varthabharthi


ಕರ್ನಾಟಕ

''ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ'' ಎಂದ ಸಿದ್ದರಾಮಯ್ಯ

'ಆ್ಯಕ್ಷನ್ ಆ್ಯಂಡ್ ರಿಯಾಕ್ಷನ್' ಹೇಳಿಕೆ; ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸಾಮಾಜಿಕ ತಾಣಗಳಲ್ಲಿ ಒತ್ತಾಯ

ವಾರ್ತಾ ಭಾರತಿ : 13 Oct, 2021

ಬೆಂಗಳೂರು: ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೈತಿಕ ಪೊಲೀಸ್‌ ಗಿರಿ ವಿಚಾರಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆಗೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತವಾಗಿದ್ದು, ಇದೀಗ #CMSupportsMoralPolicing #ResignKarnatakaCM ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ನೆಟ್ಟಿಗರು ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

''ಅನೈತಿಕ ಪೊಲೀಸ್‌ ಗಿರಿ ವಿಚಾರವು ತುಂಬಾ ಸೂಕ್ಷ್ಮವಾಗಿರುತ್ತದೆ. ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆ್ಯಕ್ಷನ್ ಆ್ಯಂಡ್ ರಿಯಾಕ್ಷನ್ ಆಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದರು. 

''ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ. ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ?'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ #CMSupportsMoralPolicing ಹ್ಯಾಶ್ ಟ್ಯಾಗ್ ಜೊತೆಗೆ  ಟ್ವೀಟ್ ಮಾಡಿದ್ದಾರೆ. 

ಇನ್ನು ಸಾವಿರಾರು ಮಂದಿ ಟ್ವೀಟ್ ಮಾಡಿ ಅನೈತಿಕ ಪೊಲೀಸ್ ಗಿರಿಗೆ ಪರೋಕ್ಷ ಬೆಂಬಲ ನೀಡುವ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)