varthabharthi


ಕರ್ನಾಟಕ

ಚಿತ್ರದುರ್ಗ: ವಿಷ ಆಹಾರ ಸೇವಿಸಿ ಒಂದೇ ಕುಟುಂಬದ 4 ಜನ ಮೃತಪಟ್ಟ ಪ್ರಕರಣಕ್ಕೆ ತಿರುವು; ಬಾಲಕಿ ವಶಕ್ಕೆ

ವಾರ್ತಾ ಭಾರತಿ : 18 Oct, 2021

ಚಿತ್ರದುರ್ಗ: ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವಿನ್ನಪ್ಪಿದ್ದ  ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಅಪ್ರಾಪ್ತ ಬಾಲಕಿಯಾಗಿರುವ ಮೃತ ತಿಪ್ಪಾನಾಯ್ಕ್ ಹಾಗೂ ಸುಧಾಭಾಯಿ ಅವರ ಮಗಳೇ ಈ ಕೃತ್ಯ ನಡೆಸಿರುವ ಬಗ್ಗೆ ಬೆಳಕಿಗೆ ಬಂದಿದೆ. 

ಕಳೆದ ಜುಲೈ 12ರಂದು ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗೊಲ್ಲರಹಟ್ಟಿ ಎಂಬಲ್ಲಿ ರಾತ್ರಿ ವೇಳೆ ರಾಗಿ ಮುದ್ದೆ, ಹೆಸರು ಕಾಲು, ಸಾಂಬಾರು, ಅನ್ನ ಊಟ ಸೇವಿಸಿ ಮನೆಯಲ್ಲಿ ಮಲಗಿದ್ದ ತಿಪ್ಪಾನಾಯ್ಕ್  , ಸುಧಾಭಾಯಿ , ರಮ್ಯಾ (16) ಚಂದ್ರ ಶೇಖರ್ ಯಾನೆ ರಾಹುಲ್ (18) ಗುಂಡಿ ಬಾಯಿ (80) ಎಂಬವರು ಹೊಟ್ಟೆ ನೋವು, ವಾಂತಿ ಬೇದಿಯಿಂದ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. 

ಜುಲೈ 13ರಂದು  ತಿಪ್ಪಾನಾಯ್ಕ್ 45, ತಾಯಿ ಸುಧಾಬಾಯಿ 40, ರಮ್ಯ 16, ಅಜ್ಜಿ ಗುಂಡಿಬಾಯಿ 80 ಮೃತಪಟ್ಟಿದ್ದರು. ಬಳಿಕ ಬಾಲಕಿಯ ಸೋದರ ಚಂದ್ರ ಶೇಖರ್ ಯಾನೆ ರಾಹುಲ್ ಚಿಕಿತ್ಸೆಯಿಂದ ಗುಣಮುಖನಾಗಿದ್ದು, ಕೃತ್ಯದ ಕುರಿತು ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾನೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ರಾಗಿ ಮುದ್ದೆ ಹಾಗೂ ಆಹಾರ ಪದಾರ್ಥಕ್ಕೆ ಬಳಸಿದ್ದ ಪಾತ್ರೆಗಳನ್ನು ದಾವಣಗೆರೆಯ ಎಫ್. ಎಸ್. ಎಲ್ ಪರೀಕ್ಷೆಗೆ ಕಳುಹಿಸಿದ್ದು, ರಾಗಿ ಮುದ್ದೆಯಲ್ಲಿ ವಿಷ ಬೆರೆತಿರುವ ಬಗ್ಗೆ ಎಫ್. ಎಸ್. ಎಲ್ ವರದಿಯಲ್ಲಿ ಬಹಿರಂಗವಾಗಿದೆ. 

ಎಫ್. ಎಸ್. ಎಲ್ ವರದಿ ಬಂದ ಬಳಿಕ ತನಿಖೆ ಚುರುಕುಗೊಳಿಸಿದ್ದ ಭರಮಸಾಗರ ಪೊಲೀಸರು, ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದು, ಮೃತ ತಿಪ್ಪಾನಾಯ್ಕ್ ಹಾಗೂ ಸುಧಾಭಾಯಿ ಅವರ ಮಗಳೇ ಈ ಕೃತ್ಯ ನಡೆಸಿರುವ ಬಗ್ಗೆ ಪತ್ತೆ ಹಚ್ಚಿದ್ದಾರೆ. 

ಸದ್ಯ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಬಾಲಮಂದಿರಕ್ಕೆ ಕಳುಹಿಸಿದ್ದಾರೆ. 

ಕುಟುಂಬದಲ್ಲಿ ತಂದೆ, ತಾಯಿ ವಿನಾ ಕಾರಣ ಬೈಯುವುದ ಮತ್ತು ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದು, ಬಾಲಕಿಯನ್ನು ತಿರಸ್ಕಾರ ಮನೋಭಾವನೆಯಿಂದ ನೋಡುತ್ತಿದ್ದರು ಎಂಬುದೇ ಕೃತ್ಯಕ್ಕೆ ಕಾರಣ ಎಂದು ಅಪ್ರಾಪ್ತ ಬಾಲಕಿ ಒಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)