varthabharthi


ನಿಮ್ಮ ಅಂಕಣ

ಖಾಸಗಿಯವರಿಗೆ ಮಾರುವ ನಿರ್ಧಾರ ಸರಿಯಲ್ಲ

ವಾರ್ತಾ ಭಾರತಿ : 24 Sep, 2021
-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಮಾನ್ಯರೇ,
ಮೊನ್ನೆ ವಿಧಾನ ಪರಿಷತ್‌ನ ಸದಸ್ಯೆಯೊಬ್ಬರ ಪ್ರಶ್ನೆಗೆ, ''ಹತ್ತಾರು ವರ್ಷಗಳಿಂದ ಬಿಡಿಗಾಸಿನ ಬಾಡಿಗೆ ಆಧಾರದಲ್ಲಿ ಸರಿಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಲಾಗಿದೆ. ಅವುಗಳಿಂದ ಸರಕಾರದ ಬೊಕ್ಕಸಕ್ಕೆ ವರಮಾನ ಬರುತ್ತಿಲ್ಲ. ಕಟ್ಟಡ ಮತ್ತು ಇತರ ನಿರ್ಮಾಣಗಳು ಇರುವ ಜಮೀನುಗಳನ್ನು ಗುತ್ತಿಗೆ ರದ್ದುಪಡಿಸಿ ವಾಪಸ್ ಪಡೆಯುವುದಕ್ಕೂ ಕಷ್ಟವಾಗುತ್ತಿದೆ. ಆದ್ದರಿಂದ ಮಾರ್ಗಸೂಚಿ ದರದ ಆಧಾರದಲ್ಲೇ ಅವುಗಳನ್ನು ಆಯಾ ಸಂಸ್ಥೆಗಳು ಖರೀದಿಸಲು ಅವಕಾಶ ನೀಡಲು ಸರಕಾರ ತೀರ್ಮಾನಿಸಿದೆ'' ಎಂದು ಕಂದಾಯ ಸಚಿವರು ಉತ್ತರಿಸಿದ್ದಾರೆ.

ಈ ನಿರ್ಧಾರದಿಂದ ಭೂಮಿಯನ್ನು ಈಗ ಗುತ್ತಿಗೆ ಪಡೆದು ಅನುಭವಿಸುತ್ತಿರುವವರಿಗೆ ಲಾಭವೇ ಹೊರತು, ಸರಕಾರಕ್ಕಲ್ಲ. ಇಂತಹ ನಿರ್ಧಾರ, ನೆಗಡಿಯಾದರೆ ಔಷಧಿ ತೆಗೆದುಕೊಳ್ಳುವುದರ ಬದಲು ಮೂಗನ್ನೇ ಕೊಯ್ದುಕೊಂಡಂತೆ! ಜಮೀನನ್ನು ದೀರ್ಘಾವಧಿಗೆ ಗುತ್ತಿಗೆ ಮತ್ತು 'ಬಿಡಿಗಾಸಿನ ಬಾಡಿಗೆಗೆ' ನೀಡುವ ಬದಲು, ಅಲ್ಪಾವಧಿಗೆ ಮತ್ತು ಪ್ರಸಕ್ತ ಮಾರುಕಟ್ಟೆಯ ದರ ವಿಧಿಸಿ, ವಾರ್ಷಿಕ ಪ್ರತಿಶತ ಇಂತಿಷ್ಟು ಎಂದು ಹೆಚ್ಚಳ ಮಾಡುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬಾರದೇಕೆ? ಇದರಿಂದ ಭೂಮಿ ಸರಕಾರದ ಒಡೆತನದಲ್ಲೇ ಉಳಿದಂತಾಗುತ್ತದೆ. ಭೂಮಿಯು ಉತ್ಪಾದಿಸಲಾಗದ ವಸ್ತುವಾಗಿರುವುದರಿಂದ ಮತ್ತು ಅದರ ಲಭ್ಯತೆ ಕಾಲಾನುಕ್ರಮೇಣ ಕಡಿಮೆಯಾಗುತ್ತಾ ಹೋಗುವುದರಿಂದ, ಇಂತಹ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವೆನಿಸುತ್ತದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸರಕಾರಿ ಭೂಮಿಯೆಲ್ಲಾ ಖಾಸಗಿಯವರ ಕೈಸೇರಿ, ತನ್ನ ಅನೇಕ ಯೋಜನೆಗಳಿಗೆ ಸರಕಾರ ಖಾಸಗಿಯವರನ್ನೇ ಆಶ್ರಯಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)