varthabharthi


ನಿಮ್ಮ ಅಂಕಣ

ದಲಿತರು, ಶೂದ್ರರ ಸ್ವಾಭಿಮಾನವನ್ನು ಕಿತ್ತುಕೊಂಡರು...

ವಾರ್ತಾ ಭಾರತಿ : 24 Sep, 2021
ರಂಗಧಾಮಯ್ಯ ಜೆ.ಸಿ. ರಾಜ್ಯಶಾಸ್ತ್ರ ಉಪನ್ಯಾಸಕರು, ತುಮಕೂರು

ದಲಿತ ಜನಾಂಗವನ್ನು ಗುಲಾಮಗಿರಿಯಿಂದ ವಿಮೋಚನೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್‌ರವರು ಜನವರಿ 27, 1919ರಂದು ಸೌತ್‌ಬರೋ ಆಯೋಗದ ಮುಂದೆ ಬ್ರಿಟಿಷರ ಜೊತೆ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುತ್ತಾರೆ. ಮೊದಲನೆಯದಾಗಿ ‘1909 ಇಂಡಿಯನ್ ಕೌನ್ಸಿಲ್ ಕಾಯ್ದೆ’ ವಿರೋಧಿಸಿ ದಲಿತರಿಗೆ ಮಹಿಳೆಯರಿಗೆ ಹಾಗೂ ಶೂದ್ರರಿಗೆ ಮತದಾನದ ಹಕ್ಕು/ಶಾಸನ ಸಭೆಗಳಲ್ಲಿ ದಲಿತರಿಗೆ ಪ್ರತ್ಯೇಕ ಚುನಾಯಕಗಳು ಬೇಕೆಂದು ಆಗ್ರಹಿಸುತ್ತಾರೆ. ಏಕೆಂದರೆ ಅದುವರೆಗೂ ಮತದಾನದ ಹಕ್ಕು ಕೇವಲ 3 ವರ್ಗಗಳಿಗೆ ಮಾತ್ರ ಇತ್ತು. ಅದು 1. ಬ್ರಾಹ್ಮಣರಿಗೆ, 2. ಭೂಮಾಲಕ ಕ್ಷತ್ರಿಯರಿಗೆ ಮತ್ತು 3. ಆದಾಯ ತೆರಿಗೆ ಪಾವತಿಸುವ ವೈಶ್ಯರಿಗೆ ಮಾತ್ರ. ಇಲ್ಲಿ ಮೇಲ್ಜಾತಿಯ ಮಹಿಳೆಯರಿಗೂ ಮತದಾನದ ಹಕ್ಕು ಇರಲಿಲ್ಲ. ಆದ್ದರಿಂದ ಬಾಬಾ ಸಾಹೇಬರು ಮುಂದೆ 1929 ಮೇ 17ರಂದು 60 ಪುಟಗಳ ಒಂದು ಸಮಗ್ರ ವರದಿ ತಯಾರಿಸಿ ದಲಿತರು ಹಿಂದುಳಿದವರ ಸಮಸ್ಯೆಗಳ ಬಗ್ಗೆ ಪರಿಹಾರ ಕೇಳುತ್ತಾರೆ. ಆಗ ಈ ಬಗ್ಗೆ ಲಂಡನ್‌ನಲ್ಲಿ ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ಅಧ್ಯಕ್ಷತೆಯಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆಯುತ್ತವೆ. ಅದರಲ್ಲಿ ಎಲ್ಲಾ ಸಮುದಾಯಗಳ ಪರವಾಗಿ ಆಯಾ ಸಮುದಾಯದ ನಾಯಕರು ಭಾಗವಹಿಸುತ್ತಾರೆ. ಮುಸ್ಲಿಮರ ಪರವಾಗಿ ಆಗಾಖಾನ್ ಮತ್ತು ಜಿನ್ನಾ, ಸಿಖ್ಖರ ಪರವಾಗಿ ಸರ್ ಹೆನ್ರಿ, ಸರ್ದಾರ್ ಉಜ್ವಲ್ ಸಿಂಗ್ ಇನ್ನೂ ಮುಂತಾದವರು ಭಾಗವಹಿಸುತ್ತಾರೆ. ನಿಮ್ನ ವರ್ಗಗಳ ಪರವಾಗಿ ಡಾ. ಬಿ.ಆರ್. ಅಂಬೇಡ್ಕರ್ ಉಪಸ್ಥಿತರಿರುತ್ತಾರೆ.

ಈ ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಎಲ್ಲಾ ನಾಯಕರನ್ನು ಕಾಂಗ್ರೆಸಿಗರು ಕಟುವಾಗಿ ಟೀಕಿಸುತ್ತಾರೆ. ಅವರೆಲ್ಲರೂ ಬ್ರಿಟಿಷರ ಏಜೆಂಟರೆಂದು ಬಣ್ಣಿಸುತ್ತಾರೆ. ‘‘ನಮ್ಮನ್ನು ನಾಯಿ-ಬೆಕ್ಕುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಕುಡಿಯಲು ನಮಗೆ ನೀರು ಸಿಗುತ್ತಿಲ್ಲ, ದೇವಾಲಯ ಪ್ರವೇಶವಿಲ್ಲ, ಶಿಕ್ಷಣ ಸಿಗುತ್ತಿಲ್ಲ’’ ಎಂದು ಡಾ. ಅಂಬೇಡ್ಕರ್‌ರವರು ದುಂಡು ಮೇಜಿನ ಸಭೆಯಲ್ಲಿ ಒಂದು ಸುದೀರ್ಘ ಅಹವಾಲನ್ನು ಮಂಡಿಸಿದರು. ವಾದ ಪ್ರತಿವಾದಗಳು ಮುಗಿದ ನಂತರ ಬ್ರಿಟನ್ ಪ್ರಧಾನಿ ರಾಮ್ಸೆ ಮ್ಯಾಕ್ ಡೊನಾಲ್ಡ್ ತೀರ್ಪು ಪ್ರಕಟನೆೆಗಾಗಿ ಕಾಯ್ದಿರಿಸಿ 2ನೇ ದುಂಡು ಮೇಜಿನ ಸಮ್ಮೇಳನ ಸಭೆಯನ್ನು ಮುಂದೂಡಿದರು. ಈ ವಾದದಲ್ಲಿ ನ್ಯಾಯ, ನೀತಿಯಿರುವುದನ್ನು ಮನಗಂಡು ಬ್ರಿಟನ್ ಪ್ರಧಾನಿ ಆಗಸ್ಟ್ 17, 1932ರಂದು ಕೋಮುವಾರು ಆದೇಶದ ಮೂಲಕ ತೀರ್ಪು ನೀಡುತ್ತಾರೆ. ಇದರಲ್ಲಿ ಕೇಳಿದ್ದಕ್ಕಿಂತ ದುಪ್ಪಟ್ಟು ಲಾಭ ಎಸ್ಸಿ/ಎಸ್ಟಿಯವರಿಗೆ ಸಿಗುತ್ತದೆ. ವಿಶೇಷ ಮತಕ್ಷೇತ್ರ, ಎಂದರೆ ಪರಿಶಿಷ್ಟ ಜಾತಿಯವರಿಗೆ ಎರಡು ವೋಟು ಚಲಾಯಿಸುವ ಹಕ್ಕು ಬರುತ್ತದೆ. ಒಂದು ಮತದಿಂದ ತನ್ನ ಪ್ರತಿನಿಧಿಯನ್ನು ವಿಧಾನಸಭೆ/ಲೋಕಸಭೆಗೆ ಕಳುಹಿಸುವುದು 2ನೇ ಮತದಿಂದ ತಾನು ವಾಸವಿರುವ ಸಾಮಾನ್ಯ ಮತಕ್ಷೇತ್ರದಿಂದ ಮೇಲ್ಜಾತಿ ಅಭ್ಯರ್ಥಿಯನ್ನು ಚುನಾಯಿಸಬಹುದಿತ್ತು. ಬ್ರಿಟಿಷರು ನೀಡಿದ ಈ ವಿಶೇಷ ಮತಕ್ಷೇತ್ರದಿಂದ ಡಾ. ಬಿ.ಆರ್. ಅಂಬೇಡ್ಕರ್‌ಗೆ ಸಂಪೂರ್ಣ ತೃಪ್ತಿಯಾಯಿತು. ಆದರೆ ಇದನ್ನು ವಿರೋಧಿಸಿ ಕಾಂಗ್ರೆಸ್‌ನ ಪರವಾಗಿ ಮಹಾತ್ಮಾ ಗಾಂಧೀಜೀಯವರು ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭ ಮಾಡುತ್ತಾರೆ. ಇದರಿಂದಾಗಿ ಹಿಂದೂಗಳಲ್ಲಿ ಒಡಕುಂಟಾಗುತ್ತದೆ ಅದನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹ ಮಾಡುತ್ತಾರೆ. ಆಗ ರಾಮ್ಸೆ ಮ್ಯಾಕ್‌ಡೊನಾಲ್ಡ್ ‘‘ಡಾ. ಬಿ.ಆರ್. ಅಂಬೇಡ್ಕರ್ ಒಪ್ಪಿದರೆ ಬದಲಾವಣೆ ಸಾಧ್ಯವಾಗುತ್ತದೆ’’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮುಂದೆ ಎರಡು ದಾರಿಗಳು ಮಾತ್ರ ಉಳಿದಿದ್ದವು. ಒಂದು ಮಾನವೀಯತೆಯ ಕರೆಗೆ ಒಗೊಟ್ಟು ಗಾಂಧೀಜಿಯವರ ಪ್ರಾಣ ಉಳಿಸುವುದು. ಮತ್ತೊಂದು ಶೋಷಿತ ಸಮುದಾಯಗಳಿಗೆ ಬ್ರಿಟಿಷರು ನೀಡಿದ್ದ ರಾಜಕೀಯ ಹಕ್ಕನ್ನು ಉಳಿಸಿಕೊಳ್ಳುವುದು. ಡಾ. ಬಿ.ಆರ್. ಅಂಬೇಡ್ಕರ್ ಮಾನವೀಯತೆ ಮೆರೆದು ಗಾಂಧೀಜಿಯವರ ಪ್ರಾಣ ಉಳಿಸಿದರು.

ಗಾಂಧೀಜಿಯವರ ಆಸೆಯಂತೆ ಕೋಮುವಾರು ತೀರ್ಪನ್ನು ಬದಲಾಯಿಸಲು ಡಾ. ಬಿ.ಆರ್. ಅಂಬೇಡ್ಕರ್‌ರವರು ಒಪ್ಪಿಕೊಂಡರು. ಕೋಮುವಾರು ತೀರ್ಪಿನಿಂದ ಬಂದಿದ್ದ 78 ಪ್ರತ್ಯೇಕ ಚುನಾಯಿತ ಮತಕ್ಷೇತ್ರಗಳಿಗೆ ಬದಲಾಗಿ 148 ಜಂಟಿ ಚುನಾಯಿತ ಮತಕ್ಷೇತ್ರಗಳು ಬಂದು 1932ರ ಸೆಪ್ಟಂಬರ್ 24ರಂದು ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಡುವೆ ಒಂದು ಒಪ್ಪಂದ ಅಥವಾ ಒಡಂಬಡಿಕೆ ಆಗುತ್ತದೆ. ಅದೇ ‘ಪೂನಾ ಒಪ್ಪಂದ’ ಅಥವಾ ‘ಪೂನಾ ಒಡಂಬಡಿಕೆ’. ಈ ಒಪ್ಪಂದದ ಬಗ್ಗೆ ಬಾಬಾ ಸಾಹೇಬರು ಪತ್ರಕರ್ತರಿಗೆ: ‘‘ಲಂಡನ್‌ನಿಂದ ಒಂದು ರಸಭರಿತವಾದ ಹಣ್ಣನ್ನು ನಾನು ನನ್ನ ಜನರಿಗೆ ನೀಡಲು ತಂದಿದ್ದೆ, ಆ ಹಣ್ಣನ್ನು ನನ್ನಿಂದ ಕಸಿದುಕೊಂಡ ಗಾಂಧೀಜಿ, ಆ ಹಣ್ಣಿನ ರಸವನ್ನೆಲ್ಲ ತನ್ನ ಜನರಿಗೆ ನೀಡಿ ಸಿಪ್ಪೆಯನ್ನು ನನ್ನ ಮತ್ತು ನನ್ನ ಜನರ ಮುಖದ ಮೇಲೆ ಉಗುಳಿದ್ದಾರೆ’’ ಎನ್ನುತ್ತಾರೆ. ಮತ್ತು ತನ್ನ ಜನರಿಗೆ ‘‘ಇನ್ನು ಮುಂದೆ ದೇವಾಲಯಗಳ ಪ್ರವೇಶಕ್ಕಾಗಿ ಹೋರಾಟ ಮಾಡುವುದನ್ನು ನಿಲ್ಲಿಸಿ ವಿಧಾನಸೌಧ, ಪಾರ್ಲಿಮೆಂಟ್, ಶಾಸನಸಭೆಗಳ ಪ್ರವೇಶಕ್ಕಾಗಿ ಕಾರ್ಯೋನ್ಮುಖರಾಗಿ’’ ಎನ್ನುತ್ತಾರೆ.

ಪೂನಾ ಒಪ್ಪಂದದ ಪರಿಣಾಮಗಳು

 * ಡಾ. ಬಿ.ಆರ್. ಅಂಬೇಡ್ಕರ್‌ರವರ ಸ್ವತಂತ್ರ ಕಾರ್ಮಿಕ ಪಕ್ಷದಿಂದ ಗೆದ್ದ 15 ವಿದ್ಯಾವಂತ ಎಂಎಲ್‌ಎಗಳು ಮಂಡಿಸುತ್ತಿದ್ದ ‘‘ದಲಿತರಿಗೆ, ಶೂದ್ರರಿಗೆ ಸ್ವಂತ ಭೂಮಿ, ವ್ಯಾಪಾರ ಬೇಕು’’ ಎನ್ನುವ ಅಹವಾಲುಗಳನ್ನು ಕಾಂಗ್ರೆಸ್‌ನಿಂದ ಗೆದ್ದ 78 ಅವಿದ್ಯಾವಂತ ದಲಿತ ಶಾಸಕರು ವಿರೋಧ ಮಾಡುತ್ತಾರೆ.

* ಸ್ವತಂತ್ರ ಕಾರ್ಮಿಕ ಪಕ್ಷದಿಂದ ಆಯ್ಕೆಯಾದ ವಿದ್ಯಾವಂತ ಶಾಸಕರು ಶಿಕ್ಷಣ ಬೇಕು, ಶಾಲಾ-ಕಾಲೇಜುಗಳು ಬೇಕು, ನಮ್ಮ ಮಕ್ಕಳಿಗೆ ವಸತಿ ಸಹಿತ ಹಾಸ್ಟ್ಟೆಲ್‌ಗಳು ಬೇಕು ಎಂದರೆ ಅದನ್ನು ಕಾಂಗ್ರೆಸ್‌ನಿಂದ ಆಯ್ಕೆಯಾದ 78 ಶಾಸಕರು ವಿರೋಧಿಸುತ್ತಾರೆ.

* ದಲಿತ ಸಮುದಾಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆದರೆ ಅದರ ಬಗ್ಗೆ ವೌನ ತಾಳಲಾಗುತ್ತಿದೆ. * ಭಾರತದ ಸಂವಿಧಾನವನ್ನು ಸುಡುತ್ತೇವೆ, ಬದಲಾಯಿಸುತ್ತೇವೆ. ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದರೂ ಅದನ್ನು ವಿರೋಧಿಸದೆ ಇರುವುದು ವಿಪರ್ಯಾಸ.

* ಎಸ್ಸಿ/ಎಸ್ಟಿ ಸಮುದಾಯದವರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಇದಕ್ಕೆ ಆ ಸಮುದಾಯದ ಪ್ರತಿನಿಧಿಗಳು ಸುಮ್ಮನೆ ಇರುವುದೇ ಕಾರಣವಾಗಿದೆ. ಏಕೆಂದರೆ ಮೇಲ್ಜಾತಿ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಅವರ ಮನೆ ಬಾಗಿಲು ಕಾಯಬೇಕಾಗಿದೆ.

* ಇವತ್ತು ಇಡೀ ಭಾರತದಾದ್ಯಂತ ಎಸ್ಸಿ/ಎಸ್ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವ ಎಂಎಲ್‌ಎ, ಎಂಪಿ, ಗ್ರಾಮ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಬಹಳಷ್ಟು ಜನ ಅಂದರೆ ಸುಮಾರು ಶೇ. 70 ಮಂದಿ ಅವಿದ್ಯಾವಂತರಾಗಿ ಆಯ್ಕೆಯಾಗುತ್ತಿದ್ದು, ಆ ಕ್ಷೇತ್ರದ ಸವರ್ಣೀಯ ಸಮುದಾಯಗಳು ಅಧಿಕಾರ ಚಲಾಯಿಸುವುದನ್ನು ಕಾಣಬಹುದು.

ಅವರ ಹೆಸರು ಬರೆಯಲು ಬರುವುದು ಬಿಟ್ಟರೆ ಅವರಿಗೆ ಒಂದು ಅರ್ಜಿಯನ್ನೂ ಬರೆಯಲು ಬಾರದು. ಹೀಗಿರುವಾಗ ಪಂಚಾಯತ್‌ನಲ್ಲಿ ಯಾವ ಯಾವ ಅನುದಾನಗಳಲ್ಲಿ ಎಷ್ಟು ಹಣ ಬರುತ್ತದೆ ಎಂಬುದು ಗೊತ್ತೇ ಇರುವುದಿಲ್ಲ. ಅಲ್ಲಿ ದಲಿತರಲ್ಲಿ ವಿದ್ಯಾವಂತರು ನಿಂತರೆ ಅಲ್ಲಿನ ಸವರ್ಣೀಯ ಸಮುದಾಯಗಳು ಬಹಳಷ್ಟು ಹೀನಾಯವಾಗಿ ಸೋಲಿಸುತ್ತಾರೆ. ಇದು ಡಾ. ಬಿ.ಆರ್. ಅಂಬೇಡ್ಕರ್‌ರವರಿಗೆ ಹಾಗೂ ಭಾರತ ಸಂವಿಧಾನದಿಂದ ಬಂದ ರಾಜಕೀಯ ಮೀಸಲಾತಿಗೆ ಕಾಂಗ್ರೆಸ್ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಮಾಡಿದ ಮೋಸವಾಗಿದೆ. ಭಾರತದಲ್ಲಿ ಬಹಳಷ್ಟು ಕಡೆ ದಲಿತರು ಇಂದಿಗೂ ಮೂಲಭೂತ ಸವಲತ್ತುಗಳಿಂದ ವಂಚಿತರಾಗಿದ್ದಾರಲ್ಲದೆ ಅವರು ಸತ್ತರೆ ಸ್ಮಶಾನಗಳೂ ಇಲ್ಲದಂತಾ ಗಿದೆ. ಇದು ಇವತ್ತಿನ ವಾಸ್ಥವ ಸ್ಥಿತಿ, ಪೂನಾ ಒಪ್ಪಂದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)