varthabharthi


ತಿಳಿ ವಿಜ್ಞಾನ

ಕೀಟಗಳ ಬದುಕಿಗೆ ಮಾರಕವಾಯಿತೇ ಬೆಳಕಿನ ಮಾಲಿನ್ಯ?

ವಾರ್ತಾ ಭಾರತಿ : 10 Oct, 2021
ಆರ್. ಬಿ. ಗುರುಬಸವರಾಜ

ಕತ್ತಲೆಯ ರಾತ್ರಿಯನ್ನು ಬೆಳಗಲು ಥಾಮಸ್ ಅಲ್ವಾ ಎಡಿಸನ್ ಕಂಡು ಹಿಡಿದ ವಿದ್ಯುತ್ ಬಲ್ಬ್ ಮಾನವನ ಬದುಕನ್ನೇ ಬೆಳಗತೊಡಗಿದ್ದು ನಿಜ. ರಾತ್ರಿಯಲ್ಲೂ ಹಗಲಿನ ಅನುಭವ ನೀಡುವ ವಿದ್ಯುತ್ ಬಲ್ಬ್ ಮಾನವನ ಪಾಲಿಗೆ ಒಂದು ಮಹತ್ತರ ಸಂಶೋಧನೆ. ರಾತ್ರಿಯಾದೊಡನೆ ಕತ್ತಲೆಯ ಕೂಪದಲ್ಲಿ ಹೊರಳಾಡುತ್ತಿದ್ದ ಮಾನವ ವಿದ್ಯುತ್ ದೀಪ ಬಂದೊಡನೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯತೊಡಗಿದ. ರಾತ್ರಿಯೂ ಕೆಲಸ ಮಾಡಲು ವಿದ್ಯುತ್ ದೀಪಗಳು ಸಹಾಯ ಮಾಡತೊಡಗಿದವು. ಎಡಿಸನ್ ಕಂಡು ಹಿಡಿದ ವಿದ್ಯುತ್ ಬಲ್ಬ್ ಇಂದು ಹಲವು ರೂಪಗಳನ್ನು ಹೊಂದುತ್ತಾ ಬಂದಿರುವುದನ್ನು ಗಮನಿಸಬಹುದು. ಗಾಜಿನ ಪಾರದರ್ಶಕ ಗೋಲಕದಂತಿದ್ದ ಬಲ್ಬ್, ಕಾಲ ಮತ್ತು ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತಲೇ ಇದೆ. ಪ್ರಖರತೆ, ಬಾಳಿಕೆ ಮತ್ತು ತ್ವರಿತತೆ ಆಧರಿಸಿ ಬಲ್ಬ್‌ನಲ್ಲಿ ಅನೇಕ ವಿಧಗಳು ಬದಲಾಗಿರುವುದನ್ನು ಗಮನಿಸಿದ್ದೇವೆ.

ಫ್ಲೋರೆಸೆಂಟ್ ಬಲ್ಬ್, ಸೋಡಿಯಂ ಬಲ್ಬ್, ನಿಯಾನ್ ಬಲ್ಬ್, ಮರ್ಕ್ಯುರಿ ಬಲ್ಬ್, ಕಾಂಪ್ಯಾಕ್ಟ್ ಫ್ಲೋರೆಸೆಂಟ್ ಲ್ಯಾಂಪ್(ಸಿ.ಎಫ್.ಎ.್), ಎಲ್.ಇ.ಡಿ. ಬಲ್ಬ್ ಇತ್ಯಾದಿಗಳು ಬಂದ ನಂತರ ಮೂಲ ಬಲ್ಬ್‌ನ ಚರಿತ್ರೆಯನ್ನೇ ಮರೆತೆವು. ವಿದ್ಯುತ್ ಬಲ್ಬ್ ಬಂದ ನಂತರ ಹಗಲೂ ರಾತ್ರಿ ಎನ್ನದೆ ದುಡಿಯಲು ಅನುವು ಮಾಡಿಕೊಂಡ ಮಾನವ ಇನ್ನಿತರ ಜೀವಿಗಳ ಜೀವನವನ್ನೇ ಮರೆತ ಎಂದರೆ ತಪ್ಪಾಗಲಿಕ್ಕಿಲ್ಲ. ವಿದ್ಯುತ್ ಬಲ್ಬ್ ಮಾನವನಿಗೆ ಅಗತ್ಯವಿತ್ತು ನಿಜ. ಆದರೆ ಇತರ ಜೀವಿಗಳಿಗೆ ಅದರಿಂದಾಗುವ ಹಾನಿಯನ್ನು ಮಾನವ ಲೆಕ್ಕಿಸಲೇ ಇಲ್ಲ. ಕತ್ತಲೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡ ಕೆಲ ಜೀವಿಗಳಿಗೆ ಅದರಲ್ಲೂ ವಿಶೇಷವಾಗಿ ಕೆಲವು ಕೀಟಗಳಿಗೆ ವಿದ್ಯುತ್ ಬಲ್ಬ್ ಮಾರಕವಾಯಿತು. ಹೆಚ್ಚು ಬೆಳಕು ನೀಡಲು ಬಳಸುವ ಬೀದಿ ದೀಪಗಳು ಕೆಲವು ಕೀಟಗಳ ಬದುಕಿಗೆ ಕಂಟಕವಾಯಿತು. ಬ್ರಿಟನ್‌ನ ಸಂಶೋಧಕರು ಎಲ್.ಇ.ಡಿ. ಬಲ್ಬ್ ಗಳಿಂದ ಕೀಟಗಳಿಗೆ ಇರುವ ತೊಂದರೆಯ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದಾರೆ. ಎಲ್.ಇ.ಡಿ. ಬಲ್ಬ್ ಸೂಸುವ ಬೆಳಕು ಹಾಗೂ ಪ್ರಖರತೆ ಕೀಟಗಳ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂಬ ಆತಂಕದ ವರದಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೀಟಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಲು ಎಲ್.ಇ.ಡಿ. ಬಲ್ಬ್‌ಗಳೇ ಕಾರಣ ಎಂಬುದು ಈ ತಂಡದ ವಾದ.

ಅದರಲ್ಲೂ ವಿಶೇಷವಾಗಿ ಬೀದಿ ದೀಪಗಳಲ್ಲಿ ಬಳಸುವ ಎಲ್.ಇ.ಡಿ. ಬಲ್ಬ್‌ಗಳೇ ಕೀಟಗಳ ಬದುಕಿಗೆ ತೊಂದರೆಯಾಗಿವೆ ಎಂಬ ಸೂಕ್ಷ್ಮಾವಲೋಕನದ ಸಂಶೋಧನಾ ವರದಿಯು ನಮ್ಮನ್ನು ಬೆರಗುಗೊಳಿಸದೆ ಇರದು. ಹಿಂದೆ ಸಂಜೆ ಕತ್ತಲೆಗೆ ಜಾರುತ್ತಿದ್ದಂತೆ ಬೀದಿ ದೀಪದ ಸುತ್ತ ಸಾವಿರಾರು ಕೀಟಗಳು ಮುತ್ತಿಕೊಂಡಿದ್ದನ್ನು ನಾವೆಲ್ಲ ಗಮನಿಸಿದ್ದೆವು. ಬೆಳಕಿಗೆ ಕೀಟಗಳು ಆಕರ್ಷಣೆಗೊಳ್ಳುವುದು ಸಹಜ ಎಂದುಕೊಂಡು ಅದನ್ನು ಅಷ್ಟಕ್ಕೆ ಮರೆಯುತ್ತಿದ್ದೆವು. ಆದರೆ ಲೇಖಕ ಹಾಗೂ ಕೀಟಶಾಸ್ತ್ರಜ್ಞರಾದ ಡೌಗ್ಲಾಸ್ ಬೊಯೇಸ್ ತಮ್ಮ ನೇತೃತ್ವದ ತಂಡದೊಂದಿಗೆ ಬ್ರಿಟನ್‌ನಲ್ಲಿ ನಡೆಸಿದ ಸಂಶೋಧನೆಯಿಂದ ಎಲ್.ಇ.ಡಿ. ಬಲ್ಬ್‌ಗಳು ಕೀಟಗಳಿಗೆ ಮಾರಕ ಎಂಬುದನ್ನು ತಮ್ಮ ಅಧ್ಯಯನಗಳಿಂದ ಸಾಬೀತು ಪಡಿಸಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಮೂರನೇ ಒಂದರಷ್ಟು ಪತಂಗಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ಕೀಟಗಳು ಬೆಳಕಿನ ಕಡೆಗೆ ಏಕೆ ಹೆಚ್ಚು ಆಕರ್ಷಿತಗೊಳ್ಳುತ್ತವೆ ಎಂಬ ಪ್ರಶ್ನೆ ಕಾಡುವುದು ಸಹಜ. ಬಹುತೇಕ ಕೀಟಗಳು ತಮ್ಮ ದೇಹದ ಶಾಖವನ್ನು ಹೆಚ್ಚಿಸಿಕೊಳ್ಳಲು ಬೆಳಕಿನ ಕಡೆಗೆ ಆಕರ್ಷಿತವಾಗುತ್ತವೆ.

ತಂಪಾದ ವಾತಾವರಣದಿಂದ ತಮ್ಮ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಈ ತಂತ್ರಗಾರಿಕೆಯನ್ನು ಬಳಸುತ್ತವೆ. ಹೀಗೆ ಬೆಳಕಿನ ಸಮೀಪ ಬರುವುದರಿಂದ ಅವು ಹೆಚ್ಚು ಉತ್ತೇಜಕವನ್ನು ಪಡೆಯುತ್ತವೆ ಎಂದು ಕೀಟ ತಜ್ಞರು ಹೇಳುತ್ತಾರೆ. ಹೆಚ್ಚಿನ ಕೀಟಗಳು ಬೆಳಕಿನ ಕಡೆಗೆ ಆಕರ್ಷಿತವಾಗಲು ಅವುಗಳ ಸಂಯುಕ್ತ ಕಣ್ಣುಗಳು ಸಹ ಕಾರಣ. ಕೀಟಗಳು ಎರಡು ವಿಧದ ಫೋಟೋರೆಸೆಪ್ಟಿವ್(ಬೆಳಕು ಗ್ರಹಿಸುವ) ಅಂಗಗಳನ್ನು ಹೊಂದಿವೆ. ಒಂದು ಸಂಯುಕ್ತ ಕಣ್ಣುಗಳು ಇನ್ನೊಂದು ಒಸೆಲ್ಲಿ. ಸಂಯುಕ್ತ ಕಣ್ಣುಗಳು ಒಮ್ಮಾಟಿಡಿಯಾ ಎಂದು ಕರೆಯಲ್ಪಡುವ ಹೆಚ್ಚಿನ ಸಂಖ್ಯೆಯ ಬೆಳಕಿನ ಸೂಕ್ಷ್ಮ ಘಟಕಗಳಿಂದ ಮಾಡಲ್ಪಟ್ಟಿವೆ. ಒಮ್ಮಾಟಿಡಿಯಾ ಫೊಟೋರೆಸೆಪ್ಟರ್ ಕೋಶಗಳ ಉದ್ದವಾದ ಬಂಡಲ್ ಹೊಂದಿದ್ದು, ಎಚ್‌ಡಿ ಕ್ಯಾಮರಾದಲ್ಲಿರುವಂತೆ ನಿರ್ದಿಷ್ಟ ಪ್ರದೇಶದ ಹೆಚ್ಚಿನ ರೆಸಲ್ಯೂಶನ್ ಹೊಂದಿರುತ್ತದೆ. ಫೋಟೊರೆಸೆಪ್ಟರ್‌ಗಳ ವರ್ಣಪಟಲದ ಸೂಕ್ಷ್ಮತೆಯು ಕೀಟಗಳಿಗೆ ಗೋಚರಿಸುವ ಬೆಳಕಿನ ತರಂಗಾಂತರವನ್ನು ನಿರ್ಧರಿಸುತ್ತದೆ. ಇದು ಸಾಮಾನ್ಯವಾಗಿ ನೇರಳಾತೀತ ಬೆಳಕನ್ನೂ ಸಹ ನೋಡುವ ಸಾಮರ್ಥ್ಯವಿರುತ್ತದೆ. ನೇರಳಾತೀತ ಕಿರಣಗಳು ಮನುಷ್ಯರಿಗೆ ಅಗೋಚರ. ಆದರೆ ಕೀಟಗಳು ಸುಲಭವಾಗಿ ನೇರಳಾತೀತ ಕಿರಣಗಳನ್ನು ನೋಡುತ್ತವೆ. ಹಾಗಾಗಿ ಬೆಳಕಿನ ಸಮೀಪದಲ್ಲಿದ್ದರೂ ಅವುಗಳ ದೃಷ್ಟಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೀಟಗಳು ಬೆಳಕಿನ ಕಡೆಗೆ ಆಕರ್ಷಿತವಾಗುವುದನ್ನು ಧನಾತ್ಮಕ ಫೋಟೋಟಾಕ್ಸಿಸ್ ನಡವಳಿಕೆ ಎನ್ನುತ್ತಾರೆ.

ಕೀಟಗಳ ಸಂಖ್ಯೆ ಕಡಿಮೆಯಾಗಲು ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನದ ನಷ್ಟವು ಕಾರಣ ಎಂದು ಬಹುತೇಕರು ಭಾವಿಸಿದ್ದರು. ಆದರೆ ಬೆಳಕಿನ ಮಾಲಿನ್ಯವು ಕೀಟಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ ಎಂಬ ಡೌಗ್ಲಾಸ್ ಬೊಯೇಸ್ ಅವರ ಹೊಸ ಸಂಶೋಧನೆಯೊಂದು ಕೀಟಗಳ ಸಂಖ್ಯೆ ಕಡಿಮೆಯಾಗಲು ನಿಖರ ಕಾರಣವನ್ನು ಪತ್ತೆ ಹಚ್ಚಿದೆ. ಬೀದಿ ದೀಪಗಳಲ್ಲಿ ಬಳಸುವ ಹೆಚ್ಚಿನ ಬಲ್ಬ್‌ಗ ಳು ಸೋಡಿಯಂ ದೀಪಗಳಾಗಿದ್ದು ಹಳದಿ ಬಣ್ಣವನ್ನು ಹೊಂದಿರುತ್ತವೆ. ಇದು ಹಗಲಿನ ಅನುಭವವನ್ನು ನೀಡುತ್ತದೆ. ಆದರೆ ಇತ್ತೀಚೆಗೆ ಬಂದ ಎಲ್.ಇ.ಡಿ. ಬಲ್ಬ್‌ಗಳು ಹೆಚ್ಚು ಬಿಳಿ ಬಣ್ಣವನ್ನು ಹೊಂದಿದ್ದು, ಇದು ಕೀಟಗಳ ಜೈವಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ ಎಂದು ಬೊಯೇಸ್ ತಂಡ ಹೇಳಿದೆ. ಎಲ್.ಇ.ಡಿ. ಬಲ್ಬ್‌ಗಳಿಂದ ಬರುವ ಕಿರಣಗಳು ಹೆಚ್ಚು ನೀಲಿ ತರಂಗಾಂತರದೊಂದಿಗೆ ಹೆಚ್ಚು ಪ್ರಕಾಶಮಾನವಾಗಿರುತ್ತವೆ. ಇಂತಹ ಪ್ರಕಾಶಮಾನತೆ ಕೀಟಗಳು ಪರಭಕ್ಷಕಗಳಿಗೆ ಒಡ್ಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕೀಟಗಳು ಬಲ್ಬ್‌ನ ಹೆಚ್ಚು ಬಿಸಿ ಪಡೆದಂತೆಲ್ಲಾ ಅವುಗಳ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಪತಂಗ ಸೇರಿದಂತೆ ಕೆಲವು ಕೀಟಗಳ ಮೇಲೆ ಎಲ್.ಇ.ಡಿ. ಬೆಳಕಿನ ಮಾಲಿನ್ಯವು ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದು ತಂಡದ ಅಭಿಪ್ರಾಯ. ಇದು ಕೀಟಗಳ ಆಹಾರ ಸೇವನೆ, ಜೀರ್ಣಾಂಗ ವ್ಯವಸ್ಥೆ ಹಾಗೂ ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕೀಟಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ. ಡೌಗ್ಲಾಸ್ ಬೊಯೇಸ್ ಹಾಗೂ ಅವರ ತಂಡವು ಮೂರು ವರ್ಷಗಳ ಕಾಲ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡು ನಂತರ ವಿವರವಾದ ಅಧ್ಯಯನದ ನಂತರ ವರದಿಯನ್ನು ಬಿಡುಗಡೆ ಮಾಡಿದೆ. ಬ್ರಿಟನ್‌ನ ಥೇಮ್ಸ್ ಕಣಿವೆಯಲ್ಲಿ 55 ವಿವಿಧ ಸ್ಥಳಗಳಲ್ಲಿ ಬೆಳಕಿನ ಮತ್ತು ಕತ್ತಲೆಯ ಸ್ಥಳಗಳಲ್ಲಿ 400 ಗಂಟೆಗಳಿಗೂ ಅಧಿಕ ಕಾಲ ಕೀಟಗಳ ಅಧ್ಯಯನ ಮಾಡಿದೆ. ಕೀಟಗಳ ಜೈವಿಕ ಕ್ರಮದ ಮೇಲೆ ಎಲ್.ಇ.ಡಿ. ಬೆಳಕಿನ ಮಾಲಿನ್ಯವು ಉಂಟು ಮಾಡುವ ಪರಿಣಾಮಗಳ ಕುರಿತ ಅಧ್ಯಯನ ಕೀಟ ತಜ್ಞರಲ್ಲಿ ಆತಂಕ ಉಂಟು ಮಾಡಿದೆ. ಕೀಟಗಳ ಸಂಖ್ಯೆ ಕಡಿಮೆಯಾಗುವುದು ಕೇವಲ ಕೀಟ ಜಗತ್ತಿಗೆ ಮಾತ್ರ ನಷ್ಟವಲ್ಲ. ಅದು ಉಳಿದ ಇನ್ನಿತರ ಜೀವಿಗಳಿಗೂ ತೊಂದರೆಯನ್ನುಂಟು ಮಾಡುತ್ತದೆ. ಕೀಟಭಕ್ಷಕ ಪ್ರಾಣಿಗಳ ಆಹಾರ ಸರಪಳಿ ತುಂಡಾಗುತ್ತದೆ ಮತ್ತು ಜೀವಪರಿಸರದಲ್ಲಿ ಕೆಲವು ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಕೀಟಗಳನ್ನೇ ಆಹಾರವನ್ನಾಗಿಸಿಕೊಂಡ ಪರಭಕ್ಷಕ ಕೀಟಗಳು, ಮುಳ್ಳುಹಂದಿಗಳು ಮತ್ತು ಕೆಲವು ಪಕ್ಷಿಗಳಿಗೆ ದೈನಂದಿನ ಆಹಾರದಲ್ಲಿ ವ್ಯತ್ಯಯವುಂಟಾಗುತ್ತದೆ. ಇದರಿಂದ ಅವುಗಳ ಜೀವನ ಕ್ರಮದಲ್ಲಿ ಏರುಪೇರುಗಳಾಗಿ ಅವೂ ಅಳಿವಿನಂಚಿಗೆ ಸರಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಪತಂಗಗಳು ಮತ್ತು ಕೀಟಗಳು ಪರಾಗಸ್ಪರ್ಶಕಗಳಾಗಿದ್ದು, ಅವುಗಳ ಹಾರಾಟ ಇಲ್ಲದಿದ್ದರೆ ಸಸ್ಯಗಳಲ್ಲಿ ಪರಾಗಸ್ಪರ್ಶ ಪ್ರಕ್ರಿಯೆ ನಿಂತು ಹೋಗುತ್ತದೆ. ಇದೂ ಮತ್ತೊಂದಷ್ಟು ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ.

ಸಾರ್ವಜನಿಕ ಸುರಕ್ಷತೆ ಮತ್ತು ವನ್ಯಜೀವಿ ಸಂರಕ್ಷಣೆ ಎರಡೂ ತುಂಬಾ ಮಹತ್ವದ ಅಂಶಗಳಾಗಿವೆ. ಜೈವಿಕ ಪರಿಸರ ಸಮತೋಲನದಲ್ಲಿರಲು ಬೆಳಕಿನ ಉತ್ತಮ ವಿನ್ಯಾಸ ಅಗತ್ಯ. ಕೀಟಗಳ ಜೀವನಕ್ಕೆ ಮಾರಕವಾಗುವ ಎಲ್.ಇ.ಡಿ. ಬಲ್ಬ್ ಗಳಿಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಅಗತ್ಯ ಎಂದು ಬೋಯೆಸ್ ಹೇಳುತ್ತಾರೆ. ಎಲ್.ಇ.ಡಿ. ಬದಲಾಗಿ ಸೋಡಿಯಂ ಬಳಸುವುದು ಉತ್ತಮ ಅಥವಾ ಎಲ್.ಇ.ಡಿ.ಗಳ ಪ್ರಖರತೆಯನ್ನು ಕಡಿಮೆ ಮಾಡುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ. ಈ ಕುರಿತು ಕೀಟತಜ್ಞರು ಹಾಗೂ ಪರಿಸರ ತಜ್ಞರ ಮುಂದಿನ ನಡೆ ಏನೆಂಬುದು ಸ್ಪಷ್ಟವಾಗಬೇಕಿದೆ. ಜೀವಿಗಳ ಬದುಕಿಗೆ ಬೆಳಕು ಅಗತ್ಯವಿರುವಂತೆ ಅವುಗಳ ಬದುಕನ್ನೇ ಕತ್ತಲೆಯಾಗಿಸದಿರಲಿ, ಬೆಳಕಿನ ಮಾಲಿನ್ಯ ಕಡಿಮೆ ಮಾಡುವ ಮೂಲಕ ಪರಿಸರ ಸಮತೋಲನಕ್ಕೆ ಎಲ್ಲರೂ ಕೈಜೋಡಿಸೋಣ. ಮಾನವ ಅಭಿವೃದ್ಧಿಯ ಹೆಸರಿನಲ್ಲಿ ಇನ್ನಿತರ ಜೀವಿಗಳಿಗೆ ಸಂಚಕಾರ ಒಡ್ಡದಿರೋಣ ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)