varthabharthi


ನಿಮ್ಮ ಅಂಕಣ

ಜನತೆ ಹಾಗೂ ಪರಿಸರಕ್ಕೆ ಮರಣಶಾಸನವಾಗುವ ಅರಣ್ಯ ರಕ್ಷಣಾ ಕಾಯ್ದೆ ತಿದ್ದುಪಡಿಗಳು

ವಾರ್ತಾ ಭಾರತಿ : 12 Oct, 2021
ನಂದಕುಮಾರ್ ಕೆ.ಎನ್.

ಇಲ್ಲಿ ಜನಸಾಮಾನ್ಯರಿಗೆ ಅರಣ್ಯದ ಮೇಲೆ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸುವ, ಅದೇ ವೇಳೆಯಲ್ಲೇ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು ತಮ್ಮ ಬದುಕಿನ ಮೂಲಗಳಿಂದ ಹೊರದಬ್ಬಲ್ಪಡುವ ಪ್ರಕ್ರಿಯೆಗಳಿಗೆ ಹೆಚ್ಚಿನ ಕಾನೂನು ಬಲವನ್ನು ಈ ಪ್ರಸ್ತಾವನೆಗಳು ನೀಡುತ್ತವೆ. ಉದಾಹರಣೆಗೆ ಅಭಿವೃದ್ಧಿಗಾಗಿಯೋ ಅಥವಾ ಅರಣ್ಯ ರಕ್ಷಣೆಗಾಗಿಯೋ ಅರಣ್ಯ ಪ್ರದೇಶಗಳನ್ನು ಖಾಸಗಿ ವ್ಯಕ್ತಿ, ಕಂಪೆನಿ, ಇಲ್ಲವೇ ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸಿದಾಗ ಸಹಜವಾಗಿ ಆ ಅರಣ್ಯ ಪ್ರದೇಶವನ್ನು ಆಧರಿಸಿರುವ ಜನಸಾಮಾನ್ಯರು ತಮ್ಮ ಸಹಜ ಹಕ್ಕುಗಳನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ.


ಅಸ್ಸಾಮಿನ ದಾರಾಂಗ್ ಜಿಲ್ಲೆಯ ಸಿಪ್ ಹಜಾರ್ ಕಂದಾಯ ವಲಯದ ದಾಲ್‌ಪುರ ಹಳ್ಳಿಯಲ್ಲಿ ಇನ್ನೂರರಷ್ಟು ಕುಟುಂಬಗಳು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನೆಲೆಸಿ ತುಂಡು ಭೂಮಿಗಳಲ್ಲಿ ಕೃಷಿ ಮಾಡುತ್ತಿದ್ದವರು. ಈ ಕುಟುಂಬಗಳಿಗೆ ಅಕ್ರಮವಾಸಿಗಳೆಂದು ಹಿಂದಿನ ರಾತ್ರಿ ಸುಮಾರು ಹತ್ತು ಗಂಟೆಯ ವೇಳೆಗೆ ಕೇವಲ ವಾಟ್ಸ್‌ಆ್ಯಪ್ ಮೂಲಕ ಒಕ್ಕಲೆಬ್ಬಿಸುವ ನೋಟಿಸ್ ಕಳುಹಿಸುವ ಶಾಸ್ತ್ರ ಮಾಡಿ ಮಾರನೇ ದಿನ ಅಂದರೆ ಕಳೆದ ಸೆಪ್ಟಂಬರ್ 23ರಂದು ರಾಜ್ಯ ಸರಕಾರದ ಸಶಸ್ತ್ರ ಅರಣ್ಯ ಮತ್ತು ಪೊಲೀಸ್ ಪಡೆಗಳು ದಾಳಿ ಮಾಡಿ ಅವರ ಗುಡಿಸಲುಗಳನ್ನು ಕೆಡವಿಹಾಕಿ ಅವರ ವಸ್ತುಗಳನ್ನು, ಆಹಾರ ಧಾನ್ಯಗಳನ್ನು ಚೆಲ್ಲಾಡಿ ಒಕ್ಕಲೆಬ್ಬಿಸಿ ಬೀದಿಪಾಲು ಮಾಡಲು ತೊಡಗಿದರು. ಈ ಸಂದರ್ಭದಲ್ಲಿ ತಮ್ಮದೇ ಶ್ರಮದಲ್ಲಿ ರೂಪಿಸಿಕೊಂಡ ಬದುಕು ಕಳೆದುಕೊಳ್ಳುವ ಭಯ, ಆತಂಕ, ಸಂಕಟ, ದುಃಖ ಹಾಗೂ ಅಸಹಾಯಕತೆಗಳಿಂದ ಸಹಜವಾಗಿ ಆಕ್ರೋಶಿತರಾದ ಈ ರೈತಾಪಿಗಳು ಪ್ರತಿರೋಧ ತೋರಿದರು. ಹಾಗೆ ಒಣ ಬಡಿಗೆ ಹಿಡಿದು ಪ್ರತಿರೋಧ ತೋರಿದ ಒಬ್ಬ ಬಡ ರೈತ 28 ವರ್ಷದ ಮೊಯಿನುಲ್ ಹಕ್‌ನನ್ನು ಪೊಲೀಸ್ ಪಡೆ ಗುಂಡಿಟ್ಟು ಕಗ್ಗೊಲೆ ಮಾಡುತ್ತದೆ. ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಎಳೆದಾಡಿ ಹೊರಹಾಕಲಾಗುತ್ತದೆ. ಹೊಟ್ಟೆಯ ಸಂಕಟ, ಬದುಕಿನ ಅಸಹಾಯಕತೆ, ನೋವು, ದುಃಖ, ಆಕ್ರಂದನಗಳು ಇಡೀ ಹಳ್ಳಿಯ ಮಹಿಳೆಯರು ಮಕ್ಕಳು ಸೇರಿದಂತೆ ಜನರಲ್ಲಿ ಮಡುಗಟ್ಟುತ್ತದೆ. ಗುಂಡೇಟು ತಿಂದು ನೆಲಕ್ಕೊರಗಿದ ಮೊಯಿನುಲ್ ಹಕ್‌ನ ಶರೀರದ ಮೇಲೆ ಸರಕಾರಿ ಮಾಧ್ಯಮದ ಛಾಯಾಚಿತ್ರಗ್ರಾಹಕ ಬಿಜೊಯ್ ಬನಿಯಾನ ಕ್ರೂರ ವರ್ತನೆಗಳು ಹೆಚ್ಚು ಚರ್ಚಿತವಾಗಿ ಖಂಡನೆಗೂ ಒಳಗಾದವು. ಆದರೆ ಅದರ ಮರೆಯಲ್ಲಿ ಸರಕಾರ ಮತ್ತದರ ಸಶಸ್ತ್ರ ಪಡೆಗಳು ನಡೆಸಿದ ಒಕ್ಕಲೆಬ್ಬಿಸುವಿಕೆ, ದೌರ್ಜನ್ಯ ಮತ್ತು ಕಗ್ಗೊಲೆಗಳ ಹಿಂದಿನ ಕ್ರೌರ್ಯಗಳು ಸರಿಯಾದ ಚರ್ಚೆ ಹಾಗೂ ಖಂಡನೆಗಳಿಗೆ ಒಳಗಾಗದೆ ಹೋಯಿತು. ಇಲ್ಲವೇ ಹಾಗೆ ಆಗದಂತೆ ಮಾಡಲಾಯಿತು.

ಅಸ್ಸಾಂ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಸರಕಾರದ ಒಕ್ಕಲೆಬ್ಬಿಸುವ ಇಂತಹ ವರಸೆಗಳ ಬಗ್ಗೆ ಆತಂಕ ಹೆಚ್ಚಿಸುತ್ತಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನೆಲೆಸಿ ಕೃಷಿ ಮಾಡುತ್ತಿದ್ದ ಬಡ ರೈತಾಪಿಗಳನ್ನು ಯಾವುದೇ ನಿಯಮಾವಳಿಗಳನ್ನು ಪಾಲಿಸದೆ, ಮಾನವಹಕ್ಕುಗಳ ನಿಯಮಗಳನ್ನು ಕೂಡ ಕನಿಷ್ಠ ಪಾಲನೆಯನ್ನೂ ಮಾಡದೆ, ಸರಕಾರಿ ಬಲಪ್ರಯೋಗಗಳ ಮೂಲಕ ಇಷ್ಟು ಹೀನ ಮಟ್ಟದಲ್ಲಿ ಒಕ್ಕಲೆಬ್ಬಿಸಿ ಬಿಸುಡುವಂತಹ ಕ್ರಮಗಳಿಗೆ ಅಸ್ಸಾಮಿನ ಬಿಜೆಪಿ ನೇತೃತ್ವದ ಸರಕಾರ ಮುಂದಾಯಿತು. ಅದನ್ನು ಕೋಮುವಾದಿ ವಿಷ ಹರಡುವ ಮೂಲಕ ಮರೆಸಲು ಹಾಗೆಯೇ ಸಮರ್ಥಿಸಲು ಹೊರಟಿದ್ದು ನಮ್ಮ ಸರಕಾರಿ ವ್ಯವಸ್ಥೆ ಹೇಗೆಲ್ಲಾ ಮತ್ತು ಎಷ್ಟೊಂದು ಪ್ರಮಾಣದಲ್ಲಿ ನಿರಂಕುಶಕರಣಗೊಳ್ಳುತ್ತಾ ಸಾಗುತ್ತಿದೆ ಎನ್ನುವುದನ್ನು ಎತ್ತಿ ತೋರಿಸುವ ಇತ್ತೀಚಿನ ಮತ್ತೊಂದು ಉದಾಹರಣೆಯಾಗಿದೆ. ಪೌರತ್ವ ನೋಂದಣಿ ಕಾಯ್ದೆಗಳು, ರೈತ ತಿದ್ದುಪಡಿ ಕಾಯ್ದೆಗಳು, ಕಾರ್ಮಿಕ ತಿದ್ದುಪಡಿ ಕಾಯ್ದೆಗಳು, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳು, ರಾಷ್ಟ್ರೀಯ ಶಿಕ್ಷಣ ನೀತಿ, ಹೊಸ ಕಾರ್ಮಿಕ ಕಾಯ್ದೆ ಇತ್ಯಾದಿಗಳು ಸಂಪೂರ್ಣ ಅರ್ಥದಲ್ಲಿ ಪೂರ್ಣವಾಗಿ ಜಾರಿಯಾಗುವುದಾದರೆ ಅದರ ಪರಿಣಾಮ ಈ ದೇಶದ ತಳಪಾಯದ ಜನಸಾಮಾನ್ಯರ ಮೇಲೆ, ರೈತಾಪಿಗಳ ಮೇಲೆ, ಅಲ್ಪಸಂಖ್ಯಾತರು, ಮಧ್ಯಮ, ಮೇಲ್ಮಧ್ಯಮ, ಇನ್ನಿತರ ಜನವರ್ಗಗಳ ಮೇಲೆ ಹೇಗೆಲ್ಲಾ ಆಗಬಹುದು ಎಂಬುದರ ಮುನ್ಸೂಚನೆಗಳೇ ಇಂತಹ ಘಟನೆಗಳಾಗಿವೆ ಎನ್ನುವುದನ್ನು ಗ್ರಹಿಸಬೇಕಾದ ಅಗತ್ಯವಿದೆ.

ಇದಕ್ಕೆ ಅರಣ್ಯ ಕಾಯ್ದೆಗೆ ಈಗ ತರಲು ಹೊರಟಿರುವ ತಿದ್ದುಪಡಿಗಳು ಹೊಸ ಸೇರ್ಪಡೆಯಾಗುತ್ತಿವೆ. ಬ್ರಿಟಿಷ್ ವಸಾಹತುಶಾಹಿಯು ತನ್ನ ಅರಣ್ಯ ಲೂಟಿಯ ಅನುಕೂಲಕ್ಕೆ ತಕ್ಕಂತೆ ಅರಣ್ಯ ಕಾಯ್ದೆಯನ್ನು ರೂಪಿಸಿತು. ಅದೇ ಅರಣ್ಯ ಕಾಯ್ದೆಯನ್ನು ಉಳಿಸಿಕೊಂಡು ಬ್ರಿಟಿಷರ ನಂತರದ ಏಳು ದಶಕಗಳ ಕಾಲದಲ್ಲಿ ಆಳುತ್ತಾ ಬಂದ ಸರಕಾರಗಳು ಅರಣ್ಯ ರಕ್ಷಣೆಯ ಹೆಸರಿನಲ್ಲೇ ಹಲವಾರು ತಿದ್ದುಪಡಿಗಳನ್ನು ಮಾಡುತ್ತಾ ಬಂದಿವೆ. ಅದರ ಭಾಗವಾಗಿಯೇ ಮೀಸಲು ಅರಣ್ಯ, ಗೋಮಾಳ, ರಕ್ಷಿತಾರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ, ಆನೆ ಕಾರಿಡಾರ್ ಇತ್ಯಾದಿಗಳ ಹೆಸರಿನಲ್ಲಿ ಆದಿವಾಸಿ ಇನ್ನಿತರ ಮೂಲನಿವಾಸಿ ಜನರನ್ನು ಒಕ್ಕಲೆಬ್ಬಿಸುವ ಕಾರ್ಯಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಾಡುತ್ತಾ ಬರಲಾಗಿದೆ. ಇದರ ಜೊತೆಯಲ್ಲೇ ಅಂತಹ ರಕ್ಷಿತ ಅರಣ್ಯ ಪ್ರದೇಶಗಳಲ್ಲಿಯೇ ಭಾರೀ ಗಣಿಗಾರಿಕೆಗಳನ್ನು, ಪ್ರವಾಸೋದ್ದಿಮೆ ಹೆಸರಿನ ತಾರಾ ರೆಸಾರ್ಟ್‌ಗಳನ್ನು, ಜಲಾಶಯ, ವಿದ್ಯುತ್, ರಸ್ತೆ ಇತ್ಯಾದಿ ಯೋಜನೆಗಳಿಗಾಗಿ ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಬಿಟ್ಟುಕೊಡುವ ಕಾರ್ಯಗಳನ್ನೂ ಮಾಡುತ್ತಾ ಬರಲಾಗಿದೆ. ಇವೆಲ್ಲವನ್ನೂ ಪರಿಸರ ಹಾಗೂ ಅರಣ್ಯ ರಕ್ಷಣೆಯ ಹೆಸರಿನಲ್ಲೇ ಮಾಡಲಾಗಿದೆ ಎಂಬುದನ್ನೂ ಸ್ಪಷ್ಟವಾಗಿ ಗಮನಿಸಬೇಕು. ಅದೇ ವೇಳೆ ಒಕ್ಕಲೆಬ್ಬಿಸಿ ಬಿಸುಡಿದ ಲಕ್ಷಾಂತರ ಜನಸಾಮಾನ್ಯರಿಗೆ ಕನಿಷ್ಠ ಪರ್ಯಾಯಗಳನ್ನೂ ಕೂಡ ಒದಗಿಸದೆ ಅವರ ಬದುಕುಗಳನ್ನೇ ಬರ್ಬಾದು ಮಾಡಿರುವ ದೊಡ್ಡ ಪರಂಪರೆಯೇ ಇದೆ. ಕರ್ನಾಟಕದಲ್ಲೂ ನಾಗರಹೊಳೆ, ಬಂಡೀಪುರ, ಮೂಡಿಗೆರೆಯ ತತ್ಕೊಳ, ಕಾರವಾರದ ಸೀಬರ್ಡ್ ಮೊದಲಾದ ಕಡೆಗಳಲ್ಲಿ ಸರಕಾರಗಳು ಬಲವಂತದ, ಹಾಗೆಯೇ ಹಿಂಸಾತ್ಮಕವಾಗಿ ಆದಿವಾಸಿ, ಇನ್ನಿತರ ಜನಸಮುದಾಯಗಳನ್ನು ಒಕ್ಕಲೆಬ್ಬಿಸಿ ಬದುಕು ನಾಶ ಮಾಡಿ ಬೀದಿಪಾಲು ಮಾಡಿರುವ ಉದಾಹರಣೆಗಳಿವೆ. ಈಗಾಗಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದ ಕುದುರೆಮುಖ, ಕೊಲ್ಲೂರು ಮೊದಲಾದ ಅರಣ್ಯ ಪ್ರದೇಶಗಳ ಜನರಿಗೆ ತೆರವುಗೊಳಿಸುವ ನೋಟಿಸ್‌ಗಳನ್ನು ನೀಡುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂದರೆ ಹಿಂದಿನಿಂದ ಇದ್ದ ಕಾನೂನುಗಳ ಹೆಸರಿನಲ್ಲೇ ಇಷ್ಟೆಲ್ಲಾ ಅಕ್ರಮಗಳು ಸರಕಾರಗಳಿಂದ ನಡೆದಿವೆ ಎಂದ ಮೇಲೆ ಇನ್ನು ಭಾರೀ ಕಾರ್ಪೊರೇಟ್‌ಗಳ ಕೈಯಲ್ಲಿ ಈ ಪ್ರದೇಶಗಳೆಲ್ಲ ಸೇರಿಕೊಂಡರೆ ಜನರು ಹಾಗೂ ಪರಿಸರದ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಊಹಿಸಿದರೆ ಭಯವಾಗುತ್ತದೆ. ಮೊನ್ನೆ ಅಸ್ಸಾಮಿನಲ್ಲಿ ನಡೆದದ್ದಕ್ಕಿಂತಲೂ ಭೀಕರವಾದ ರೀತಿಯ ಘಟನೆಗಳು ದೇಶದ ತುಂಬೆಲ್ಲಾ ವಿಪರೀತವೆನ್ನುವಷ್ಟು ಹೆಚ್ಚಬಹುದು.

ಈಗ ಒಕ್ಕೂಟ ಸರಕಾರ ಬಹಿರಂಗವಾಗಿ ಪ್ರಸ್ತಾಪಿಸಿರುವ 'ಅರಣ್ಯ ರಕ್ಷಣಾ ಕಾಯ್ದೆ 1980'ಕ್ಕೆ ಮಾಡಲು ಹೊರಟಿರುವ ತಿದ್ದುಪಡಿಗಳು ಹಿಂದಿನಿಂದ ನಡೆದುಕೊಂಡು ಬಂದವುಗಳ ಉನ್ನತ ಹಂತದ ತಿದ್ದುಪಡಿಗಳಾಗಿವೆ. ಇದು ಕೂಡ ಅರಣ್ಯ ಹಾಗೂ ಪರಿಸರ ರಕ್ಷಣೆಯ ಹೆಸರಿನಲ್ಲೇ ಮಾಡಲಾಗುತ್ತಿದೆ. ಸಾರ್ವಜನಿಕ ಆಕ್ಷೇಪಣೆಗಳಿಗೆ ನೀಡಬೇಕಾದ 30 ದಿನಗಳ ಕಾಲಾವಕಾಶದ ಬದಲಾಗಿ ಹದಿನೈದು ದಿನಗಳ ಕಾಲಾವಕಾಶ ಕೊಟ್ಟು ಈ ಪ್ರಸ್ತಾವನೆಗಳನ್ನು ಪ್ರಕಟಿಸಲಾಗಿದೆ. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ತಿದ್ದುಪಡಿ ಪ್ರಸ್ತಾವನೆಗಳಿವೆಯೇ ಹೊರತು ದೇಶದ ಇತರ ಯಾವುದೇ ಭಾಷೆಗಳಲ್ಲಿ ಇಲ್ಲ. ರಾಜ್ಯ ಸರಕಾರಗಳು, ಒಕ್ಕೂಟ ಆಡಳಿತ ಪ್ರದೇಶಗಳ ಆಡಳಿತಗಳಿಗೆ ಕಳುಹಿಸಿ ಬಹಿರಂಗವಾಗಿಸಿರುವ ತಿದ್ದುಪಡಿ ಪ್ರಸ್ತಾವನೆಗಳಲ್ಲಿ 'ಅರಣ್ಯ ರಕ್ಷಣಾ ಕಾಯ್ದೆ 1980'ರ ಕಲಮು 1 ಮತ್ತು 2ಕ್ಕೆ ತಿದ್ದುಪಡಿಗಳನ್ನು ತಂದು ಅಭಿವೃದ್ಧಿ ಹೆಸರಿನ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ಮಾಡುವ ಸ್ಪಷ್ಟ ಉದ್ದೇಶವಿದೆ. ಅದರ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ತೋಟಗಾರಿಕೆ (ಪ್ಲಾಂಟೇಶನ್) ತೈಲ ಉತ್ಖನನ, ಅರಣ್ಯ ಪ್ರವಾಸೋದ್ದಿಮೆ ಮತ್ತು ವ್ಯೆಹತಾಂತ್ರಿಕ ಯೋಜನೆಗಳಿಗೆ ಅರಣ್ಯ ರಕ್ಷಣಾ ಕಾಯ್ದೆ ಯಾವುದೇ ತಡೆಯಾಗದಂತೆ ಮಾಡುವುದು, ರಾಜ್ಯ ಸರಕಾರಗಳಿಗೆ ಅರಣ್ಯ ಪ್ರದೇಶಗಳನ್ನು ವ್ಯಕ್ತಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳಿಗೆ ಭೋಗ್ಯಕ್ಕೆ ನೀಡಬಹುದಾದ ಪೂರ್ಣ ಅಧಿಕಾರ ನೀಡುವುದು, ಖಾಸಗಿ ಅರಣ್ಯ ಪ್ರದೇಶಗಳನ್ನು ನಿರ್ಮಿಸುವುದು, ಅರಣ್ಯ ಪ್ರದೇಶಗಳಲ್ಲಿ ಸರ್ವೇಕ್ಷಣೆ, ವಿಚಕ್ಷಣೆ, ತನಿಖೆ ಇತ್ಯಾದಿಗಳನ್ನು ನಡೆಸಲು ಯಾವುದೇ ಅಡ್ಡಿಗಳು ಇಲ್ಲದಂತೆ ಮಾಡುವುದು, ರೈಲು, ರಸ್ತೆ ಇತ್ಯಾದಿ ಯೋಜನೆಗಳಿಗಾಗಿ 1980ಕ್ಕೂ ಮೊದಲು ಸ್ವಾಧೀನ ಪಡಿಸಿದ ಅರಣ್ಯ ಭೂಮಿಗಳಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಅರಣ್ಯ ಇಲಾಖೆಯ ಅನುಮತಿಯ ಅವಶ್ಯಕತೆಯನ್ನು ಇಲ್ಲವಾಗಿಸುವುದು ಸೇರಿವೆ. ಅಲ್ಲದೆ ಅಗತ್ಯವೆಂದಾದಲ್ಲಿ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನ ಯೋಜನೆಗಳನ್ನು ಜಾರಿಗೊಳಿಸಲು ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಳದ್ದಾಗಿದೆ.

ಒಟ್ಟಿನಲ್ಲಿ ಅರಣ್ಯ ರಕ್ಷಣೆಗಾಗಿ ಈ ಹಿಂದೆ ಇದ್ದ ಕಾನೂನಾತ್ಮಕ ರಕ್ಷಣೆಗಳನ್ನೂ ಕೂಡ ಇಲ್ಲವಾಗಿಸಿ ನೇರವಾಗಿ ಮತ್ತು ಪರೋಕ್ಷವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಅರಣ್ಯ ಪ್ರದೇಶಗಳನ್ನು ಬಿಟ್ಟುಕೊಡಲು ಮಾಡುತ್ತಿರುವ ಅರಣ್ಯ ರಕ್ಷಣೆಯ ಹೆಸರಿನ ಕಸರತ್ತು ಇವುಗಳಾಗಿವೆ ಎಂಬುದು ಸ್ಪಷ್ಟ. ಇಲ್ಲಿ ಜನಸಾಮಾನ್ಯರಿಗೆ ಅರಣ್ಯದ ಮೇಲೆ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸುವ, ಅದೇ ವೇಳೆಯಲ್ಲೇ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು ತಮ್ಮ ಬದುಕಿನ ಮೂಲಗಳಿಂದ ಹೊರದಬ್ಬಲ್ಪಡುವ ಪ್ರಕ್ರಿಯೆಗಳಿಗೆ ಹೆಚ್ಚಿನ ಕಾನೂನು ಬಲವನ್ನು ಈ ಪ್ರಸ್ತಾವನೆಗಳು ನೀಡುತ್ತವೆ. ಉದಾಹರಣೆಗೆ ಅಭಿವೃದ್ಧಿಗಾಗಿಯೋ ಅಥವಾ ಅರಣ್ಯ ರಕ್ಷಣೆಗಾಗಿಯೋ ಅರಣ್ಯ ಪ್ರದೇಶಗಳನ್ನು ಖಾಸಗಿ ವ್ಯಕ್ತಿ, ಕಂಪೆನಿ, ಇಲ್ಲವೇ ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸಿದಾಗ ಸಹಜವಾಗಿ ಆ ಅರಣ್ಯ ಪ್ರದೇಶವನ್ನು ಆಧರಿಸಿರುವ ಜನಸಾಮಾನ್ಯರು ತಮ್ಮ ಸಹಜ ಹಕ್ಕುಗಳನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ. ಆದಿವಾಸಿ ಇನ್ನಿತರ ಜನಸಮುದಾಯಗಳ ಸಮರಶೀಲ ಹೋರಾಟಗಳ ಹಿನ್ನೆಲೆಯಲ್ಲಿ ಯುಪಿಎ ಸರಕಾರ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ಜಾರಿಗೆ ತಂದ 'ಅರಣ್ಯ ಹಕ್ಕು ಕಾಯ್ದೆ-2006'ನ್ನು ಕೂಡ 2019ರಲ್ಲಿ ಮೋದಿ ಸರಕಾರ ಬದಲಿಸಿ ಮೂಗಿಗೆ ಸವರಲು ತುಪ್ಪವೇ ಇಲ್ಲದಂತೆ ಮಾಡಿಟ್ಟಿದೆ. ಅಂದರೆ 2006ರ ಅರಣ್ಯ ಹಕ್ಕು ಕಾಯ್ದೆಯ ಕಲಮುಗಳನ್ನು ಸಡಿಲಿಸಿ ಗ್ರಾಮ ಸಭೆ ಹಾಗೂ ಮೂಲನಿವಾಸಿ ಜನರಿಗೆ ಅರಣ್ಯಗಳ ಮೇಲೆ ಒಂದು ಮಟ್ಟದಲ್ಲಿ ಇದ್ದ ಶಾಸನಬದ್ಧ ಹಕ್ಕು ಹಾಗೂ ರಕ್ಷಣೆಗಳನ್ನೂ ಅನೂರ್ಜಿತಗೊಳ್ಳುವಂತೆ ಮಾಡಿದೆ. ಈಗಂತೂ ಆ ಕಾಯ್ದೆಯೇ ಸಂಪೂರ್ಣವಾಗಿ ಅಪ್ರಸ್ತುತವಾಗಿಬಿಡುತ್ತದೆ. ಬ್ರಿಟಿಷ್ ಆಡಳಿತ ತನ್ನ ಹಿತಾಸಕ್ತಿಗಾಗಿ ಜಾರಿಗೆ ತಂದ 'ಅರಣ್ಯ ಕಾಯ್ದೆ-1927'ರ ಕಲಮುಗಳಿಗಿಂತಲೂ ಹಲವು ಪಟ್ಟು ಜನವಿರೋಧಿ ಹಾಗೂ ಪರಿಸರವಿರೋಧಿ ಕಲಮುಗಳು ಸೇರ್ಪಡೆಗೊಳ್ಳುತ್ತಾ ಬಂದು ಇದೀಗ ದೇಶದ ಒಟ್ಟು ಅರಣ್ಯ ಪ್ರದೇಶ, ಗೋಮಾಳ, ಭೂಸಂಪತ್ತುಗಳನ್ನು ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ಯಾವುದೇ ಕಾನೂನಾತ್ಮಕ ಅಡ್ಡಿ ಆತಂಕ ಇಲ್ಲದೆ ತೆರೆದಿಡುವ ಹುನ್ನಾರಗಳ ಮುಂದುವರಿದ ಭಾಗ ಇದಾಗಿದೆ.

ಈಗ ಮಾಡಲು ಹೊರಟಿರುವ ತಿದ್ದುಪಡಿಗಳು ಗ್ರಾಮ ಸಭೆ, ಪಂಚಾಯತ್ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಾ ಬಂದಿರುವ ಜನರಿಗೆ ಯಾವುದೇ ಹಕ್ಕು ಇಲ್ಲದಂತೆ ಮಾಡುವುದಲ್ಲದೆ, ಈ ಬಗ್ಗೆ ಫಾರೆಸ್ಟ್ ಸೆಟ್ಲ್‌ಮೆಂಟ್ ಆಫೀಸರ್ ಬಳಿ ಇಲ್ಲವೇ ಅರಣ್ಯ ಅಧಿಕಾರಿಗಳನ್ನು ಹೊಂದಿರುವ ಸಮಿತಿಯ ಬಳಿ, ನಿಗದಿತ ಪ್ರದೇಶದ ನ್ಯಾಯಾಲಯ ಹೊರತುಪಡಿಸಿ ಬೇರೆ ಯಾವುದೇ ಉನ್ನತ ನ್ಯಾಯಾಲಯಗಳಲ್ಲೂ ಪ್ರಶ್ನೆ ಮಾಡಲಾಗದಂತೆ ಮಾಡುತ್ತದೆ. ಹಾಗಾಗಿಯೇ ಇದು ದೇಶದ ಜನಸಾಮಾನ್ಯರಿಗೆ ಬ್ರಿಟಿಷ್ ಆಡಳಿತ ಜಾರಿಗೆ ತಂದಿದ್ದ ಅರಣ್ಯ ಕಾಯ್ದೆಗಿಂತಲೂ ಹಲವು ಪಟ್ಟು ಅಪಾಯಕಾರಿಯಾಗಿ ವರ್ತಿಸುತ್ತದೆ. ಜೊತೆಗೆ 2019ರಲ್ಲಿ ಪ್ರಸ್ತಾಪಿತವಾದ ಅರಣ್ಯ ಕಾಯ್ದೆ ತಿದ್ದುಪಡಿಗಳ ಮೂಲಕ ಅರಣ್ಯ ಇಲಾಖೆಗೆ ಇನ್ನಿಲ್ಲದ ಅಧಿಕಾರಗಳ ಜೊತೆಗೆ ಜನರನ್ನು ತಾವೇ ನೇರವಾಗಿ ಬಂಧಿಸಿ ದಂಡಿಸುವ ಅಧಿಕಾರವನ್ನೂ ನೀಡಿತ್ತು. ಅದಕ್ಕೆ 'ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್' ಎಂಬ ಪದನಾಮವೊಂದನ್ನು ಸಂಬಂಧಿತ ಅರಣ್ಯ ಅಧಿಕಾರಿಗೆ ನೀಡಿತ್ತು. ಈ ಅಧಿಕಾರಿ ನೇರವಾಗಿ ಜನವಸತಿಯಿರುವ ಪ್ರದೇಶವೂ ಸೇರಿದಂತೆ ಯಾವುದೇ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸಿ ವಶಪಡಿಸಿಕೊಳ್ಳುವ, ದಾಳಿ ನಡೆಸುವ, ತನಿಖೆ ನಡೆಸುವ, ಬಂಧಿಸುವ, ಪ್ರಕರಣ ದಾಖಲಿಸುವಿಕೆ, ವಿಚಾರಣೆ ನಡೆಸುವ ಜೊತೆಗೆ ಕ್ರಮಗಳನ್ನೂ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದ. ಈಗದರ ಮುಂದುವರಿದ ರೂಪಗಳಾಗಿ ಈ ಹಿಂದೆ ಅರಣ್ಯ ಪ್ರದೇಶವೆಂದು ಪರಿಗಣಿತವಾಗಿರುವ ಪ್ರದೇಶಗಳನ್ನು ಅರಣ್ಯ ಪ್ರದೇಶಗಳಲ್ಲ, ಈ ಹಿಂದೆ ಅರಣ್ಯ ಪ್ರದೇಶವಲ್ಲ ಎಂದು ಪರಿಗಣಿತವಾಗಿರುವುದನ್ನು ಅರಣ್ಯ ಪ್ರದೇಶ ಎಂದು ತೀರ್ಮಾನಿಸಬಹುದಾದ ಅಧಿಕಾರವನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತದೆ.

ಅದಕ್ಕೆ ಸ್ಥಳೀಯ ಆಡಳಿತ ಇಲ್ಲವೇ ಗ್ರಾಮಸಭೆಗಳ, ಸ್ಥಳೀಯ ಜನರ ಯಾವುದೇ ಅನುಮತಿ ಕೂಡ ಬೇಕಾಗಿಲ್ಲ. ಅಲ್ಲದೆ ಅರಣ್ಯ ಪ್ರದೇಶವೆಂದು ಗುರುತಿಸಿರದ ಅರಣ್ಯವಿರುವ ಭೂಪ್ರದೇಶವನ್ನು ಕೂಡ ಅರಣ್ಯ ಪ್ರದೇಶವೆಂದೇ ಪರಿಗಣಿಸಿರುವ ಹಿಂದಿನ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನೂರ್ಜಿತಗೊಳಿಸುವ ಉದ್ದೇಶ ಕೂಡ ಈ ತಿದ್ದುಪಡಿ ಪ್ರಸ್ತಾವನೆಗಳಿಗೆ ಇದೆ. ಅದರ ಮುಂದಿನ ಭಾಗವೇ ಈಗ ಉದ್ದೇಶಿಸಿರುವ 'ಅರಣ್ಯ ರಕ್ಷಣಾ ಕಾಯ್ದೆ-1980'ಕ್ಕೆ ತರಲು ಹೊರಟಿರುವ ತಿದ್ದುಪಡಿಗಳಾಗಿವೆ. ಅಂದರೆ ಅರಣ್ಯ ರಕ್ಷಣೆಗೆ ಯಾವುದೇ ಶಾಸನಾತ್ಮಕ ಭದ್ರತೆಗಳನ್ನು ಮುಕ್ತಗೊಳಿಸಿ ಅದನ್ನು ಅರಣ್ಯ ಇಲಾಖೆಯ ಮೂಲಕವೋ ರಾಜ್ಯ ಸರಕಾರದ ಮೂಲಕವೋ ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ನೇರವಾಗಿ ಹಸ್ತಾಂತರಿಸಲು ಅನುಕೂಲ ಮಾಡಿಕೊಳ್ಳುವ ತಿದ್ದುಪಡಿಗಳು ಇವಾಗಿವೆ. ಬ್ರಿಟಿಷ್ ವಸಾಹತುಶಾಹಿ ಲೂಟಿಗೆ ಭಾರೀ ಪ್ರತಿರೋಧ ಒಡ್ಡಿದ್ದ ಈ ದೇಶದ ಮೂಲನಿವಾಸಿ ಸಮುದಾಯಗಳನ್ನು ಅಪರಾಧಿ ಬುಡಕಟ್ಟುಗಳು, ಪುಂಡುಕೋರ ಬುಡಕಟ್ಟುಗಳು ಇತ್ಯಾದಿ ಪದವಿಶೇಷಣಗಳ ಮೂಲಕ ಗುರುತಿಸಿ ಅವಮಾನ ಮಾಡಲಾಗಿತ್ತು. ಅರಣ್ಯ ಪ್ರದೇಶಗಳಲ್ಲಿ ಬದುಕು ನಡೆಸುತ್ತಿದ್ದ ಅವರನ್ನು ಮೂಲ ನೆಲೆಗಳಿಂದ ಒಕ್ಕಲೆಬ್ಬಿಸಿ ಆ ಪ್ರದೇಶಗಳ ಕಾಡುತ್ಪತ್ತಿ, ನಾಟಾ ಮರಮುಟ್ಟುಗಳ ಮೇಲೆ ಆಧಿಪತ್ಯ ಸಾಧಿಸಲು ನಿರಂತರ ಪ್ರಯತ್ನ ನಡೆಸಿತ್ತು.

ಬ್ರಿಟಿಷರ ನೇರ ವಸಾಹತು ಆಡಳಿತ ಕೊನೆಗೊಂಡು ಏಳು ದಶಕಗಳು ಕಳೆದ ನಂತರ ಈ ದೇಶದ ಭೂಮಿ ಮತ್ತು ಅರಣ್ಯ ಸಂಪತ್ತಿನ ಮೇಲೆ ಭಾರೀ ಕಾರ್ಪೊರೇಟ್‌ಗಳ ಆಧಿಪತ್ಯ ಪೂರ್ಣವಾಗಿ ಸ್ಥಾಪನೆಯಾಗುವತ್ತ ಸಾಗುತ್ತಿದೆ. ಅದಕ್ಕಾಗಿಯೇ ಭಾರೀ ಯೋಜನೆಗಳು ಜಾರಿಯಾಗುತ್ತಿವೆ. ಅದಕ್ಕಾಗಿ ಭಾರೀ ಸಂಖ್ಯೆಯಲ್ಲಿ ಮರಗಳನ್ನು ಕಡಿದು ಬೆಟ್ಟಗುಡ್ಡಗಳನ್ನು ಅಗೆದು ಬಗೆಯಲಾಗುತ್ತಿದೆ. ಇದರ ಭಾಗವಾಗಿಯೇ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ದೊಡ್ಡ ರಸ್ತೆಗಳು ನಿರ್ಮಾಣವಾಗುತ್ತಿವೆ. ಧಾರ್ಮಿಕ ಕಾರ್ಪೊರೇಟ್‌ಗಳಿಗೂ ಇದರ ಲಾಭ ಆಗುತ್ತಿದೆ. ಈ ಧಾರ್ಮಿಕ ಕಾರ್ಪೊರೇಟ್‌ಗಳನ್ನು ಪ್ರವಾಸೋದ್ದಿಮೆಯ ಭಾಗವಾಗಿಸಲಾಗುತ್ತಿದೆ.

ಈ ಹಿಂದೆ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳು ನಯನಾಜೂಕಿನಿಂದ ಶಿಫಾರಸು ಮಾಡಿದವುಗಳನ್ನೇ ಮೂಲಭೂತವಾಗಿ 'ಅರಣ್ಯ ರಕ್ಷಣಾ ಕಾಯ್ದೆ-1980'ಕ್ಕೆ ತಿದ್ದುಪಡಿಗಳಾಗಿ ತರಲಾಗುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಒಂದೇ ವ್ಯತ್ಯಾಸ ಎಂದರೆ ಕೇವಲ ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾಗಿದ್ದ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡಲಾಗುತ್ತಿದೆ ಅಷ್ಟೇ.\

ಮಿಂಚಂಚೆ: nandakumarnandana67@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)