varthabharthi


ಪ್ರಚಲಿತ

ಭಯಾನಕವಾಗಿ ಬದಲಾಗುತ್ತಿರುವ ಭಾರತ

ವಾರ್ತಾ ಭಾರತಿ : 27 Sep, 2021
ಸನತ್ ಕುಮಾರ್ ಬೆಳಗಲಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 8 ವರ್ಷಗಳ ನಂತರ ಜನಿಸಿದ ಪೀಳಿಗೆಗೆ ಸೇರಿದ ನನ್ನಂತಹವರಿಗೆ ಇನ್ನು ಮುಂದೆ ಬದುಕುವುದರಲ್ಲಿ ಅರ್ಥವಿಲ್ಲ ಎನಿಸಿದೆ. ಬಾಲ್ಯದಲ್ಲಿ ಮತ್ತು ಯೌವನದಲ್ಲಿ ಕಂಡ ಭಾರತ ನಾವು ಈಗ ಕಾಣುತ್ತಿರುವ ಭಾರತವಲ್ಲ. ಅಂತಲೇ, ಈ ಕಣ್ಣಿನಿಂದ ಏನೇನು ನೋಡಬೇಕಾಗಿ ಬಂತಲ್ಲ ಎಂದು ಮಲಗಿದರೆ ರಾತ್ರಿಯೆಲ್ಲ ನಿದ್ರೆ ಬರುವುದಿಲ್ಲ. ಅಂದಿನ ಭಾರತ ಮತ್ತು ಇಂದಿನ ಭಾರತಕ್ಕೆ ಎಷ್ಟೊಂದು ವ್ಯತ್ಯಾಸ. ಅದರಲ್ಲೂ ಕಳೆದ 7 ವರ್ಷಗಳಲ್ಲಿ ಈ ದೇಶವನ್ನು ಬದಲಿಸುವಲ್ಲಿ ಕೋಮು ವಿಷಾನಿಲ ಕೇಂದ್ರ ಸಾಕಷ್ಟು ಯಶಸ್ವಿಯಾಗಿದೆ.
  
ಇದು ನಮ್ಮ ಇಂದಿನ ‘ವಿಶ್ವ ಗುರು’ ವಿನ ಸಾಧನೆ ಅಂದರೆ ಅತಿಶಯೋಕ್ತಿಯಲ್ಲ. ಪರಸ್ಪರ ಪ್ರೀತಿಸಿ ಬದುಕುತ್ತ ಬಂದ ಮನುಷ್ಯರ ನಡುವೆ ದ್ವೇಷದ ಕಿಚ್ಚು ಹಚ್ಚುವುದು ಸಣ್ಣ ಸಾಧನೆಯಲ್ಲ. ಅಸ್ಸಾಮಿನಿಂದ ಬಂದಿರುವ ಹೃದಯ ವಿದ್ರಾವಕ ಸುದ್ದಿಯನ್ನು ಕೇಳಿ, ವಿಡಿಯೋ ನೋಡಿ ಎದೆ ನಡುಗಿ ಹೋಯಿತು. ಪೊಲೀಸರ ಗುಂಡೇಟಿನಿಂದ ನೆಲಕ್ಕುರುಳಿದ ಮನುಷ್ಯನ ಕಳೇಬರದ ಮೇಲೆ ಛಾಯಾಗ್ರಾಹಕನೊಬ್ಬ ಬೂಟುಗಾಲನ್ನಿಟ್ಟು ಕುಣಿದಾಡುವಷ್ಟರ ಮಟ್ಟಿಗೆ ಭಾರತ ವನ್ನು ಬದಲಿಸುವಲ್ಲಿ ಮಧ್ಯಭಾರತದ ವಿಷಾನಿಲ ಕೇಂದ್ರ ಯಶಸ್ವಿಯಾಗಿದೆ.
ಅಸ್ಸಾಮಿನ ದರಾಂಗ್ ಜಿಲ್ಲೆಯಲ್ಲಿ ಸರಕಾರಿ ಜಾಗದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದ ಜನರನ್ನು ತೆರವು ಗೊಳಿಸಲು ಪೊಲೀಸರು ಬಂದಾಗ ನೆಲೆ ಕಳೆದುಕೊಳ್ಳುವ ಜನ ಸಹಜವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಬಂಗಾಳಿ ಭಾಷೆಯನ್ನು ಮಾತಾಡುವ ಮೊಯಿನುಲ್ ಹಕ್ ಎಂಬಾತ ಈ ಪ್ರತಿಭಟನೆಯ ವೇಳೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಇದಿಷ್ಟೇ ಆಗಿದ್ದರೆ ಬೇರೆ ವಿಷಯ. ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಯಿನುಲ್ ಹಕ್‌ನ ಮೃತದೇಹದ ಮೇಲೆ ಬಿಜಯ್ ಬನಿಯಾ ಎಂಬ ಛಾಯಾಗ್ರಾಹಕ ಬೂಟುಗಾಲಿನಿಂದ ಕುಣಿದಾಡಿ ಈ ಸಾವನ್ನು ಸಂಭ್ರಮಿಸಿದ್ದಾನೆ. ಮುಷ್ಠಿಯಿಂದ ಮೃತದೇಹಕ್ಕೆ ಗುದ್ದಿದ್ದಾನೆ.

ಸಾವನ್ನು ಸಂಭ್ರಮಿಸುವ ವ್ಯಾಧಿ ಈ ದೇಶದಲ್ಲಿ ಹಬ್ಬಿ ಹಲವಾರು ದಶಕಗಳೇ ಗತಿಸಿದವು. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿಯ ಸಾವನ್ನು ಸಂಭ್ರಮಿಸಿದ ದೇಶವಿದು. ಗಾಂಧಿ ಗುಂಡಿಗೆ ಬಲಿಯಾದ ದಿನ ಮುಂಬೈ, ಪುಣೆ ಮಾತ್ರವಲ್ಲ ಭಾರತದ ಅನೇಕ ಕಡೆ ಸಿಹಿ ಹಂಚಿ ಸಂಭ್ರಮಿಸಿದರೆಂದು ನನ್ನ ತಂದೆ ಮತ್ತು ದೊಡ್ಡಪ್ಪಆಗಾಗ ಹೇಳುತ್ತಿದ್ದರು.

ಗಾಂಧಿ ಹತ್ಯೆಯ ನಂತರ ಬಾಬಾಸಾಹೇಬರ ಸಂವಿಧಾನದ ಬೆಳಕಿನಲ್ಲಿ ನೆಹರೂ ನಾಯಕತ್ವದಲ್ಲಿ ಹಳಿಗೆ ಬಂದಿದ್ದ ಬಹುತ್ವ ಭಾರತ ಮತ್ತೆ ಹಳಿ ತಪ್ಪಿದ್ದು 1992 ರಲ್ಲಿ. ಅಯೋಧ್ಯೆಯ ಬಾಬರಿ ಮಸೀದಿಯ ಗುಮ್ಮಟಗಳು ಉರುಳಿದಾಗ. ಆ ಕರಾಳ ದಿನ ನನ್ನ ನೆನಪಿನ ಅಂಗಳದಲ್ಲಿ ಇನ್ನು ನೋವು ಕೊಡುತ್ತಲೇ ಇರುತ್ತದೆ. ಆ ಮಸೀದಿಯನ್ನು ಕರಸೇವಕರೆಂಬ ಉದ್ರಿಕ್ತ ಜನರ ಗುಂಪು ನೆಲಕ್ಕೆ ಉರುಳಿಸಿದಾಗ ಪತ್ರಿಕಾಲಯಗಳಲ್ಲಿ ಕೆಲವರು ಸಿಹಿ ಹಂಚಿ ಸಂಭ್ರಮಿಸಿದರು. ಹುಬ್ಬಳ್ಳಿಯ ಕೆಲ ಮಾಧ್ಯಮ ಮಿತ್ರರು ಮನೆಯೊಂದರಲ್ಲಿ ರಾತ್ರಿ ಪಾರ್ಟಿ ಮಾಡಿ ಮಸೀದಿ ಕೆಡವುತ್ತಿರುವ ದೃಶ್ಯಗಳನ್ನು ನೋಡುತ್ತ ಸಂಭ್ರಮಪಟ್ಟ ಘಟನೆಗಳು ನಡೆದಿವೆ. ನಂತರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗರ್ಭಿಣಿಯ ಹೊಟ್ಟೆಗೆ ತ್ರಿಶೂಲದಿಂದ ಚುಚ್ಚಿ ಭ್ರೂಣವನ್ನು ಹೊರಗೆ ತೆಗೆದು ಬೆಂಕಿಗೆ ಹಾಕಿದಾಗಲೂ ಸಂಭ್ರಮಿಸಿದವರಿದ್ದಾರೆ.

ಸಹನೆ, ಪ್ರೀತಿ, ಸಹಬಾಳ್ವೆ, ಸೌಹಾರ್ದ ಇವೆಲ್ಲ ನಮ್ಮ ಪೀಳಿಗೆಗೇ ಮುಗಿದು ಹೋದವೇನೋ ಅನಿಸುತ್ತಿದೆ. ಹೊಸ ಪೀಳಿಗೆಯ ಬಹುತೇಕ ತರುಣರಲ್ಲಿ ಮುಸ್ಲಿಂ ದ್ವೇಷವೇ ರಾಷ್ಟ್ರ ಪ್ರೇಮ ಎಂಬ ಮನಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ವಿಷಾನಿಲ ಪಡೆಯವರು ಯಶಸ್ವಿಯಾಗಿದ್ದಾರೆ.
ಅಸ್ಸಾಮಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನುಷ್ಯನ ಮೃತದೇಹದ ಮೇಲೆ ಕುಣಿದಾಡಿದ ಛಾಯಾಗ್ರಾಹಕ ಬಿಜಯ್ ಬನಿಯಾನಂಥವರು ನಮ್ಮ ನಿಮ್ಮ ನಡುವೆ ಇದ್ದಾರೆ. ನಾವು ಕೆಲಸ ಮಾಡುವ ಕಚೇರಿಗಳಲ್ಲಿ, ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿ, ನಮ್ಮ ಸ್ನೇಹಿತರ ಬಳಗದಲ್ಲಿ, ನಮ್ಮ ಸಂಬಂಧಿಕರಲ್ಲಿ ಅಷ್ಟೇಕೆ ನಮ್ಮ ನಿಮ್ಮ ಮನೆಗಳಲ್ಲಿ ಇಂತಹ ವಿಷ ಸರ್ಪದಂತಹ ಮನುಷ್ಯರಿದ್ದಾರೆ.

ಫೇಸ್‌ಬುಕ್‌ನಲ್ಲಿ ಆಗಾಗ ಹೊಸ ಪೀಳಿಗೆಯ ಯುವಕ, ಯುವತಿಯರ ವಾಲ್‌ಗಳ ಮೇಲೆ ಕಣ್ಣಾಡಿಸಿದಾಗ ಕಂಡ ದೃಶ್ಯ ಗಳು ಮತ್ತು ವಿಕೃತ ಬರಹಗಳನ್ನು ನೋಡಿದಾಗ ಒಂದು ಕ್ಷಣ ದಿಗ್ಭ್ರಮೆಯಾಗುತ್ತದೆ. ವಿನಾಕಾರಣ ಮುಸ್ಲಿಂ ದ್ವೇಷ, ಅವರಿಗೆ ಕೆಟ್ಟದಾದಾಗ ಸಂಭ್ರಮಿಸುವುದು ಕಂಡು ದಿಗಿಲುಗೊಂಡಿದ್ದೇನೆ. ಇದನ್ನು ಕಂಡು ಸುಮ್ಮನಿರಲಾಗದೇ ಅವರ ವಾಲ್‌ಗೆ ಹೋಗಿ ಹಾಗಲ್ಲ ಹೀಗೆ, ದೇಶ ಪ್ರೇಮ ಅಂದರೆ ಇದಲ್ಲ ಎಂದು ಹೇಳಲು ಹೋಗಿ ಬೈಗುಳ ತಿಂದಿದ್ದೇನೆ. ಕೆಲವರನ್ನು ಬದಲಿಸಿ ಮನುಷ್ಯತ್ವದ ಹಳಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಅನೇಕ ಬಾರಿ ಅತ್ಯಂತ ಕೆಟ್ಟ ಭಾಷೆಯಲ್ಲಿ ಇನ್ ಬಾಕ್ಸ್ ಗೆ ಬಂದು ಬೈದು ಹೋದವರ ಸಂಖ್ಯೆ ಸಾಕಷ್ಟಿದೆ.

ಕರ್ನಾಟಕ ಕಂಡ ಮಹಾನ್ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಧಾರವಾಡದ ಅವರ ಮನೆಯ ಬಾಗಿಲಿನಲ್ಲೇ ಬೆಳಗಿನ ಜಾವ ಹಣೆಗೆ ಗುಂಡಿಟ್ಟು ಕೊಂದ ದಿನವೂ ಆ ಹತ್ಯೆಯನ್ನು ಸಮರ್ಥಿಸುವ ಮಾತುಗಳನ್ನು ಈ ಕಿವಿಯಿಂದ ಕೇಳಿ ಒಂದು ಕ್ಷಣ ವಿಚಲಿತನಾಗಿದ್ದೇನೆ. ಯಾವ ಬಸವಣ್ಣನವರ ಬಗ್ಗೆ ಸಂಶೋಧನೆ ಮಾಡಿ ಲಿಂಗಾಯತ ಎಂಬುದು ಕರ್ನಾಟಕದ ಮೊದಲ ಧರ್ಮ ಎಂದು ಪ್ರತಿಪಾದಿಸಿದ ಕಲಬುರ್ಗಿ ಅವರ ಹತ್ಯೆಯನ್ನು ಕಂಡು ಖುಷಿ ಪಟ್ಟ ಅದೇ ಸಮು ದಾಯದ ಹುಡುಗರನ್ನು ಕಂಡು ದಿಗ್ಭ್ರಾಂತನಾಗಿದ್ದೇನೆ. ಕಲಬುರ್ಗಿ ಹತ್ಯೆಯಾದ ದಿನ ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಗೌರಿ ಲಂಕೇಶ್ ಮುಂದೆ ಬಹಳ ದಿನ ಬದುಕಲಿಲ್ಲ. ಗಿರೀಶ್ ಕಾರ್ನಾಡ್ ಅವರನ್ನು ಕೋಮುವಾದಿಗಳು ಶರೀಫ್ ಕಾರ್ನಾಡ್ ಎಂದು ಹಿಯಾಳಿಸಿದರು. ಅನಂತಮೂರ್ತಿ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಫೋನ್ ಮಾಡಿ ಅವರನ್ನು ಹಿಯಾಳಿಸುತ್ತಿದ್ದವರು ಬೇರೆ ಯಾವುದೋ ಲೋಕದಿಂದ ಬಂದವರಲ್ಲ. ಅವರೆಲ್ಲ ಮತಾಂಧತೆಯ ಮತ್ತೇರಿಸಿಕೊಂಡ ನಮ್ಮ ನಿಮ್ಮ ನಡುವಿರುವ ಯುವಕರಲ್ಲದೇ ಬೇರಾರೂ ಅಲ್ಲ.

ಒಂದೆಡೆ ಹೊಸ ಪೀಳಿಗೆಯ ತರುಣರು ಈ ಪರಿ ಉನ್ಮಾದಿತರಾಗಿದ್ದರೆ ಪ್ರಭುತ್ವದ ಸೂತ್ರ ಹಿಡಿದವರು ಪ್ರತಿರೋಧದ ಧ್ವನಿಯನ್ನು ಅಡಗಿಸಲು ನಾನಾ ಮಸಲತ್ತುಗಳನ್ನು ನಡೆಸುತ್ತಲೇ ಇದ್ದಾರೆ. ಜನ ಸಮೂಹವನ್ನು ತಮ್ಮ ದಮನ ನೀತಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕೇಂದ್ರ ಸರಕಾರ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ, ಅಥವಾ ಬಿಜೆಪಿಯನ್ನು ವಿಮರ್ಶೆ ಮಾಡುವ ಯಾರೂ ಈ ದೇಶದಲ್ಲಿ ಸುರಕ್ಷಿತವಾಗಿ ಇರಲಾಗದಂತಹ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ಭಿನ್ನಮತದ ಧ್ವನಿಯನ್ನು ಅಡಗಿಸುವ ಯತ್ನ ಅವ್ಯಾಹತವಾಗಿ ನಡೆದಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲು ಆದಾಯ ತೆರಿಗೆ ದಾಳಿಯನ್ನು ಮಾಡಿಸಲಾಗುತ್ತಿದೆ. ನ್ಯೂಸ್ ಲಾಂಡ್ರಿ ಎಂಬ ಸುದ್ದಿ ಪೊರ್ಟಲ್‌ಗಳ ಕಚೇರಿಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯ ಹಿಂದೆ ರಾಜಕೀಯ ಕೈವಾಡ ಇಲ್ಲದಿಲ್ಲ.

ಸರಕಾರದ ಜನ ವಿರೋಧಿ, ನೀತಿ ಧೋರಣೆಗಳ ವಿರುದ್ಧ ಸಾತ್ವಿಕ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಐಎಎಸ್ ಅಧಿಕಾರಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ ಮಂದರ್ ಮತ್ತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರು ಕೂಡ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ದಾಳಿಗೆ ಗುರಿಯಾದರು. ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಅವರನ್ನು ಭೇಟಿಯಾದ ಮರು ದಿನವೇ ಸೋನು ಸೂದ್ ಅವರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ.

ಇನ್ನು ಸಾಮಾಜಿಕ ಆರ್ಥಿಕ ನ್ಯಾಯಕ್ಕಾಗಿ ಹೋರಾಡುತ್ತ ಬಂದಿರುವ ಕವಿ ವರವರರಾವ್, ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, ಆದಿವಾಸಿಗಳಿಗಾಗಿ ಹೋರಾಡುತ್ತಾ ಬಂದ ನ್ಯಾಯವಾದಿ ಸುಧಾ ಭಾರದ್ವಾಜ್ ಹಾಗೂ ಗೌತಮ್ ನವ್ಲಾಖಾ ಅವರಂತಹ ಇಪ್ಪತ್ತಕ್ಕೂ ಹೆಚ್ಚು ಚಿಂತಕರನ್ನು ಜೈಲಿಗೆ ತಳ್ಳಿ ಎರಡು ವರ್ಷಗಳು ಗತಿಸಿದ ನಂತರವೂ ಅವರ ಮೇಲೆ ಆರೋಪ ಪಟ್ಟಿಯನ್ನು ಕೂಡ ಸಲ್ಲಿಸದೇ ಸೆರೆಮನೆಯಲ್ಲಿ ಯಾತನೆಗೆ ಗುರಿಪಡಿಸಲಾಗಿದೆ. ಪ್ರಭುತ್ವದ ಲೋಪ ದೋಷಗಳನ್ನು ವಿಮರ್ಶೆಗೆ ಒಳಪಡಿಸಿದ್ದೇ ಇವರು ಎಸಗಿದ ಅಪರಾಧವಾಗಿದೆ.

ಜಾತ್ಯಾತೀತ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಿ ಕಾರ್ಪೊರೇಟ್ ಲೂಟಿಗೆ ಮುಕ್ತ ಅವಕಾಶ ನೀಡಲು ಹೊರಟಿರುವ ಸರಕಾರ ಯಾವುದೇ ಟೀಕೆ, ವಿಮರ್ಶೆಗಳನ್ನು ಸಹಿಸುವುದಿಲ್ಲ. ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ನೋಟು ಅಮಾನ್ಯೀಕರಣದ ಅವಾಂತರಗಳು,ಜಿಎಸ್‌ಟಿ ಅಧ್ವಾನಗಳು, ಸಾರ್ವಜನಿಕ ರಂಗದ ಉದ್ಯಮಗಳ ಅಗ್ಗದ ಬೆಲೆಯ ಮಾರಾಟ, ಕೊರೋನ ನಿಭಾಯಿಸಿದ ರೀತಿ, ಪಿಎಂ ಕೇರ್ಸ್ ನಿಧಿಗೂ ಸರಕಾರಕ್ಕೂ ಸಂಬಂಧವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಮಾಣ ಪತ್ರ, ರೂಪಾಯಿ ನೂರನ್ನು ದಾಟಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಸಾವಿರ ರೂಪಾಯಿಗೆ ತಲುಪಿದ ಅಡಿಗೆ ಅನಿಲ ಸಿಲಿಂಡರ್ ಬೆಲೆ, ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ರಾಜ್ಯಗಳ ಸ್ವಾಯತ್ತತೆ ಅಪಹರಣ ಹೀಗೆ ಹಲವಾರು ಜ್ವಲಂತ ಪ್ರಶ್ನೆ ಗಳ ಬಗ್ಗೆ ಯಾರೇ ಧ್ವನಿ ಎತ್ತಿದರೂ ಸರಕಾರ ದಮನ ಸತ್ರಕ್ಕೆ ಮುಂದಾಗುತ್ತದೆ. ಜನ ಸಮೂಹದಲ್ಲೂ ತನ್ನ ಪರವಾಗಿರುವವರ ಗುಂಪುಗಳನ್ನು ಸೃಷ್ಟಿಸಿದೆ. ಹೀಗಾಗಿ ಈಗ ಪ್ರತಿರೋಧ ಅಷ್ಟು ಸುಲಭವಲ್ಲ.

ರಾಜಧಾನಿ ದಿಲ್ಲಿಯಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ಒಂದು ವರ್ಷದಿಂದ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 600ಕ್ಕೂ ಹೆಚ್ಚು ರೈತರು ಸಾವಿಗೀಡಾಗಿದ್ದಾರೆ. ಆದರೆ ಸರಕಾರ ಇದಕ್ಕೆ ಸ್ಪಂದಿಸುವ ಬದಲಾಗಿ ದಮನ ನೀತಿಯಿಂದ ಹತ್ತಿಕ್ಕಲು ಯತ್ನಿಸುತ್ತಿದೆ.

ಹೀಗೆ ಹಿಡಿಯಬಾರದ ದಾರಿ ಹಿಡಿದು ಬದಲಾದ ಭಾರತವನ್ನು ಸರಿ ದಾರಿಗೆ ತಂದು ಕಾಪಾಡುವದೇ ದೇಶಪ್ರೇಮಿ ಭಾರತೀಯರ ಇಂದಿನ ತುರ್ತು ಕರ್ತವ್ಯವಾಗಿದೆ. ಪ್ರತಿರೋಧದ ಅಲೆಗಳು ಇನ್ನಷ್ಟು ತೀವ್ರಗೊಂಡು ಅಧಿಕಾರದಲ್ಲಿರುವವರ ಅಮಲಿಗೆ ಮದ್ದು ನೀಡಬೇಕಾಗಿದೆ.

ಭಾರತ ಎಷ್ಟು ಹಳಿ ತಪ್ಪಿದೆಯೆಂದರೆ ಕೊಪ್ಪಳ ಜಿಲ್ಲೆಯಲ್ಲಿ ಪುಟ್ಟ ಮಗುವೊಂದು ದೇವಸ್ಥಾನ ಪ್ರವೇಶಿಸಿದ ತಪ್ಪಿಗೆ ಆ ಮಗುವಿನ ದಲಿತ ತಂದೆ ತಾಯಿಗೆ ದಂಡ ವಿಧಿಸುವ ಪರಿಸ್ಥಿತಿ ಒಂದೆಡೆ ನಿರ್ಮಾಣವಾಗಿದ್ದರೆ ಇನ್ನೊಂದೆಡೆ ಅಕ್ರಮ ದೇವಸ್ಥಾನಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕಾದ ಸರಕಾರ ಅವುಗಳ ರಕ್ಷಣೆಗೆ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ. ಹಿಂದೂ ಬಂಧು ಒಂದು ಎಂದು ಹೇಳಿಕೊಳ್ಳುವ ಯಾವ ಧರ್ಮ ರಕ್ಷಕರು ದಲಿತ ಮಗುವಿನ ತಂದೆ ತಾಯಿಯ ಪರವಾಗಿ ಧ್ವನಿ ಎತ್ತಲಿಲ್ಲ.

ಜಗತ್ತಿನಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ನಿಗ್ರಹಿಸಲು ಪ್ರಭುತ್ವ ಎಂಬ ಒಂದು ವ್ಯವಸ್ಥೆ ಇರುತ್ತದೆ. ಪ್ರಭುತ್ವ ಪ್ರ ಜಾಪ್ರಭುತ್ವ ವಾದಾಗ ಜನ ನೆಮ್ಮದಿಯಿಂದ ಉಸಿರಾಡುತ್ತಾರೆ. ಆದರೆ ಪ್ರಭುತ್ವವೇ ಭಯೋತ್ಪಾದಕ ಆದಾಗ ಪ್ರಜೆಗಳನ್ನು ರಕ್ಷಣೆ ಮಾಡುವವರಾರು?.

ಬಸವಣ್ಣನವರು ಹೇಳಿದಂತೆ ಮನೆಯ ಬೆಂಕಿ ತನ್ನ ಸುಟ್ಟಲ್ಲದೇ ನೆರೆ ಮನೆಯ ಸುಡದು. ಯಾವುದೇ ಮನೆಯಲ್ಲಿ ಜೊತೆಯಾಗಿ ವಾಸಿಸುವ ಕುಟುಂಬದ ಸದಸ್ಯರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದರೆ ಆ ಮನೆ ನೆಮ್ಮದಿಯ ತಾಣವಾಗಿರುತ್ತದೆ. ಅದೇ ರೀತಿ ಯಾವುದೇ ಭೂ ಪ್ರದೇಶದಲ್ಲಿ ವಾಸಿಸುವ ಜನ ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದರೆ ಆ ಪ್ರದೇಶ ಸುರಕ್ಷಿತವಾಗಿರುತ್ತದೆ. ಮನೆಯ ಒಳಗಿನ ಒಡಕಿನ ಕಿಚ್ಚು ಮನೆಯನ್ನು ಸುಡುತ್ತದೆ. ದೇಶದೊಳಗಿನ ಒಡಕಿನ ಜ್ವಾಲೆ ದೇಶವನ್ನು ದಹಿಸುತ್ತದೆ. ಬಹುತ್ವ ಭಾರತ ಈಗ ಅಪಾಯದಲ್ಲಿ ಇದೆ. ಇದರ ರಕ್ಷಾ ಕವಚವಾದ ಪ್ರ ಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಉಳಿಸಿ ಕಾಪಾಡಿದರೆ ಭಾರತ ಸುರಕ್ಷಿತ ವಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)