varthabharthi


ಸಂಪಾದಕೀಯ

ಗಂಗೊಳ್ಳಿಯ ಸೌಹಾರ್ದ ಗಂಗೆಗೆ ವಿಷ ಹಿಂಡಲು ಹೊರಟವರು

ವಾರ್ತಾ ಭಾರತಿ : 9 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂಘ ಪರಿವಾರ ಕರಾವಳಿಯಲ್ಲಿ ವ್ಯವಸ್ಥಿತ ಗಲಭೆ, ಅರಾಜಕತೆಯನ್ನು ಸೃಷ್ಟಿಸಿ ಬೆಲೆಯೇರಿಕೆ, ನಿರುದ್ಯೋಗ, ಬಡತನ ಇತ್ಯಾದಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನ ನಡೆಸುತ್ತಿದೆ. ಆದುದರಿಂದಲೇ, ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಹೆಚ್ಚುತ್ತಿದೆೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಪೆಟ್ರೋಲ್ ಬೆಲೆ ಹೆಚ್ಚಳದ ಬಗ್ಗೆ ಸಮರ್ಥನೆ ನೀಡಬೇಕಾದ ಬಿಜೆಪಿ ನಾಯಕರು, ಗೋಹತ್ಯೆ, ಮತಾಂತರದ ಕುರಿತಂತೆ ಮಾತನಾಡುತ್ತಿದ್ದಾರೆ. ಜನರ ನಡುವೆ ಗಲಭೆ ಸೃಷ್ಟಿಸಿ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಸಂಘಪರಿವಾರ ತೋಡಿದ ಈ ಹೊಂಡಕ್ಕೆ ಜಿಲ್ಲೆಯ ಶ್ರಮಿಕ ವರ್ಗ ತಿಳಿಯದೆಯೇ ಹೋಗಿ ಬೀಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೊಂದು ಉದಾಹರಣೆ ಕುಂದಾಪುರದ ಗಂಗೊಳ್ಳಿಯಲ್ಲಿ ಹರಡಿರುವ ‘ಮೀನು ಬಹಿಷ್ಕಾರ’ದ ವದಂತಿ.

ಸಂಘಪರಿವಾರ ಹಮ್ಮಿಕೊಳ್ಳುವ ಹಿಂದೂ ಜಾಗೃತಿ ಸಮಾವೇಶ ಹೇಗಿರುತ್ತದೆ ಎನ್ನುವುದು ಜನಸಾಮಾನ್ಯರಿಗೆ ತಿಳಿಯದ ವಿಷಯವೇನೂ ಅಲ್ಲ. ಅಲ್ಲಿ ಹಿಂದೂ ಚಿಂತನೆಗಳು, ತತ್ವಗಳು, ವೇದೋಪನಿಷತ್ತುಗಳನ್ನು ಜನರಲ್ಲಿ ಬಿತ್ತಿ, ಅವರನ್ನು ಧಾರ್ಮಿಕವಾಗಿ ಜಾಗೃತಿಗೊಳಿಸುವ, ನೈತಿಕವಾಗಿ ಮೇಲೆತ್ತುವ ಕೆಲಸ ನಡೆಯುವುದಿಲ್ಲ. ಅಂತಹ ಸಮಾವೇಶಗಳ ಹಿಂದೆ, ಹಿಂದೂ ಧರ್ಮದ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡವರು ಇರುವುದಿಲ್ಲ. ಬೀದಿ ರೌಡಿಗಳು, ಮೈಮೇಲೆ ಹತ್ತು ಹಲವು ಕ್ರಿಮಿನಲ್ ಕೇಸುಗಳನ್ನು ಜಡಿಸಿಕೊಂಡವರು, ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡವರೇ ಇಂತಹ ಜಾಗೃತಿ ಸಮಾವೇಶದ ಹಿಂದಿರುತ್ತಾರೆ. ‘ರಾಮಾಯಣವನ್ನು ಬರೆದವರು ಯಾರು?’ ಎಂದು ಕೇಳಿದರೆ ಆಕಾಶ ನೋಡುವವರೇ ಹೆಚ್ಚು. ಇಲ್ಲಿ ಹಿಂದೂ ಜಾಗೃತಿಯೆಂದರೆ ‘ವೇದಿಕೆಯ ಮೇಲೆ ನಿಂತು ಇನ್ನೊಂದು ಸಮುದಾಯವನ್ನು ನಿಂದಿಸುವುದು, ದ್ವೇಷಿಸಲು ಕಲಿಸುವುದು ಮತ್ತು ಜನರನ್ನುಹಿಂಸೆಗೆ ಪ್ರಚೋದಿಸುವುದು’. ಇದರಿಂದ ಹಿಂದೂ ಧರ್ಮಕ್ಕೆ ಪ್ರಯೋಜನಕ್ಕಿಂತ ಹಾನಿಯೇ ಅಧಿಕ. ಜಾತಿ, ಧರ್ಮಗಳನ್ನು ಮೀರಿ ಒಂದಾಗಿ ಬಾಳುತ್ತಿರುವ ಸಮಾಜವನ್ನು ಒಡೆದು, ಅವರನ್ನು ಹಿಂದೂಧರ್ಮದ ಹೆಸರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತಹಾಕುವಂತೆ ಒತ್ತಡ ಹಾಕುವುದು ಈ ಸಮಾವೇಶಗಳ ಗುರಿ. ಜನಸಾಮಾನ್ಯರಿಗೆ ಇದರ ಬಗ್ಗೆ ಸ್ಪಷ್ಟವಾಗಿ ಅರಿವಿದ್ದರೂ, ಅನೇಕ ಸಂದರ್ಭದಲ್ಲಿ ಸಂಘಟಕರ ಭಯಕ್ಕಾಗಿ ಈ ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಭಾಗವಹಿಸಬೇಕಾಗುತ್ತದೆ.

ಗಂಗೊಳ್ಳಿಯಲ್ಲಿ ಸಂಘಪರಿವಾರ ಗೋಹತ್ಯೆಯನ್ನು ವಿರೋಧಿಸಿ ಇಂತಹದೊಂದು ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಹಮ್ಮಿಕೊಂಡವರು, ವೇದಿಕೆಯಲ್ಲಿರುವವರು ಅಥವಾ ನೆರೆದವರಲ್ಲಿ ಗೋವುಗಳನ್ನು ಸಾಕುವ ರೈತರೇ ಇರಲಿಲ್ಲ. ಗೋವುಗಳನ್ನು ಸಾಕುವ ರೈತರು ಎಂದಿಗೂ ‘ಗೋಹತ್ಯೆ ನಿಷೇಧ’ ಕಾನೂನು ಜಾರಿಗೆ ಬರಲಿ ಎಂದು ಒತ್ತಾಯಿಸಿದವರಲ್ಲ. ಗೋವುಗಳ ಬಗ್ಗೆ ಏನೇನೂ ಗೊತ್ತಿಲ್ಲದ ನಕಲಿ ಗೋರಕ್ಷಕರು ಇಂತಹ ಸಭೆ ನಡೆಸುವುದು ಗೋವುಗಳ ಮೇಲಿನ ಪ್ರೀತಿಯಿಂದಲೂ ಅಲ್ಲ. ಇವರು ಒಂದೆಡೆ ಗೋ ರಕ್ಷಣೆಯ ಹೆಸರಿನಲ್ಲಿ ದಾಂಧಲೆ ನಡೆಸುತ್ತಾರೆ, ಮತ್ತೊಂದೆಡೆ ಗುಟ್ಟಾಗಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುತ್ತಾರೆ. ಅವರ ಪಾಲಿಗೆ ಇದು ರಾಜಕೀಯ ಮಾತ್ರವಲ್ಲ, ದಂಧೆ ಕೂಡ. ಗಂಗೊಳ್ಳಿಯಲ್ಲಿ ನಡೆದ ಈ ಸಮಾವೇಶಕ್ಕೆ ಬರಲೇ ಬೇಕು ಎಂದು ಅಲ್ಲಿನ ಮೀನು ಮಾರುಕಟ್ಟೆಯ ಮಹಿಳೆಯರ ಮೇಲೆ ಸಂಘಪರಿವಾರ ವಿಶೇಷ ಒತ್ತಡ ಹೇರಿತ್ತು. ಮಾರುಕಟ್ಟೆಯನ್ನು ಮುಚ್ಚಬೇಕು ಎಂದೂ ಆದೇಸಿತ್ತು. ಈ ಬೆದರಿಕೆಗೆ ಮಣಿದು ಒಂದು ದಿನ ಮಾರುಕಟ್ಟೆಯನ್ನು ಮುಚ್ಚಿ, ಸಂಘಪರಿವಾರ ಕೊಟ್ಟ ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಭೆಗೂ ಹೋಗಿದ್ದರು. ಸಾರ್ವಜನಿಕ ಸಭೆಯಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಮಾತುಗಳನ್ನು ಆಡಲಾಗಿತ್ತು. ಪರಸ್ಪರ ಸೌಹಾರ್ದದಿಂದ ಬದುಕುತ್ತಿದ್ದ ಮುಸ್ಲಿಮರಿಗೆ ಈ ಭಾಷಣದ ಮಾತುಗಳು ತೀವ್ರವಾಗಿ ನೋವು ಕೊಟ್ಟಿದ್ದವು. ಇದೇ ಸಂದರ್ಭದಲ್ಲಿ, ತಾವು ದಿನವೂ ವ್ಯವಹರಿಸುವ ಮೀನು ಮಾರುಕಟ್ಟೆಯನ್ನೇ ಮುಚ್ಚಿ, ಈ ದ್ವೇಷ ಭಾಷಣಕ್ಕೆ ಬೆಂಬಲ ನೀಡಿರುವುದು ಸಹಜವಾಗಿ ಮುಸ್ಲಿಮರಲ್ಲಿ ಅಸಮಾಧಾನ ಸೃಷ್ಟಿಸಿರಬಹುದು. ಆದರೆ ಇದನ್ನೇ ಬಳಸಿಕೊಂಡು, ಸಂಘಪರಿವಾರದ ನಾಯಕರು ‘ಹಿಂದೂ ಸಮಾವೇಶಕ್ಕೆ ಭಾಗವಹಿಸಿದ ಕಾರಣದಿಂದ, ಮುಸ್ಲಿಮರು ಹಿಂದೂಗಳ ಮೀನುಗಳನ್ನು ಬಹಿಷ್ಕಾರ ಹಾಕಿದ್ದಾರೆ’ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ. ಈ ವದಂತಿಯನ್ನು ಕೆಲವು ಮುಸ್ಲಿಮ್ ರಾಜಕೀಯ ಹಿತಾಸಕ್ತಿಗಳೂ ತಮಗೆ ಪೂರಕವಾಗಿ ಬಳಸಿಕೊಂಡಿರುವ ಸಾಧ್ಯತೆಯಿದೆ. ಮಾಧ್ಯಮಗಳಂತೂ ಈ ವದಂತಿಯನ್ನು ಪ್ರಕಟಿಸಿ ಅದನ್ನು ನಿಜ ಮಾಡಲು ಹೊರಟವು. ಒಟ್ಟಿನಲ್ಲಿ, ಮುಸ್ಲಿಮರು ಮೀನು ಮಾರುಕಟ್ಟೆಗೆ ಮೀನು ಕೊಳ್ಳಲು ಹೋಗುವುದಕ್ಕೆ ಹೆದರುವ ಸನ್ನಿವೇಶವೂ ಸೃಷ್ಟಿಯಾಯಿತು.

ಎಂದಿನಂತೆ ಬರುತ್ತಿದ್ದ ಗ್ರಾಹಕರು ಬರದೇ ಇರುವುದು ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿರುವ ಮಹಿಳೆಯರಿಗೂ ಒಂದಿಷ್ಟು ನೋವು ಕೊಟ್ಟಿದೆ. ನಮ್ಮ ಸಮಾಜದಲ್ಲಿ ಹಿಂದೂ ಮೀನು ವ್ಯಾಪಾರಿಗಳು-ಮುಸ್ಲಿಮ್ ಮೀನು ಗ್ರಾಹಕರು ಎಂದು ಯಾರೂ ಇಲ್ಲ. ನಮ್ಮಲ್ಲಿರುವುದು ಮೀನು ಮಾರುವವರು-ಮೀನುಕೊಳ್ಳುವವರು ಅಷ್ಟೇ. ಮಾರುವವರ ಜಾತಿ, ಧರ್ಮ ನೋಡಿ ಮೀನು ಕೊಳ್ಳುವುದಿಲ್ಲ. ಅವರ ಮೀನು ಎಷ್ಟು ಗುಣಮಟ್ಟದು ಎನ್ನುವುದನ್ನು ಆಧರಿಸಿ ಮೀನು ಕೊಳ್ಳುತ್ತಾರೆ. ಹಾಗೆಯೇ ಇಂತಹದೇ ಧರ್ಮ, ಜಾತಿ ನೋಡಿ ಮೀ ನನ್ನು ಮಾರುವುದೂ ಇಲ್ಲ. ಯಾರು ಹೆಚ್ಚು ದುಡ್ಡು ಕೊಡುತ್ತಾರೆಯೋ ಅವರಿಗೆ ಮೀನು ಮಾರುತ್ತಾರೆ. ಈ ಕೊಡು ಕೊಳ್ಳುವಿಕೆ ಸಮಾಜದಲ್ಲಿ ಒಂದು ಅವಿನಾಭಾವ ಸೌಹಾರ್ದವನ್ನು ಹುಟ್ಟಿಸಿ ಹಾಕಿದೆ. ಕೊಳ್ಳುವವರು ಮತ್ತು ಮಾರುವವರ ನಡುವೆ ಬಿರುಕು ಸೃಷ್ಟಿಸಿದರೆ ಈ ಸಹಜ ಸೌಹಾರ್ದವನ್ನು ಹಾಳುಗೆಡವಬಹುದು ಎನ್ನುವುದು ಸಂಘಪರಿವಾರಕ್ಕೆ ಗೊತ್ತಿದೆ. ಆದುದರಿಂದಲೇ, ಸಮಾವೇಶವನ್ನು ಬಳಸಿಕೊಂಡು, ಮೀನು ಮಾರುವವರಿಗೆ ಮತ್ತು ಕೊಳ್ಳುವವರಿಗೆ ಧರ್ಮವನ್ನು ಅಂಟಿಸಿ ಅವರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದೆೆ.

ಅವರು ತೋಡಿದ ಈ ಖೆಡ್ಡಕ್ಕೆ ಯಾವ ಧರ್ಮೀಯರೂ ಬೀಳದಂತೆ ನೋಡಿಕೊಳ್ಳುವುದು ಆಯಾ ಸಮುದಾಯದ ನಾಯಕರ ಹೊಣೆಗಾರಿಕೆಯಾಗಿದೆ. ಸಂಘಪರಿವಾರದ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾರಣದಿಂದ, ಅನಿವಾರ್ಯವಾಗಿ ಕೆಲವರು ಭಾಗವಹಿಸಿರಬಹುದು. ಅವರು ಭಾಗವಹಿಸುವಂತೆ ಒತ್ತಡ ಹೇರಿರುವುದರ ಉದ್ದೇಶವನ್ನು ಅಲ್ಲಿನ ಸ್ಥಳೀಯ ಮುಸ್ಲಿಮರು ಕೂಡ ಅರಿತುಕೊಳ್ಳಬೇಕು. ಜನರ ನಡುವಿನ ಅನ್ಯೋನ್ಯತೆಯನ್ನು ಇಲ್ಲವಾಗಿಸುವುದು ಅವರ ಉದ್ದೇಶ. ಇದೀಗ ಅಲ್ಲಿನ ಮೀನು ವ್ಯಾಪಾರಿಗಳು, ಗ್ರಾಹಕರು ಸಂಘಪರಿವಾರ ನಾಯಕರ ಭಾಷಣಕ್ಕೆ ಪ್ರತಿಕ್ರಿಯಿಸಲು ಮುಂದಾದರೆ ಸಂಘಪರಿಪರವಾರದ ಉದ್ದೇಶ ಈಡೇರಿದಂತೆ. ಅಲ್ಲಿನ ಒಂದು ಸಮುದಾಯ, ಆ ಮಾರುಕಟ್ಟೆಯ ಮಹಿಳೆಯರಿಂದ ಮೀನು ಕೊಳ್ಳುವುದನ್ನು ನಿಲ್ಲಿಸಿದರೆ ಸಂಘಪರಿವಾರ ಗೆದ್ದಂತೆ. ದೈನಂದಿನ ಬದುಕಿನಲ್ಲಿ ಪರಸ್ಪರ ಅವಲಂಬಿಸುತ್ತಾ ಮುಸ್ಲಿಮರು, ಮೊಗವೀರರು ಬದುಕಿದ್ದಾರೆ. ಕೊಡುಕೊಳ್ಳುವಿಕೆ ಬರೇ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿಯೂ ಈ ಕೊಡುಕೊಳ್ಳುವಿಕೆ ಮುಂದುವರಿದಿದೆ. ಇದಕ್ಕೆ ಒಂದು ಸುದೀರ್ಘ ಇತಿಹಾಸವೂ ಇದೆ. ಇಂತಹ ಸೌಹಾರ್ದವನ್ನು, ಯಾವುದೋ ಪುಂಡು ಪೋಕರಿಗಳು ಸೇರಿ ಸಂಘಟಿಸಿದ ಒಂದು ಸಭೆಗೆ ಅಳಿಸಿ ಹಾಕಲು ಸಾಧ್ಯವಿಲ್ಲ. ಗಂಗೊಳ್ಳಿ ಮಾತ್ರವಲ್ಲ ಇಡೀ ಕರಾವಳಿಯಲ್ಲ್ಲಿ ಜನರು ಧರ್ಮಗಳನ್ನು ಮೀರಿ ಪರಸ್ಪರ ಸೌಹಾರ್ದದೊಂದಿಗೆ ಬದುಕುವುದೇ ಸಂಘಪರಿವಾರಕ್ಕೆ ನೀಡುವ ಮಾರ್ಮಿಕ ಉತ್ತರವಾಗಿದೆ. ಆದುದರಿಂದ, ಬಹಿಷ್ಕಾರ ವದಂತಿಗಳನ್ನು ನಂಬದೇ, ಪರಸ್ಪರ ವ್ಯವಹಾರ ಸಂಬಂಧಗಳನ್ನು ಮುಂದುವರಿಸುತ್ತಾ ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳುವ ಕಡೆಗೆ ಗಂಗೊಳ್ಳಿಯ ಶ್ರಮಿಕ ವರ್ಗ ಯೋಚಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)