varthabharthi


ಕರ್ನಾಟಕ

ಭೂಕಂಪನ: ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ತುರ್ತು ಸಭೆ

ವಾರ್ತಾ ಭಾರತಿ : 13 Oct, 2021

ಕಲಬುರಗಿ: ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕುಗಳಲ್ಲಿ ಭೂಮಿ ಕಂಪನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಪತ್ತು ಸಂಭವಿಸಿದಲ್ಲಿ ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ತುರ್ತು ಸಭೆಯ ಅಧ್ಯಕ್ಷತೆ ವಹಿಸಿದ ಮಾತನಾಡಿದ ಜಿಲ್ಲಾಧಿಕಾರಿಗಳು, ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದು, ಅವರಿಗೆ ಅಧಿಕಾರಿಗಳು ಧೈರ್ಯ ತುಂಬುವ ಕೆಲಸ ಮಾಡಬೇಕು. ಇದಲ್ಲದೇ ಜನರಲ್ಲಿ ಭೂಕಂಪನದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ ಎಂದರು.

ಜಿಲ್ಲೆಯೂ ಈಗಾಗಲೇ ಅನೇಕ ನೈಸರ್ಗಿಕ ವಿಕೋಪಗಳನ್ನು ಕಂಡಿದೆ. ಅದನ್ನು ಯಶಸ್ವಿಯಾಗಿ ಎದುರಿಸಿದ ಜಿಲ್ಲಾಡಳಿತಕ್ಕೆ ಇದೀಗ ಭೂ ಕಂಪನದ ಸಮಸ್ಯೆ ಎದುರಾಗಿದೆ. ಹೀಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯೂ ಯಾವುದೇ ದುರಂತ ಎದುರಾರೂ ಸರ್ವ ಸನ್ನದ್ಧವಾಗಬೇಕು. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸಹ ಎಲ್ಲಾ ಅಧಿಕಾರಗಳು ಚಾಚೂತಪ್ಪದೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಪ್ರವಾಹ ಸಂದರ್ಭದಲ್ಲಿ ನಿಯೋಜಿಸಲಾದ ಅಧಿಕಾರಿಗಳೇ ಇಲ್ಲೂ ಸಹ ನೋಡಲ್ ಅಧಿಕಾರಿಗಳಾಗಿ ಮುಂದುವರೆದು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು : ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ರೀತಿಯಲ್ಲೇ ಸಮರೋಪಾದಿಯಲ್ಲಿ ಶ್ರಮಿಸಬೇಕು. ಭಾದಿತವಾಗುವ ಸ್ಥಳಗಳಲ್ಲಿ ಅವಶ್ಯಕವಿರುವವರಿಗೆ ಸಾಮೂಹಿಕ ಶೆಡ್‍ಗಳ ನಿರ್ಮಾಣ ಮಾಡಬೇಕು. ಶೇಡ್‍ಗಳಲ್ಲಿ ಊಟ, ನೀರು, ಹಾಸಿಗೆ, ಬೆಡ್‍ಶೀಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಭೂಮಿ ಕಂಪಿಸಿರುವ ಗ್ರಾಮಗಳಲ್ಲಿನ ಮನೆಗಳ ಬಾಳಿಕೆ ಸಾಮಥ್ರ್ಯದ ಬಗ್ಗೆ ಸರ್ವೇ ಮಾಡಬೇಕು.  ಗಟ್ಟಿಮುಟ್ಟಾಗಿರುವ ಮನೆಗಳಲ್ಲಿನ ಸುರಕ್ಷಿತ ಕೋಣೆಗಳನ್ನು ಗುರುತಿಸಬೇಕು. ಆ ಮನೆಯವರಿಗೆ ಇಂತಹ ಕೋಣೆಗಳಲ್ಲಿರಲು ಸಲಹೆ ನೀಡಬೇಕು.  ಹಳ್ಳಿಗಳಲ್ಲಿ ಇರುವ ಸುರಕ್ಷಿತ ಸರ್ಕಾರಿ ಕಟ್ಟಡ, ಸಮುದಾಯ ಭವನ, ಶಾಲೆಗಳನ್ನು ಗುರುತಿಸಬೇಕು. ಈ ತಾಣಗಳಲ್ಲಿ ಜನರಿರಲು ತಿಳಿಸಬೇಕು. ಅಂಗವಿಕಲರು ಹಾಗೂ ಗರ್ಭಿಣಿ ಮಹಿಳೆಯರ ಪಟ್ಟಿ ಮಾಡಿ ಅವರನ್ನು ಸುರಕ್ಷಿತ ಸ್ಥಳಗಳಲ್ಲಿ ರವಾನಿಸಬೇಕು. ಸುರಕ್ಷಿತ ತಾಣಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಡಂಗೂರ, ಆಟೋ ಪ್ರಚಾರ ಮುಂತಾದವುಗಳ ಮೂಲಕ ಸಹ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಹೇಳಿದರು.

 ಜಾನುವಾರುಗಳ ನಿರ್ವಹಣೆಗಾಗಿ ಗೋಶಾಲೆಗಳ ಮಾದರಿಯಲ್ಲಿ ಕ್ಯಾಂಪ್ ಸಿದ್ಧಪಡಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ಹಳ್ಳಿಗಳಲ್ಲಿನ ಜೆಸಿಬಿ ಯಂತ್ರಗಳನ್ನು ಮೊದಲೇ ಪತ್ತೆ ಹಚ್ಚಿ ಒಂದು ವೇಳೆ ವಿಪತ್ತು ಸಂಭವಿಸಿದಲ್ಲಿ ಇವುಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ಸಿದ್ಧಪಡಿಸಿಟ್ಟುಕೊಳ್ಳಿ ಎಂದು ಅವರು ಹೇಳಿದರು.

ಒಂದು ವೇಳೆ ದುರಂತ ಉಂಟಾದಲ್ಲಿ, ಅದರ ತ್ಯಾಜ್ಯ ವಿಲೇವಾರಿ ಮಾಡುವ ಸಿದ್ಧತೆಗಳ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳಗಳು ಜನರ ರಕ್ಷಣೆಗೆ ಮುಂದಾಗಬೇಕು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರು ತಿಳಿಸಿದರು.

ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭೂ ಕಂಪನದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ಸುಳ್ಳು ಸುದ್ದಿ ಎಂದು ತಿಳಿದ ಕೂಡಲೇ ಅದರ ನಿಜಾಂಶವನ್ನು ಪತ್ತೆ ಹಚ್ಚಬೇಕು. ಗ್ರಾಮದ ಸುಶಿಕ್ಷಿತರು ಸುಳ್ಳು ಸುದ್ದಿಗಳ ಕುರಿತು ಸಾರ್ವಜನಿಕರಲ್ಲಿ ಖುದ್ದಾಗಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಪ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ಸಹಾಯಕ ಆಯುಕ್ತರುಗಳಾದ ಮೋನಾ ರೂಟ್, ಬಿ.ವಿ. ಅಶ್ವಿಜಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)