varthabharthi


ನಿಮ್ಮ ಅಂಕಣ

ನಾಳೆ ಜಯಪ್ರಕಾಶ್ ನಾರಾಯಣ್‌ರ ಜನ್ಮದಿನ

ದೇಶಕ್ಕಾಗಿ ಬದುಕಿದ ಜೆ.ಪಿ.

ವಾರ್ತಾ ಭಾರತಿ : 10 Oct, 2021
ಕೆ.ಎಸ್. ನಾಗರಾಜ್, ಬೆಂಗಳೂರು

ಸ್ವತಂತ್ರ ಭಾರತದಲ್ಲಿ ಯಾವುದೇ ರೀತಿಯ ಅಧಿಕಾರವನ್ನು ಪಡೆದುಕೊಳ್ಳಲು ಸರ್ವ ಸ್ವತಂತ್ರರಾಗಿದ್ದರೂ ತನ್ನ ಹೋರಾಟ ದೇಶದ ಹಿತಕ್ಕಾಗಿ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎನ್ನುತ್ತಾ, ಸಿಕ್ಕಿದ ಎಲ್ಲಾ ಅವಕಾಶಗಳನ್ನು ನಿರಾಕರಿಸುತ್ತಾ ಅಧಿಕಾರದಿಂದ ಬಹುದೂರ ಉಳಿದವರು ಜೆ.ಪಿ.


ದೇಶಕ್ಕಾಗಿ ಇಡೀ ತಮ್ಮ ಬದುಕನ್ನೇ ಸವೆಸಿ ಪ್ರತಿಯಾಗಿ ಕವಡೆ ಕಾಸಿನಷ್ಟು ಅಧಿಕಾರ ಮತ್ತು ಪ್ರತಿಫಲವನ್ನು ಪಡೆಯದಂತಹ ಮಹಾನ್ ಪುರುಷರ ಸಾಲಿನಲ್ಲಿ ಗಾಂಧಿ, ವಿನೋಭಾಭಾವೆ, ಜೆ.ಪಿ. ನಿಲ್ಲುತ್ತಾರೆ. ಜಯಪ್ರಕಾಶ್ ನಾರಾಯಣ್ ಎಂದರೆ ತ್ಯಾಗಕ್ಕೆ ಮತ್ತೊಂದು ಹೆಸರು. ಈ ದೇಶದಲ್ಲಿ ಸ್ವಾತಂತ್ರ್ಯೋತ್ತರ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಯೊಂದು ಕ್ಷಣವನ್ನು ದೇಶದ ಒಳಿತಿಗಾಗಿ ಬಳಸಿದಂತಹ ಮಹಾನ್ ಪುರುಷ.

1902ರಲ್ಲಿ ಜನಿಸಿದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆರಂಭದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪಿಆನಂತರ ಸಮಾಜವಾದಿ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಂತಿಮವಾಗಿ ಗಾಂಧಿ ಮಾರ್ಗವೇ ಅತ್ಯಂತ ಸೂಕ್ತವೆಂದು ಗಾಂಧಿ ಅನುಯಾಯಿಯಾಗಿ ತಮ್ಮ ಬದುಕನ್ನು ಸವೆಸಿದವರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಎಂದರೆ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ ಮತ್ತು ಯುವಜನತೆಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನಡೆಸಿದ ಕೀರ್ತಿ ಪುರುಷ ಎಂಬ ಮತ್ತೊಂದು ಹೆಸರಿದೆ. ಜೆ.ಪಿ. ತಮ್ಮ ಬದುಕಿನಲ್ಲಿ ದೇಶದಿಂದ ಪಡೆದಿರುವುದಕ್ಕಿಂತ ದೇಶಕ್ಕೆ ಕೊಟ್ಟಿರುವುದೇ ಹೆಚ್ಚು. ವಿದೇಶಗಳಲ್ಲಿ ವ್ಯಾಸಂಗ ಮಾಡಿ ಭಾರತ ದೇಶಕ್ಕೆ ಬಂದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು ಅಂತಿಮವಾಗಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಎಲ್ಲಾ ನಾಯಕರು ಸೆರೆಮನೆಯಲ್ಲಿದ್ದ ಸಂದರ್ಭದಲ್ಲಿ ಇವರು ಸೆರೆಮನೆಯಿಂದ ತಪ್ಪಿಸಿಕೊಂಡು ಬಂದು ಇಡೀ ದೇಶದಾದ್ಯಂತ ಮಾರುವೇಷದಲ್ಲಿ ಸಂಚರಿಸಿ ಚಳವಳಿಗೆ ಜೀವವನ್ನು ತುಂಬಿ ಅಂತಿಮವಾಗಿ ಬ್ರಿಟಿಷರಿಂದ ಬಂಧಿಸಲ್ಪಟ್ಟು ಅಪಾರ ಪ್ರಮಾಣದ ಹಿಂಸೆಯನ್ನು ಸೆರೆಮನೆಯಲ್ಲಿ ಅನುಭವಿಸಿದವರು.

ಸ್ವತಂತ್ರ ಭಾರತದಲ್ಲಿ ಯಾವುದೇ ರೀತಿಯ ಅಧಿಕಾರವನ್ನು ಪಡೆದುಕೊಳ್ಳಲು ಸರ್ವ ಸ್ವತಂತ್ರರಾಗಿದ್ದರೂ ತನ್ನ ಹೋರಾಟ ದೇಶದ ಹಿತಕ್ಕಾಗಿ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎನ್ನುತ್ತಾ, ಸಿಕ್ಕಿದ ಎಲ್ಲಾ ಅವಕಾಶಗಳನ್ನು ನಿರಾಕರಿಸುತ್ತಾ ಅಧಿಕಾರದಿಂದ ಬಹುದೂರ ಉಳಿದರು. 1952ರಲ್ಲಿ ಅನೇಕ ಜನಪರವಾದಂತಹ ಚಳವಳಿ ಮತ್ತು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ವಿಶೇಷವಾಗಿ ವಿನೋಭಾಭಾವೆಯವರ ಭೂದಾನ ಚಳವಳಿಯಲ್ಲಿ ನಿರ್ವಹಿಸಿದಂತಹ ಪಾತ್ರ, ಇದಕ್ಕಿಂತ ಮಿಗಿಲಾಗಿ 1971ರಲ್ಲಿ ಚಂಬಲ್ ಕಣಿವೆಯಲ್ಲಿ ಹಲವಾರು ತಿಂಗಳುಗಳ ಕಾಲ ವಾಸ್ತವ್ಯ ಹೂಡಿ ಸುಮಾರು 500ಕ್ಕೂ ಹೆಚ್ಚು ಡಕಾಯಿತರ ಮನಪರಿವರ್ತನೆಯನ್ನು ಮಾಡಿ ಅವರನ್ನು ಪ್ರಮುಖ ವಾಹಿನಿಗೆ ತಂದಂತಹ ಇವರ ಸಾಧನೆ, ಸೇವೆ ದೇಶ ಮರೆಯಲು ಸಾಧ್ಯವಾಗದ್ದು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಪ್ರತಿಪಾದಿಸುತ್ತಿದ್ದಂತಹ ಸಪ್ತ ಸೂತ್ರಗಳಲ್ಲಿ ಅನೇಕ ವಿಚಾರಗಳು ಇಂದಿಗೂ ಅನುಷ್ಠಾನವಾಗಿಲ್ಲ. ಅವುಗಳು ಚರ್ಚೆಯ ವಸ್ತುಗಳಾಗಿಯೇ ಇದೆ. ದೇಶದಲ್ಲಿ ಭ್ರಷ್ಟಾಚಾರ ತೊಲಗಿಸಬೇಕೆಂದು ಲೋಕಪಾಲ ಮಸೂದೆಯನ್ನು ಮಂಡಿಸುವಂತಹ ವಿಚಾರವನ್ನು ಪ್ರಸ್ತಾಪಿಸಿದವರಲ್ಲಿ ಮೊದಲಿಗರು ಇವರು. ಕೇವಲ ಸರಕಾರಗಳು ಬದಲಾದರೆ ಸಾಲದು ಆಳುವ ಜನರ ಮನಸ್ಸು ಬದಲಾಗಬೇಕೆನ್ನುವ ಮಾತುಗಳನ್ನಾಡಿದವರು ಜೆ.ಪಿ. ಶಿಕ್ಷಣ ವ್ಯಾಪಾರೀಕರಣವಾಗಬಾರದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದು ಪ್ರತಿಪಾದಿಸಿದವರು ಇವರು. ಚುನಾಯಿತ ಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸದೆ ಹೋದರೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ‘ರೈಟ್ ಟು ರಿಕಾಲ್’ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದವರು. ರಾಜಕೀಯ ಭ್ರಷ್ಟಾಚಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದವರು. ಹಾಗೆಯೇ ವಂಶಪಾರಂಪರ್ಯ ಆಡಳಿತದ ವಿರುದ್ಧ ಹೋರಾಡಿದವರು ಜಯಪ್ರಕಾಶ್ ನಾರಾಯಣ್.

ಚುನಾವಣಾ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಜೆ.ಪಿ. ಬಯಸಿದ್ದರು. ಅವರು ಬಯಸಿದ ಅನೇಕ ಸಂಗತಿಗಳು ಇಂದು ಮೇಲ್ನೋಟಕ್ಕೆ ಅನುಷ್ಠಾನವಾದಂತೆ ಕಾಣುತ್ತಿವೆಯಾದರೂ ಚುನಾವಣಾ ಪದ್ಧತಿಯಲ್ಲಿನ ಸಂಪೂರ್ಣ ಬದಲಾವಣೆ ಇನ್ನೂ ಈಡೇರಿಲ್ಲ. ಹಣ ಮತ್ತು ತೋಳ್ಬಲದ ಜಾತಿಯ ಪ್ರಭಾವ ಚುನಾವಣೆಗಳಲ್ಲಿ ಇರಬಾರದೆಂಬ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ.

ಜಯಪ್ರಕಾಶ್ ನಾರಾಯಣ್ ಈ ದೇಶದಲ್ಲಿ ಅನೇಕ ಪರಿವರ್ತನೆಗಳಿಗೆ ಕಾರಣರಾದವರು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಈ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರದ ಮಾತುಗಳನ್ನು ಮತ್ತು ಮಾರ್ಗಗಳನ್ನು ತೋರಿಸಿದವರು. ಅವರ ಆಶಯಗಳ ಅಡಿಯಲ್ಲಿ ರಾಜಕೀಯ ರಂಗಕ್ಕೆ ಧುಮುಕಿದವರು, ಅಂದಿನ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮುಂದಿನ ದಿನಗಳಲ್ಲಿ ಅವರ ಮೂಲ ಆಶಯಗಳಿಗೆ ಧಕ್ಕೆಯುಂಟುಮಾಡಿ, ಅವುಗಳನ್ನು ಗಾಳಿಗೆ ತೂರಿ ರಾಷ್ಟ್ರಮಟ್ಟದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ನಾಯಕರಾಗಿ ಮೆರೆಯುತ್ತಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ.

ಗಾಂಧಿಯನ್ನು ಮತ್ತು ಜೆ.ಪಿ.ಯನ್ನು ನೆನೆಯುವ ಸಂದರ್ಭದಲ್ಲಿ ಕಸ್ತೂರ್ಬಾ ಮತ್ತು ಪ್ರಭಾವತಿಯವರನ್ನು ನೆನೆಯದಿದ್ದರೆ ಆ ಸ್ಮರಣೆ ಅಪೂರ್ಣವಾಗುತ್ತದೆ.

ಜೆ.ಪಿ. ರೀತಿಯಲ್ಲಿಯೇ ಅವರ ಧರ್ಮಪತ್ನಿ ಸಣ್ಣ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು ಗಾಂಧಿ ಆಶ್ರಮ ವಾಸಿಯಾಗಿ ಸಾಂಸಾರಿಕ ಬದುಕಿನಿಂದ ದೂರ ಉಳಿದು ಹೋರಾಟಗಳಲ್ಲಿ ಸೆರೆಮನೆ ವಾಸವನ್ನು ಅನುಭವಿಸಿ, ಭೂದಾನ ಚಳವಳಿ ಮತ್ತು ಚಂಬಲ್ ಕಣಿವೆಯ ಪವಿತ್ರ ಕಾರ್ಯಗಳಲ್ಲಿ ಪತಿಯೊಡನೆ ಹೆಜ್ಜೆಗೆ ಹೆಜ್ಜೆ ಹಾಕಿ ಡಕಾಯಿತರನ್ನು ತಮ್ಮ ಮಕ್ಕಳಂತೆ ಕಂಡು ತಾಯಿಯ ಮಮತೆಯನ್ನು ಅವರಿಗೆ ನೀಡಿ ಅವರ ಮನಪರಿವರ್ತನೆಯ ಕಾರ್ಯದಲ್ಲಿ ಈಕೆ ಮಾಡಿರುವ ಸೇವೆ ಸ್ಮರಣೀಯವಾದದ್ದು. ಇಂದು ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಜೆ.ಪಿ. ವಿಚಾರಗಳನ್ನು, ಅವರ ಬದುಕಿನ ಮಾರ್ಗವನ್ನು ಒಮ್ಮೆ ಅವಲೋಕಿಸಿ, ತಾವು ಮಾಡುತ್ತಿರುವ ಕಾರ್ಯಗಳು, ತಮ್ಮ ಬದುಕಿನ ಶೈಲಿ ಇವುಗಳ ಬಗ್ಗೆ ಪಶ್ಚಾತ್ತಾಪಪಟ್ಟರೆ ಅದುವೇ ಜೆ.ಪಿ.ಗೆ ಸಲ್ಲಿಸಬಹುದಾದ ದೊಡ್ಡ ಗೌರವವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)