varthabharthi


ತಿಳಿ ವಿಜ್ಞಾನ

ಗಾಂಧಿಯೊಳಗಿನ ವಿಜ್ಞಾನವಾದ

ವಾರ್ತಾ ಭಾರತಿ : 3 Oct, 2021
ಆರ್. ಬಿ. ಗುರುಬಸವರಾಜ

ಗಾಂಧಿ ಬಗ್ಗೆ ಮಾತನಾಡುವಾಗಲೆಲ್ಲಾ ಅವರೊಬ್ಬ ಸಂತ, ಆಧ್ಯಾತ್ಮ ಜೀವಿ ಎಂದೆಲ್ಲಾ ಹೇಳುವುದು ಸಹಜ. ಆದರೆ ಅವರ ಅಂತರಾಳದಲ್ಲಿ ವಿಜ್ಞಾನದ ತುಡಿತ ಇತ್ತು ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಖಾದಿ, ಅಹಿಂಸೆ, ಶಾಂತಿ ಮತ್ತು ಸತ್ಯಾಗ್ರಹಗಳನ್ನು ಉಲ್ಲೇಖಿಸುವಾಗ ವಿಜ್ಞಾನ ಪದಕ್ಕೆ ಸಮಾನಾರ್ಥಕವಾದ ಪದಗಳನ್ನೇ ಬಳಸುತ್ತಿದ್ದರು. ನೇರವಾಗಿ ವಿಜ್ಞಾನದ ಕುರಿತು ಅವರು ಹೇಳದಿದ್ದರೂ ಅವರ ವಿಚಾರ ಮತ್ತು ಆಚರಣೆಗಳಲ್ಲಿ ವೈಜ್ಞಾನಿಕ ಮನೋಭಾವ ಅಡಗಿರುವುದನ್ನು ಗಮನಿಸಬಹುದು. ಅವರ ಚಿತ್ತ ರಾಜಕಾರಣಿಗಿಂತ ವಿಜ್ಞಾನಿಯದಾಗಿತ್ತು ಎಂಬುದು ಅವರ ಕೆಲವು ಆಚಾರ-ವಿಚಾರಗಳಿಂದ ತಿಳಿಯಬಹುದು. ದತ್ತಾಂಶ ಸಂಗ್ರಹಣೆಯ ವಿಷಯ ಬಂದಾಗಲೆಲ್ಲ ವಿಜ್ಞಾನವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ‘‘ವಿಜ್ಞಾನವು ಯಾವುದೇ ಸಿದ್ಧಾಂತಕ್ಕೆ ಸೀಮಿತಗೊಳ್ಳದ ಮೌಲ್ಯಯುತ ವಿಷಯಗಳಲ್ಲಿ ಒಂದು’’ ಎಂದು ಆಗಾಗ ಹೇಳುತ್ತಿದ್ದರು. ಗಾಂಧಿ ಆಧುನಿಕ ವಿಜ್ಞಾನಿಗಳ ಸಂಶೋಧನಾ ಮನೋಭಾವಕ್ಕೆ ವಿರುದ್ಧವಾಗಿರಲಿಲ್ಲ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರ ಮಾತು ವಿಜ್ಞಾನದ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ‘‘ನೀವು ಮಾಡುವ ಎಲ್ಲ ಸಂಶೋಧನೆಗಳು ಬಡವರ ಕಲ್ಯಾಣವನ್ನು ಹೊಂದಿಲ್ಲದಿದ್ದರೆ, ನಿಮ್ಮ ಎಲ್ಲಾ ಕಾರ್ಯಾಗಾರಗಳು ಸೈತಾನನ ಕಾರ್ಯಾಗಾರದಂತೆ ನಿಷ್ಫಲವಾಗುತ್ತವೆ’’ ಎಂದು ಹೇಳಿದ ಮಾತುಗಳಲ್ಲಿ ವಿಜ್ಞಾನದ ಅಭಿವೃದ್ಧಿ ಹೇಗಿರಬೇಕೆಂದು ಗಾಂಧಿ ಬಯಸಿದ್ದರು ಎಂಬುದು ತಿಳಿಯುತ್ತದೆ. ಬೌದ್ಧಿಕ ವಿಜ್ಞಾನಕ್ಕಿಂತ ಪ್ರಾಯೋಗಿಕ ವಿಜ್ಞಾನ ಹೆಚ್ಚು ಮಹತ್ವದ್ದು ಎಂದು ಅವರು ತಿಳಿದಿದ್ದರು. ಅದನ್ನು ಅವರು ಅನೇಕ ಕಾರ್ಯಚಟುವಟಿಕೆಗಳ ಮೂಲಕ ಅನುಸರಿಸುತ್ತಿದ್ದರು. ವಿಜ್ಞಾನ ಮತ್ತು ಕರಕುಶಲ ಕಲೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದನ್ನು ಚೆನ್ನಾಗಿ ಅರಿತಿದ್ದರು. ಅದಕ್ಕಾಗಿ ಪ್ರಾಯೋಗಿಕ ತರಬೇತಿ ಮೂಲಕ ಕರಕುಶಲ ಶಿಕ್ಷಣ ನೀಡುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ‘‘ಕುಶಲ ಕರ್ಮಿಗಳು ಕೆಲಸಕ್ಕೆ ತಕ್ಕಂತೆ ಮತ್ತು ಕಾಲಕ್ಕೆ ಕೌಶಲ್ಯವನ್ನು ಗಳಿಸಲು ವಿಜ್ಞಾನದ ಮೊರೆಹೋಗಬೇಕು, ಆಗ ಮಾತ್ರ ಕೆಲಸದಲ್ಲಿ ಇಂಜಿನಿಯರಿಂಗ್ ತಂತ್ರಜ್ಞಾನ ಬಳಸಲು ಸಾಧ್ಯ’’ ಎಂದು ಹೇಳುತ್ತಿದ್ದರು. ತಲೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದನ್ನು ಒತ್ತಿ ಹೇಳುತ್ತಿದ್ದರು.

ಶಾಂತಿ ಮತ್ತು ವಿಜ್ಞಾನಗಳು ಸಾಧನೆಯ ಅನ್ವೇಷಣೆಯ ಮಾರ್ಗಸೂಚಿಗಳು. ಸಾಧನೆಗೆ ಅಗತ್ಯವಾದ ಮಾರ್ಗವನ್ನು ವೈಜ್ಞಾನಿಕತೆ ಮಾತ್ರ ತೋರಿಸಬಲ್ಲದು ಎಂದು ಹೇಳುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಸಾಧನೆಗಾಗಿ ಶಾಂತಿಯ ಮಂತ್ರವನ್ನು ಅಪ್ಪಿಕೊಂಡಿದ್ದರು ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು. ಪರಿಣಿತರು ಮತ್ತು ಸಾಮಾನ್ಯರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಅಭ್ಯಾಸ ಮಾಡಬಹುದಾದ ವಿಜ್ಞಾನವನ್ನು ರಚಿಸಲು ಗಾಂಧಿ ಪ್ರಯತ್ನಿಸಿದರು. ವೈಜ್ಞಾನಿಕ ಅರ್ಹತೆಗಿಂತ ಹೆಚ್ಚಾಗಿ ಸಂಶೋಧನಾ ಮನೋಭಾವ ಅಗತ್ಯವಾಗಿ ಬೇಕಾಗಿದೆ ಮತ್ತು ಸಂಪನ್ಮೂಲಗಳ ಬಳಕೆಯಿಂದ ಹೆಚ್ಚಿನ ಉತ್ಪನ್ನಗಳು ಜನಸ್ನೇಹಿಯಾಗಿರಬೇಕೆಂಬುದು ಅವರ ಮಂತ್ರವಾಗಿತ್ತು. ಅದಕ್ಕಾಗಿ ಸ್ಥಳೀಯ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಗಾಂಧೀಜಿಯವರ ಸ್ವದೇಶಿ ಚಳವಳಿಯು ಸಂಪೂರ್ಣವಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಸ್ವಯಂ ಉತ್ಪನ್ನ ಮಾಡುವುದು ಆಗಿತ್ತು. ವಿಜ್ಞಾನವು ಅಮೂರ್ತ ಹಾಗೂ ದಂತ ಗೋಪುರವಲ್ಲ. ಅದು ಸಮುದಾಯದ ಅಭಿವೃದ್ಧಿಯ ಒಂದು ಭಾಗ.

ಅಲ್ಲಿ ಪ್ರತಿಯೊಬ್ಬರೂ ದೈನಂದಿನ ಪ್ರಶ್ನೆಗಳಿಂದ ನಿಗೂಢ ಸಂವಹನ ನಡೆಸುತ್ತಾರೆ. ಕೆಲವು ವಾಸ್ತವ ಸಂಗತಿಗಳು ವಿಜ್ಞಾನದ ಮಹತ್ವವನ್ನು ಸಾರುತ್ತವೆ ಎಂಬುದನ್ನು ಗಾಂಧೀಜಿ ಚೆನ್ನಾಗಿ ಅರಿತಿದ್ದರು. ಕೇವಲ ಸಂಶೋಧನೆ ಅಥವಾ ಆವಿಷ್ಕಾರ ಮಾಡುವವರು ಮಾತ್ರ ವಿಜ್ಞಾನಿಯಲ್ಲ. ಗೃಹಿಣಿ, ಇತರರ ಬಗ್ಗೆ ಕಾಳಜಿ ಮಾಡುವವರು, ರೋಗ ಗುಣ ಪಡಿಸುವವರು, ಪರಿಸರ ಸಂರಕ್ಷಣೆ ಮಾಡುವವರು, ವೃದ್ಧರ ಆರೈಕೆ ಮಾಡುವವರು, ಅಶಕ್ತರ ಸೇವೆ ಮಾಡುವವರು ಹೀಗೆ ಇವರೆಲ್ಲರೂ ಸಹ ಒಂದು ರೀತಿಯಲ್ಲಿ ವಿಜ್ಞಾನಿಗಳಿದ್ದಂತೆ ಎಂದು ಗಾಂಧೀಜಿ ಹೇಳುತ್ತಿದ್ದರು. ಗಾಂಧೀಜಿಗೆ ದೇಹವು ಬ್ರಹ್ಮಾಂಡ ಸ್ವರೂಪವಾಗಿತ್ತು. ಅದರಲ್ಲಿ ಅವರು ಎರಡು ರೀತಿಯ ಸಾಮರಸ್ಯಗಳನ್ನು ಬಯಸಿದ್ದರು. ಮೊದಲನೆಯದು ದೇಹ ಮತ್ತು ಅದರ ಭಾಗಗಳ ಸಾಮರಸ್ಯ. ಎರಡನೆಯದು ದೇಹ ಮತ್ತು ಪರಿಸರದ ನಡುವೆ ಅಂದರೆ ಭೂಮಿ, ನೀರು, ಗಾಳಿ, ಬೆಳಕು ಮತ್ತು ಆಕಾಶಗಳ ನಡುವಿನ ಸಾಮರಸ್ಯ. ರೋಗವನ್ನು ಗೆಲ್ಲುವ ಔಷಧಿಯನ್ನು ಅವಲಂಬಿಸುವುದಕ್ಕಿಂತ ದೇಹದ ಬುದ್ಧಿವಂತಿಕೆಯನ್ನು ಗುರುತಿಸುವವನು ವೈದ್ಯ. ಆಧುನಿಕ ನಗರ ಕಲ್ಪನೆ ಮತ್ತು ಆಧುನಿಕ ಕೆಲಸವು ಸಾಮರಸ್ಯಕ್ಕೆ ಅಡ್ಡಿಪಡಿಸುವ ಒತ್ತಡವನ್ನು ಹೆಚ್ಚಿಸುತ್ತದೆ. ಎಂದು ಗಾಂಧಿ ಹೇಳಿದ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ಗಾಂಧೀಜಿಯವರು ಮೂಲ ವಿಜ್ಞಾನ ಕಲಿಕೆಗೆ ಹೆಚ್ಚು ಒತ್ತು ನೀಡಿದ್ದರು ಎಂಬುದಕ್ಕೆ ಅವರ ಮೂಲ ಶಿಕ್ಷಣ ಮಾದರಿಯೇ ಸಾಕ್ಷಿ. ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ಉತ್ಪಾದನೆ ಮಾಡಿಕೊಳ್ಳಬೇಕೆಂಬ ಸ್ವದೇಶಿ ಮಂತ್ರದಿಂದ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯನ್ನು ಎತ್ತಿ ಹಿಡಿದವರು ಅವರು. ಸಾಂಪ್ರದಾಯಿಕ ಕೃಷಿ ಮತ್ತು ಕರಕುಶಲತೆಯನ್ನು ತಮ್ಮ ಭಾಷಣಗಳ ಮೂಲಕವಷ್ಟೇ ಅಲ್ಲ ಆಚರಣೆಯಲ್ಲೂ ತರುವ ಮೂಲಕ ವಿಜ್ಞಾನದ ಚಳವಳಿಗೆ ನಾಂದಿ ಹಾಡಿದ್ದರು. ಸರಳ ಜೀವನ ಮತ್ತು ಪರಿಸರದೊಂದಿಗಿನ ಸಾಮರಸ್ಯಗಳು ಗಾಂಧೀಜಿಯ ಪ್ರಯೋಗಗಳಾಗಿದ್ದವು. ಪ್ರಕೃತಿಯೊಂದಿಗಿನ ಮಾನವ ಸಂಪರ್ಕಕ್ಕೆ ಸಂಬಂಧಿಸಿದ ಅವರ ಆಲೋಚನೆಗಳು ಸ್ವಯಂ ಸಾಕ್ಷಾತ್ಕಾರ, ಅಹಿಂಸೆ ಮತ್ತು ಜೀವಗೋಳದ ಜೈವಿಕ ವಿಜ್ಞಾನಿಯನ್ನಾಗಿಸಿದೆ. ‘‘ನಮ್ಮಂತೆ ಎಲ್ಲಾ ಜೀವಿಗಳು ಬದುಕುವ ಹಕ್ಕನ್ನು ಹೊಂದಿವೆ ಎಂದು ನಾನು ನಂಬುತ್ತೇನೆ’’ ಎಂಬುದನ್ನು ತಮ್ಮ ಜೀವನದಲ್ಲಿ ಅನುಸರಿಸಿ ಬೋಧಿಸುತ್ತಿದ್ದರು.

ಹಿಮಾಲಯ ಕೇವಲ ಒಂದು ಪರ್ವತವಲ್ಲ. ಅದು ಇಡೀ ಭಾರತವನ್ನು ಕಾಪಾಡುವ ವಿಜ್ಞಾನದ ಆಲಯ ಎಂಬುದನ್ನು ಗಾಂಧಿ ಮನಗಂಡಿದ್ದರು. ಹಿಮಾಲಯ ಇಲ್ಲದಿದ್ದರೆ ಇಡೀ ಉತ್ತರ ಭಾರತ ಸಹಾರಾದಂತೆ ಮರುಭೂಮಿ ಆಗುತ್ತಿತ್ತು. ಇದರಲ್ಲಿ ಇಂದಿನ ವಿಜ್ಞಾನ ಮತ್ತು ಪರಿಸರವಾದದ ವೈಜ್ಞಾನಿಕ ಬೀಜಗಳಿವೆ. ಇಡೀ ಉತ್ತರ ಭಾರತದ ಅಳಿವು, ಉಳಿವು, ಯೋಗಕ್ಷೇಮವು ಹಿಮಾಲಯದಲ್ಲಿದೆ. ಹಿಮಾಲಯವು ಭಾರತದ ಜನಸಮುದಾಯದ ಅಪ್ರತಿಮ ಸಂಪನ್ಮೂಲವಾಗಿದೆ ಎಂದು ಅನೇಕ ಪರಿಸರ ಹೋರಾಟದಲ್ಲಿ ಹೇಳಿದ್ದರು. ಇದು ಅವರ ಪರಿಸರ ಪ್ರೇಮವನ್ನಷ್ಟೇ ತಿಳಿಸುವುದಿಲ್ಲ. ಬದಲಾಗಿ ಅವರೊಳಗಿದ್ದ ಪರಿಸರ ವಿಜ್ಞಾನಿಯ ಪ್ರತೀಕವಾಗಿದೆ. ಪರಿಸರದ ಕುರಿತು ಬೇರೆ ಯಾವ ಸಮಕಾಲೀನ ನಾಯಕರು ಅಥವಾ ಚಿಂತಕರಿಗೆ ಇಲ್ಲದಿರುವ ದೃಷ್ಟಿಕೋನವನ್ನು ಮತ್ತು ಅವರ ಒಳನೋಟಗಳನ್ನು ಇದು ತಿಳಿಸುತ್ತದೆ. ಅವರಲ್ಲಿದ್ದ ಅಪಾರವಾದ ವೀಕ್ಷಣಾಶಕ್ತಿ ವಿಜ್ಞಾನದ ಕುರಿತು ಅಸಾಧಾರಣ ಒಳನೋಟವನ್ನು ನೀಡಿತ್ತು. ಕೆಲವು ಸಂದರ್ಭಗಳಲ್ಲಿ ಗಾಂಧೀಜಿಯವರು ಯತ್ರೋಪಕರಣಗಳನ್ನು ವಿರೋಧಿಸುತ್ತಿದ್ದರು. ‘‘ಯಂತ್ರಗಳು ಕೇವಲ ಸಾಧನಗಳೇ ಹೊರತು ನಮ್ಮ ಮಾಸ್ಟರ್‌ಗಳಲ್ಲ’’ ಎಂದು ಹೇಳುವ ಮೂಲಕ ಕರಕುಶಲ ಕಲೆಗೆ ಒತ್ತು ನೀಡುತ್ತಿದ್ದರು. ಕೆಲ ಸಣ್ಣ ಸಣ್ಣ ಸಂಗತಿಗಳು ಗಾಂಧಿ ವಿಜ್ಞಾನ ವಿರೋಧಿಯಾಗಿದ್ದರು ಎಂಬಂತೆ ಬಿಂಬಿಸುತ್ತವೆ. ಆದರೆ ಅವುಗಳ ಹಿಂದಿನ ನೈಜತೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಗಾಂಧೀಜಿಯವರ ವಿಜ್ಞಾನದ ಕಲ್ಪನೆ ತಿಳಿಯುತ್ತದೆ. ಗಾಂಧೀಜಿಯವರು ಮಾನವೀಯತೆ ವಿರುದ್ಧ ವೈಜ್ಞಾನಿಕ ಸಂಶೋಧನೆಗಳನ್ನು ಬಳಸುವುದನ್ನು ವಿರೋಧಿಸಿದರು. ಹಿರೋಷಿಮಾ ಮತ್ತು ನಾಗಸಾಕಿಗಳಲ್ಲಿ ಬಾಂಬ್ ದಾಳಿಯಿಂದಾದ ಮನಕುಲದ ಹತ್ಯೆಯನ್ನು ಖಂಡಿಸಿದ್ದರು.

 ಗಾಂಧಿಯವರು ಯಾವುದೇ ಸಮಸ್ಯೆಯ ಪರಿಹಾರಕ್ಕೆ ಕೈಗೊಳ್ಳುತ್ತಿದ್ದ ಮಾರ್ಗವು ವೈಜ್ಞಾನಿಕ ವಿಧಾನಕ್ಕಿಂತ ಭಿನ್ನವಾಗಿರಲಿಲ್ಲ. ಇದನ್ನು ಅವರ ಆಲೋಚನೆಗಳು, ಬರಹಗಳು, ಭಾಷಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಅವರು ಕೈಗೊಂಡ ಕಾರ್ಯಗಳನ್ನು ವಿಶ್ಲೇಷಿಸಿದರೆ ಅಲ್ಲಿ ವೈಜ್ಞಾನಿಕ ವಿಧಾನದ ಹಂದರಗಳು ಗೋಚರಿಸುತ್ತವೆ. ಅವರು ಆ ಕಾಲದ ವಿಜ್ಞಾನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಸ್ಯವಿಜ್ಞಾನಿ ಜಗದೀಶ್‌ಚಂದ್ರ ಬೋಸ್ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದರು. ವಿಜ್ಞಾನದ ಹೊಸ ಹೊಸ ಸಂಶೋಧನೆಗಳ ಬಗ್ಗೆ ಚರ್ಚಿಸುತ್ತಿದ್ದರು. 1917ರಲ್ಲಿ ಬೋಸ್ ಸಂಶೋಧನಾ ಸಂಸ್ಥೆಯ ಉದ್ಘಾಟನೆಗೆ ಹೋಗಿದ್ದರು. ಸರ್‌ಸಿ.ವಿ. ರಾಮನ್, ಲೇಡಿ ರಮಣ್ ಮತ್ತು ಪಿ.ಸಿ.ರಾಯ್ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಜೆ.ಸಿ.ಬೋಸ್, ಸಿ.ವಿ.ರಾಮನ್ ಮತ್ತು ಪಿ.ಸಿ.ರಾಯ್ ಅವರನ್ನು ಖಾದಿ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದರು. ಅವರಿಂದ ಉತ್ತಮ ಸಲಹೆ ಸೂಚನೆ ಪಡೆದು ಖಾದಿ ಮಂಡಳಿಯನ್ನು ಅಭಿವೃದ್ಧಿ ಪಡಿಸುವ ಇರಾದೆ ಅವರದಾಗಿತ್ತು.

ವಿಜ್ಞಾನದ ಪ್ರತಿಪಾದನೆ ಅಂತಿಮ ಉತ್ತರವನ್ನು ತಿಳಿಸುವುದಲ್ಲ. ಏಕೆಂದರೆ ಸತ್ಯವು ಯಾವಾಗಲೂ ಪ್ರಯೋಗಕ್ಕೆ ಒಳಗಾಗುತ್ತಲೇ ಇರುತ್ತದೆ. ಅಂತೆಯೇ ಗಾಂಧೀಜಿಯವರ ಜೀವನದ ತೀರ್ಮಾನಗಳೂ ಸಹ ಅಂತಿಮವಲ್ಲ. ಅವು ಮತ್ತೆ ಮತ್ತೆ ಸತ್ಯದ ಹುಡುಕಾಟದಲ್ಲಿ ಮುಂದುವರಿಯುತ್ತಲೇ ಇರುತ್ತವೆ ಮತ್ತು ಒಳನೋಟಗಳ ಸುಳಿಯಲ್ಲಿ ಪ್ರಯೋಗಕ್ಕೆ ಒಳಗಾಗುತ್ತಲೇ ಇರುತ್ತವೆ ಎಂಬುದನ್ನು ಅವರ ಜೀವನ ಚರಿತ್ರೆ ತಿಳಿಸುತ್ತದೆ. ‘‘ನನ್ನ ಜೀವನವು ಸತ್ಯದೊಂದಿಗಿನ ಹಲವಾರು ಪ್ರಯೋಗಗಳನ್ನು ಹೊರತುಪಡಿಸಿ ಬೇರೇನೂ ಒಳಗೊಂಡಿಲ್ಲ. ನಾನು ಸತ್ಯಾನ್ವೇಷಣೆಯ ಪ್ರಯೋಗ ಗಳನ್ನು ನಿರ್ಲಿಪ್ತ ಮತ್ತು ವಿನಮ್ರ ಮನೋಭಾವದಿಂದ ನಿರೂಪಿಸಲು ಪ್ರಯತ್ನಿಸಿದ್ದೇನೆ’’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಇದು ಗಾಂಧೀಜಿ ಯವರೊಳಗಿದ್ದ ಒಬ್ಬ ವಿಜ್ಞಾನಿಯನ್ನು, ಅವರ ಜೀವನದಲ್ಲಿ ಅನುಸರಿಸಿದ ವೈಜ್ಞಾನಿಕ ತತ್ವಗಳನ್ನು ಎತ್ತಿ ತೋರಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)