varthabharthi


ಸಂಪಾದಕೀಯ

ದಸರಾ ವೇಳೆ ಆನೆಗಳ ಬಳಕೆ: ಭಾರೀ ದುರಂತಗಳಿಗೆ ಆಹ್ವಾನ

ವಾರ್ತಾ ಭಾರತಿ : 11 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಶ್ರೀರಂಗ ಪಟ್ಟಣ ದಸರಾ’ ಉತ್ಸವದಲ್ಲಿ ಅಂಬಾರಿ ಹೊತ್ತ ಆನೆಯು ಪಟಾಕಿ ಮತ್ತು ವಾದ್ಯಗಳ ಸದ್ದಿಗೆ ಬೆದರಿ ಯದ್ವಾತದ್ವಾ ವರ್ತಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ಸಂದರ್ಭದಲ್ಲಿ ಬೆದರಿದ ಆನೆಗಳೇನಾದರೂ ಮಾವುತರ ನಿಯಂತ್ರಣಕ್ಕೆ ಬರದೇ ಇದ್ದಿದ್ದರೆ ಅಲ್ಲಿ ಭಾರೀ ಅನಾಹುತವಾಗುತ್ತಿತ್ತು. ಬೆದರಿದ ಆನೆಗಳು ದಾಂಧಲೆ ನಡೆಸುವ ಸಾಧ್ಯತೆಗಳಿದ್ದವು. ಜೊತೆಗೆ, ಜನರು ಕಾಲ್ತುಳಿತಕ್ಕೊಳಗಾಗಿ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಗಳಿದ್ದವು. ಆದರೆ ಮಾವುತರ ಮುಂಜಾಗ್ರತೆಯಿಂದ ಅನಾಹುತ ತಪ್ಪಿತು. ಒಂದು ವೇಳೆ ಅಲ್ಲಿ ಆನೆಗಳು ಬೆದರಿ ಓಡತೊಡಗಿ, ಸಾವು ನೋವುಗಳು ಸಂಭವಿಸಿದ್ದರೆ ನಾವು ಯಾರನ್ನು ಹೊಣೆ ಮಾಡಬೇಕಾಗಿತ್ತು? ಆನೆಗಳನ್ನು ಪೂರ್ಣಪ್ರಮಾಣದಲ್ಲಿ ಸಿದ್ಧಗೊಳಿಸಲಿಲ್ಲ ಎಂದು ಮಾವುತರನ್ನು ಶಿಕ್ಷಿಸಲು ಸಾಧ್ಯವೇ? ಅಥವಾ ಸಾವಿರಾರು ಜನರು ಭಾಗವಹಿಸುವ ಉತ್ಸವದಲ್ಲಿ ಆನೆಯಂತಹ ಪ್ರಾಣಿಯನ್ನು ಬಳಕೆ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತವನ್ನು ಶಿಕ್ಷಿಸಬೇಕೇ? ಅಥವಾ ಆನೆಯನ್ನೇ ಹೊಣೆ ಮಾಡಿ ಗುಂಡಿಟ್ಟು ಕೊಂದು ಹಾಕಬೇಕೇ? ಇಲ್ಲಿ ತಪ್ಪು ಯಾರದು? ಈ ಪ್ರಶ್ನೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

  ಉತ್ಸವದಲ್ಲಿ, ಅದರಲ್ಲೂ ಮೈಸೂರು ದಸರಾದಂತಹ ಉತ್ಸವದಲ್ಲಿ ಆನೆಗಳನ್ನು ಬಳಸಿಕೊಂಡು ಜಂಬೂ ಸವಾರಿ ನಡೆಸುವುದು ಎಷ್ಟು ಸರಿ? ಶ್ರೀರಂಗಪಟ್ಟಣದಲ್ಲಿ ನಡೆದ ಅವಘಡವನ್ನು ಮುಂದಿಟ್ಟುಕೊಂಡು ನಾವು ಚರ್ಚಿಸಬೇಕು. ಮೂರು ಕಾರಣಗಳಿಗಾಗಿ ದಸರಾಗಳಲ್ಲಿ ಆನೆಗಳನ್ನು ಬಳಸುವುದನ್ನು ಸರಕಾರ ನಿಷೇಧಿಸಬೇಕಾಗಿದೆ. ಮೊದಲನೆಯದು, ಜನಸಾಮಾನ್ಯರ ಸುರಕ್ಷತೆಯ ಕಾರಣದಿಂದ. ಲಕ್ಷಾಂತರ ಜನ ಸೇರಿದಲ್ಲಿ ಆನೆಗಳೇನಾದರೂ ತನ್ನ ಸಹಜಸ್ವಭಾವವನ್ನು ಪ್ರದರ್ಶಿಸಿದ್ದೇ ಆದಲ್ಲಿ, ಅದು ಸೃಷ್ಟಿಸಬಹುದಾದ ಅನಾಹುತ ಅತ್ಯಂತ ಭಯಂಕರವಾದುದು. ಈವರೆಗೆ ನಡೆದಿಲ್ಲ ಎನ್ನುವ ಧೈರ್ಯದಿಂದ ನಾವು ಈ ಸಂಪ್ರದಾಯವನ್ನು ಧೈರ್ಯದಿಂದ ಮುಂದುವರಿಸುವುದು ಯಾವ ರೀತಿಯಲ್ಲೂ ಕ್ಷೇಮವಲ್ಲ. ಒಂದು ವೇಳೆ ದುರಂತ ನಡೆದದ್ದೇ ಆದರೆ, ಗೊತ್ತಿದ್ದೂ ಆನಾಹುತವನ್ನು ಆಹ್ವಾನಿಸಿದ್ದಕ್ಕಾಗಿ ಜಿಲ್ಲಾಡಳಿತದ ಅಧಿಕಾರಿಗಳ ತಲೆದಂಡವಾಗಬಹುದು. ಆದರೆ ಜಿಲ್ಲಾಡಳಿತಕ್ಕೆ ಈ ಸಂಪ್ರದಾಯವನ್ನು ನಿಲ್ಲಿಸುವ ಅಧಿಕಾರ ಎಷ್ಟರಮಟ್ಟಿಗಿದೆ? ಇಷ್ಟಕ್ಕೂ ಆನೆಗಳು ವಿಪರೀತವಾಗಿ ವರ್ತಿಸುವುದಿಲ್ಲ ಎನ್ನುವ ಭರವಸೆಗಳನ್ನು ನೂರಕ್ಕೆ ನೂರರಷ್ಟು ಮಾವುತರೂ ಕೊಡಲಾರರು. ನೆರೆದ ಜಾತ್ರೆಯಲ್ಲಿ ಭಾರೀ ಸದ್ದಿಗೆ ಆನೆಗಳು ಬೆದರಬಹುದು. ಜನಸಂದಣಿಯನ್ನು ನೋಡಿಯೂ ಅದು ಹುಚ್ಚುಗಟ್ಟಬಹುದು. ಪ್ರಕೃತಿಯ ಕಾರಣದಿಂದಲೇ ಅದು ವ್ಯತಿರಿಕ್ತವಾಗಿ ವರ್ತಿಸಬಹುದು. ದುಷ್ಕರ್ಮಿಗಳು ಅದನ್ನು ಕೆರಳಿಸುವ ಪ್ರಯತ್ನ ನಡೆಸಿದಾಗಲೂ ಅನಾಹುತ ಸಂಭವಿಸಬಹುದು. ಆನೆ, ಸಿಂಹಗಳನ್ನು ಸರ್ಕಸ್‌ನಲ್ಲೇ ಬಳಸುವುದು ನಿಷೇಧವಿರುವಾಗ, ಜಾತ್ರೆ, ಉತ್ಸವಗಳಲ್ಲಿ ಬಳಸುವುದಕ್ಕೆ ಮುಕ್ತ ಅವಕಾಶ ನೀಡುವುದು ಎಷ್ಟು ಸರಿ?

ಎರಡನೆಯ ಕಾರಣ, ಜಂಬೂ ಸವಾರಿ ಎನ್ನುವುದು ರಾಜ ಪ್ರಭುತ್ವದ ವೈಭವೀಕರಣ. ಇದು ಪ್ರಜಾಸತ್ತೆಯ ಕಾಲ. ರಾಜ ಪ್ರಭುತ್ವದ ವಿರುದ್ಧ ನಿರಂತರ ಹೋರಾಟದ ಬಳಿಕ ನಮಗೆ ಈ ಪ್ರಜಾಸತ್ತಾತ್ಮಕವಾದ ಅಧಿಕಾರ ಸಿಕ್ಕಿದೆ. ಇಲ್ಲಿ ರಾಜರೇ ಪ್ರಜೆಗಳು. ಜಂಬೂಸವಾರಿಯ ಹೆಸರಿನಲ್ಲಿ, ಸಂವಿಧಾನದ ಪ್ರತಿಯನ್ನು ಮೆರವಣಿಗೆ ಮಾಡಿದ್ದರೆ ನಾವದನ್ನು ಒಪ್ಪಬಹುದಿತ್ತು. ಆದರೆ, ರಾಜರ ಸಂಕೇತಗಳನ್ನು ಮರುಸ್ಥಾಪಿಸುವ ಸಂದೇಶವನ್ನು ಜಂಬೂಸವಾರಿ ನೀಡುತ್ತದೆ. ಈ ಕಾರಣದಿಂದ, ಈ ಹಿಂದೆಯೇ ಹಲವರು ಜಂಬೂಸವಾರಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ಮೂಲಕ, ರಾಜರನ್ನು ಮತ್ತು ವೈದಿಕ ಸಂಕೇತಗಳನ್ನು ವೈಭವೀಕರಿಸಲಾಗುತ್ತಿದೆ. ಕರ್ನಾಟಕದ ವೌಲ್ಯಗಳು ಜಂಬೂಸವಾರಿಯಲ್ಲಿ ಇಲ್ಲ ಎಂದು ಅವರು ಆರೋಪಿಸುತ್ತಿದ್ದಾರೆ. ಜಂಬೂ ಸವಾರಿ ಇಲ್ಲದೆಯೂ ದಸರಾವನ್ನು ವೈಭವದಿಂದ ನಡೆಸಬಹುದು. ಜಂಬೂಸವಾರಿ ಮಾನಸಿಕ ಗುಲಾಮಗಿರಿಯ ಸಂಕೇತವಾಗಿರುವುದರಿಂದ ಇದನ್ನು ಸ್ಥಗಿತಗೊಳಿಸಬೇಕು ಎನ್ನುವ ಜನರ ಒತ್ತಡವನ್ನು ಸರಕಾರ ಗಂಭೀರವಾಗಿ ಸ್ವೀಕರಿಸಬೇಕು. ಮೂರನೆಯ ಕಾರಣ, ಆನೆಗಳನ್ನು ಸಾರ್ವಜನಿಕವಾಗಿ ಬಳಸುವುದು ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ಆನೆಗಳನ್ನು ಬಳಸುವುದಕ್ಕಾಗಿ, ಅವುಗಳನ್ನು ಪಳಗಿಸುವುದಕ್ಕಾಗಿ ಭಾರೀ ಪ್ರಮಾಣದ ಚಿತ್ರಹಿಂಸೆಗಳನ್ನು ಮಾವುತರು ನೀಡುತ್ತಾರೆ. ಆನೆಗಳ ಸ್ಥಳ ಕಾಡುಗಳೇ ಹೊರತು, ನಾಡಲ್ಲ. ಇದನ್ನು ರಾಜ್ಯ ಹೈಕೋರ್ಟ್ ಕೂಡ ಹೇಳಿದೆ. ಅವು ಸ್ವತಂತ್ರವಾಗಿ ಕಾಡುಗಳಲ್ಲಿ ಬದುಕಬೇಕು. ಅದೆಷ್ಟು ಪಳಗಿಸಿದರೂ, ಕೆಲವೊಮ್ಮೆ ಆನೆಗಳು ರೊಚ್ಚಿಗೇಳುವುದು ಈ ಕಾರಣಕ್ಕಾಗಿ. ದಕ್ಷಿಣ ಭಾರತದಲ್ಲಿ ಜಾತ್ರೆ, ಉತ್ಸವಗಳಲ್ಲಿ ಬಳಸುವುದಕ್ಕಾಗಿ ಆನೆಗಳಿಗೆ ನೀಡುವ ಚಿತ್ರ ಹಿಂಸೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಆನೆಯನ್ನು ದೈವಿಕ ಸ್ಥಾನದಲ್ಲಿಟ್ಟು ಭಾರತ ನೋಡುತ್ತದೆ. ಆನೆಯನ್ನು ಭಾರತದ ಸಂಕೇತವಾಗಿ ಬಳಸಲಾಗುತ್ತದೆ. ಆದರೆ ಅದೇ ಭಾರತದಲ್ಲಿ, ಆನೆಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ನಾಯಿ, ಬೆಕ್ಕಿಗಿಂತಲೂ ಕ್ರೂರವಾಗಿ ಆನೆಗಳನ್ನು ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಸಂಕಲೆಗಳಿಂದಾವೃತವಾದ ಆನೆಗಳ ಪಾದಗಳಿಂದ ರಕ್ತಗಳು ತೊಟ್ಟಿಕ್ಕುತ್ತಿರುತ್ತವೆ. ಅವುಗಳ ಕಣ್ಣುಗಳು ಸದಾ ಒಸರುತ್ತಿರುತ್ತವೆ. ಇದು ನಾವು ಆನೆಗಳಿಗೆ ತೋರಿಸುವ ಅಗೌರವವಾಗಿದೆ. ಭಾವನಾತ್ಮಕವಾಗಿ ಆನೆಗಳಿಗೆ ಗೌರವ ನೀಡದಿದ್ದರೂ ಪರವಾಗಿಲ್ಲ, ಕಾನೂನಿನ ಕಾರಣದಿಂದಲಾದರೂ ಇವುಗಳಿಗೆ ಬಿಡುಗಡೆ ನೀಡಬೇಕು. ಕರಡಿ ಆಡಿಸುವ, ಕೋತಿ ಆಡಿಸುವ ಜನರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅರಣ್ಯಾಧಿಕಾರಿಗಳು ಆನೆಗಳನ್ನು ಬಳಸುವವರ ವಿರುದ್ಧ ವೌನವಾಗಿರುವುದು ವಿಪರ್ಯಾಸವಾಗಿದೆ. ಉತ್ಸವ, ಜಾತ್ರೆಗಳಲ್ಲಿ ಆನೆಗಳನ್ನು ಬಳಸುವುದರ ವಿರುದ್ಧ ನ್ಯಾಯಾಲಯ ಸ್ವಯಂ ವಿಚಾರಣೆ ನಡೆಸಬೇಕು. ಆನೆಗಳಿಲ್ಲದೆ ದಸರಾಗಳು ಸಂಭ್ರಮ ಕಳೆದುಕೊಳ್ಳುತ್ತದೆ ಎನ್ನುವ ವಾದವೊಂದಿದೆ. ಆದರೆ ಈ ಸಂಭ್ರಮಕ್ಕಾಗಿ ಜನರು, ಆನೆಗಳು ತೆರಬೇಕಾದ ಬೆಲೆಯನ್ನೊಮ್ಮೆ ನಾವು ಊಹಿಸಬೇಕು. ಈ ಸಂಭ್ರಮವೇ ದೊಡ್ಡ ದುರಂತವಾಗಿಯೂ ಪರಿವರ್ತ ನೆಯಾಗಬಹುದು. ಕೆಲವು ಗಂಟೆಗಳ ಈ ಸಂಭ್ರಮಕ್ಕೆ ನಾವು ಕಡಿವಾಣ ಹಾಕಿದ್ದೇ ಆದರೆ, ಆನೆಗಳು ಬದುಕಿನುದ್ದಕ್ಕೂ ಕಾಡಿನಲ್ಲಿ ಸಂಭ್ರಮದಿಂದ ಬದುಕಬಹುದು. ಆನೆಗಳ ಈ ಸಂಭ್ರಮ ದಸರಾದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)