varthabharthi


ಸಂಪಾದಕೀಯ

ಕಾನೂನು ಕೈಗೆತ್ತಿಕೊಳ್ಳಲು ಶ್ರೀಸಾಮಾನ್ಯರಿಗೆ ಮುಖ್ಯಮಂತ್ರಿಯೇ ಅನುಮತಿ ನೀಡಿದರೆ?

ವಾರ್ತಾ ಭಾರತಿ : 14 Oct, 2021

‘‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ ವಿಚಾರವು ತುಂಬಾ ಸೂಕ್ಷ್ಮವಾಗಿದೆ. ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಆ್ಯಕ್ಷನ್‌ಗೆ ರಿಯಾಕ್ಷನ್ ಕೂಡ ಸಹಜವಾಗಿರುತ್ತದೆ’’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘‘ಇವತ್ತು ನಾವು ನೈತಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಸುವ್ಯವಸ್ಥೆಯು ನೈತಿಕತೆಯ ಮೇಲೆ ಅಡಗಿದೆ. ನೈತಿಕತೆ ಇಲ್ಲದಾದಾಗ ಆ್ಯಕ್ಷನ್ ಮತ್ತು ರಿಯಾಕ್ಷನ್ ಆಗುತ್ತೆ’’ ಎಂದು ತಲೆಬುಡವಿಲ್ಲದ ಹೇಳಿಕೆಯೊಂದನ್ನು ನೀಡುವ ಮೂಲಕ, ಅನೈತಿಕ ಪೊಲೀಸ್‌ಗಿರಿ ನಡೆಸುವವರ ವಿರುದ್ಧ ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡುವುದಕ್ಕೆ ನನ್ನಿಂದ ಸಾಧ್ಯವಾಗದು ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯೇ ಇಂತಹ ಹೇಳಿಕೆಯನ್ನು ನೀಡಿರುವುದು, ಬೀದಿ ಪುಂಡರಿಗೆ ಕಾನೂನು ಕೈಗೆತ್ತಿಕೊಳ್ಳಲು ಪರೋಕ್ಷ ಪರವಾನಿಗೆ ದೊರಕಿದಂತಾಗಿದೆ.

ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಸುವ ಅಪರಾಧಗಳಿಗೆ ಕಾನೂನು ಪುಸ್ತಕದಲ್ಲಿ ಪ್ರತ್ಯೇಕ ವಿನಾಯಿತಿ ಇದೆಯೇ? ಎನ್ನುವ ಪ್ರಶ್ನೆ ಈಗ ಎದ್ದಿದೆ. ದೇಶದಲ್ಲಿ ನಡೆಯುವ ಬಹುತೇಕ ಅಪರಾಧಗಳು ನಡೆಯುವುದು ಭಾವನಾತ್ಮಕ ಹಿನ್ನೆಲೆಯಲ್ಲಿಯೇ. ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲೇ ಅಪರಾಧ ನಡೆಯುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಪ್ರಕಾರ, ಬೆಂಗಳೂರಿನಲ್ಲಿ ನಡೆಯುವ ಅನೈತಿಕ ಪೊಲೀಸ್‌ಗಿರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅನೈತಿಕ ಪೊಲೀಸ್‌ಗಿರಿ ನಡುವೆ ವ್ಯತ್ಯಾಸವಿದೆ. ಆದುದರಿಂದಲೇ ಅವರು ದಕ್ಷಿಣ ಕನ್ನಡ ಜಿಲ್ಲೆಯ ಭಾವನೆಗಳಿಗೆ ತುಸು ಹೆಚ್ಚು ಬೆಲೆ ನೀಡಿದ್ದಾರೆ. ಸದ್ಯಕ್ಕೆ ರಾಜಕೀಯ ನಡೆಸುವುದಕ್ಕೆ ಬೇರೆ ಯಾವುದೇ ಬಂಡವಾಳ ಬಿಜೆಪಿಯ ಬಳಿ ಇಲ್ಲದೇ ಇರುವುದರಿಂದ, ‘ಅನೈತಿಕ ಪೊಲೀಸ್‌ಗಿರಿ’ ಹೆಸರಿನಲ್ಲಿ ಕೋಮುಉದ್ವಿಗ್ನ ವಾತಾವರಣ ಜೀವಂತವಾಗಿರುರುವುದು ಅವರಿಗೆ ಅಗತ್ಯವೆನಿಸಿದೆ. ಆದುದರಿಂದಲೇ, ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ಅವರು ಮಾತನಾಡಿದ್ದಾರೆ.

‘ನಮ್ಮೆಲ್ಲರ ಸಂಬಂಧಗಳು ಮತ್ತು ಸುವ್ಯವಸ್ಥೆಯು ನೈತಿಕತೆಯ ಮೇಲೆ ಅಡಗಿದೆ’ ಎಂದು ಸ್ವಾಮೀಜಿಗಳಂತೆ ಮಾತನಾಡಿರುವ ಬೊಮ್ಮಾಯಿ, ನೈತಿಕತೆಯ ರಕ್ಷಣೆಯ ಹೊಣೆಯನ್ನು ಆ ಮೂಲಕ ಸಂಘಪರಿವಾರದ ದುಷ್ಕರ್ಮಿಗಳಿಗೆ ವಹಿಸಲು ಮುಂದಾಗಿದ್ದಾರೆ. ಇಂದು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗವಹಿಸುತ್ತಿರುವ ಬಹುತೇಕ ಯುವಕರು ನೈತಿಕತೆಯ ಎಲ್ಲೆಯನ್ನು ಮೀರಿದವರು. ಮೈಮೇಲೆ ಹತ್ತು ಹಲವು ಕ್ರಿಮಿನಲ್ ಪ್ರಕರಣಗಳನ್ನು ಜಡಿಸಿಕೊಂಡ, ಅರ್ಧದಲ್ಲೇ ಶಾಲೆ ಕಾಲೇಜುಗಳನ್ನು ತೊರೆದ ಯುವಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮೊತ್ತ ಮೊದಲು ಈ ಯುವಕರಿಗೆ ನೈತಿಕತೆಯನ್ನು ಕಲಿಸುವುದು ಮುಖ್ಯಮಂತ್ರಿ ಬೊಮ್ಮಾಯಿಯವರ ಕರ್ತವ್ಯವಾಗಬೇಕು. ವಿಪರ್ಯಾಸವೆಂದರೆ, ಅನೈತಿಕ ದಾರಿಯಲ್ಲಿ ಬದುಕು ಸಾಗಿಸುತ್ತಿರುವ ಯುವಕರ ಮೂಲಕ ಸಮಾಜದಲ್ಲಿ ನೈತಿಕತೆಯನ್ನು ಸ್ಥಾಪಿಸಲು ಬೊಮ್ಮಾಯಿ ಅವರು ಮುಂದಾಗಿದ್ದಾರೆ. ಹಿಂದೂ ಸಮಾಜದಲ್ಲಿ ನೈತಿಕತೆಯನ್ನು ಕಲಿಸುವ ದಾರ್ಶನಿಕರೇ ಇಲ್ಲ ಎನ್ನುವುದು ಅವರ ಅಭಿಪ್ರಾಯವೇ? ಇಷ್ಟಕ್ಕೂ ಯಾರು, ಯಾರ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ? ಒಂದು ಧರ್ಮದ ಹುಡುಗ ಅಥವಾ ಹುಡುಗಿ ಪರಸ್ಪರ ಸ್ನೇಹ ವಿಶ್ವಾಸದಿಂದ ಮಾತನಾಡುವುದು, ಪರಸ್ಪರ ವ್ಯವಹರಿಸುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ಮಾತನಾಡಬಾರದು ಎನ್ನುವುದನ್ನು ಹುಡುಗ, ಹುಡುಗಿಯರ ಪಾಲಕರು ನಿರ್ಧರಿಸಬೇಕು. ತಮ್ಮ ಮಕ್ಕಳಿಗೆ ನೈತಿಕತೆಯ ಪಾಠವನ್ನು ಎಲ್ಲ ಪಾಲಕರು ಕಲಿಸುತ್ತಿರುತ್ತಾರೆ. ತಮ್ಮ ಮಕ್ಕಳಿಗೆ ಜೈಲಿನಿಂದ ಹೊರಬಂದ ಪುಂಡ ಹುಡುಗರು ನೈತಿಕತೆಯ ಪಾಠವನ್ನು ಕಲಿಸಬೇಕು ಎಂದು ಯಾವ ಪಾಲಕರೂ ಬಯಸುವುದಿಲ್ಲ. ಆದುದರಿಂದ ಮುಖ್ಯಮಂತ್ರಿ ಮೊತ್ತ, ಮೊದಲು ಈ ಪಾಲಕ ಭಾವನೆಗಳ ಬಗ್ಗೆ ಯೋಚಿಸಬೇಕು.

ಅನೈತಿಕ ಪೊಲೀಸ್‌ಗಿರಿ ಎನ್ನುವುದು ರಾಜಕೀಯ ಕಾರಣಗಳಿಗಾಗಿ ಜನರ ಭಾವನೆಗಳ ಮೇಲೆ ನಡೆಸುತ್ತಿರುವ ದಾಳಿಯಾಗಿದೆ.‘ಆ್ಯಕ್ಷನ್‌ಗೆ ರಿಯಾಕ್ಷನ್ ಸಹಜ’ ಎಂದು ಬೊಮ್ಮಾಯಿ ಹೇಳಿದಂತೆ, ಈ ದುಷ್ಕರ್ಮಿಗಳಿಗೆ ಅದೇ ಭಾಷೆಯಲ್ಲಿ ಜನರೂ ಉತ್ತರ ನೀಡುವುದಕ್ಕೆ ಮುಂದಾದರೆ ಸಮಾಜದ ಗತಿಯೇನಾಗಬೇಕು? ನಿಮ್ಮ ಮೇಲೆ ಹಲ್ಲೆ ನಡೆದರೆ ನೀವು ಅವರ ಮೇಲೆ ಪ್ರತಿ ಹಲ್ಲೆ ನಡೆಸಿ ಎಂದು ಈ ಸಮಾಜದ ಶ್ರೀಸಾಮಾನ್ಯರಿಗೆ ಬೊಮ್ಮಾಯಿ ಕರೆಕೊಡುತ್ತಿದ್ದಾರೆಯೇ? ಹಾಗಾದರೆ ಪೊಲೀಸ್ ಠಾಣೆಗಳ ಹೊಣೆಗಾರಿಕೆಯೇನು? ಕಾನೂನು ವ್ಯವಸ್ಥೆ ಯಾಕಿರಬೇಕು? ಜನರು ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊಡೆದಾಡಲು ಶುರು ಹಚಿದ್ದರೆ, ಕರಾವಳಿಯ ಅಭಿವೃದ್ಧಿಯ ಗತಿಯೇನಾಗಬೇಕು? ದೂರದ ಊರಿಂದ ತಮ್ಮ ಮಕ್ಕಳನ್ನು ಈ ಜಿಲ್ಲೆಗೆ ಹೆಚ್ಚಿನ ಕಲಿಕೆಗಾಗಿ ಪಾಲಕರು ಕಳುಹಿಸುವುದಾದರೂ ಹೇಗೆ? ಯಾರ ಮೇಲೆ ಭರವಸೆಯಿಟ್ಟು ಇಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣ ಹೂಡಿಕೆ ಮಾಡಬೇಕು? ಬೃಹತ್ ಉದ್ಯಮಿಗಳು ಯಾರ ಧೈರ್ಯದಲ್ಲಿ ಈ ನೆಲದಲ್ಲಿ ಬಂಡವಾಳ ಹೂಡಬೇಕು? ಇಂದು ಯಾರು ಯಾರ ಜೊತೆ ಓಡಾಡಬೇಕು? ಎನ್ನುವುದನ್ನು ಸಂಘಪರಿವಾರದವರು ನಿರ್ಧರಿಸುತ್ತಾರಾದರೆ, ರೈತರು ತಮ್ಮ ದನಗಳನ್ನು ಯಾವಾಗ, ಯಾರಿಗೆ ಮಾರಬೇಕು ಎನ್ನುವುದನ್ನು ಸಂಘಪರಿವಾರದವರೇ ತೀರ್ಮಾನಿಸುತ್ತಾರಾದರೆ, ಮುಂದೊಂದು ದಿನ, ಈ ನೆಲದಲ್ಲಿ ಕೈಗಾರಿಕೆ, ಉದ್ದಿಮೆಗಳಿಗೆ ಪರವಾನಿಗೆಯನ್ನೂ ಸಂಘಪರಿವಾರದ ಮೂಲಕವೇ ಪಡೆಯಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಶಾಲಾ, ಕಾಲೇಜುಗಳಲ್ಲಿ ಯಾರು ಶಿಕ್ಷಕರಾಗಿರಬೇಕು, ಯಾರು ಯಾವ ಪಾಠ ಮಾಡಬೇಕು ಎನ್ನುವುದನ್ನೂ ಸಂಘಪರಿವಾರವೇ ನಿರ್ಧರಿಸುವ ಸ್ಥಿತಿ ಬರಬಹುದು. ಅದಕ್ಕಿಂತ ಪೊಲೀಸ್ ಠಾಣೆಗಳಲ್ಲಿರುವ ಅಧಿಕೃತ ಪೊಲೀಸರನ್ನೆಲ್ಲ ಬರ್ಖಾಸ್ತುಗೊಳಿಸಿ, ಸಂಘಪರಿವಾರದ ಪುಂಡು ಪೋಕರಿಗಳನ್ನೇ ಅಧಿಕೃತ ಪೊಲೀಸರೆಂದು ಘೋಷಿಸುವುದು ಒಳಿತಲ್ಲೀ? ನೈತಿಕತೆಯ ವಿಷಯದಲ್ಲಿ ಬೊಮ್ಮಾಯಿಯವರಿಗೆ ನಿಜಕ್ಕೂ ಕಾಳಜಿಯಿದ್ದರೆ, ತಮ್ಮ ಸಂಪುಟದೊಳಗಿರುವ ಸಚಿವರಿಗೆ ಆ ವಿಷಯದಲ್ಲಿ ಉಪನ್ಯಾಸ ನೀಡಿದರೆ, ಸಿಡಿಗಳ ಮೂಲಕ ಬಿಜೆಪಿಯ ಮಾನ ಹರಾಜಾಗುವುದಾದರೂ ನಿಲ್ಲಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)