varthabharthi


ಕಾಲಮಾನ

ಕೇಶವ್ ದೇಸಿರಾಜು: ಓರ್ವ ಅನುಕರಣೀಯ ಭಾರತೀಯ

ವಾರ್ತಾ ಭಾರತಿ : 25 Sep, 2021
ರಾಮಚಂದ್ರ ಗುಹಾ

ಕೇಶವ್ ಅವರ ಕೆಲಸವನ್ನು ನಾನು ಮೆಚ್ಚಿಕೊಂಡಿದ್ದೆ ಹಾಗೂ ಅವರಿಗಿದ್ದ ತಿಳುವಳಿಕೆಯ ಬಗ್ಗೆ ಅಸೂಯೆಪಟ್ಟಿದ್ದೆ. ನಮ್ಮ ದೇಶದ ಮೊದಲ ಪ್ರಧಾನಿಯವರು ಶ್ರಮಿಸಿದ್ದಂತಹ ಎಲ್ಲರನ್ನೂ ಒಳಗೊಂಡ, ಸಾಂಸ್ಕೃತಿಕವಾಗಿ ಬಹುತ್ವವಾದಿಯಾದ ಭಾರತದ ಪರಿಕಲ್ಪನೆಯಾದ ‘ನೆಹರೂವಾದಿ ಭಾರತೀಯರು’ ಎಂಬುದಾಗಿ ನಾವಿಬ್ಬರೂ ಭಾವಿಸಿಕೊಂಡಿದ್ದೆವು. ಆದಾಗ್ಯೂ ಕೇಶವ್ ಅವರು ನನಗಿಂತಲೂ ಹೆಚ್ಚಿನ ಮಟ್ಟದ ನೆಹರೂವಾದಿ ಭಾರತೀಯನಾಗಿದ್ದರು.


ಬಹುಶಃ ನನ್ನ ಸ್ವಂತ ಬದುಕು ಬಹುತೇಕವಾಗಿ ನನ್ನ ವೈಯಕ್ತಿಕ ಯಶಸ್ಸಿನ ಬೇಟೆಗಾಗಿ ಮಾತ್ರವೇ ಮುಡಿಪಾಗಿಟ್ಟಂತಿದೆ. ಇತರರಿಗಾಗಿ ಬದುಕುವವರ ಬಗ್ಗೆ ನಾನು ಒಂದು ಬಗೆಯ ತಪ್ಪಿತಸ್ಥ ಮನೋಭಾವದೊಂದಿಗೆ ಗೌರವಾದರಗಳನ್ನು ಹೊಂದಿದ್ದೇನೆ. ನಾನು ಅತ್ಯಂತ ಮೆಚ್ಚಿಕೊಂಡಿದ್ದ ಸಾರ್ವಜನಿಕ ಸೇವಾ ಅಧಿಕಾರಿಯೊಬ್ಬರು ಸೆಪ್ಟಂಬರ್ 5ರ ರವಿವಾರ ತೀರಿಕೊಂಡರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಈಗಿನ ಕಾಲದಲ್ಲಿ ಅದು ಸಾಯುವಂತಹ ವಯಸ್ಸೇನಲ್ಲ (ಅದರಲ್ಲೂ ಅವರು ಕೋವಿಡ್-19 ಸೋಂಕಿತರೂ ಆಗಿರಲಿಲ್ಲ). ಅವರು ಸಮಾಜಕ್ಕೆ ಹಾಗೂ ವಿದ್ವತ್ತಿಗೆ ಇನ್ನೂ ಕೊಡುಗೆಗಳನ್ನು ನೀಡಲಿಕ್ಕಿತ್ತು. ಆದರೆ ಅವರ ಬದುಕು, ಸಾಧನೆ ನೋಡಿದರೆ, ನಾನು ಅವರ ಅಕಾಲಿಕ ನಿಧನಕ್ಕೆ ಶೋಕಿಸಲು ಬಯಸುವುದಿಲ್ಲ. ಆದರೆ ಎಲ್ಲಾ ರೀತಿಯಲ್ಲೂ ಅದ್ಭುತವೆನಿಸಿದ್ದ ಅವರ ಬದುಕನ್ನು ಸಂಭ್ರಮಿಸಲು ಇಚ್ಛಿಸುತ್ತೇನೆ.

ನಾನು ಕೇಶವ್ ದೇಸಿರಾಜು ಅವರನ್ನು ಮೊದಲ ಸಲ ಭೇಟಿಯಾದದ್ದು 1988ರಲ್ಲಿ. ನಾನವರ ಬಗ್ಗೆ ಉತ್ತರಾಖಂಡದಲ್ಲಿನ ಸ್ನೇಹಿತರಿಂದ ತಿಳಿದುಕೊಂಡಿದ್ದೆ. ತೆಲುಗು ಭಾಷಿಕರಾದ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪದವೀಧರರಾದ ಕೇಶವ್ ದೇಸಿರಾಜು ಅವರು ಪರ್ವತರಾಜ್ಯವಾದ ಉತ್ತರಾಖಂಡದ ಜನತೆಯ ಅಪಾರ ಒಲವನ್ನು ಪಡೆದುಕೊಂಡಿದ್ದರ ಬಗ್ಗೆ ಈ ಮಿತ್ರರು ಗುಣಗಾನ ಮಾಡುತ್ತಿದ್ದರು. ಕೇಶವ್ ಅವರು ಅಲ್ಮೋರಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು. ನಾನು ಸ್ವತಃ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದ ಪ್ರದೇಶದಲ್ಲೇ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು ಒಮ್ಮೆ ಅವರು ಕೆಲಸದಲ್ಲಿದ್ದಾಗ ಅವರನ್ನು ನೋಡಲು ಹೋಗಿದ್ದೆ. ಹಿಂದಿ ಭಾಷೆಯಲ್ಲಿ ನಿರರ್ಗಳವಾದ ಪಾಂಡಿತ್ಯ, ಒಳನಾಡಿನ ಪ್ರದೇಶಗಳಿಗೆ ದೀರ್ಘವಾದ ಚಾರಣ ಕೈಗೊಳ್ಳುವುದನ್ನು ಹಾಗೂ ಪರ್ವತ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗೆ ಇರುವ ಸವಾಲುಗಳ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಇವೆಲ್ಲವನ್ನೂ ಆಸಕ್ತಿಯಿಂದಲೇ ಗಮನಿಸಿದ್ದೆ.

ಉತ್ತರ ಪ್ರದೇಶವು ವಿಭಜನೆಗೊಂಡಾಗ ಕೇಶವ್ ಅವರು ಭಾರತೀಯ ಆಡಳಿತ ಸೇವೆ (ಐಎಎಸ್)ಯ ಉತ್ತರಾಖಂಡ ಕೇಡರ್‌ಗೆ ಸೇರ್ಪಡೆಗೊಳ್ಳುವುದನ್ನು ಆಯ್ಕೆ ಮಾಡಿಕೊಂಡರು. ಅವರ ಉಪಸ್ಥಿತಿಯು ನಾನು ಡೆಹ್ರಾಡೂನ್‌ನಲ್ಲೇ ಹುಟ್ಟಿ ಬೆಳೆದವನಾದ ಕಾರಣ, ಆ ಹೊಸ ರಾಜ್ಯಕ್ಕೆ ಆಗಾಗ ಭೇಟಿ ನೀಡಲು ನನಗೆ ಹುಮ್ಮಸ್ಸು ನೀಡುತ್ತಿತ್ತು. ಶೀಘ್ರದಲ್ಲೇ ಪರಿತ್ಯಕ್ತಗೊಳ್ಳಲಿದ್ದ ತೆಹ್ರಿ ನಗರಕ್ಕೆ ಕಾರಿನಲ್ಲಿ ಡ್ರೈವ್ ಮಾಡಲು ಅವರಿಗಿದ್ದ ಒಲವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತಿರುತ್ತೇನೆ. ತೆಹ್ರಿ ಅಣೆಕಟ್ಟಿನ ವಿರುದ್ಧ ಸುಂದರ್‌ಲಾಲ್ ಬಹುಗುಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸ್ಥಳ ಹಾಗೂ ಹಿಮಾಲಯ ಗರ್ವಾಲ್ ಪರ್ವತಶ್ರೇಣಿಯಲ್ಲಿರುವ ನೀಲಿ ಪೈನ್ ಮರಗಳ ಕಾಡಿನಲ್ಲಿರುವ ಕಡಿದಾದ ಮಾರ್ಗದ ಮೂಲಕ ಸಂಚರಿಸಿ, ಅವರು ಮರಳುತ್ತಿದ್ದರು. ದೇಸಿರಾಜು ಉತ್ತರಾಖಂಡದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡೆಹ್ರಾಡೂನ್‌ನಲ್ಲಿಯೂ ಅವರಿಗೆ ಅಪಾರವಾದ ಗೌರವ ದೊರೆಯುತ್ತಿದ್ದುದಕ್ಕೆ ನಾನು ಸಾಕ್ಷಿಯಾಗಿದ್ದೆ. ವಿಷಯ ಜ್ಞಾನ, ವೈಯಕ್ತಿಕ ನಿಷ್ಕಳಂಕತೆ ಹಾಗೂ ಇತರರೊಡನೆ ವ್ಯವಹರಿಸುವಾಗ ಶ್ರೇಣೀಕೃತ ಅಧಿಕಾರಶಾಹಿ ಮನೋಭಾವವ ಎಳ್ಳಷ್ಟೂ ಇಲ್ಲದಂತಹ ಅಧಿಕಾರಿ ಅವರಾಗಿದ್ದರು.

1998ರಲ್ಲಿ ಕೇಶವ್ ಹಾಗೂ ನಾನು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಿಗೆ ಪ್ರವಾಸಕ್ಕೆಂದು ತೆರಳಿದ್ದೆವು. ಜನಾಂಗೀಯಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅವರು ಕ್ಷೇತ್ರೀಯ ಅಧ್ಯಯನ ನಡೆಸುತ್ತಿದ್ದ ಹಳ್ಳಿಗಳಿಗೆ ನಾವು ಭೇಟಿ ನೀಡುತ್ತಿದ್ದೆವು. ನಮ್ಮ ಪ್ರವಾಸದ ಕೊನೆಯ ರಾತ್ರಿಯಂದು ನಾವು ಅಮರ್‌ಕಂಟಕ್‌ನಲ್ಲಿರುವ ರಸ್ತೆ ಬದಿಯ ಭೋಜನಾಲಯದಲ್ಲಿ ಊಟ ಮಾಡಿದ್ದೆವು. ಅಲ್ಲಿ ನಾವು ಗ್ರಾಹಕರೊಬ್ಬರು ಬಿಟ್ಟುಹೋಗಿದ್ದ ಹಿಂದಿ ಸುದ್ದಿಪತ್ರಿಕೆಯೊಂದನ್ನು ಓದುತ್ತಿದ್ದೆವು. ಎಂ.ಎಸ್. ಸುಬ್ಬುಲಕ್ಷ್ಮಿಗೆ ಭಾರತರತ್ನ ಪುರಸ್ಕಾರ ದೊರೆತ ಸುದ್ದಿ ಕೇಶವ್ ಅವರಿಗೆ ತಿಳಿಯಿತು. ದಿಲ್ಲಿಯಿಂದ ಅನುಪುರದವರೆಗಿನ ನಮ್ಮ ಸುದೀರ್ಘವಾದ ರೈಲು ಪ್ರಯಾಣದಲ್ಲಿ ನಮ್ಮಾಂದಿಗೆ ಅವರು ತಾನು ಹಾಜರಾಗಿದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪ್ರತಿಯೊಂದು ಸಂಗೀತ ಕಛೇರಿಯ ಬಗ್ಗೆ ವಿವರಿಸಿದ್ದರು. (ಅವರು ಎಂಟು ವರ್ಷದವರಿದ್ದಾಗ ಮುಂಬೈನ ಷಣ್ಮುಖಾನಂದ ಸಭಾಭವನದಲ್ಲಿ ಮೊದಲ ಬಾರಿಗೆ ಎಂ.ಎಸ್. ಅವರ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡಿದ್ದರು). ಆಕೆ ಹಾಡಿದ ಪ್ರತಿಯೊಂದು ಸಂಗೀತಸಂಯೋಜನೆಯನ್ನು ಅವರು ಹೆಚ್ಚುಕಮ್ಮಿ ಚಾಚೂತಪ್ಪದೆ ಸ್ಮರಿಸಿಕೊಂಡಿದ್ದರು.

 ಉತ್ತರಖಂಡದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ದೇಸಿರಾಜು ಅವರನ್ನು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿತ್ತು. ಪೋಲಿಯೊ ನಿರ್ಮೂಲನೆಗೆ ಹಾಗೂ ವಿಕಲಾಂಗ ಜನರ ಹಕ್ಕುಗಳಿಗಾಗಿನ ಅಭಿಯಾನದಲ್ಲಿ ಅವರು ಅಸಾಧಾರಣವಾದ ಸೇವೆಯನ್ನು ಸಲ್ಲಿಸಿದ್ದರು. ಬಳಿಕ ಅವರು ದೇಶದಲ್ಲಿ ಮಾನಸಿಕ ಆರೋಗ್ಯ ಪಾಲನೆಯ ಅವಕಾಶಗಳನ್ನು ಜನಸಾಮಾನ್ಯರಿಗೆ ವಿಸ್ತರಣೆಗಾಗಿನ ಯೋಜನೆಯ ಕಾರ್ಯದರ್ಶಿಯಾಗಿ ಭಡ್ತಿಗೊಂಡರು. ಭಾರತೀಯ ವೈದ್ಯಕೀಯ ಮಂಡಳಿಯನ್ನು ನಿಯಂತ್ರಿಸುತ್ತಿದ್ದ ಭ್ರಷ್ಟ ಕೂಟವೊಂದರ ವಿರುದ್ಧ ಅವರು ದಿಟ್ಟ ಸಮರ ಸಾರಿದರು. ಪ್ರಭಾವಿ ರಾಜಕಾರಣಿಗಳನ್ನು ಈ ಕೂಟವು ಬುಟ್ಟಿಗೆ ಹಾಕಿಕೊಂಡಿತ್ತು. ಈ ಅಭಿಯಾನಕ್ಕಾಗಿ ಹಾಗೂ ತಂಬಾಕು ಲಾಬಿಗೆ ಅವರ ವಿರೋಧದ ಕಾರಣದಿಂದಾಗಿ ಅವರನ್ನು ಆಗ ಅಧಿಕಾರದಲ್ಲಿದ್ದ ಯುಪಿಎ ಸರಕಾರವು ಆರೋಗ್ಯ ಸಚಿವಾಲಯಕ್ಕೆ ವರ್ಗಾಯಿಸಿತು. ಲೋಕಸಭಾ ಚುನಾವಣೆ ಸಮೀಪಿಸಿದಾಗ, ಈ ನೇರ ನಡೆನುಡಿಯ ಅಧಿಕಾರಿಯು ಅಕ್ರಮ ವಿಧಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುತ್ತಿರುವವರಿಗೆ ದೊಡ್ಡ ಅಡ್ಡಿಯಾಗಿದ್ದರು.

ಹಲವಾರು ವರ್ಷಗಳಿಂದಲೂ ಭಾರತದ ಸರಕಾರಿ ಉದ್ಯೋಗಿಗಳು ಅಹಂಕಾರ, ಉದ್ಧಟತನ ತಮ್ಮ ರಾಜಕೀಯ ಧಣಿಗಳ ಹಂಗಿನಲ್ಲಿರುವುದಕ್ಕೆ ಹಾಗೂ ನೈತಿಕ ಮಿತಿಯ ಕೊರತೆಗೆ ಹೆಸರಾದವರಾಗಿದ್ದಾರೆ. ಆದರೆ ಕೇಶವ್‌ದೇಸಿರಾಜು ಅವರು ಈ ಎಲ್ಲಾ ಗುಣನಡತೆಗಳಿಂದ ಸಂಪೂರ್ಣವಾಗಿ ಹೊರತಾದವರಾಗಿದ್ದರು. ಇತರ ಅಧಿಕಾರಿಗಳಲ್ಲಂತಲ್ಲದೆ ಕೇಶವ್ ದೇಸಿರಾಜು ಅವರು ತಾನು ಸೇವೆ ಮಾಡಬೇಕಾಗಿರುವ ಜನತೆಯ ಬಗ್ಗೆ ಅಪಾರ ಆದರವನ್ನು ಹೊಂದಿದ್ದರು. ತನ್ನ ಪೂರ್ವಾಧಿಕಾರಿ ಕೆ. ಸುಜಾತಾ ಅವರಂತೆ ದೇಸಿರಾಜು ಕೂಡಾ ವೈದ್ಯರು, ವೈದ್ಯಕೀಯ ಶಿಕ್ಷಣದ ಪ್ರೊಫೆಸರ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರ ಸಮುದಾಯದ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಯುಪಿಎ ಸರಕಾರವು ಅವನ್ನು ವರ್ಗಾವಣೆಗೊಳಿಸಿದ್ದನ್ನು ದೇಶಾದ್ಯಂತದ ಆರೋಗ್ಯ ವೃತ್ತಿಪರರು ಬಹಿರಂಗವಾಗಿ ಖಂಡಿಸಿದ್ದರು.

 ನಾನು ಹಾಗೂ ಕೇಶವ್ ನಿಕಟವಾದಂತೆ ಅವರ ಬಗೆಗಿನ ನನ್ನ ಮೆಚ್ಚುಗೆಯು ವೃತ್ತಿಪರತೆಯಿಂದ ವೈಯಕ್ತಿಕತೆಯೆಡೆಗೆ ವಿಸ್ತರಿಸಲ್ಪಟ್ಟಿತು. ತನ್ನ ಒಡಹುಟ್ಟಿದವರ ಬಗೆಗೆ ಅವರಿಗಿದ್ದ ಅಪಾರ ಕಾಳಜಿ, ಶಾಸ್ತ್ರೀಯ ಸಂಗೀತದಲ್ಲಿ ಅವರಿಗಿದ್ದ ಅಸಾಧಾರಣವಾದ ಜ್ಞಾನದ ಬಗ್ಗೆ ನನಗೆ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿತು. ಮಧ್ಯಭಾರತದುದ್ದಕ್ಕೂ ನಾವು ನಡೆಸಿದ ರೈಲು ಯಾತ್ರೆಯ ಸಂದರ್ಭದಲ್ಲಿ ಅವರು ನನ್ನೊಂದಿಗೆ ತಾನು ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತಮಯ ಜೀವನಕಥೆಯನ್ನು ಬರೆಯಲು ಇಚ್ಛಿಸಿರುವುದಾಗಿ ತಿಳಿಸಿದರು. ವಾರದ ಕೆಲಸದ ದಿನಗಳಲ್ಲಿ ಆರೋಗ್ಯ ಸಚಿವಾಲಯದಲ್ಲಿ ದೀರ್ಘತಾಸುಗಳ ಕೆಲಸ ಮಾಡುತ್ತಿದ್ದ ಅವರು ಶನಿವಾರದ ದಿನಗಳಲ್ಲಿ ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯಗಳಲ್ಲಿ ಹಳೆಯ ಮೈಕ್ರೋಫಿಲ್ಮ್‌ಗಳನ್ನು ಜಾಲಾಡುವ ಕೆಲಸದಲ್ಲಿ ತೊಡಗಿದ್ದರು. ಎಂ.ಎಸ್. ಸುಬ್ಬುಲಕ್ಷ್ಮಿಯವರು ವಿವಿಧ ಸ್ಥಳಗಳಲ್ಲಿ ಹಾಗೂ ವಿಭಿನ್ನ ಸಮಯಗಳಲ್ಲಿ ನೀಡಿದ್ದ ಸಂಗೀತ ಕಛೇರಿಗಳ ವಿವರಗಳನ್ನು ಅವರು ದಾಖಲಿಸಿಕೊಳ್ಳುತ್ತಿದ್ದರು. ಅವರಿಗೆ ಅಲ್ಪಾವಧಿಯ ವಾರ್ಷಿಕ ರಜೆ ದೊರೆತಾಗ ಅವರು ತನ್ನದೇ ಖರ್ಚಿನಲ್ಲಿ ಲಂಡನ್‌ಗೆಸಂಕ್ಷಿಪ್ತ ಪ್ರವಾಸ ಕೈಗೊಳ್ಳುತ್ತಿದ್ದರು. ಭಾರತದಲ್ಲಿ ಲಭ್ಯವಿರದಂತಹ ವಿಷಯ, ಮಾಹಿತಿಗಳಿಗಾಗಿ ಅವರು ಬ್ರಿಟಿಷ್ ಗ್ರಂಥಾಲಯದಲ್ಲಿ ಹುಡುಕಾಟ ನಡೆಸುತ್ತಿದ್ದರು.

ಕೇಶವ್ ಅವರು ಸೇವೆಯಿಂದ ನಿವೃತ್ತರಾದ ಬಳಿಕ, ಅವರ ಮನದಲ್ಲಿ ಹಲವಾರು ವರ್ಷಗಳಿಂದ ಮೊಳಕೆಯೊಡೆಯುತ್ತಿದ್ದ ಎಂ.ಎಸ್. ಪ್ರಾಜೆಕ್ಟ್, ಕೊನೆಗೂ ಫಲನೀಡಿತು. ಅವರು ಎಂ.ಎಸ್. ಬಗ್ಗೆ ಬರೆದ ಪುಸ್ತಕವನ್ನು ಹಾರ್ಪರ್‌ಕಾಲಿನ್ಸ್ ‘ಆಫ್ ಗಿಫ್ಟಡ್ ವಾಯ್ಸ್: ದಿ ಲೈಫ್ ಆ್ಯಂಡ್ ಆರ್ಟ್ ಆಫ್ ಸುಬ್ಬುಲಕ್ಷ್ಮಿ’ ಶೀರ್ಷಿಕೆಯೊಂದಿಗೆ ಈ ವರ್ಷದ ಆರಂಭದಲ್ಲಿ ಪ್ರಕಟಿಸಿತು. ಭಾರತದ ಸಂಗೀತಗಾರರ ಬಗ್ಗೆ ಬರೆದಂತಹ ಎರಡು ಶ್ರೇಷ್ಠ ಪುಸ್ತಕಗಳಲ್ಲಿ ಒಂದಾದ ಒಲಿವರ್ ಕ್ರೇಸ್ಕ್ ಅವರ ‘ಇಂಡಿ ಯನ್ ಸನ್: ದಿ ಲೈಫ್ ಆ್ಯಂಡ್ ಮ್ಯೂಸಿಕ್ ಆಫ್ ರವಿಶಂಕರ್’ ಕೃತಿಗೆ ಸರಿಸಾಟಿಯಾದಂತಹ ವಿದ್ವತ್‌ಪೂರ್ಣವಾದ ಪುಸ್ತಕ ಇದಾಗಿತ್ತು. ತನ್ನ ನಿವೃತ್ತಿಯ ಬಳಿಕ ಕೇಶವ್ ಅವರು ತನ್ನ ವೃತ್ತಿಪರ ಆಸಕ್ತಿಗಳ ಕುರಿತಾದ ಸಂಶೋಧನಾತ್ಮಕ ಪ್ರಬಂಧಗಳ ಸಂಕಲನವನ್ನು ಸಹ ಸಂಪಾದಿಸಿದರು. ‘ಹೀಲರ್ಸ್‌ ಆರ್ ಪ್ರೆಡೇಟರ್ಸ್‌? ಹೆಲ್ತ್‌ಕೇರ್ ಕರಪ್ಶನ್ ಇನ್ ಇಂಡಿಯಾ’ ಶೀರ್ಷಿಕೆಯ ಈ ಪುಸ್ತಕ ಕೃತಿಯನ್ನು ಆಕ್ಸ್‌ಫರ್ಡ್ ವಿವಿ ಪ್ರೆಸ್ ಪ್ರಕಟಿಸಿತ್ತು.

ಕೇಶವ್ ಅವರ ಕೆಲಸವನ್ನು ನಾನು ಮೆಚ್ಚಿಕೊಂಡಿದ್ದೆ ಹಾಗೂ ಅವರಿಗಿದ್ದ ತಿಳುವಳಿಕೆಯ ಬಗ್ಗೆ ಅಸೂಯೆಪಟ್ಟಿದ್ದೆ. ನಮ್ಮ ದೇಶದ ಮೊದಲ ಪ್ರಧಾನಿಯವರು ಶ್ರಮಿಸಿದ್ದಂತಹ ಎಲ್ಲರನ್ನೂ ಒಳಗೊಂಡ, ಸಾಂಸ್ಕೃತಿಕವಾಗಿ ಬಹುತ್ವವಾದಿಯಾದ ಭಾರತದ ಪರಿಕಲ್ಪನೆಯಾದ ‘ನೆಹರೂವಾದಿ ಭಾರತೀಯರು’ ಎಂಬುದಾಗಿ ನಾವಿಬ್ಬರೂ ಭಾವಿಸಿಕೊಂಡಿದ್ದೆವು. ಆದಾಗ್ಯೂ ಕೇಶವ್ ಅವರು ನನಗಿಂತಲೂ ಹೆಚ್ಚಿನ ಮಟ್ಟದ ನೆಹರೂವಾದಿ ಭಾರತೀಯನಾಗಿದ್ದರು. ನಮ್ಮ ದೇಶದ ಸಂಗೀತದ ಕುರಿತಾಗಿ ಅವರಿಗಿರುವ ಅಪಾರವಾದ ಜ್ಞಾನವು ನನಗೆ ಶಾಸ್ತ್ರೀಯ ಸಾಹಿತ್ಯದ ಬಗ್ಗೆ ಗಂಭೀರವಾದ ಆಸಕ್ತಿಯನ್ನುಂಟು ಮಾಡಿತು. ಅವರು ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಹಾಗೂ ಅವರಿಗೆ ಸಂಸ್ಕೃತ ಕೂಡಾ ತಿಳಿದಿತ್ತು. ಅವರು ತೆಲುಗು ಹೊರತುಪಡಿಸಿ ಈ ಎಲ್ಲಾ ಭಾಷೆಗಳನ್ನು ನಿರಾಯಾಸವಾಗಿ ಓದುತ್ತಿದ್ದರು. ನಿಜಕ್ಕೂ ಅವರು ತನ್ನ ಮಾತೃಭಾಷೆಯ ಅಕ್ಷರಮಾಲೆಯನ್ನು ತನ್ನ ಜೀವನದ ಕೊನೆಯ ಸಮಯದಲ್ಲಿ ಕಲಿಯುತ್ತಿದ್ದರು. ಶಾಸ್ತ್ರೀಯ ಸಂಗೀತಗಾರರಾದ ತ್ಯಾಗರಾಜ ಅವರ ಕುರಿತ ಸಂಶೋಧನಾ ಕೃತಿಯನ್ನು ಬರೆಯುವ ಭಾಗವಾಗಿ ಅವರು ತೆಲುಗು ಕಲಿಯುತ್ತಿದ್ದರು. ಆದರೆ ದುರಂತವೆಂದರೆ ಅದು ಪೂರ್ಣವಾಗದೆ ಉಳಿಯಿತು.

 ಕೇಶವ್ ದೇಸಿರಾಜು ಅವರು ಹಿಂದುತ್ವವಾದವನ್ನು ಒಪ್ಪುತ್ತಿರಲಿಲ್ಲ. ಅವರು ಅರಿತುಕೊಂಡಂತಹ ಹಾಗೂ ಆಚರಿಸುತ್ತಿದ್ದಂತಹ ಹಿಂದೂ ಧರ್ಮವು ಮಾನವೀಯತೆ, ಕರುಣೆ ಹಾಗೂ ಆಳವಾದ ತತ್ವಜ್ಞಾನವನ್ನು ಹೊಂದಿದ್ದು, ಅದು ಈಗಿನ ಭಾರತದ ಬೀದಿಗಳಲ್ಲಿ ಹಿಂಸಾತ್ಮಕವಾಗಿ ಅಡ್ಡಾಡುತ್ತಿರುವಂತಹ ಆ ಧರ್ಮದ ಸ್ವಯಂನಿಯೋಜಿತ ಸಂರಕ್ಷಕರಿಗೆ ಅರ್ಥವಾಗದಂತಹದ್ದಾಗಿದೆ. ನಮ್ಮ ಪರಂಪರೆಯಲ್ಲಿರುವ ವಿರೂಪದ ಅಂಶಗಳ ಬಗ್ಗೆ ತೀಕ್ಷ್ಣವಾದ ಅರಿವಿನೊಂದಿಗೆ ಭಾರತದ ನಾಗರಿಕತೆಯ ವೌಲ್ಯಗಳ ಬಗ್ಗೆ ಗಾಢವಾದ ತಿಳುವಳಿಕೆಯನ್ನು ಕೇಶವ್ ಹೊಂದಿದ್ದರು. ಅವರ ಪರಿಚಯವಿದ್ದಂತಹ ಯುವ ಭಾರತೀಯರೊಬ್ಬರು ‘‘ಕೇಶವ್‌ದೇಸಿರಾಜು ಅಪ್ಪಟ ದೇಶಭಕ್ತರಾಗಿದ್ದರು. ತನ್ನ ರಕ್ತ ಮತ್ತು ಮಾಂಸದಲ್ಲಿ ಗಣರಾಜ್ಯ ಆದರ್ಶಗಳನ್ನು ರೂಪಿಸಿದಂತಹ ನಿಜವಾದ ದೇಶಭಕ್ತ’’ ಎಂದು ಬರೆದಿದ್ದರು.

‘‘ವಿದ್ವಾಂಸರು ಹೆಚ್ಚಾಗಿ ಗಂಭೀರ ಹಾಗೂ ಹಾಸ್ಯಪ್ರಜ್ಞೆರಹಿತರಾಗಿರು ತ್ತಾರೆ ಮತ್ತು ಅಧಿಕಾರಿಗಳು ಆಡಂಬರ ಹಾಗೂ ಸ್ವಹಿತ ಚಿಂತನೆಯುಳ್ಳ ವರಾಗಿರುತ್ತಾರೆ ಎಂಬ ಭಾವನೆ ಸಾಮಾನ್ಯ. ಆದರೆ ವಿದ್ವಾಂಸ ಹಾಗೂ ನಾಗರಿಕ ಸೇವಾ ಅಧಿಕಾರಿ ಎರಡೂ ಆಗಿರುವ ಕೇಶವ್ ಅವರಲ್ಲಿ ತುಂಟತನ ಹಾಗೂ ತಮಾಷೆಯ ಗುಣ ಇವೆರಡನ್ನೂ ಕಾಣಬಹುದು’’ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯಲ್ಲಿ ಜೋ ಚೋಪ್ರಾ ಅವರು ದೇಸಿರಾಜು ನಿಧನದ ಬಳಿಕ ಬರೆದ ಅದ್ಭುತವಾದ ಶ್ರದ್ಧಾಂಜಲಿ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

 ಕೇಶವ್ ಕೊನೆಯುಸಿರೆಳೆದು ಕೇವಲ ಮೂರು ವಾರಗಳಷ್ಟೇ ಕಳೆದಿದೆ. ಆದರೆ ಕೆಲವು ತಮಾಷೆಯ ಅಥವಾ ವಿಡಂಬನಾತ್ಮಕ ವಿಷಯಗಳನ್ನು ಓದಿದಂತಹ ಆರೇಳು ಸಂದರ್ಭಗಳಲ್ಲಿ ನನಗೆ, ಇದನ್ನು ನಾನು ಕೇಶವ್ ಜೊತೆ ಹಂಚಿಕೊಳ್ಳಬಹುದಿತ್ತು ಎಂದು ಯೋಚಿಸುತ್ತಿದ್ದೆ. ಸಂಗೀತ, ಭಾಷೆ, ಆಡಳಿತ ಹಾಗೂ ಸಾರ್ವಜನಿಕ ನೀತಿಯ ಕುರಿತಾಗಿ ಮಾರ್ಗದರ್ಶನ ಪಡೆಯಬೇಕಾದರೆ ನಾನು ಮೊತ್ತಮೊದಲು ಕೇಶವ್ ದೇಸಿರಾಜು ಅವರನ್ನು ಸಂಪರ್ಕಿಸುತ್ತಿದ್ದೆ. ಅಲ್ಲದೆ ಜೋಕ್ ಅಥವಾ ಗಾಸಿಪ್‌ನ ತುಣುಕನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದ ಪ್ರಥಮ ವ್ಯಕ್ತಿ ಅವರಾಗಿದ್ದರು.

 ನನ್ನ ಈ ಸಹ ದೇಶವಾಸಿಯ ಕುರಿತು ನನ್ನ ಬಳಿ ಹಲವಾರು ಅವಿಸ್ಮರಣೀಯ ನೆನಪುಗಳಿವೆ. ಆಲ್ಮೋರಾಕ್ಕೆ 1988ರಲ್ಲಿ ಪ್ರವಾಸ ಕೈಗೊಂಡ ಸಂದರ್ಭ ಸಾಮಾಜಿಕ ಕಾರ್ಯಕರ್ತರಾದ ಅಸಿತ್ ಮಿತ್ರಾ, ಲಲಿತ್ ಪಾಂಡೆ, ಕೇಶವ್ ಹಾಗೂ ನಾನು ಬನ್ನಾರಿ ದೇವಿ ದೇವಾಲಯದ ಸುತ್ತುಮುತ್ತಲೂ ಇರುವ ಪವಿತ್ರವನವನ್ನು ನೋಡಲು ರವಿವಾರ ತೆರಳಿದ್ದೆವು. ಕೇಶವ್ ಅವರ ಕೋರಿಕೆಯಂತೆ, ನಾವು ಜಿಲ್ಲಾ ಮ್ಯಾಜಿಸ್ಟ್ರೇಟ್‌ರ ಕೆಂಪುಗೂಟದ ಸರಕಾರಿ ಕಾರಿನ ಬದಲಿಗೆ ಅಸಿತ್ ಅವರ ಹರಕುಮುರುಕು ಜೀಪಿನಲ್ಲಿ ಪ್ರಯಾಣಿಸಿದೆವು. ಅದೊಂದು ಅಹ್ಲಾದಕರ ವಿಹಾರವಾಗಿತ್ತು. ಜಿಲ್ಲೆಯ ಅತ್ಯಂತ ಪ್ರಭಾವಿ ವ್ಯಕ್ತಿಯು ಅಜ್ಞಾತವಾಗಿ ತನ್ನ ಗೆಳೆಯರೊಂದಿಗೆ ಸಮಯ ಕಳೆಯುವುದರಲ್ಲಿ ಸಂತೃಪ್ತಿ ಕಾಣುತ್ತಿದ್ದರು.
ಇದಾದ ಮೂವತ್ತು ವರ್ಷಗಳ ಬಳಿಕ ಕುಮಾವೊನ್‌ಗೆ ಮತ್ತೊಮ್ಮೆ ಆಗಮಿಸಿದಾಗ ಈ ಕಥೆಯನ್ನು ನಾನು ಸಮಕಾಲೀನ ಭಾರತದಲ್ಲಿ ಗಾಂಧಿಚಳವಳಿಯ ಅಗ್ರಗಣ್ಯರಲ್ಲಿ ಓರ್ವರಾದ ರಾಧಾಭಟ್ ಅವರೊಂದಿಗೆ ಹಂಚಿಕೊಂಡಿದ್ದೆ. ಆಗ ರಾಧಾ, ತನ್ನದೇ ಆದ ನೆನಪೊಂದನ್ನು ನನ್ನಲ್ಲಿ ಹೇಳಿಕೊಂಡರು. ಅಲ್ಮೋರಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದಾಗ ನನ್ನ ಈ ಸ್ನೇಹಿತ ಕೌಸಾನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ತನ್ನ ಚಾಲಕನನ್ನು ಲಕ್ಷ್ಮಿಆಶ್ರಮವಿರುವ ಬೆಟ್ಟದ ಬುಡದಲ್ಲಿ ನಿಲ್ಲಿಸಿ, ಏಕಾಂಗಿಯಾಗಿ ಮೇಲಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ಅಲ್ಲಿ ಅವರು ಪರ್ವತಗಳು ಹಾಗೂ ಅಲ್ಲಿನ ಜನರ ಬಗ್ಗೆ ಈಗ ಇರುವ ಇತರ ವ್ಯಕ್ತಿಗಳಿಗೆ ಹೆಚ್ಚು ಚೆನ್ನಾಗಿ ತಿಳಿದಿದ್ದ ವ್ಯಕ್ತಿಯೊಬ್ಬರ ಜೊತೆ ಒಂದೆರಡು ತಾಸು ಕಳೆಯುತ್ತಿದ್ದರು. ಖಂಡಿತ ಅವರ ಬಳಿಕ ಯಾವುದೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡಾ ಸದ್ದಿಲ್ಲದೆ ಕೆಲಸ ಮಾಡುವ ಬುದ್ಧಿವಂತಿಕೆ ಹಾಗೂ ವಿನಮ್ರತೆಯನ್ನು ಮೈಗೂಡಿಸಿಕೊಳ್ಳಲಿಲ್ಲ.

ನಾನು ಲೇಖನವನ್ನು ಬರೆಯುತ್ತಿದ್ದಾಗ ಕೇಶವ್ ದೇಸಿರಾಜು ಅವರ ಮಾರ್ಗದರ್ಶನ ಪಡೆದಿದ್ದ ವಿದ್ವಾಂಸರೊಬ್ಬರು, ತಮ್ಮ ಈ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಿಧನಕ್ಕಾಗಿ ಅಲ್ಮೋರಾದ ಜನತೆ ಶೋಕಿಸುತ್ತಿರುವ ಸುದ್ದಿಯ ತುಣುಕೊಂದನ್ನು ಕಳುಹಿಸಿಕೊಟ್ಟರು. ಈ ಜಿಲ್ಲೆಯಲ್ಲಿ ಕೇಶವ್ ಅವರು ಸೇವೆ ಸಲ್ಲಿಸಿ ಮೂರು ದಶಕಗಳೇ ಕಳೆದುಹೋಗಿವೆಯಾದರೂ ಅಲ್ಲಿನ ಜನತೆ ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ ಹಾಗೂ ಪ್ರೀತಿ, ಅಭಿಮಾನಗಳನ್ನು ಹೊಂದಿದ್ದಾರೆ. ಜಿಲ್ಲಾಡಳಿತ, ರಾಜ್ಯ ಸರಕಾರದ ಕಾರ್ಯಾಲಯ ಹಾಗೂ ಕೇಂದ್ರ ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾಗ ಕೇಶವ್ ಅವರು ತನ್ನ ತಲೆಮಾರಿನ ಇತರ ಯಾವುದೇ ನಾಗರಿಕ ಸೇವಾ ಅಧಿಕಾರಿಗಿಂತ ಮಿಗಿಲಾಗಿ ಹೆಚ್ಚು ಜನರ ಬದುಕನ್ನು ತಲುಪಿದ್ದಾರೆ.

ಕೇಶವ್ ದೇಸಿರಾಜು ಅವರ ತಾಯಿಯ ತಾತ, ಭಾರತ ಗಣರಾಜ್ಯದ ಎರಡನೇ ರಾಷ್ಟ್ರಪತಿ ಹಾಗೂ ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಆಗಿದ್ದಾರೆ. ಆದರೆ ಕೇಶವ್ ತನ್ನ ಈ ಪರಂಪರೆಯ ಬಗ್ಗೆ ಎಲ್ಲೂ ಹೇಳಿಕೊಂಡಿದ್ದಿಲ್ಲ. ಅದು ಕೂಡಾ ಮನುಷ್ಯನ ವಿಶೇಷ ಗುಣವೆನ್ನಬಹುದು. ಯಾರಿಗೂ ಕೂಡಾ ಕೇಶವ್ ದೇಸಿರಾಜು ಯಾರ ಮೊಮ್ಮಗ ಎಂಬ ಬಗ್ಗೆ ಅವರನ್ನು ಬಲ್ಲ ಹೆಚ್ಚಿನವರಿಗೇ ತಿಳಿದಿಲ್ಲ. ಆದಾಗ್ಯೂ, ಕಾಕತಾಳೀಯವೆಂಬಂತೆ ಶಿಕ್ಷಕರ ದಿನವಾಗಿ ಆಚರಿಸಲಾಗುವ ತನ್ನ ತಾತನ ಜನ್ಮದಿನದಂದೇ ಕೇಶವ್ ನಿಧನರಾದರು. ತನ್ನ ಕೆಲಸ ಹಾಗೂ ನಡವಳಿಕೆಯ ಮೂಲಕ ಕೇಶವ್ ಅವರು ಹೆಚ್ಚು ಗೌರವಾನ್ವಿತ ಬದುಕನ್ನು ಹೇಗೆ ಸಾಗಿಸಬಹುದೆಂಬುದನ್ನು ತನ್ನನ್ನು ಬಲ್ಲವರಿಗೆ ಕಲಿಸಿದರು. ಹಲವು ಸಲ ಅವರು ಹೆಚ್ಚು ಆಸಕ್ತಿದಾಯಕವಾದ ಜೀವನವನ್ನು ಹೇಗೆ ನಡೆಸಬಹುದೆಂಬುದನ್ನು ಕೂಡಾ ತೋರಿಸಿಕೊಟ್ಟಿದ್ದರು. ನನಗೆ ಪರಿಚಯವಿರುವಂತಹ ಅತ್ಯಂತ ಅನುಕರಣೀಯವಾದಂತಹ ಭಾರತೀಯ, ಸಾರ್ವಜನಿಕ ಅಧಿಕಾರಿ, ವಿದ್ವಾಂಸ, ಶಿಕ್ಷಕ, ಗೃಹಸ್ಥ ಹಾಗೂ ಸ್ನೇಹಿತ ಅವರಾಗಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)