varthabharthi


ಸಂಪಾದಕೀಯ

ರೋಗವಾಗಿ ಕಾಡಲಿರುವ ‘ಹಸಿವು’

ವಾರ್ತಾ ಭಾರತಿ : 18 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸುಪ್ರೀಂಕೋರ್ಟ್‌ನ ತಪರಾಕಿಯ ಬಳಿಕ ದೇಶದ ಜನರಿಗೆ ಉಚಿತ ಲಸಿಕೆ ಹಂಚುವ ನಿರ್ಧಾರ ತೆಗೆದುಕೊಂಡ ಪ್ರಧಾನಿ, ಇದೀಗ ಉಚಿತ ಲಸಿಕೆಯ ಮೂಲಕ ದೇಶದ ಎಲ್ಲ ಸಮಸ್ಯೆಗಳು ಪರಿಹಾರವಾಯಿತೇನೋ ಎಂಬಂತೆ ಸಂಭ್ರಮಿಸುತ್ತಿದ್ದಾರೆ. ಯಾವುದೇ ಲಜ್ಜೆಯಿಲ್ಲದೆ, ಲಸಿಕೆ ಪ್ರಮಾಣ ಪತ್ರದಲ್ಲಿ ತಮ್ಮ ಭಾವಚಿತ್ರವನ್ನೂ ಅಂಟಿಸಿಕೊಂಡಿದ್ದಾರೆ. ಶ್ರೀಮಂತ ರಾಷ್ಟ್ರಗಳ ಪಾಲಿಗೆ ಕೊರೋನ ಮಾರಕ ರೋಗವಾಗಿತ್ತು ನಿಜ. ಆದರೆ ಭಾರತದಂತಹ ದೇಶದ ಶ್ರೀಸಾಮಾನ್ಯರು ಕೊರೋನ ಎಂದು ಬೊಬ್ಬಿಟ್ಟಿದ್ದಕ್ಕಿಂತ, ಉದ್ಯೋಗ, ಹಸಿವು ಎಂದು ಬೊಬ್ಬಿಟ್ಟದ್ದೇ ಹೆಚ್ಚು. ‘ಲಾಕ್‌ಡೌನ್ ಸಡಿಲಿಸಿ, ಬದುಕುವುದಕ್ಕೆ ಬಿಡಿ, ಹಸಿವು ನಿವಾರಿಸಿ’ ಎಂದು ಕಳೆದ ಎರಡು ವರ್ಷಗಳಿಂದ ದೇಶದ ಬಡ ಜನರು ಸರಕಾರವನ್ನು ಆಗ್ರಹಿಸುತ್ತಿದ್ದಾರೆಯೇ ಹೊರತು, ಲಸಿಕೆ ಕೊಡಿ, ನಮ್ಮನ್ನು ಬದುಕಿಸಿ ಎಂದು ಅವರು ಕೇಳಿದ್ದಿಲ್ಲ. ಕೊರೋನ ಕುರಿತ ಮಧ್ಯಮ, ಮೇಲ್‌ಮಧ್ಯಮ ಮತ್ತು ಶ್ರೀಮಂತ ವರ್ಗದ ಆತಂಕಕ್ಕೆ ಸವಾಲು ಹಾಕುವಂತೆ ಕಳೆದ ಎರಡು ವರ್ಷಗಳಿಂದ ಬೀದಿ ಬದಿಯಲ್ಲಿ ಕಾರ್ಮಿಕರು ಕೊರೋನದ ಯಾವ ಅಂಜಿಕೆಯೂ ಇಲ್ಲದೆ ಬದುಕುತ್ತಾ ಬಂದಿದ್ದಾರೆ. ‘‘ನಮಗೆ ಕೊರೋನದ ಭಯವಿಲ್ಲ. ಹಸಿವಿನ ಭಯವಿದೆ’ ಎಂದು ಅವರು ಪದೇ ಪದೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಕೊರೋನವನ್ನು ಗೆದ್ದರೂ ಭಾರತದ ಸಮಸ್ಯೆ ಮುಗಿಯುವುದಿಲ್ಲ ಎನ್ನುವುದನ್ನು ಇದು ಹೇಳುತ್ತಿದೆ. ಯಾಕೆಂದರೆ, ಭಾರತವನ್ನು ಭವಿಷ್ಯದಲ್ಲಿ ಕೊರೋನಕ್ಕಿಂತಲೂ ಭೀಕರವಾಗಿ ‘ಹಸಿವು’ ಎನ್ನುವ ರೋಗ ಕಾಡಲಿದೆ. ಅದಕ್ಕೆ ನೀಡಬಹುದಾದ ಲಸಿಕೆಯ ನಮ್ಮ ಪ್ರಧಾನಿಯ ಬಳಿಯಿದೆಯೇ?

ಕೊರೋನ ತಣ್ಣಗಾಗುತ್ತಿದ್ದಂತೆಯೇ, 2021ರ ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿ ಹೊರ ಬಿದ್ದಿದೆ. ಅದರಲ್ಲಿ ಭಾರತದ ರ್ಯಾಂಕಿಂಗ್ 101ನೇ ಸ್ಥಾನಕ್ಕೆ ಕುಸಿದಿದೆ. ವಿಪರ್ಯಾಸವೆಂದರೆ, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಭಾರತ ಹಸಿವಿನ ವಿಷಯದಲ್ಲಿ ಹಿಂದಿದೆ. ಒಂದು ದೇಶ, ಒಬ್ಬ ನಾಯಕನ ನೇತೃತ್ವದಲ್ಲಿ ಯಾವ ಹಂತವನ್ನು ತಲುಪಿದೆ ಎನ್ನುವುದನ್ನು ನಿರ್ಧರಿಸುವುದು ಅಲ್ಲಿರುವ ಬಡವರ ಜೀವನ ಮಟ್ಟ. ಒಂದು ಕಾಲದಲ್ಲಿ ಹಸಿವಿಂದ ದಿನ ದೂಡುತ್ತಿದ್ದ ಜನರ ಸ್ಥಿತಿಗತಿ ಯಾವ ಮಟ್ಟಕ್ಕೆ ತಲುಪಿದೆ ಎನ್ನುವ ಆಧಾರದಲ್ಲಿ ಆಡಳಿತವನ್ನು ನಾವು ವಿಶ್ಲೇಷಿಸಬೇಕು. ಇಂದು ದೇಶದಲ್ಲಿ ಹಸಿವಿನ ಹೆಚ್ಚಳಕ್ಕೆ ಕೊರೋನಾವನ್ನು ಹೊಣೆ ಮಾಡಲಾಗುತ್ತಿದೆ. ಆದರೆ ದೇಶದ ಹಸಿವಿನ ಸೂಚ್ಯಂಕ ಕಳೆದ ಒಂದು ದಶಕದಿಂದ ಕಳಪೆ ಪ್ರದರ್ಶನ ತೋರಿಸಿದೆ. ಇದೇ ಸಂದರ್ಭದಲ್ಲಿ ಅದಾನಿ ಮತ್ತು ಅಂಬಾನಿಗಳು ದೇಶದ ಪ್ರಮುಖ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಂದರೆ ದೊಡ್ಡ ಸಂಖ್ಯೆಯ ಜನರಿಂದ ಕಿತ್ತುಕೊಂಡ ದೇಶದ ಸಂಪತ್ತು ಬೆರಳೆಣಿಕೆಯ ಜನರಲ್ಲಿ ಶೇಖಣೆಯಾಗಿದೆ.

 ಹಸಿವು ಎಲ್ಲ ರೋಗಗಳ ತಾಯಿ ಎಂದು ಹೇಳುತ್ತಾರೆ. ಆದರೆ ಭಾರತ ಹಸಿವನ್ನೇ ರೋಗವಾಗಿಸಲು ಹೊರಟಿದೆ. ಆಹಾರ ಸರ್ವರ ಹಕ್ಕು. ಹಸಿವು ಮುಕ್ತ ಭಾರತವನ್ನು ಸೃಷ್ಟಿಸುವುದು ದೇಶವನ್ನು ಮುನ್ನಡೆಸಿದ ಎಲ್ಲ ನಾಯಕರ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ನೆಹರೂ, ಶಾಸ್ತ್ರಿ, ಇಂದಿರಾಗಾಂಧಿಯಂತಹ ನಾಯಕರು ತೆಗೆದುಕೊಂಡ ನಿರ್ಧಾರಗಳು ಈ ದೇಶದಲ್ಲಿ ಭಾರೀ ಮಟ್ಟದ ಆಹಾರ ಉತ್ಪಾದನೆಗೆ ಕಾರಣವಾದವು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ತಳಸ್ತರದ ಜನರ ಬಳಿಗೆ ಆಹಾರವನ್ನು ತಲುಪಿಸುವ ಪರಿಣಾಮಕಾರಿ ಕೆಲಸಗಳು ಆದವು. ಆದರೆ ಕಳೆದ ಒಂದು ದಶಕದಿಂದ, ಬಿಪಿಎಲ್‌ಗಳಲ್ಲಿ ಆದ ಮಾರ್ಪಾಡುಗಳು, ಆಧಾರ್ ಕಾರ್ಡ್‌ನ ನಿಯಮಗಳು ಈ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದವು. ಬಡತನ ರೇಖೆಯ ಕೆಳಗಿನ ಮಾನದಂಡಗಳನ್ನು ಇನ್ನಷ್ಟು ಕಠಿಣಗೊಳಿಸಿ ಬಡವರನ್ನು ಅಲ್ಲಿಂದ ಹೊರ ಹಾಕಿ ಅವರಿಂದ ಅಗತ್ಯ ಆಹಾರಗಳನ್ನು ಸರಕಾರ ಕಿತ್ತುಕೊಳ್ಳ ತೊಡಗಿತು. ಅಷ್ಟೇ ಅಲ್ಲ, ಅಗತ್ಯ ಆಹಾರದ ಪಟ್ಟಿಯಿಂದಲೂ ಹಲವು ಧಾನ್ಯಗಳು ಹೊರ ಬಿದ್ದವು. ಇವೆಲ್ಲವೂ ದೇಶದ ಬಡತನ, ಹಸಿವು ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾದವು. ನೋಟು ನಿಷೇಧದ ದಿನಗಳಿಂದ, ನಿರುದ್ಯೋಗಿಗಳ ಸಂಖ್ಯೆ ದುಪ್ಪಟ್ಟಾದವು. ಇವು ಹಸಿವಿನ ಮೇಲೆ, ಹಸಿವು ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮಗಳನ್ನು ಬೀರುತ್ತಾ ಬಂದವು. ಬೆನ್ನಿಗೇ ದೇಶಕ್ಕಪ್ಪಳಿಸಿದ ಕೊರೋನ ಅಳಿದುಳಿದ ಭರವಸೆಗಳನ್ನು ನಾಶ ಮಾಡಿತು. ಉಚಿತ ಲಸಿಕೆ ಕೊರೋನದ ಮೇಲೆ ಯಾವ ರೀತಿಯ ಪರಿಣಾಮಬೀರಬಹುದು ಎನ್ನುವುದು ಸ್ಪಷ್ಟವಿಲ್ಲ, ಆದರೆ ಹೆಚ್ಚುತ್ತಿರುವ ಹಸಿವು ಈ ದೇಶದ ಕೆಲವು ಮಾರಕ ರೋಗಗಳನ್ನು ಇನ್ನಷ್ಟು ಭೀಕರಗೊಳಿಸಲಿದೆೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಸಿವಿನ ಜೊತೆ ಜೊತೆಗೇ ಕ್ಷಯರೋಗಕ್ಕೆ ಸಂಬಂಧಿಸಿದ ಸಾವಿನ ಸಂಖ್ಯೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ದಶಕದಲ್ಲಿ ಇದೇ ಪ್ರಥಮ ಬಾರಿಗೆ ಕ್ಷಯರೋಗದಿಂದ ಉಂಟಾಗುವ ಸಾವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ. ಭಾರತವಂತೂ ಈ ವಿಷಯದಲ್ಲಿ ಇನ್ನಷ್ಟು ಕಳಪೆ ಸಾಧನೆ ಮಾಡಿದೆ. ಕ್ಷಯರೋಗಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಅಥವಾ ರೋಗ ನಿರ್ಣಯ ಮಾಡಲು ವಿಫಲವಾದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಸಾವಿನ ಸಂಖ್ಯೆಯಲ್ಲೂ ಭಾರೀ ಹೆಚ್ಚಳ ಕಂಡಿದೆ. ಕೊರೋನವನ್ನು ಎದುರಿಸುವುದಕ್ಕಾಗಿ ಭಾರತ ಸರಕಾರವು, ಇತರ ಸಾಂಕ್ರಾಮಿಕ ರೋಗಗಳಿಗಾಗಿ ಮೀಸಲಿರಿಸಿದ ನಿಧಿಗಳನ್ನು ಬಳಸಿಕೊಂಡಿದೆ. ಮುಖ್ಯವಾಗಿ ಕೊರೋನ ಕುರಿತ ಆತಂಕ, ಕ್ಷಯ ರೋಗಿಗಳನ್ನು ಸಂಪೂರ್ಣ ನಿರ್ಲಕ್ಷಿಸುವಂತೆ ಮಾಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ಷಯರೋಗ ವಿಸ್ತರಣೆಗೊಂಡಿದೆ. ಕೊರೋನ ಪೀಡಿತರಲ್ಲೂ ಕ್ಷಯ ರೋಗಗಳ ಲಕ್ಷಣಗಳು ಕಾಣಿಸಿಕೊಂಡಿವೆ. ಭಾರತ ಭವಿಷ್ಯದಲ್ಲಿ ಎದುರಿಸಬೇಕಾಗಿರುವ ಅಪಾಯಗಳ ಸೂಚನೆಯನ್ನು ಕ್ಷಯರೋಗಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳು ತೆರೆದಿಟ್ಟಿವೆ.

ಕ್ಷಯ ಮತ್ತು ಹಸಿವಿಗೆ ನೇರ ಸಂಬಂಧವಿದೆ. ಪೌಷ್ಟಿಕ ಆಹಾರದ ಕೊರತೆ ಹೆಚ್ಚಾದಂತೆಯೇ, ಮನುಷ್ಯನ ದೇಹವನ್ನು ಕ್ಷಯ ರೋಗಾಣುಗಳು ಆಕ್ರಮಿಸಲು ಯಶಸ್ವಿಯಾಗುತ್ತವೆೆ. ಒಂದೆಡೆ ಹಸಿವು , ಬಡತನ ವಿಜೃಂಭಿಸುತ್ತಿರುವ ಸಂದರ್ಭದಲ್ಲೇ ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ, ಇಲ್ಲಿನ ಹೈನೋದ್ಯಮ ಮತ್ತು ಪೌಷ್ಟಿಕ ಆಹಾರದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ. ಜನರ ಕೈಯಿಂದ ಪೌಷ್ಟಿಕ ಆಹಾರವಾದ ಗೋಮಾಂಸವನ್ನು ಕಸಿದು, ಅವುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದು ದೇಶದಲ್ಲಿ ಇತರ ಮಾಂಸಾಹಾರಗಳ ಬೆಲೆ ದುಬಾರಿಯಾಗಲು ಕಾರಣವಾಗುತ್ತಿದೆ. ಹಾಗೆಯೇ ನಕಲಿ ಗೋರಕ್ಷಕರ ಹಾವಳಿಯಿಂದ ಹೈನೋದ್ಯಮ ನಷ್ಟವಾಗಿ ಹಾಲು, ತುಪ್ಪದಂತಹ ಪದಾರ್ಥಗಳು ದುಬಾರಿಯಾಗುತ್ತಿವೆ. ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ನಿರುದ್ಯೋಗ ಮತ್ತು ಬಡತನ ಹೆಚ್ಚಲು ಕಾರಣವಾಗುತ್ತಿದೆ. ಒಟ್ಟಿನಲ್ಲಿ, ಭಾರತದಲ್ಲಿ ಈಗ ಸೃಷ್ಟಿಯಾಗಿರುವ ಹಸಿವು, ಹಿಂದುತ್ವ ರಾಜಕಾರಣದ ಭಾಗವೇ ಆಗಿದೆ. ಇಲ್ಲಿ ಹಸಿವನ್ನು ಇನ್ನಷ್ಟು ಭೀಕರವಾಗಿಸಿ, ದೇಶವನ್ನು ಅರಾಜಕತೆಯೆಡೆಗೆ ದೂಡುವ ಪ್ರಯತ್ನವೊಂದು ನಡೆಯುತ್ತಿದೆ ಮತ್ತು ಅದರಲ್ಲಿ ಅವರು ಭಾಗಶಃ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ವಿಶ್ವಸಂಸ್ಥೆಯ ಅಂಕಿ ಅಂಶ ನಮಗೆ ಹೇಳುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)