varthabharthi


ಅನುಗಾಲ

ವೈಚಿತ್ರ್ಯ-ವೈವಿಧ್ಯ-ವೈರುಧ್ಯಗಳ ನಡುವೆ

ವಾರ್ತಾ ಭಾರತಿ : 14 Oct, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಂದು ನಾವು ಬದುಕುತ್ತಿರುವುದು ವಿಜ್ಞಾನದ ತಳಹದಿಯ ಮೇಲೆಂದು ನಂಬಿದರೆ ಅದು ತಪ್ಪು. ನಮ್ಮ ನಂಬಿಕೆ, ಶ್ರದ್ಧೆ ಇವೆಲ್ಲ ಬರಿಯ ಆದರ್ಶಗಳನ್ನವಲಂಬಿಸಬಹುದು; ಅವಕ್ಕೂ ಜಗತ್ತಿನ ನಡೆಗೂ ಏನೇನೂ ಸಂಬಂಧವಿಲ್ಲವೆಂಬುದು ವರ್ತಮಾನದ ಅನೇಕ ಕ್ರಿಯೆ-ಪ್ರತಿಕ್ರಿಯೆಗಳಿಂದ ಕಾಣಬಹುದು. ಸಂಸ್ಕೃತಿಯ ಹೆಸರಿನಲ್ಲಿ ಬೆಳೆಯುತ್ತಿರುವುದು, ಬದಲಾಗುತ್ತಿರುವುದು ನಾಗರಿಕತೆುೂ ಅಲ್ಲ. ಅವೆಲ್ಲ ಮನುಷ್ಯ ನಿರ್ಮಿತ.

ನಾವು ಅರ್ಥಾತ್ ಭಾರತೀಯರು ಹೇಳಿಕೊಳ್ಳುವಂತೆ (ಕೆಲವನ್ನು ನಾವು ಮಾತ್ರ ಹೇಳಿಕೊಳ್ಳುವುದು!) ಜಗತ್ತಿನ ಅತೀ ಹೆಚ್ಚು ಜೀವ ಮತ್ತು ಜೀವನ ವೈವಿಧ್ಯವಿರುವ ದೇಶ ನಮ್ಮದು. ಆದ್ದರಿಂದಲೇ ಇಲ್ಲಿ ಯಾವುದು ಎಲ್ಲರಿಗೂ ಅನ್ವಯಿಸದು. ಪ್ರತ್ಯೇಕತೆಯೆಂಬುದು ಇಲ್ಲಿ ಅಭಿಜಾತ ಕಲೆಯಂತಿದೆ. ಇದಕ್ಕೆ ಕಲಾತ್ಮಕವಾಗಿ ‘ವಿವಿಧತೆಯಲ್ಲಿ ಏಕತೆ’ ಮುಂತಾಗಿ ಹೆಸರಿಡಲಾಗಿದೆ. ‘ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು, ಏಳು ಸ್ವರವು ಸೇರಿ ಸಂಗೀತವಾಯಿತು’ ಇತ್ಯಾದಿ ರೂಪಕಾತ್ಮಕ ಭಾವಗಳನ್ನು ಹಾಡುತ್ತೇವಾದರೂ ಅವು ಸೇರಿ ಬಿಳಿಯಾದದ್ದು, ಸಂಗೀತವಾದದ್ದು ಪ್ರಕೃತಿ ಸಹಜವಾಗಿಯೇ ಹೊರತು ಮನುಷ್ಯನ ವಿಚಾರ ಅಥವಾ ಭಾವದ ಕೊಡುಗೆಯಿಂದಲ್ಲ. ಆಕಾಶ-ಭೂಮಿಯಲ್ಲಿ ಬಣ್ಣಗಳ ಸ್ವರ್ಗ ಮನುಷ್ಯ ನಿರ್ಮಾಣವಲ್ಲ. ಇಲ್ಲೇ ಹೊಸತೊಂದು ಬಣ್ಣದ ಜಗತ್ತನ್ನು ಸೃಷ್ಟಿಬೇಕಾದರೆ ಮನುಷ್ಯನು ಎಷ್ಟೇ ಬಣ್ಣಗಳಿದ್ದರೂ ಅವುಗಳ ಸಾಮರಸ್ಯಕ್ಕೆ ಪ್ರಕೃತಿಯನ್ನೇ ಅನುಕರಿಸಬೇಕಾಗುತ್ತದೆ. ಕಾಡಮುಂಜಾವಿನಲ್ಲಿ ಕೇಳಿಬರುವ ಹಕ್ಕಿಗಳ ಹಾಡು ವಿದ್ವತ್ತು, ವಿಚಾರಗಳ ಕಾಟವಿಲ್ಲದೆ ತನ್ನದೇ ಶ್ರುತಿಯನ್ನು ಸೃಷ್ಟಿಸಿಕೊಂಡಿದೆ. ಅವುಗಳನ್ನು ನೋಡಿ, ಕೇಳಿ ಆನಂದಿಸುವ, ಅನುಭವಿಸುವ ನಾವು ನಮ್ಮ ಸ್ವಂತ ಸ್ವರ ಸಾಮಗಾನ ಶ್ರುತಿನಿಧಾನವಾಗಬೇಕಾದರೆ ಬಹಳಷ್ಟು ಪರಿಶ್ರಮವನ್ನು ಪಡಬೇಕಾಗುತ್ತದೆ. ಇಂತಹ ಬದುಕು ಸಹಜವಾಗಿರಬೇಕಾದರೆ ಮನುಷ್ಯನ ಹಸ್ತಕ್ಷೇಪ ಕಡಿಮೆಯಾದಷ್ಟೂ ಒಳ್ಳೆಯದು. ಆದರೆ ಹಾಗಿದೆಯೇ?

ಮರದಿಂದ ಬಿದ್ದ ಸೇಬು ಗುರುತ್ವಾಕರ್ಷಣದಂತಹ ಪ್ರಮೇಯಕ್ಕೆ ಸಾಕ್ಷಿಯಾಯಿತು, ಅದು ಮೊದಲಿನಿಂದಲೂ ಹಾಗೆಯೇ ಬೀಳುತ್ತಿತ್ತು. ಮುಂದೆಯೂ ಬೀಳುತ್ತದೆ. ಆದರೆ ಅದಕ್ಕೆ ಮನುಷ್ಯನ ಬುದ್ಧಿಯ ಅಚ್ಚು ಒಂದು ವಾಗ್ವೈಭವವನ್ನು ಸೃಷ್ಟಿಸಿತು. ಹಗಲಿನಂತೆ ಝಗಝಗಿಸುವ ಬೆಳಕನ್ನು ಸೃಷ್ಟಿಸಬಹುದು; ರಾತ್ರಿಯಂತೆ ಕೆಲವು ಕಡೆ ಬೆಳಕು ಬಾರದಂತೆ ತಡೆದು ಕತ್ತಲಾಗಿಸಬಹುದು. ಆದರೆ ಹಗಲು ರಾತ್ರಿಗಳನ್ನು, ದಿನದ, ಕಾಲದ, ಓಟವನ್ನು ವ್ಯತ್ಯಾಸ ಮಾಡಲು, ಸೂರ್ಯಚಂದ್ರರನ್ನು ಸೃಷ್ಟಿಸಲು ಸಾಧ್ಯವಾಗದು. ಮಕ್ಕಳ ಕೂಟಕ್ಕೆ ಬಂದ ಹಿರಿಯರೊಬ್ಬರು ತಮಾಷೆಗೆ ಹೇಳುತ್ತಿದ್ದರು: ‘‘ದೇವರು ಎಷ್ಟು ಗಟ್ಟಿಗ; ಮನುಷ್ಯನಿಗೆ ಕನ್ನಡಕ ಹಾಕಲು ಅನುಕೂಲವಾಗುವಂತೆ ಎರಡು ಕಿವಿಗಳನ್ನೂ ಒಂದು ಮೂಗನ್ನೂ ಸೃಷ್ಟಿಸಿದ!’’ ಅಥವಾ ‘‘ನದಿಗಳಿಗೂ ಎಷ್ಟು ಬುದ್ಧಿ, ಎಷ್ಟು ಭಕ್ತಿ! ಅವು ದೇವಸ್ಥಾನಗಳ ಸುತ್ತ ಹರಿಯುತ್ತವೆ. ಕ್ಷೇತ್ರಗಳನ್ನು ಗಮನಿಸಿದರೆ ಹೀಗನ್ನಿಸುತ್ತದಲ್ಲವೇ?’’ ಒಂದು ಕ್ಷಣ ಹೌದೆನಿಸುತ್ತದೆ. ಕಿವಿ ನಿಮಿರುತ್ತದೆ. ಆನಂತರ ಕಿವಿ ಮತ್ತು ಮೂಗಿಗನುಗುಣವಾಗಿ ಕನ್ನಡಕ ತಯಾರಾಗಿದೆ; ಅಥವಾ ನದಿಗಳ ದಡದಲ್ಲಿ ದೇವಸ್ಥಾನಗಳು ನಿರ್ಮಾಣಗೊಂಡಿವೆ ಎಂದು ನಿಧಾನಕ್ಕಾದರೂ ಹೊಳೆಯುತ್ತದೆ. ಆಗ ಮನುಷ್ಯನ ತರ್ಕದ ಮಿತಿಯೂ ಅರ್ಥವಾಗುತ್ತದೆ.

 ಗುಣವಾಗದ ಕಾಯಿಲೆಗೆ ಮದ್ದಿಲ್ಲ. ಹಾಗೆಯೇ ಹುಟ್ಟು-ಸಾವಿಗೆ ವೈಜ್ಞಾನಿಕ ವಿವರಣೆಯಿಲ್ಲ. ಅರ್ಥವಾಗದಾಗ ಅಧ್ಯಾತ್ಮ, ಅನುಭಾವ ಹೀಗೆಲ್ಲ ಗಾಳಿಗುದ್ದಾಟ ನಡೆಸುತ್ತೇವೆ. ನಡುವಣ ಬದುಕಿಗೆ ಬೇಕಾದ ವ್ಯಾಖ್ಯಾನಗಳನ್ನು ನೀಡಬಹುದು. ಜಾನಪದರಿಗೆ ಇದು ಗೊತ್ತಿದ್ದ ಕಾರಣವೇ ಅವರು ‘‘ಮದ್ದುಂಟೆ ಜನನ ಮರಣಕ್ಕೆ’’ ಎಂದು ಪ್ರಶ್ನಿಸಿದರು. ಇಂದಿಗೂ ಮಹಾನ್‌ವೈದ್ಯರು ಕೂದಲು ಸೀಳುವ ಚಿಕಿತ್ಸಾ ವಿಧಾನಗಳನ್ನು ಪ್ರಚುರಪಡಿಸುತ್ತಾರಾದರೂ ಯಾವುದೇ ಸಾವಿಗೆ ಸರಿಯಾದ ಕಾರಣವನ್ನು, ಸಮರ್ಥನೆಯನ್ನು ನೀಡಲಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಸತ್ತರು; ಅಥವಾ ವಯೋಸಹಜ ಕಾಹಿಲೆಯಿಂದ ನರಳುತ್ತಿದ್ದರು; ಅಥವಾ ಇನ್ನೇನೋ ಕಾರಣಗಳನ್ನು ನೀಡುವಾಗ ಇವು ಸಬೂಬುಗಳಷ್ಟೆ ಎಂದನ್ನಿಸಿದರೆ ತಪ್ಪಿಲ್ಲ. ಎಂತಹ ಜ್ಞಾನಿ-ವಿಜ್ಞಾನಿಯೇ ಇರಲಿ, ತನ್ನ ಮಿತಿಯನ್ನು ಮೀರಿದ ವಿಶ್ವ ವ್ಯಾಪಾರದತ್ತ ಬೆರಗನ್ನು, ವಿಸ್ಮಯವನ್ನು ತೋರಿ ಸುಮ್ಮನಾಗಬಹುದೇ ಹೊರತು ಅದನ್ನು ನಿಯಂತ್ರಿಸಲು ಯಾವ ಜ್ಞಾನ-ವಿಜ್ಞಾನಕ್ಕೂ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ವಿರಕ್ತಿಯೋ ವೈರಾಗ್ಯವೋ ಹೀಗೆ ಬೇಕಾದ ಆಸ್ತಿಕ-ನಾಸ್ತಿಕ-ತಾತ್ವಿಕ ಪದಗಳನ್ನು ಬಳಸಿಕೊಂಡು ವಿವರಣೆಯನ್ನು ನೀಡುವುದು ವಿದ್ವತ್ತು ಎನಿಸಿಕೊಂಡಿದೆ.

ಪ್ರಕೃತಿಯ ಇಷ್ಟು ಅಗಾಧ ವೈಚಿತ್ರ್ಯದ ನಡುವೆಯೂ ಮನುಷ್ಯನಿಗೆ ತನ್ನ ಮಿತಿಯ ಅರಿವಾಗದಿರುವುದು ಅದಕ್ಕಿಂತಲೂ ವಿಚಿತ್ರವೇ. ಇನ್ನೂ ಮನುಷ್ಯ ತನ್ನ ಸುತ್ತಲಿರುವ, ತಾನು ಬದುಕಿ ಬಾಳುವ ಒಂದಷ್ಟು ಕಾಲ ಎಲ್ಲವನ್ನೂ ನಿಯಂತ್ರಿಸಲು ಒದ್ದಾಡುತ್ತಾನೆಯೇ ಹೊರತು ತನ್ನ ಪಾಡಿಗೆ ತಾನು ಬದುಕಿ ಎಲ್ಲರೊಳಗೊಂದಾಗುವ ವಿಧಾನವನ್ನು ಹುಡುಕಿಲ್ಲ.

ಸಮಾಜದ ರೀತಿನೀತಿಗಳಲ್ಲಿ ಹೀಗೆ ಬದುಕುವುದು ಸಾಧ್ಯವೂ ಇಲ್ಲ. ಮನುಷ್ಯ ಅಂತಲ್ಲ, ಯಾವುದೇ ಜೀವಿಯೂ ಸಾಂಘಿಕ ಬದುಕನ್ನು ಆಶಿಸುತ್ತದೆ; ಅಶ್ರಯಿಸುತ್ತದೆ. ಅಲ್ಲಿ ರಕ್ಷಣೆಯಿದೆ ಮಾತ್ರವಲ್ಲ, ವಸ್ತು-ವಿಚಾರ-ಭಾವದ ವಿನಿಮಯವಿರುತ್ತದೆ. ಇಂತಹ ಸಮಾಜವೇ ತಮ್ಮನ್ನು ಅಥವಾ ಆ ಸಮಾಜದಲ್ಲಿ ಇತರರಿಗಿಂತ ಹೆಚ್ಚು ಬಲ, ಶಕ್ತಿಯನ್ನು ಪ್ರದರ್ಶಿಸಬಲ್ಲ, ಪ್ರಯೋಗಿಸಬಲ್ಲ ವ್ಯಕ್ತಿ ಇಲ್ಲವೇ ಗುಂಪು, ಇತರರನ್ನು ಆಳುವುದಕ್ಕೊಂದು ವ್ಯವಸ್ಥೆ ಬೇಕೆಂದು ಬಯಸಿದ್ದರ ಫಲವೇ ಆಳುವ ಮತ್ತು ಅಳಿಸಿಕೊಳ್ಳುವ ಎರಡು ವರ್ಗಗಳ ಸೃಷ್ಟಿ. ಇವು ನಿಯಂತ್ರಿಸುವ ಮತ್ತು ನಿಯಂತ್ರಣಕ್ಕೊಳಪಡುವ ಎರಡು ವರ್ಗಗಳನ್ನು ಜಗತ್ತಿಗೆ ಕೊಟ್ಟಿತು.. ಒಬ್ಬನೇ ಆಳಿದರೆ ರಾಜ, ಕೆಲವರು ಆಳಿದರೆ ಗುಂಪು, ಅನೇಕರು ಆಳಿದರೆ ಅದು (ಪ್ರಾತಿನಿಧಿಕವೆಂಬ ನಂಬಿಕೆಯೊಂದಿಗೆ) ಪ್ರಜಾಪ್ರಭುತ್ವ ಎಂದು ನಾವು ತಿಳಿಯುತ್ತೇವೆ. ನಿಜಕ್ಕೂ ಇವೆಲ್ಲವೂ ಸಂಖ್ಯೆ ಅಥವಾ ಬಲದ ಆಧಾರಿತವಾಗಿವೆ. ಎಲ್ಲರೂ ಒಪ್ಪಿ ಒಂದು ಸುಖೀ ಸಮಾಜವು ಸೃಷ್ಟಿಯಾಗುವುದು ಅಸಾಧ್ಯದ ಕೆಲಸವೆಂದು ಮತ್ತು ಅದು ಪೊಳ್ಳು ಆದರ್ಶವೆಂದು, ಈ ವರೆಗಿನ ಜಗತ್ತು ಹೇಳಿದೆ; ತಿಳಿಸಿದೆ.

ಅಧುನಿಕ ಜಗತ್ತಿನ ವಿವಿಧ ಪ್ರಯೋಗಗಳ ಬಗ್ಗೆ ಗಮನ ಹರಿಸಬಹುದು. ಇಂದು ನಾವು ಬದುಕುತ್ತಿರುವುದು ವಿಜ್ಞಾನದ ತಳಹದಿಯ ಮೇಲೆಂದು ನಂಬಿದರೆ ಅದು ತಪ್ಪು. ನಮ್ಮ ನಂಬಿಕೆ, ಶ್ರದ್ಧೆ ಇವೆಲ್ಲ ಬರಿಯ ಆದರ್ಶಗಳನ್ನವಲಂಬಿಸಬಹುದು; ಅವಕ್ಕೂ ಜಗತ್ತಿನ ನಡೆಗೂ ಏನೇನೂ ಸಂಬಂಧವಿಲ್ಲವೆಂಬುದು ವರ್ತಮಾನದ ಅನೇಕ ಕ್ರಿಯೆ-ಪ್ರತಿಕ್ರಿಯೆಗಳಿಂದ ಕಾಣಬಹುದು. ಸಂಸ್ಕೃತಿಯ ಹೆಸರಿನಲ್ಲಿ ಬೆಳೆಯುತ್ತಿರುವುದು, ಬದಲಾಗುತ್ತಿರುವುದು ನಾಗರಿಕತೆಯೂ ಅಲ್ಲ. ಅವೆಲ್ಲ ಮನುಷ್ಯ ನಿರ್ಮಿತ. ಮನುಷ್ಯನು ತನ್ನ ಮೇಲ್ಗೈಯನ್ನು ಸಾರಿಹೇಳುವುದಕ್ಕಾಗಿ ಸಂಸ್ಕೃತಿಯನ್ನು ಪ್ರಕೃತಿಗಿಂತ ಮೇಲಿಟ್ಟು, ಅದರ ನೇತ್ಯಾತ್ಮಕ ಸ್ಥಿತಿಯನ್ನು ವಿಕೃತಿಯೆಂದು ತಿಳಿಸಿದ್ದಾನೆ. ಈ ಅರ್ಥದಲ್ಲಿ ಮನುಷ್ಯನು ತನ್ನ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ತನ್ನೆಲ್ಲ ತಿಳಿವಳಿಕೆಯನ್ನು ಬಳಸುತ್ತಿದ್ದಾನೆಂದು ತಿಳಿದರೆ ಅದೂ ತಪ್ಪೇ. ಆತ ಕಾಪಾಡಲು ಯತ್ನಿಸುತ್ತಿರುವುದು ತನ್ನ ಸ್ವಾರ್ಥವನ್ನು; ತಾನು ನಿಯಂತ್ರಿಸಬಲ್ಲ ಸಮಾಜವನ್ನು. ಪುಸ್ತಕದ ಬದಲಿಗೆ ಮೊಬೈಲ್ ಬಂದರೆ ಅದನ್ನೇ ಸರಸ್ವತಿಯ ಕೈಯಲ್ಲಿ ಹಿಡಿಸುವ ಜಾಯಮಾನ ನಮ್ಮದು.

ನಮ್ಮ ಕೃಷಿ ಪರಿಣಿತರು ರಾಸಾಯನಿಕ ಗೊಬ್ಬರಗಳನ್ನು ಆವಿಷ್ಕರಿಸಿದರು. ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ಅದರಲ್ಲಿ ಬಂದ ಇಳುವರಿಯನ್ನು ಬದುಕಿಗೆ ಸಾಕಾಗುವಂತೆ ಹೊಂದಿಸಿಕೊಂಡು ಬದುಕುತ್ತಿದ್ದ ರೈತಾಪಿ ಜನರ ಬದುಕನ್ನು ಆಧುನಿಕತೆಯ ಹೆಸರಿನಲ್ಲಿ ವಿಕೃತಗೊಳಿಸಲಾಯಿತು. ತಂತ್ರಜ್ಞಾನದ ಹೆಸರಿನಲ್ಲಿ ಎಲ್ಲ ಉಪಭೋಗಗಳನ್ನು ಸೃಷ್ಟಿಸಲಾಯಿತು. ಭೂಮಿ ಬರಿದಾಗುತ್ತ ಬಂತು. ಪ್ರಾಣಿ-ಪಕ್ಷಿಗಳು ವಿರಳಗೊಂಡವು. ಈಗ ‘ಹಸಿರಿದ್ದರೆ ಉಸಿರು’ ಘೋಷಣೆಯೊಂದಿಗೆ ಸಾವಯವದಂತಹ ಪ್ರಾಚೀನ ಪದ್ಧತಿಯನ್ನು ಮತ್ತೆ ಹೇಳಲಾಗುತ್ತಿದೆ. ಹೇಳುವವರು ಯಾರು? ಯಾರು ಈ ಪದ್ಧ್ದತಿ ಹಳತಾಯಿತೆಂದೂ ರಾಸಾಯನಿಕಗಳನ್ನು ಬಳಸದಿದ್ದರೆ ಬದುಕು ಉದ್ಧಾರವಾಗದೆಂದು ಹೇಳಿದರೋ ಅವರೇ ಹೊಸ ಹೆಸರಿನಲ್ಲಿ ತಮ್ಮ ಮುಖವನ್ನು ಬದಲಾಯಿಸಿಕೊಂಡು ಪ್ರತ್ಯಕ್ಷವಾಗಿದ್ದಾರೆ. ಈಗ ಜನಸಾಮಾನ್ಯರಿಗೆ ಗೊಂದಲ; ಯಾವುದು ಸರಿ? ಯಾವುದು ತಪ್ಪು? ಪೂರ್ವ ಮೀಮಾಂಸೆಯೋ ಉತ್ತರ ಮೀಮಾಂಸೆಯೋ?

ನೀರು ಬೇಕಾದಂತೆ ಬಳಸಬಹುದಾದ ಒಂದು ವಸ್ತುವಾಗಿತ್ತು. ಹಣವನ್ನು ದುಂದು ಮಾಡುವುದನ್ನು ‘ಆತ ಹಣವನ್ನು ನೀರಿನಂತೆ ವೆಚ್ಚಮಾಡುತ್ತಿದ್ದಾನೆ’ ಎಂದು ಹೇಳಲಾಗುತ್ತಿತ್ತು. ನೀರು ಬರಿದಾಗುತ್ತಿರಲಿಲ್ಲ; ಕಡಿಮೆಯಾಗುತ್ತಿರಲಿಲ್ಲ. ಎಲ್ಲ ಕಾಲಗಳಲ್ಲೂ ಬರ, ಅತಿವೃಷ್ಟಿ, ಅನಾವೃಷ್ಟಿಗಳಿದ್ದವು. ಅವು ಹೊಸದೇನಲ್ಲ. ಅವನ್ನು ದಾಟಿ ಮತ್ತೆ ಬದುಕು ತನ್ನ ಸಹಜ ಪ್ರಾಸವನ್ನು ಕಂಡುಕೊಳ್ಳುತ್ತಿತ್ತು. ಆದರೆ ಈಗ ನೀರು ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಮುಂದಿನ ಮಹಾಯುದ್ಧ ನಡೆದರೆ ಅದು ನೀರಿಗಾಗಿ ಎಂದು ಸಮೀಕ್ಷಕರು ಹೇಳುತ್ತಿದ್ದಾರೆ. ಇದಕ್ಕೆ ಯಾರು ಮತ್ತು ಏನು ಕಾರಣ? ಸಾಮಾನ್ಯರಿಗೂ ನೀರಿನ ದುರ್ಬಳಕೆ ಕಾಣುತ್ತಿದೆಯಾದರೂ ಅದು ಕಾರಣವಾಗದು. ಏಕೆಂದರೆ ನೀರನ್ನು ನೀರಿನಂತೆ ವೆಚ್ಚ ಮಾಡುತ್ತಿದ್ದೇವಲ್ಲವೇ? ವಿಜ್ಞಾನಿಗಳು, ಆಳುವವರು ಒಂದೆಡೆ ಸೇರಿ ಎಲ್ಲರಿಗೂ ಬೇಕಾಗುವಷ್ಟು ನೀರಿಗಾಗಿ ಭೂಮಿಯ ಒಡಲನ್ನು ಅಗೆದರು. ಎಲ್ಲಿ ನೀರು ಸಂಚಯವಾಗಿ ಉಳಿಯಬಹುದಿತ್ತೋ ಅಲ್ಲಿಂದ ಕಲ್ಲೋ ಇನ್ನೊಂದೋ ಏನು ಅಡ್ಡ ಸಿಕ್ಕಿತೋ ಅದನ್ನು ಒಡೆದು ನೀರನ್ನು ತಂದರು. ಮಹಾಭಾರತದಲ್ಲಿ ಕರ್ಣನ ಕುರಿತಂತೆ ಒಂದು ಐತಿಹ್ಯವಿದೆ. ಆತನ ಎದೆಯಲ್ಲಿ ಅಮೃತ ಕಲಶವಿತ್ತಂತೆ. ಅದಿರುವ ವರೆಗೆ ಆತನನ್ನು ಕೊಲ್ಲುವುದು ಸಾಧ್ಯವಿರಲಿಲ್ಲ. ಇದನ್ನು ತಿಳಿದ ಕೃಷ್ಣ ಬ್ರಾಹ್ಮಣ ವೇಷದಲ್ಲಿ ಹೋಗಿ ಅವನಲ್ಲಿ ದಾನ ಕೇಳಿದ. ದಾನವನ್ನು ಹಾಗೇ ಕೊಡಬಾರದು ಅದಕ್ಕೆ ನೀರಿನ ಧಾರೆಯಾಗಬೇಕು. ಯುದ್ಧರಂಗದಲ್ಲಿ ನೀರೆಲ್ಲಿ? ಕರ್ಣನ ಎದೆಯಲ್ಲಿರುವ ಅಮೃತಕಲಶವೆಂಬ ಕಲ್ಪವೃಕ್ಷವನ್ನೊಡೆದು ಅದರ ನೀರನ್ನು ಹರಿಸಲಾಯಿತು. ಕರ್ಣನ ಸಾವು ಸುಲಭವಾಯಿತು. ನಮ್ಮಲ್ಲಿ ಕಾಡಿನೊಳಗೆ ನೀರನ್ನು, ನೀರಒರತೆಗಳನ್ನು, ಉಳಿಸಬಲ್ಲ ಹಸಿರು ವೈವಿಧ್ಯವಿವೆ. ಅವನ್ನು ಮೋಪಿನ, ಮರಮುಟ್ಟುಗಳ ನೆಪದಲ್ಲಿ ನಾಶಮಾಡಲಾಯಿತು. ಈಗ ಅಲ್ಲಿ ನೀರಿಲ್ಲ; ಕಾಡುಪ್ರಾಣಿಗಳು ಮನುಷ್ಯರೇನಾದರೂ ಹೆಚ್ಚು ಸುಖವಾಗಿ ಬದುಕುತ್ತಿದ್ದಾರೇನೋ ಎಂಬ ಭರವಸೆಯೋ ಕುತೂಹಲವೋ ಅಂತೂ ತಮ್ಮಲ್ಲಿಲ್ಲದ್ದನ್ನು ಹುಡುಕಿ ಬರುತ್ತಿವೆ. ಮನುಷ್ಯನ ಬೆಳೆ ನಾಶವಾಗುವ ಆತಂಕದ ಈ ಸಮಸ್ಯೆಯ ಪರಿಹಾರಕ್ಕೆ ಇನ್ನಷ್ಟು ಗೊಂದಲ.

ಪ್ಲಾಸ್ಟಿಕ್ ಇನ್ನೊಂದು ಸಮಸ್ಯೆ. ಅದನ್ನು ಬಳಸಬಾರದು. ಅದನ್ನು ಸೃಷ್ಟಿಸಿದ ತಜ್ಞರೇ ಈಗ ಅದರ ಉಪಸಂಹಾರಕ್ಕೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಪ್ಲಾಸ್ಟಿಕ್ ಎಂಬ ವಸ್ತುವನ್ನು ತಯಾರು ಮಾಡಬಾರದೆಂಬ ಕಾನೂನಿಲ್ಲ. ಹುಟ್ಟಿದವನು ಸಾಯುವವರೆಗೆ ಬದುಕಿದಂತೆ ಇದು ನಾಶವಾಗುವ ವರೆಗೂ ಬಳಕೆಯಲ್ಲಿರುತ್ತದೆಯಲ್ಲವೇ? ಜಾತಕರ್ಮ ಮಾಡಿದವರೇ ಈಗ ಅಪರಕರ್ಮಕ್ಕೂ ಹೇಳುತ್ತಿದ್ದಾರೆ. ಇದರೊಂದಿಗೆ ಕಸವಿಲೇವಾರಿಯೂ ಸಮಸ್ಯೆಯಾಗಿದೆ.

ನಮಗೆ ನೇರ ಸಂಬಂಧಿಸಿದ ತೈಲಬೆಲೆಯನ್ನು ವಿಚಾರಿಸಬಹುದು. ಅದನ್ನು ಅನಿವಾರ್ಯಗೊಳಿಸಿದ ವಿಜ್ಞಾನಿಗಳೇ ಈಗ ಅದು ಖಾಲಿಯಾದರೆ ಪರ್ಯಾಯ ಮಾರ್ಗಗಳನ್ನುಸರಿಸುವ ಪಾಠಕ್ಕೆ ಆರಂಭಿಸಿದ್ದಾರೆ. ವಿದ್ಯುತ್ ವಾಹನಗಳ ಬಳಕೆಯನ್ನು ಹೇಳುತ್ತಿದ್ದಾರೆ. ಈಗ ವಿದ್ಯುತ್ ಕೂಡಾ ಖೋತಾ ಆಗುತ್ತದೆಯೆಂಬ ಆತಂಕವಿದೆ. ಮುಂದೇನು?

ಆಧುನಿಕತೆಯಲ್ಲಿ ಪ್ರಕೃತಿಯನ್ನು ಸೋಲಿಸುವ ಮನುಷ್ಯ ಪ್ರಯತ್ನವು ಸೋಲುವುದು ಕಣ್ಣಮುಂದೆ ಸ್ಪಷ್ಟವಿದ್ದರೂ ಸೋಲನ್ನು ಒಪ್ಪಿಕೊಳ್ಳದೆ ಹೋರಾಡುವ ಮಂಕುಬೂದಿತನ ಮನುಷ್ಯನಲ್ಲಿ ಹೇರಳವಾಗಿದೆ. ಪ್ರಕೃತಿಯನ್ನು ಸೋಲಿಸಲೂ ಸಾಧ್ಯವಿಲ್ಲ; ಗೆಲ್ಲಲೂ ಸಾಧ್ಯವಿಲ್ಲ.

ಈ ಮೂರ್ಖತನಕ್ಕೆ ಕಾರಣವೇನಿರಬಹುದು? ಕ್ರೌರ್ಯಸಹಜ ಮನುಷ್ಯನು ತನ್ನ ಕಾಲದ ಯಜಮಾನತನವನ್ನು ಅನುಭವಿಸುವುದಷ್ಟೇ ತನ್ನ ಬದುಕಿನ ಗುರಿಯೆಂದು ತಿಳಿದಿದ್ದಾನೆ. ತಾನು ಹೇಳಿದಂತೆ ಬದುಕಬೇಕಾದ ಈ ಸಮಾಜದ ಜೊತೆಗೆ ತನ್ನೆದುರಿರುವ ಪ್ರಕೃತಿಯನ್ನೂ ತನ್ನ ಇಷ್ಟಾನಿಷ್ಟಗಳಿಗೆ ಒಗ್ಗಿಸುವ, ಬಗ್ಗಿಸುವ ಸತತ ಯತ್ನವು ಶಾಪಗ್ರಸ್ತ ಸಿಸಿಫಸ್‌ನಂತೆ ಮನುಷ್ಯನನ್ನು ಕಾಡುತ್ತಿದೆಯಾದರೂ ಆತನಿಗೆ ಅದರ ಅರಿವಿಲ್ಲ. ಈ ಅರಿವು ಬಾರದೆ ಉನ್ನತಿಯಾಗಲೀ ಉದ್ಧಾರವಾಗಲೀ ದಕ್ಕದು. ಜನಸಾಮಾನ್ಯರು ಇತರರಿಗೆ ಹೇಳದಿದ್ದರೂ ಈ ರಹಸ್ಯವನ್ನು ಬಲ್ಲವರಾಗಿದ್ದರು. ಆದರೆ ಅವರ ಬುದ್ಧಿಯನ್ನೂ ನಿಯಂತ್ರಿಸುವ ಮೂಲಕ ನಾವು ನಮ್ಮ ಮತ್ತು ಎಲ್ಲರ ವಿನಾಶದ ಮನೆಯನ್ನು ಕಟ್ಟುತ್ತಿದ್ದೇವೆ. ಆಸೆಯೇ ದುಃಖಕ್ಕೆ ಕಾರಣವೆಂದು ಹೇಳಿದವರು ಅಳಿದರು. ಅವರ ಮಾತನ್ನು ಸದಾ ಸತ್ಯವಾಗಿಸಲು ಸುಳ್ಳಿನ ಗುಳ್ಳೆಗಳನ್ನು ರಚಿಸಿ ಮನುಕುಲ ಅವಿರತವಾಗಿ ದುಡಿಯುತ್ತಿರುವುದು ಸಾರ್ವಕಾಲಿಕ ದುರಂತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)