಸಲು ಅನುಮತಿ ಕೊಟ್ಟಿದೆ. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಕ್ಷೇಪ ಎತ್ತಿದ್ದು ಸರಿಯಾಗಿದೆ.

ಮೂಲತಃ ಚಾಣಕ್ಯ ಎಂಬ ವ್ಯಕ್ತಿಯೊಬ್ಬ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಎಂಬ ಕುರಿತು ಎಲ್ಲಿಯೂ ಐತಿಹಾಸಿಕ ಪುರಾವೆ ಸಿಕ್ಕಿಲ್ಲ. ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಮೆಗಸ್ತನಿಸ್ ಎಂಬ ಗ್ರೀಕ್ ಇತಿಹಾಸಕಾರ ಗ್ರೀಕ್ ಭಾಷೆಯಲ್ಲಿ ಬರೆದ 'ಇಂಡಿಕಾ' ಎಂಬ ಒಂದೇ ಒಂದು ಗ್ರಂಥ ಚಂದ್ರಗುಪ್ತನ ಕುರಿತು ಲಭ್ಯ ಇರುವ ಐತಿಹಾಸಿಕ ಪುರಾವೆ. ಮೌರ್ಯರ ಕಾಲದಲ್ಲಿ ಇತಿಹಾಸ ಬರೆದಿಡುವ ಪದ್ಧತಿ ಭಾರತದಲ್ಲಿ ಬಹುಶಃ ಇರಲಿಲ್ಲ. ನಮಗೆ ಚಂದ್ರಗುಪ್ತನ ಬಗ್ಗೆ ಈಗಿರುವ ಮಾಹಿತಿಯ ಮೂಲ ಸಿಕ್ಕಿರುವುದು ಗ್ರೀಕ್ ದೇಶದಿಂದ! ಚಂದ್ರಗುಪ್ತನ ಇತರ ಮಂತ್ರಿ ಮತ್ತು ಸೇನಾಪತಿಗಳ ಮಾಹಿತಿ 'ಇಂಡಿಕಾ'ದಲ್ಲಿ ಸಿಕ್ಕಿರುವಾಗ ಚಾಣಕ್ಯನ ಕುರಿತು ಒಂದೇ ಒಂದು ಅಕ್ಷರ ಆ ಮೆಗಸ್ತನಿಸ್ ಬರೆದ ಇತಿಹಾಸದಲ್ಲಿ ಯಾಕಿಲ್ಲ? ಮೆಗಸ್ತನಿಸ್ ಹತ್ತು ವರ್ಷಕ್ಕೂ ಹೆಚ್ಚು ಕಾಲ ಮೌರ್ಯ ಸಾಮ್ರಾಜ್ಯದಲ್ಲಿ ಇದ್ದ ಬಗ್ಗೆ ಆತನೇ ಹೇಳಿಕೊಂಡಿದ್ದಾನೆ. ಆದರೂ ಅವನಿಗೆ ಚಾಣಕ್ಯನ ಕುರಿತು ಒಂದೇ ಒಂದು ವಿಷಯವೂ ಗೊತ್ತಿರಲಿಲ್ಲ ಎಂದ ಮೇಲೆ ಚಾಣಕ್ಯ-ವಿಷ್ಣುಗುಪ್ತ-ಕೌಟಿಲ್ಯ ಎಂಬ ಮಂತ್ರಿ ಚಂದ್ರಗುಪ್ತನ ಆಸ್ಥಾನದಲ್ಲಿ ಇದ್ದಿದ್ದು ಸಂದೇಹ! ಕೇವಲ ಕೆಳವರ್ಗದ ಶೂದ್ರ ಚಂದ್ರಗುಪ್ತ ದೊಡ್ಡ ಸಾಮ್ರಾಟನಾಗಿ ತನ್ನ ಸ್ವಂತ ಶಕ್ತಿಯಿಂದ ಬೆಳೆದಿದ್ದನ್ನು ''ಗೌಣವಾಗಿಸಲು'' ಹಾಗೂ ಯಾವುದೇ ವ್ಯಕ್ತಿ ಬ್ರಾಹ್ಮಣರ ಮಾರ್ಗದರ್ಶನ ಮತ್ತು ಬುದ್ಧಿವಂತಿಕೆಯ ಸಹಾಯ ಇಲ್ಲದೆ ಯಾವುದೇ ಮಹತ್ಕಾರ್ಯ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಭಾರತೀಯರ ಮಾನಸಿಕತೆಯಲ್ಲಿ ತುಂಬಲು ಈ ಚಾಣಕ್ಯ-ಕೌಟಿಲ್ಯ ಎಂಬ ಕಾಲ್ಪನಿಕ ಪಾತ್ರವನ್ನು ವೈದಿಕರು ಹುಟ್ಟು ಹಾಕಿರಬಹುದು.

ನಿಜವಾಗಿ ಚಂದ್ರಗುಪ್ತನ ಕಾಲದಲ್ಲಿ ಭಾರತದಲ್ಲಿ ಇನ್ನೂ ಮೇಲುಕೀಳೆಂಬ ವರ್ಣ ವ್ಯವಸ್ಥೆ ಹುಟ್ಟಿರಲೇ ಇಲ್ಲವಂತೆ! ಆಗ ಹೀನ ಜಾತಿ ವ್ಯವಸ್ಥೆ ಇದ್ದಿದ್ದರೆ ಮೆಗಸ್ತನಿಸ್ ಜರೂರು ಈ ಕುರಿತು ಉಲ್ಲೇಖಿಸುತ್ತಿದ್ದ! ಚಂದ್ರಗುಪ್ತನ ಕಾಲದಲ್ಲಿ ಸಂಸ್ಕೃತ ಭಾಷೆ ಹಾಗೂ ದೇವನಾಗರಿ ಲಿಪಿ ಇನ್ನೂ ಬಳಕೆಗೆ ಬಂದಿರಲಿಲ್ಲ. ಆಗ ಸಂಸ್ಕೃತಕ್ಕೆ ಸರಿಯಾದ ವ್ಯಾಕರಣವೂ ಇರಲಿಲ್ಲ. ಸಂಸ್ಕೃತಕ್ಕೆ ವ್ಯಾಕರಣ ಬರೆದ ಪಾಣಿನಿ ಮತ್ತು ಪತಂಜಲಿ ಇಬ್ಬರೂ ಸಾಮ್ರಾಟ ಅಶೋಕನ ಕಾಲದ ನಂತರದವರು. ದೇವನಾಗರಿ ಲಿಪಿಯೂ ಚಂದ್ರಗುಪ್ತನ ಕಾಲದಲ್ಲಿ ಇನ್ನೂ ವಿಕಸಿತ ಆಗಿರಲಿಲ್ಲ. ಅಗೆಲ್ಲ ಪ್ರಾಕೃತ-ಪಾಲಿ-ಮಾಗಧಿ ಭಾಷೆ ಹಾಗೂ ಬ್ರಾಹ್ಮಿ ಲಿಪಿ ಮಾತ್ರ ಉತ್ತರ ಭಾರತದಲ್ಲಿ ಬಳಕೆಯಲ್ಲಿ ಇದ್ದಿದ್ದು. ಪ್ರಾಕೃತ ಭಾಷೆಯಲ್ಲಿ-ಬ್ರಾಹ್ಮಿ ಲಿಪಿಯಲ್ಲಿ ಬರೆದಿರುವ ಯಾವುದೇ ಪುರಾವೆ ಚಾಣಕ್ಯನ ಕುರಿತು ಉತ್ತರ ಭಾರತದಲ್ಲಿ ಎಲ್ಲಿಯೂ ಲಭ್ಯವಾಗಿಲ್ಲ. ಬ್ರಿಟಿಷರು ಬಂದ ಮೇಲೆ ಸುಮಾರು 200 ವರ್ಷಗಳ ಹಿಂದೆ ಮೈಸೂರಿನ ಒಂದು ಹಳೆಯ ಗ್ರಂಥಾಲಯದಲ್ಲಿ ಸಂಸ್ಕೃತ ಭಾಷೆಯಲ್ಲಿ ಮತ್ತು ದೇವನಾಗರಿ ಲಿಪಿಯಲ್ಲಿ ಬರೆದಿದ್ದ ಚಾಣಕ್ಯನ ಕಥೆ ಬೆಳಕಿಗೆ ಬಂದಿದ್ದು. ಚಂದ್ರಗುಪ್ತನ ರಾಜಧಾನಿ ಇದ್ದಿದ್ದು ಈಗಿನ ಬಿಹಾರ ರಾಜ್ಯದ ಪಾಟಲೀಪುತ್ರ (ಈಗಿನ ಪಾಟ್ನಾ)ದಲ್ಲಿ. ಹಾಗಾದರೆ ಬಿಹಾರದಲ್ಲಿ ಚಾಣಕ್ಯನ ಕುರಿತು ಯಾಕೆ ಯಾವುದೇ ಪುರಾವೆ ದೊರೆತಿಲ್ಲ? ದೂರದ ಮೈಸೂರಿಗೆ ಚಾಣಕ್ಯನ ಇತಿಹಾಸ ವಲಸೆ ಬಂದಿದ್ದು ಹೇಗೆ? ಅದೂ ಆಗ ಬಳಕೆಯಲ್ಲಿ ಇರದ ಭಾಷೆ ಮತ್ತು ಲಿಪಿಯಲ್ಲಿ? ಚಾಣಕ್ಯನ ಕುರಿತು ಮೊದಲ ಉಲ್ಲೇಖ ಕರ್ನಾಟಕದ ಮೈಸೂರಿನಲ್ಲಿ ಬ್ರಿಟಿಷರಿಗೆ ಸಿಕ್ಕಿರುವುದರಿಂದ ಈ ಚಾಣಕ್ಯನ ಕಾಲ್ಪನಿಕ ಜೀವನ ಚರಿತ್ರೆಗೂ ಕರ್ನಾಟಕದ ಮೊದಲ ರಾಜವಂಶವಾದ ಕದಂಬರ ಚರಿತ್ರೆಗೂ ನೇರ ಸಂಬಂಧ ಇರುವಂತಿದೆ.

ಕದಂಬ ರಾಜ್ಯ ಸ್ಥಾಪಿಸಿದ ಮಯೂರ ವರ್ಮ (ಮಯೂರ ಶರ್ಮ) ಮೂಲತಃ ಉತ್ತರ ಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದ ಬ್ರಾಹ್ಮಣನಾಗಿದ್ದ, ಅವನು ಒಮ್ಮೆ ಪಾಂಡ್ಯ ರಾಜನನ್ನು ಕಾಣಲು ಅಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಅವನಿಗೆ ಘೋರ ಅವಮಾನವಾಗಿದ್ದಕ್ಕೆ ಕುಪಿತಗೊಂಡ ಅವನು ಪಾಂಡ್ಯ ರಾಜನ ಮೇಲೆ ಸೇಡು ತೀರಿಸಲು ತನ್ನ ಜುಟ್ಟಿನ ಗಂಟನ್ನು ಬಿಚ್ಚಿ ಹೊಸ ರಾಜ್ಯ ಕಟ್ಟಿ ಪಾಂಡ್ಯರನ್ನು ಸೋಲಿಸುವುದಾಗಿ ಶಪಥ ಮಾಡಿದ್ದನು ಎಂದು ಕರ್ನಾಟಕದ ಕದಂಬ ಇತಿಹಾಸ ಹೇಳುತ್ತದೆ. ಕದಂಬ ಮಯೂರ ವರ್ಮನ ಇತಿಹಾಸವನ್ನೇ ಮೈಸೂರಿನ ಯಾರೋ ಲೇಖಕ ಎರವಲು ಪಡೆದು ಚಾಣಕ್ಯನ ಕಾಲ್ಪನಿಕ ಇತಿಹಾಸ ಹೆಣೆದಿರುವ ಸಾಧ್ಯತೆ ಇದೆ. ಈ ಕುರಿತು ಈಗಿನ ಇತಿಹಾಸಕಾರರಲ್ಲಿ ಚರ್ಚೆಯಾಗಲಿ ಹಾಗೂ ಶೂದ್ರ ಚಂದ್ರಗುಪ್ತನಿಗೆ ಸ್ವಂತ ಬುದ್ಧಿ ಇರಲಿಲ್ಲ ಮತ್ತು ಬ್ರಾಹ್ಮಣ ಚಾಣಕ್ಯನ ಸಹಾಯ ಇರದಿದ್ದರೆ ಶೂದ್ರ ಚಂದ್ರಗುಪ್ತ ಅಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಪರೋಕ್ಷವಾಗಿ ಚಂದ್ರಗುಪ್ತನನ್ನು ಅವಮಾನಿಸಿ ವೈದಿಕರ ಮೇಲ್ಮೆ ಸಾಧಿಸಲು ಬರೆದಿರುವುದೇ ಕಾಲ್ಪನಿಕ ಚಾಣಕ್ಯ-ಕೌಟಿಲ್ಯನ ಚರಿತ್ರೆ. ಇದನ್ನು ಈಗಿನ ಇತಿಹಾಸ ಸಂಶೋಧಕರು ವಿಶ್ಲೇಷಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)