varthabharthi


ಸಂಪಾದಕೀಯ

ಮಹಾನವಮಿಗೆ ಅವಮಾನ!

ವಾರ್ತಾ ಭಾರತಿ : 16 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಹಬ್ಬಗಳು ಬರುವುದು ನಮ್ಮ ಬದುಕಿನ ಕತ್ತಲನ್ನು ಕಳೆದು, ಬೆಳಕನ್ನು ಹಚ್ಚುವುದಕ್ಕೆ. ಹಬ್ಬಗಳು ಪರಸ್ಪರ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹಬ್ಬಗಳಿಂದ ಮನಸುಗಳು ಒಂದಾಗುತ್ತವೆ. ಈಗಾಗಲೇ ಕೊರೋನ, ಲಾಕ್‌ಡೌನ್‌ನಿಂದ ತತ್ತರಿಸಿ, ಆರ್ಥಿಕವಾಗಿ ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ ಜನರನ್ನು ಸಮಾಧಾನಿಸಲೆಂದು ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಕಳೆದೆರಡು ವರ್ಷಗಳಿಂದ ಬದುಕಿನಲ್ಲಿ ಸಾಕಷ್ಟು ಕಷ್ಟ ನಷ್ಟಗ ಳನ್ನು ಅನುಭವಿಸಿದ ಮನುಷ್ಯನಿಗೆ ಆ ಕಷ್ಟಗಳಲ್ಲೂ ಕಲಿಯುವುದಕ್ಕೆ ಸಾವಿರ ಪಾಠಗಳು ಸಿಕ್ಕಿವೆ. ಜಾತಿ, ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಡುತ್ತಿದ್ದ ಎಲ್ಲರೂ ಈ ಲಾಕ್‌ಡೌನ್ ಮತ್ತು ಕೋರೋನಾ ಸಂತ್ರಸ್ತರಾದರು. ಜಾತಿ ಭೇದಗಳನ್ನು ಬದಿಗಿಟ್ಟು ಪರಸ್ಪರ ನೆರವಾದರು. ಒಂದು ಧರ್ಮದ ವ್ಯಕ್ತಿಯ ಮೃತದೇಹವನ್ನು ಇನ್ನೊಂದು ಧರ್ಮದ ವ್ಯಕ್ತಿ ಅಂತ್ಯ ಸಂಸ್ಕಾರ ಮಾಡಿರುವುದನ್ನು ನೋಡಿದೆವು. ಕೊರೋನ ಪೀಡಿತರನ್ನು ಜಾತಿ, ಭೇದ ಮರೆತು ರಕ್ಷಣೆ ಮಾಡಿರುವುದನ್ನು ಮಾಧ್ಯಮಗಳಲ್ಲಿ ಕಂಡೆವು. ಮಸೀದಿಗಳಲ್ಲಿ, ಚರ್ಚುಗಳಲ್ಲಿ, ದೇವಸ್ಥಾನಗಳಲ್ಲಿ ಕೊರೋನ ಸಂತ್ರಸ್ತರು ಜಾತಿ ಭೇದ ಮರೆತು ಆಶ್ರಯ ಪಡೆದರು. ಒಂದೆಡೆ ಕೊರೋನ ಹೆಸರಲ್ಲಿ ಜನರ ನಡುವೆ ಧರ್ಮದ ದ್ವೇಷವನ್ನು ಹಂಚಲು ಕೆಲವರು ಪ್ರಯತ್ನಿಸಿದರಾದರೂ, ಅಂತಿಮವಾಗಿ ಅವರು ವಿಫಲರಾದರು. ಮಾನವೀಯತೆ ಜನರನ್ನು ಒಂದಾಗಿಸಿತು.

ಇದೀಗ ಲಾಕ್‌ಡೌನ್ ತೆರವಾಗಿದೆ. ಕೊರೋನದಿಂದಾಗಿ ಪರಸ್ಪರ ಮಾನಸಿಕವಾಗಿ ಒಂದಾಗಿದ್ದ ಜನರನ್ನು ಒಡೆಯುವುದಕ್ಕೆ ಮತ್ತೆ ಕೆಲವು ಶಕ್ತಿಗಳು ಬೀದಿಗಿಳಿದಿವೆ. ವಿಪರ್ಯಾಸವೆಂದರೆ, ಅದಕ್ಕಾಗಿ ಧಾರ್ಮಿಕ ಹಬ್ಬಗಳನ್ನೇ ದುರುಪಯೋಗ ಪಡಿಸಲು ಮುಂದಾಗಿವೆ. ‘ಮೋದಿ ಎನ್ನುವ ಬಣ್ಣದ ಬಲೂನು’ ಒಡೆದಿರುವುದರಿಂದ ಮತ್ತೆ ಅಧಿಕಾರಕ್ಕೆ ಬರಲು ಜನರನ್ನು ಇಬ್ಭಾಗಿಸಲೇ ಬೇಕು, ದ್ವೇಷವನ್ನು ಬಿತ್ತ್ತಿ ಪರಸ್ಪರ ಕಾದಾಡಿಸಲೇಬೇಕು ಎಂಬ ಅನಿವಾರ್ಯತೆಗೆ ಕೆಲವು ಶಕ್ತಿಗಳು ಸಿಲುಕಿಕೊಂಡಿವೆ. ಆದುದರಿಂದಲೇ ಅನೈತಿಕ ಪೊಲೀಸ್ ಗಿರಿ, ಗೋಹತ್ಯೆ, ಮತಾಂತರ ಎಂದು ಬೀದಿಗಿಳಿದಿವೆ. ಕರಾವಳಿಯಲ್ಲಿ ಹೀಗೆ ಬೀದಿಗಿಳಿದವರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅನೈತಿಕ ಪೊಲೀಸ್‌ಗಿರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ‘ಆ್ಯಕ್ಷನ್‌ಗೆ ರಿಯಾಕ್ಷನ್’ ಎಂದು ಹೇಳಿಕೆ ನೀಡಿ ಸಮರ್ಥಿಸಿದ ಬಳಿಕ, ಇದೀಗ ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಹಂಚುವ ಮೂಲಕ, ಮಹಾನವಮಿಯನ್ನು ಕೆಲವು ದುಷ್ಕರ್ಮಿಗಳು ಆಚರಿಸಿದ್ದಾರೆ ಮತ್ತು ಅವುಗಳನ್ನು ಬಹಿರಂಗವಾಗಿಯೇ ‘ತ್ರಿಶೂಲ ದೀಕ್ಷೆ’ ಎಂದು ಕರೆದು ಸಮರ್ಥಿಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಹಲವು ದಶಕಗಳಿಂದ ಜನರು ಆಯುಧ ಪೂಜೆ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ. ಈ ಆಯುಧ ಪೂಜೆಯನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದು ವಾಹನ ಮಾಲಕರು. ತಮಗೆ ಅನ್ನ ನೀಡುವ, ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವ ವಾಹನಗಳನ್ನು ಅಲಂಕರಿಸಿ, ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ವಾಹನಗಳಿಗೆ ಪೂಜೆ ಸಲ್ಲಿಸದೇ ಇದ್ದರೂ, ಅವುಗಳನ್ನು ಹೂವುಗಳಿಂದ ಅಲಂಕರಿಸುವುದಿದೆ. ಹಾಗೆಯೇ ಹೆಚ್ಚಿನ ಶ್ರಮ ಜೀವಿಗಳು ತಮಗೆ ಬದುಕುವುದಕ್ಕೆ ನೆರವಾಗುವ ಹಾರೆ, ಗುದ್ದಲಿಯಂತಹ ಸಲಕರಣೆಗಳನ್ನು, ಯಂತ್ರಗಳನ್ನು ಶುಚಿಗೊಳಿಸಿ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಆ ಸಲಕರಣೆಗಳು, ಯಂತ್ರಗಳು ಶ್ರಮಜೀವಿಗಳ ಪಾಲಿನ ಸಂಗಾತಿಯಾಗಿರುವುದರಿಂದ ಅವುಗಳಿಗೆ ಆ ಗೌರವವನ್ನು ನೀಡಲಾಗುತ್ತದೆ. ಶ್ರಮಜೀವನದ ವೌಲ್ಯವನ್ನು ಇದು ಎತ್ತಿಹಿಡಿಯುತ್ತದೆ. ಇದು ಶ್ರಮ ಜೀವಿಗಳ ಕತೆಯಾದರೆ, ದಿನನಿತ್ಯ ಇನ್ನೊಬ್ಬರಿಗೆ ಚೂರಿ ತೋರಿಸಿ ಹೊಟ್ಟೆ ಹೊರೆಯುವ ರೌಡಿಗಳು, ಗೂಂಡಾಗಳು ಯಾವುದಕ್ಕೆ ಪೂಜೆ ಮಾಡಬೇಕು? ಅವರು ದೈನಂದಿನ ಅನ್ನವನ್ನು ಸಂಪಾದಿಸಿಕೊಳ್ಳಲು ಏನನ್ನು ಬಳಸುತ್ತಾರೆಯೋ ಅದನ್ನೇ ಪೂಜಿಸಬೇಕಾಗುತ್ತದೆ. ಆ ಕಾರಣದಿಂದಲೋ ಏನೋ, ಮಂಗಳೂರಿನಲ್ಲಿ ಸಂಘಪರಿವಾರದ ಒಂದು ಗುಂಪು ಚೂರಿಗಳನ್ನು ಪೂಜಿಸಿ, ಪುಕ್ಕಟೆಯಾಗಿ ಅವುಗಳನ್ನು ಹಂಚಿದೆ. ಅಷ್ಟೇ ಅಲ್ಲ, ತಮ್ಮ ಕೃತ್ಯಕ್ಕೆ ಹಿಂದೂ ಧರ್ಮವನ್ನೂ ಅವು ಬಳಸಿಕೊಂಡಿವೆ. ಇವರ ಪಾಲಿಗೆ ಇದು ‘ತ್ರಿಶೂಲ ದೀಕ್ಷೆ’ಯಂತೆ.

ಬಹುಮುಖ್ಯವಾಗಿ ಆಯುಧಪೂಜೆಯನ್ನು, ಮಹಾನವಮಿಯನ್ನು ಈ ದುಷ್ಕರ್ಮಿಗಳು ಅಣಕಿಸಿದ್ದಾರೆ. ತಮ್ಮ ಚೂರಿ ಹಂಚುವ ಕೆಲಸವನ್ನು ಹಿಂದೂ ಧರ್ಮದ ತಲೆಗೆ ಕಟ್ಟಿ, ಧರ್ಮಕ್ಕೂ ಕಳಂಕ ತಂದಿದ್ದಾರೆ. ಬನ್ನಿ ಎಲೆಯನ್ನು ಪರಸ್ಪರ ಹಂಚಿ, ಜೀವನೋಪಯೋಗಿ ಉಡುಗೊರೆಗಳನ್ನು ನೀಡಿ ಆಚರಿಸುವ ಬದಲಿಗೆ ಚೂರಿಯನ್ನು ಹಂಚಿ, ಜನರಿಗೆ ಹಿಂಸೆಯ ಪ್ರೇರಣೆಯನ್ನು ನೀಡಿದ್ದಾರೆ. ಇಷ್ಟಕ್ಕೂ ಈ ಚೂರಿಯನ್ನು ಯಾರಿಗೆ ಹಂಚಲಾಗಿದೆ? ಚೂರಿಯನ್ನು ಪಡೆದುಕೊಂಡ ಹೆಚ್ಚಿನ ಯುವಕರು ಹಿಂದುಳಿದ ವರ್ಗದ ಜಾತಿಗೆ ಸೇರಿದವರು. ದುರ್ಬಲರು, ಬಡವರು. ಇತ್ತ, ಶ್ರೀಮಂತರು, ಮೇಲ್‌ಜಾತಿಯ ಜನರು ಶುಚಿರ್ಭೂತರಾಗಿ ತಮ್ಮ ತಮ್ಮ ಅದ್ದೂರಿ ಕಾರುಗಳನ್ನು, ಲ್ಯಾಪ್‌ಟ್ಯಾಪ್‌ಗಳನ್ನು, ಕಂಪ್ಯೂಟರ್‌ಗಳನ್ನು ಪೂಜೆ ಮಾಡುತ್ತಿದ್ದಾರೆ, ಅತ್ತ ಸಂಘಪರಿವಾರ ಸಂಘಟನೆ ಬಡವರ ಮಕ್ಕಳ ಕೈಗೆ ಚೂರಿಯನ್ನು ನೀಡುತ್ತಿದೆ ಮತ್ತು ಅಪಾಯಕಾರಿ ಸಂಗತಿಯೆಂದರೆ, ಹೀಗೆ ಚೂರಿಯನ್ನು ಪಡೆದವರಲ್ಲಿ ಕ್ರಿಮಿನಲ್ ಪ್ರಕರಣವನ್ನು ಮೈಮೇಲೆ ಜಡಿಸಿಕೊಂಡವರೇ ಹೆಚ್ಚು.ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿ, ಚೂರಿ ಹಂಚಿದವರನ್ನು ಬಂಧಿಸಬೇಕಾಗಿದ್ದ ಪೊಲೀಸ್ ಇಲಾಖೆ ವೌನವಾಗಿದೆ.

ಈಗಾಗಲೇ ಲಾಕ್‌ಡೌನ್‌ನಿಂದ ನಿರುದ್ಯೋಗಿಗಳಾಗಿರುವ ಕೆಳಜಾತಿಯ ಯುವಕರಿಗೆ ಸಣ್ಣ ಪುಟ್ಟ ಹಣದ ಆಮಿಷ ತೋರಿಸಿ ಅವರನ್ನು ಹಿಂಸೆಗಿಳಿಯಲು ಪ್ರೇರೇಪಿಸಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇಂದು ಆಯುಧ ಪೂಜೆಯ ದಿನ ಯುವಕರಿಗೆ ಹಂಚಬೇಕಾದುದು ಆನ್‌ಲೈನ್ ತರಗತಿಯನ್ನು ಪಡೆಯುವುದಕ್ಕೆ ಸಣ್ಣ ದರದಲ್ಲಿ ಮೊಬೈಲ್‌ಗಳು. ಹಾಗೆಯೇ ಪುಸ್ತಕ, ಪೆನ್ನುಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕು. ಆಗ ಮಾತ್ರ ಬದುಕಿನ ಕುರಿತಂತೆ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಆಯುಧಗಳು ಅವರಿಗೆ ಆತ್ಮವಿಶ್ವಾಸವನ್ನು ನೀಡಲಾರವು. ಬದಲಿಗೆ ಅವರನ್ನು ಇನ್ನಷ್ಟು ಕತ್ತಲಿಗೆ ಕೊಂಡೊಯ್ಯುತ್ತದೆ. ಒಂದೆರೆಡು ಕ್ರಿಮಿನಲ್ ಪ್ರಕರಣಗಳು ಅವರ ಮೇಲೆ ಬಿದ್ದರೆ ಮತ್ತೆ ಮುಖ್ಯ ವಾಹಿನಿಗೆ ಬರುವುದಕ್ಕೆ ಸಾಧ್ಯವೇ ಇಲ್ಲದಂತಾಗುತ್ತದೆ. ವಿಜಯದಶಮಿಯ ದಿನ ಚೂರಿ ಹಂಚಿ, ಅವರನ್ನು ವಿಜಯದ ಕಡೆಯಿಂದ ವೈಫಲ್ಯದ ಕಡೆಗೆ ತಳ್ಳಿದ ಸಂಘಟಕರನ್ನು ತಕ್ಷಣ ಬಂಧಿಸಬೇಕಾಗಿದೆ. ಹಾಗೆಯೇ ಚೂರಿಯನ್ನು ಪಡೆದ ಯುವಕರಿಗೆ ಜಿಲ್ಲಾಡಳಿತದ ವತಿಯಿಂದ ಮಾನಸಿಕ ಕೌನ್ಸಿಲಿಂಗ್ ನಡೆಸಬೇಕಾಗಿದೆ. ಅವರೊಳಗೆ ಧರ್ಮದ ಹೆಸರಲ್ಲಿ ಬಿತ್ತಿದ ಹಿಂಸಾತ್ಮಕ ವೌಲ್ಯಗಳನ್ನು ತೊಳೆದು ಹಾಕಿ, ಅಲ್ಲಿ ನೈತಿಕ ವೌಲ್ಯಗಳನ್ನು ಬಿತ್ತಬೇಕು. ಚೂರಿ ಪಡೆದ ಕೈಗೆ ಅಂಬೇಡ್ಕರ್ ಪುಸ್ತಕಗಳನ್ನು ನೀಡಬೇಕು. ನಿಜವಾದ ವಿಜಯದ ಕಡೆಗೆ ಅವರನ್ನು ಮುನ್ನಡೆಸಿ, ವಿಜಯದಶಮಿಯನ್ನು ಅರ್ಥಪೂರ್ಣವಾಗಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)