varthabharthi


ವಿಶೇಷ-ವರದಿಗಳು

ನೋವು ಮತ್ತು ಸ್ಪರ್ಶ ನರಗ್ರಾಹಕಗಳ ಸಂಶೋಧನೆಗೆ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

ವಾರ್ತಾ ಭಾರತಿ : 12 Oct, 2021
ಪ್ರೊ. ಎಂ. ನಾರಾಯಣ ಸ್ವಾಮಿ, ತ್ಯಾವನಹಳ್ಳಿ

ನೋವಿನ ನರಗ್ರಾಹಕಗಳು ಅಥವಾ ಸಂವೇದಕಗಳು (Nociceptors) ಮತ್ತು ನೋವು ಸಂವೇದನಾ ದೇಹಕ್ರಿಯೆ (Nociception)ಯ ಇನ್ನಷ್ಟು ಸಂಶೋಧನೆಗೆ 2021ರ ಶರೀರ ಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಂದಿದೆ. ಆ ಕುರಿತ ಒಂದು ಸರಳ ವ್ಯಾಖ್ಯಾನದ ಲೇಖನವಿದು. ಪಂಚೇಂದ್ರಿಯಗಳಷ್ಟೇ ಅಲ್ಲದೆ ದೇಹದ ತುಂಬೆಲ್ಲಾ ಹಲವಾರು ರೀತಿಯ ನರಗ್ರಾಹಕಗಳಿವೆ. ಅವುಗಳನ್ನು ನರಗ್ರಾಹಿಗಳು ಅಥವಾ ನರಸಂವೇದಕಗಳು ಅಂತಲೂ ಕರೆಯಬಹುದು. ಅವೆಂದರೆ ಸ್ಪರ್ಶ, ಉಷ್ಣ, ನೋವು, ಬೆಳಕು ಹಾಗೂ ರಾಸಾಯನಿಕ ನರಗ್ರಾಹಕಗಳು. ಜಗತ್ತಿನಲ್ಲಿ ಇಂದ್ರಿಯ ಸಂಶೋಧನಾ ವಿಜ್ಞಾನಿಗಳ ಒಂದು ದೊಡ್ಡ ದಂಡೇ ಇದೆ. ವಾಸನೆಯನ್ನು ಗ್ರಹಿಸುವ ಇಂದ್ರಿಯಗಳ ಸಂಶೋಧನೆ ಮಾಡಿದ ವಿಜ್ಞಾನಿಗಳಿಗೆ 2004ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿತು. ಇದೀಗ ನೋವನ್ನು ಗ್ರಹಿಸುವ ನರಗ್ರಾಹಕಗಳನ್ನು ಪತ್ತೆಹಚ್ಚಿದ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ 2021ರ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

ಡೇವಿಡ್ ಜೂಲಿಯಸ್ ಕೊಡುಗೆ

 ಡೇವಿಡ್ ಜೂಲಿಯಸ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕಾಲು ಶತಮಾನದಿಂದ ಅವರ ಸಂಶೋಧನೆಯು ಇದೇ ನರಗ್ರಾಹಕಗಳ ಕ್ಷೇತ್ರದಲ್ಲಿ ಜರುಗಿದೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸಿಸಿನ್ (ಕ್ಯಾಪ್ಸೇಸಿನ್) ಎಂಬ ರಾಸಾಯನಿಕ ವಸ್ತುವನ್ನು ನರಗ್ರಾಹಕಗಳು ಗ್ರಹಿಸಿ ಶಾಖವನ್ನು ಉತ್ಪಾದಿಸುತ್ತವೆ ಎಂಬ ವಿವರಗಳನ್ನು ಅವರು ಪತ್ತೆಹಚ್ಚಿದ್ದಾರೆ. ಕ್ಯಾಪ್ಸೈಸಿನಾಯ್ಡ್ಸಾ ಎಂಬುದು ಮೆಣಿಸಿನಕಾಯಿಯಲ್ಲಿರುವ ರಾಸಾಯನಿಕ ವಸ್ತುಗಳ ಗುಂಪು. ಆ ಗುಂಪಿನ ಸದಸ್ಯರೆಂದರೆ ಕ್ಯಾಪ್ಸಿಸಿನ್, ಡೈಹೈಡ್ರೋಕ್ಯಾಪ್ಸಿಸಿನ್, ನಾರ್‌ಡೈಹೈಡ್ರೋಕ್ಯಾಪ್ಸಿಸಿನ್, ಹೋಮೋಕ್ಯಾಪ್ಸಿಸಿನ್ ಮತ್ತು ಹೋಮೋಡೈಹೈಡ್ರೋಕ್ಯಾಪ್ಸಿಸಿನ್. ಕ್ಯಾಪ್ಸಿಸಿನ್ ಕ್ರಿಯೆಯನ್ನು ನರದ ಸೂಕ್ಷ್ಮ ಎಳೆಗಳು ಹೇಗೆ ಗ್ರಹಿಸುತ್ತವೆ ಎಂದು ಅರಿಯಲು ಜೀನ್‌ಗಳ ಮಟ್ಟದಲ್ಲಿ ಅಧ್ಯಯನ ನಡೆಸಿದರು. ಸಸಾರಜನಕಭರಿತ ಟಿಆರ್‌ಪಿವಿಆರ್1 ಎಂಬ ನರಗ್ರಾಹಿಯನ್ನು ಕಂಡುಹಿಡಿದರು. ಅದು ಕ್ಯಾಪ್ಸಿಸಿನ್ ಜೊತೆಗೆ ಶಾಖವನ್ನೂ ಪತ್ತೆಹಚ್ಚುತ್ತದೆ. ನೋವಿಗೆ ಕಾರಣವಾಗುತ್ತದೆ.

ಆರ್ಡೆಮ್ ಪಟಪೌಟಿಯನ್ ಕೊಡುಗೆ
ಆರ್ಡೆಮ್ ಪಟಪೌಟಿಯನ್ ಅವರು ಲೆಬನಾನ್ ಸಂಜಾತ ಅಮೆರಿಕದ ಆಣ್ವಿಕ ಹಾಗೂ ನರವಿಜ್ಞಾನಿ. ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನಾ ಪ್ರಯೋಗಾಲಯದಲ್ಲಿ ಉದ್ಯೋಗ. ಅವರು ಸ್ಪರ್ಶ ಅಥವಾ ಒತ್ತಡದ ನರಗ್ರಾಹಕಗಳನ್ನು ಪತ್ತೆಹಚ್ಚುವುದರ ಜೊತೆಗೆ ಅಂತಹ ಗ್ರಾಹಕಗಳಲ್ಲಿ ಉಂಟಾಗುವ ಸೋಡಿಯಂ ಮತ್ತು ಕ್ಯಾಲ್ಸಿಯಂ ಅಯಾನ್ ಚಲನಪಾತಿಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇಂತಹ ಅಯಾನ್ ಚಲನಪಾತಿಗಳನ್ನು ಅವರು ಪಿಯಾಜೋ1 ಮತ್ತು ಪಿಯಾಜೋ2 ಎಂದು ಕರೆದಿದ್ದಾರೆ. ಪಿಯಾಜೋ1 ಪಾತಿಯು ಶ್ವಾಸಕೋಶ, ಮೂತ್ರಚೀಲ ಮತ್ತು ಚರ್ಮದಲ್ಲಿರುತ್ತವೆ. ಪಿಯಾಜೋ2 ಪಾತಿಯು ರಕ್ತದೊತ್ತಡ, ಉಸಿರಾಟದ ಒತ್ತಡ, ಮೂತ್ರಚೀಲದ ಒತ್ತಡಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಮೂತ್ರಚೀಲ ಭರ್ತಿಯಾದಾಗ ಮೆದುಳಿಗೆ ನೋವು ತಲುಪುವುದು ಪಿಯಾಜೋ2 ಅಯಾನ್ ಪಾತಿಗಳ ಕಾರ್ಯಕ್ಷಮತೆಯಿಂದಾಗಿಯೇ. ಅದು ಸ್ಪರ್ಶದ ಒತ್ತಡದಿಂದಾಗುವ ನೋವು. ಇದು ಆರ್ಡೆಮ್ ಕೊಡುಗೆಯತ್ತ ಒಂದು ಸರಳನೋಟ.

ಸ್ಪರ್ಶ ಶರೀರವಿಜ್ಞಾನಕ್ಕೆ ಇನ್ನಷ್ಟು ಕೊಡುಗೆ
ಇಲ್ಲಿಯವರೆಗೆ ಶರೀರಕ್ರಿಯಾ ವಿಜ್ಞಾನದ ಅಧ್ಯಯನದಲ್ಲಿ ಹಲವು ಸ್ಪರ್ಶ ನರಗ್ರಾಹಿಗಳನ್ನು ಪತ್ತೆಹಚ್ಚಲಾಗಿದೆ. ಅವುಗಳನ್ನು ಮೆಕಾನೋರಿಸೆಪ್ಟಾರ್ಸ್ ಎಂದು ಕರೆಯಲಾಗಿದೆ. ಅಂತಹ ನರಗ್ರಾಹಕಗಳ ಕೆಲ ಹೆಸರುಗಳೆಂದರೆ ರಫಿನೀಸ್ ನರತುದಿಗಳು, ಮೆರ್ಕಲ್ ಕೋಶಗಳು, ಮೀಸನರ್ಸ್ ಕಣಗಳು, ಕ್ರೌಸ್ ಕಣಗಳು, ಪೆಸಿನಿಯನ್ ಕಣಗಳು. ಇವು ವಿವಿಧ ರೀತಿಯ ಸ್ಪರ್ಶಕ್ಕೆ ಸ್ಪಂದಿಸುವ ನರಗ್ರಾಹಕಗಳು. ಹಾಗೆಯೇ, ತಾಪಮಾನಕ್ಕೆ ಸ್ಪಂದಿಸುವ ನರಗ್ರಾಹಕಗಳು, ನೋವಿನ ನರಗ್ರಾಹಕಗಳು, ಬೆಳಕಿನ ನರಗ್ರಾಹಕಗಳು, ರಾಸಾಯನಿಕ ನರಗ್ರಾಹಕಗಳನ್ನೂ ಪತ್ತೆಹಚ್ಚಲಾಗಿದೆ. ಅವುಗಳ ಕ್ರಿಯೆಗಳನ್ನೂ ಅರಿಯಲಾಗಿದೆ. ಇದೀಗ ಇದೇ ಸಾಲಿನಲ್ಲಿ ಇನ್ನಷ್ಟು ಸ್ಪರ್ಶ, ನೋವು, ತಾಪಮಾನದ ಆಣ್ವಿಕ ನರಗ್ರಾಹಕಗಳನ್ನು 2021ರ ಸಾಲಿನ ನೊಬೆಲ್ ವಿಜೇತರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಪತ್ತೆಹಚ್ಚಿದ್ದಾರೆ.

ತಾಪಮಾನ ನಿಭಾಯಿಸುವ ನರಮಂಡಲ
ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಎಂಬ ವಾದವಿದೆ. ಏರುಪೇರಾದ ವಾತಾವರಣದ ತಾಪಮಾನವನ್ನು ಗ್ರಹಿಸಲು ನರಮಂಡಲದಲ್ಲಿ ಶಾಖ ಮತ್ತು ಥಂಡಿಯನ್ನು ಗ್ರಹಿಸುವ ಸಂವೇದಕಗಳಿವೆ. ದೇಹದ ಚರ್ಮದಲ್ಲಷ್ಟೇ ಅಲ್ಲದೆ ಮೆದುಳು ಬಳ್ಳಿಯಲ್ಲಿಯೂ ಉಷ್ಣಾಂಶದ ಸಂವೇದಕಗಳಿವೆ. ಅಂತಿಮವಾಗಿ, ಮೆದುಳಿನ ಹೈಪೋಥಲಾಮಸ್‌ನಲ್ಲಿರುವ ತಾಪಮಾನ ನಿಗ್ರಹ ಕೇಂದ್ರವು ವಾತಾವರಣದ ಉಷ್ಣಾಂಶದ ಏರುಪೇರನ್ನು ಗ್ರಹಿಸಿ ದೇಹದ ಉಷ್ಣತೆಯನ್ನು 37 ಡಿಗ್ರಿ ಸೆಲ್ಶಿಯಸ್ ಇರುವಂತೆ ಕಾಪಾಡಿಕೊಳ್ಳುತ್ತದೆ. ಹೈಪೋಥಲಾಮಸ್‌ನ ಮುಂಭಾಗವು ದೇಹದ ಉಷ್ಣತೆಯು ಹೆಚ್ಚಾದಾಗ ಶಾಖವನ್ನು ಹೊರಹಾಕುವ ಕ್ರಿಯೆಯಲ್ಲಿ ತೊಡಗುತ್ತದೆ. ಇದು ಪ್ರಮುಖವಾಗಿ ಬೇಸಿಗೆಯ ಕಾಲದ ಶರೀರಕ್ರಿಯೆ. ಹಾಗೆಯೇ, ಹೈಪೋಥಲಾಮಸ್‌ನ ಹಿಂಭಾಗವು ದೇಹದ ಉಷ್ಣತೆಯು ಕಡಿಮೆಯಾದಾಗ ಮೈನಡುಕವನ್ನು ಉಂಟುಮಾಡಿ ಮಾಂಸಖಂಡಗಳಲ್ಲಿ ಶಾಖವನ್ನು ಉತ್ಪಾದಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಇದು ಚಳಿಗಾಲದ ಸಂದರ್ಭದಲ್ಲಿ ಹಾಗೂ ಶೀತ ವಾತಾವರಣದಲ್ಲಿ ಅನುಕೂಲಕರ.

ಆಹಾರದ ರುಚಿಗಳು
ಆಹಾರದ ರುಚಿಗಳೆಂದರೆ ಉಪ್ಪು, ಹುಳಿ, ಸಿಹಿ, ಕಹಿ ಮತ್ತು ಉಮಾಮಿ ಎಂಬ ಐದು ರುಚಿಗಳು. ಇದರಲ್ಲಿ ಖಾರದ ರುಚಿಯನ್ನು ಪಟ್ಟಿಮಾಡಿಲ್ಲ. ಜಪಾನಿಯರು ಉಮಾಮಿ ರುಚಿಯನ್ನು ವಿವರಿಸಿದವರು. ಉಮಾಮಿ ರುಚಿಯು ಮಾಂಸಾಹಾರದಲ್ಲಿರುತ್ತದೆ. ಆಹಾರದ ರುಚಿ ಹೆಚ್ಚಿಸಲು ಬಳಸುವ ಮಾನೋಸೋಡಿಯಂ ಗ್ಲುಟಮೇಟ್ ಕೂಡ ಉಮಾಮಿ ರುಚಿಯನ್ನು ಕೊಡುತ್ತದೆ. ಖಾರ ಹಾಗೂ ಬಿಸಿಬಿಸಿ ಆಹಾರವನ್ನು ಸೇವಿಸಿದಾಗ ನಾಲಗೆಯ ಮೇಲಿನ ನೋವು ನರಗ್ರಾಹಕಗಳು ಉದ್ದೀಪನವಾಗುತ್ತವೆ. ಖಾರ ಮತ್ತು ನಾಲಗೆ ಸುಡುವ ಅತಿಯಾದ ಬಿಸಿಯ ಮಹಿಮೆ ನಮಗೆ ತಿಳಿಯುವುದೇ ನೋವು ನರಗ್ರಾಹಕಗಳ ಮೂಲಕ. ಅತಿ ಬಿಸಿಯಾದ ಕಾಫಿ, ಚಹಾ, ಬಿಸಿನೀರು, ಬಿಸಿ ಆಹಾರ ಸೇವಿಸಿ ಹೌಹಾರುತ್ತೇವೆ. ಆಗ ನರಪ್ರಚೋದನೆಯುಂಟಾಗಿ ಕೊನೆಗೆ ಅದು ಮೆದುಳನ್ನು ತಲುಪುತ್ತದೆ. ಖಾರ ಮತ್ತು ಬಿಸಿಯ ನರಗ್ರಾಹಿಗಳತ್ತ ಡೇವಿಡ್ ಜೂಲಿಯಸ್ ಅವರ ಸಂಶೋಧನೆ ಬೊಟ್ಟುಮಾಡಿದೆ.

ಖಾರ ಮತ್ತು ಬಿಸಿಯ ನರಗ್ರಾಹಕಗಳು
ಮೆಣಸಿನಕಾಯಿಯ ರಾಸಾಯನಿಕ ವಸ್ತುವಾದ ಕ್ಯಾಪ್ಸಿಸಿನ್ ಅನ್ನು ನರಗ್ರಾಹಕಗಳು ಗ್ರಹಿಸುವ ಬಗೆಯನ್ನು ಡೇವಿಡ್ ಜೂಲಿಯಸ್ ವಿವರಿಸಿದ್ದಾರೆ. ದೇಹದ ಯಾವುದೇ ಕೋಶಗಳೊಂದಿಗೆ ಕ್ಯಾಪ್ಸಿಸಿನ್ ವರ್ತಿಸಿದಾಗ ಶಾಖವನ್ನು ಉತ್ಪತ್ತಿಮಾಡಿ ಸುಡುಸುಡುವ ನೋವಿಗೆ ಕಾರಣವಾಗುತ್ತದೆ. ಖಾರದಲ್ಲಿರುವ ಕ್ಯಾಪ್ಸಿಸಿನ್ ಕೂಡ ನಾಲಗೆಯ ಮೇಲಿನ ನೋವು ನರಗ್ರಾಹಕಗಳನ್ನು ಉದ್ದೀಪಿಸಿ ಶಾಖವನ್ನು ಉಂಟು ಮಾಡುತ್ತದೆ. ಕ್ಯಾಪ್ಸಿಸಿನ್‌ನ ಪೂರ್ಣ ರಾಸಾಯನಿಕ ಹೆಸರು 8-ಮೀಥೈಲ್ ಎನ್- ವ್ಯಾನಿಲ್ಲೈಲ್ ಟ್ರಾನ್ಸ್ - 6 ನೋನೆನಮೈಡ್ ಆಗಿರುವುದರಿಂದ ಕ್ಯಾಪ್ಸಿಸಿನ್ ನರಗ್ರಾಹಕಗಳನ್ನು ವ್ಯಾನಿಲ್ಲಾಯ್ಡಾ ಗ್ರಾಹಕಗಳು ಎಂದು ಕರೆಯಲಾಗಿದೆ. ಈ ಗ್ರಾಹಕಗಳೇ ಕ್ಯಾಪ್ಸಿಸಿನ್ ಅನ್ನು ಸ್ವೀಕರಿಸುವುದು. ಇದೇ ಗ್ರಾಹಕಗಳು ಬಿಸಿಯನ್ನೂ ಸ್ವೀಕರಿಸುತ್ತವೆ. ಡೇವಿಡ್ ಜೂಲಿಯಸ್ ಇಂತಹ ನರಗ್ರಾಹಕಗಳನ್ನು ಪತ್ತೆಹಚ್ಚಿ ಅವುಗಳ ಕ್ರಿಯೆಗಳನ್ನು ವಿವರಿಸಿದ್ದಾರೆ. ವ್ಯಾನಿಲ್ಲಾಯ್ಡಾ ನರಗ್ರಾಹಕಗಳನ್ನು VR1 ಎಂಬ ಸಂಕೇತದಿಂದ ಹೆಸರಿಸಲಾಗಿದೆ. ಇವು ದೇಹದ ಬಹುತೇಕ ಭಾಗದಲ್ಲಿವೆ. ಮೆದುಳಿನ ಕಾಂಡ ಹಾಗೂ ಮೆದುಳು ಬಳ್ಳಿಯಲ್ಲಿಯೂ ಇವೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸಿಸಿನ್ ರಾಸಾಯನಿಕ ವಸ್ತುವು VR1 ಅನ್ನು ಉದ್ರೇಕಿಸುತ್ತದೆ. ನರಗಳ ಸಿ ಗುಂಪು ಮತ್ತು ಎ ಡೆಲ್ಟಾ ನೋವು ನರಸಂವೇದಕ ಎಳೆಗಳನ್ನೂ ಉದ್ರೇಕಿಸುತ್ತವೆ. ಈ VR1 ನರಗ್ರಾಹಕವು ಶಾಖಕ್ಕೂ ಸ್ಪಂದಿಸುತ್ತದೆ. ಧನವಿದ್ಯುತ್ ಪ್ರೋಟಾನ್ ಕಣಗಳಿಗೂ ಸ್ಪಂದಿಸುತ್ತದೆ. ಹೀಗೆ VR1 ನರಗ್ರಾಹಕಕ್ಕೂ ಕ್ಯಾಪ್ಸಿಸಿನ್ - ಬಿಸಿ - ಪ್ರೋಟಾನ್ ಕಣಗಳಿಗೂ ಅವಿನಾಭಾವ ಸಂಬಂಧ.

ಆದ್ದರಿಂದಲೇ VR1 ಅನ್ನು ಬಹುರೂಪೀ ಗ್ರಾಹಕವೆನ್ನಬಹುದಾಗಿದೆ. ಖಾರ ಸೇವಿಸಿದರೆ ಬಾಯಿಯಲ್ಲಿ ಬೆಂಕಿ ಖಾರದಲ್ಲಿರುವ ಕ್ಯಾಪ್ಸಿಸಿನ್ ನಾಲಗೆಯ ಮೇಲಿರುವ ವ್ಯಾನಿಲ್ಲಾಯ್ಡಾ ನರಗ್ರಾಹಕಗಳನ್ನು ಚುಚ್ಚುತ್ತದೆ. ಆಗ ನರಗ್ರಾಹಕ ಕೋಶಗಳೊಳಗೆ ನುಗ್ಗುವ ಧನವಿದ್ಯುತ್ ಪ್ರೋಟಾನ್ ಕಣಗಳಾದ ಸೋಡಿಯಂ ಮತ್ತು ಕ್ಯಾಲ್ಸಿಯಂ ಆ ಕೋಶದ ವಿಧ್ರುವೀಕರಣ (ಡೀಪೋಲರೈಸೇಷನ್) ಮಾಡುತ್ತವೆ. ಅಂತಹ ಕೋಶಗಳನ್ನು ಚುಚ್ಚಿ ಉದ್ರೇಕಿಸುತ್ತವೆ. ಬಾಯಿಯಲ್ಲಿ ಬಿಸಿಯನ್ನು ಉಂಟುಮಾಡುತ್ತವೆ. ಬಾಯಿಯ ಬಿಸಿಯು 107.6 ಡಿಗ್ರಿ ಪ್ಯಾರೆನ್‌ಹೀಟ್‌ವರೆಗೆ ತಲುಪುತ್ತದೆ. ಬಿಸಿಯು ನರಮಂಡಲವನ್ನು ತಲುಪುತ್ತದೆ. ನರಮಂಡಲದ ಸಿಂಪಥೆಟಿಕ್ ನರವ್ಯೆಹ ಉದ್ದೀಪನವಾಗುತ್ತದೆ. ಅಡ್ರಿನಾಲಿನ್ ಗುಂಪಿನ ಚೋಧಕಗಳ ಬಿಡುಗಡೆಯಾಗುತ್ತವೆ. ಸೆಕೆ ಉತ್ಪಾದನೆಯಾಗುತ್ತದೆ. ಇದು ದೇಹಕ್ರಿಯೆಯ ಹಾದಿ. ಸೆಕೆಯ ಜೊತೆಗೆ ಸಿಂಬಳದ ಸ್ರವಿಕೆ ಶುರುವಾಗುತ್ತದೆ. ಕಣ್ಣೀರು ಸ್ರವಿಸುತ್ತದೆ. ಮೆದುಳಿನಿಂದ ಎಂಡಾರ್ಫಿನ್ ಎಂಬ ನೈಸರ್ಗಿಕ ನೋವು ನಿವಾರಕ ಉತ್ಪತ್ತಿಯಾಗುತ್ತದೆ. ಇಂತಹ ದೇಹಕ್ರಿಯೆಯನ್ನು ಡೇವಿಡ್ ಜೂಲಿಯಸ್ ವಿವರಿಸಿದ್ದಾರೆ. ಜೊತೆಗೆ ಶಾಖ, ಶೀತ, ಸ್ಪರ್ಶ ಮತ್ತು ಒತ್ತಡದ ಪ್ರಚೋದನೆಗಳು ನರಮಂಡಲಕ್ಕೆ ಹರಡುವ ಬಗೆಯನ್ನು ವಿವರಿಸಿದ್ದಾರೆ.

ನೋವು ನಿವಾರಕ ಔಷಧಗಳ ಸಂಶೋಧನೆಗೆ ದಾರಿದೀಪ

ಹಲವು ರೀತಿಯ ದೈಹಿಕ ನೋವುಗಳಿಗೆ ನೋವು ನಿವಾರಕ ಔಷಧಗಳಾದ ಆಸ್ಪಿರಿನ್, ಅಸೆಟಮೈನೋಫೆನ್, ಇಬುಪ್ರೊಫೆನ್, ಪ್ಯಾರಾಸಿಟಮಾಲ್, ನಿಮೆಸುಲೈಡ್, ಮೆಲೋಕ್ಸಿಕಾಮ್, ಅಸೆಕ್ಲೋಫೆನಾಕ್ ಮುಂತಾದ ಔಷಧಗಳನ್ನು ಬಳಸಲಾಗುತ್ತಿದೆ. ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರ ನೋವು, ಶಾಖ, ಸ್ಪರ್ಶ ನರಗ್ರಾಹಕ ಕ್ರಿಯೆಗಳ ಆಣ್ವಿಕ ಅಧ್ಯಯನವು ಅಡ್ಡಪರಿಣಾಮಗಳಿಲ್ಲದ ನವನವೀನ ನೋವು ನಿವಾರಕ ಔಷಧಗಳ ಪತ್ತೆಗೆ ಅನುಕೂಲವಾಗಬಹುದೆಂದು ಭಾವಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)