varthabharthi


ವಿಶೇಷ-ವರದಿಗಳು

''ಆರೆಸ್ಸೆಸ್‌ನ ಗೋಮುಖ ವ್ಯಾಘ್ರ ಮನಸ್ಥಿತಿ ಬಹಿರಂಗಪಡಿಸುವ ದೃಢತೆ, ಆತ್ಮವಿಶ್ವಾಸ ಕಾಂಗ್ರೆಸ್ ಗೆ ಇರುತ್ತಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ''

ಅನ್ಯಾಯವಾದರೂ ಪ್ರತಿಭಟಿಸದಂತಹ ದುಃಸ್ಥಿತಿಯಲ್ಲಿ ನಾವಿದ್ದೇವೆ: ಮಾಜಿ ಸ್ಪೀಕರ್ ರಮೆಶ್ ಕುಮಾರ್

ವಾರ್ತಾ ಭಾರತಿ : 19 Oct, 2021
► *ಸಂದರ್ಶನ*: ಮಂಜುಳಾ ಮಾಸ್ತಿಕಟ್ಟೆ/ ಬರಹ ರೂಪ: ಪ್ರಕಾಶ್ ಸಿ. ರಾಮಜೋಗಿಹಳ್ಳಿ

► ವಾ.ಭಾ.: ಸದನದ ಒಳಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶ ದೊರೆಯಲಿಲ್ಲ. ಆ ವಿಚಾರಗಳನ್ನು ಜನರ ಬಳಿಗೆ ಕೊಂಡೊಯ್ಯುವುದು ಕಾಂಗ್ರೆಸ್ ಪಕ್ಷಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ರಮೇಶ್ ಕುಮಾರ್: ಜನಜೀವನ ಸಂಪೂರ್ಣ ಬದಲಾಗಿದೆ. ನಾನು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ 1962ರಲ್ಲಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸೈಕಲ್ ನಿಲುಗಡೆಗೆ ಕೇವಲ 25 ಪೈಸೆ ತೆರಿಗೆ ವಿಧಿಸಿದರು. ಸರಕಾರಿ ಆಸತ್ರೆಗಳಲ್ಲಿ ಒಪಿಡಿ ಚೀಟಿ ಪಡೆಯಲು ಇದ್ದ 50 ಪೈಸೆ ಶುಲ್ಕವನ್ನು 1ರೂ.ಗೆ ಹೆಚ್ಚಳ ಮಾಡಿದ್ದಕ್ಕೆ ಸದನದ ಒಳಗೆ-ಹೊರಗೆ ದೊಡ್ಡ ಪ್ರತಿಭಟನೆ, ಗದ್ದಲ ನಡೆಯಿತು. ಅದರ ಪರಿಣಾಮ ಆ ತೆರಿಗೆ ತೆಗೆದುಹಾಕಿದರು. ಆದರೆ, ಇಂದು ಪೆಟ್ರೋಲ್, ಡೀಸೆಲ್ 100 ರೂ.ದಾಟಿದೆ. ಆದರೂ ಜನತೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ, ಎಲ್ಲರಿಗೂ ಆಗಿದ್ದು ನನಗೂ ಆಗುತ್ತೆ, ನಾನೇಕೆ ಪ್ರತಿಭಟನೆ ಮಾಡಬೇಕೆಂಬ ಮನಸ್ಥಿತಿಗೆ ಬಂದಿದ್ದಾರೆ.

ಹೋರಾಟಕ್ಕೆ ಜನತೆಯ ಪ್ರೋತ್ಸಾಹದಾಯಕ ಸ್ಪಂದನ ಅಗತ್ಯ. ಜನ ಸಂಘಟನೆಗಳಿಗೂ ಅವಕಾಶಗಳು ಕಡಿಮೆ ಆಗಿವೆ. ಯಾವುದೇ ಚಳವಳಿಯಲ್ಲಿ ಜನತೆ ಪಾಲ್ಗೊಳ್ಳುವಿಕೆ ಕಡಿಮೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ನಾನೇಕೆ ಪ್ರತಿಭಟನೆ ಮಾಡಬೇಕೆಂಬ ಭಾವನೆ ಇದೆ. ಹೀಗಾಗಿ ನಾವು ಬೆಲೆ ಏರಿಕೆ ವಿರುದ್ಧ ಸಿನಿಮೀಯ ರೀತಿಯಲ್ಲಿ ಎತ್ತಿನಗಾಡಿ ಮೇಲೆ ಬಂದು ಪ್ರತಿಭಟನೆ ನಡೆಸಿದೆವು. ದಿಲ್ಲಿಯಲ್ಲಿ ರೈತರ ಹೋರಾಟ ಬಿಟ್ಟರೆ ಅನ್ಯಾಯದ ವಿರುದ್ಧ ಅಷ್ಟಾಗಿ ಪ್ರತಿಭಟನೆ, ಹೋರಾಟಗಳು ಇಲ್ಲ. ಇದಕ್ಕೆ ಆರ್ಥಿಕ ಪರಿಸ್ಥಿತಿ ಮತ್ತು ಶಿಕ್ಷಣ ನೀತಿಯೂ ಕಾರಣ. ಅನ್ಯಾಯವಾದರೂ ಪ್ರತಿಭಟಿಸದಂತಹ ದಾರಿದ್ರ ಸ್ಥಿತಿಯಲ್ಲಿ ನಾವಿದ್ದೇವೆ. ಇದನ್ನೇ ಬಂಡವಾಳಶಾಹಿ ವ್ಯವಸ್ಥೆ ಬಯಸುತ್ತದೆ.

 ‘ಮಹಿಳೆಗೆ ಹೆರಿಗೆ ನೋವಿನಷ್ಟೇ ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಹಳ ಕಷ್ಟಕರ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಹೇರಿ ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ಬಂದಂತೆ ಲೋಕಸಭೆ ಸೆಂಟ್ರಲ್ ಹಾಲ್‌ನಲ್ಲಿ ಸಂಭ್ರಮಿಸಿದರು. ನಾನು ಸಾಕಿದ ‘ಕುರಿ’ಗೆ ವಿಮೆ ಮಾಡಿದರೆ ಅದಕ್ಕೂ ಜಿಎಸ್‌ಟಿ. ತೆರಿಗೆ ಹೇರಿ ಒಂದು ಕಡೆ ಹಬ್ಬ ಮಾಡಿದರೂ, ಮತ್ತೊಂದು ಕಡೆ, ಗರಿಷ್ಠ ಮೊತ್ತದ ನೋಟು ಅಮಾನ್ಯದ ಮೂಲಕ ಜನರ ಬಾಳುನಾಶ ಮಾಡಿ ವಿಜೃಂಭಿಸಿದರು. ನಾವು(ಕಾಂಗ್ರೆಸ್) ಒಳ್ಳೆಯದು ಮಾಡಿದರೂ, ಪ್ರಚಾರ ಮಾಡುವುದಿಲ್ಲ. ಆದರೆ, ಅವರು(ಬಿಜೆಪಿ)ತಪ್ಪುಗಳನ್ನೇ ಮಾಡಿದರೂ ತಪ್ಪು ಎಂದು ಹೇಳುವುದೇ ಇಲ್ಲ. ‘ಬಹುಮತ ಇದೆ’ ದೇಶಕ್ಕೆ ಬೆಳಕು ನೀಡುವ ಸೂರ್ಯ(ಮೋದಿ), ಚಂದ್ರ(ಅಮಿತ್ ಶಾ) ನಾವೇ ಎಂದು ಕಾನೂನು ಮಾಡಬೇಕಷ್ಟೇ. ಸಂಖ್ಯಾಬಲ ಇರುವವರಿಗೆ ಆಡಳಿತ ನಡೆಸಲು ಸಂವಿಧಾನ ಅವಕಾಶ ನೀಡಿದೆ ಎಂದ ಮಾತ್ರಕ್ಕೆ ಮನಸೋ ಇಚ್ಛೆ ಕಾನೂನು ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ, ಕಹಿ-ಸಿಹಿಗಳ ವಿವೇಚನೆ ಮಾಡುವ ಶಕ್ತಿ ನನ್ನ ದೇಶದ ಜನರಿಗೆ ಇದೆ’ ಎಂದು ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಆಕ್ರೋಶದ ಧಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ‘ವಾರ್ತಾಭಾರತಿ ಯೂಟ್ಯೂಬ್’ ಚಾನಲ್‌ಗೆನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಪಕ್ಷದ ವಾಸ್ತವ ಸ್ಥಿತಿಗತಿ, ಚಾಣಕ್ಯ ವಿವಿ ವಿಧೇಯಕ ಸಹಿತ ಹಲವು ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಿದ ಆಡಳಿತಾರೂಢ ಬಿಜೆಪಿಯ ಕಾರ್ಯವೈಖರಿ, ಮನುಸ್ಮತಿ, ಆರೆಸ್ಸೆಸ್, ಅನೈತಿಕ ಪೊಲೀಸ್‌ಗಿರಿ ಸಹಿತ ಶಿಕ್ಷಣ, ಆರೋಗ್ಯ ಪರಿಸ್ಥಿತಿಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು’ ಪತ್ರಿಕೆ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ವಾರ್ತಾಭಾರತಿ: ಎಡಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗೆ ಹಲವರನ್ನು ಸೆಳೆದುಕೊಳ್ಳುವ ಮೂಲಕ ಕಾಂಗ್ರೆಸ್, ಬಿಜೆಪಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ ಎಂಬ ಆರೋಪದ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ಕೆ.ಆರ್.ರಮೇಶ್ ಕುಮಾರ್: ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಅವರಿಗೆ ತಾವು ನಂಬಿದ ಸಿದ್ಧಾಂತ ಹೆಚ್ಚು ಪ್ರಚುರಪಡಿಸಲು ಕಾಂಗ್ರೆಸ್ ವೇದಿಕೆಯಾಗಲಿದೆ ಎಂದು ಭಾವನೆಯಲ್ಲಿ ಅವರು ಇಲ್ಲಿಗೆ ಬಂದಿರಬಹುದು. ಒಂದೆರಡು ರಾಜ್ಯಗಳನ್ನು ಬಿಟ್ಟರೆ ಬೇರೆ ಎಲ್ಲೂ ನಾವು ಅಧಿಕಾರದಲ್ಲಿ ಇಲ್ಲ. ಆಕರ್ಷಣೆ ಮತ್ತು ಲಾಭಕ್ಕಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆಂದು ಆರೋಪಿಸಿದರೆ ಅದು ಹುಚ್ಚುತನ.

► ವಾ.ಭಾ: ಪಂಜಾಬ್ ರಾಜ್ಯದಲ್ಲಿನ ಬೆಳವಣಿಗೆಗಳು ಹಾಗೂ ರಾಹುಲ್ ಗಾಂಧಿ ನಾಯಕತ್ವ ವಿರುದ್ಧವೇ ಹಿರಿಯ ನಾಯಕರ ಆಪಾದನೆಗಳ ಬಗ್ಗೆ ಏನು ಹೇಳುತ್ತೀರಿ?

ರಮೇಶ್ ಕುಮಾರ್: ಕಾಂಗ್ರೆಸ್ ಪಕ್ಷ ಇಂದು ಸಂಕಷ್ಟದಲ್ಲಿದೆ. ಹಿರಿಯ ಮುಖಂಡರು ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳುವ ಬದಲು ಪಕ್ಷದ ವೇದಿಕೆಯಲ್ಲಿ ಹೇಳಿದ್ದರೆ ಪಕ್ಷಕ್ಕೆ ಹೆಚ್ಚು ಅನುಕೂಲ ಆಗುತ್ತಿತ್ತು. ಆದರೆ, ಅವರ ಉದ್ದೇಶ ಒಳ್ಳೆಯದಿದ್ದರೂ ಇದು ಪಕ್ಷಕ್ಕೆ ಅನುಕೂಲಕ್ಕಿಂತ ಅನನುಕೂಲ ಹೆಚ್ಚು ಮಾಡುತ್ತಿದೆ. ಪಕ್ಷದ ಮುಖಂಡರ ಬಗ್ಗೆ ಇದಕ್ಕಿಂತ ಹೆಚ್ಚು ನಾನು ಪ್ರತಿಕ್ರಿಯಿಸುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಮ್ಯಾನ್. ಪಕ್ಷಕ್ಕೆ ಒಳ್ಳೆಯದಾಗಬೇಕೆಂಬುದಷ್ಟೇ ನನ್ನ ಉದ್ದೇಶ.

► ವಾ.ಭಾ: ಇತ್ತೀಚೆಗೆ ಪೂರ್ಣಗೊಂಡ ವಿಧಾನಮಂಡಲ ಅಧಿವೇಶನದಲ್ಲಿ ಆರೆಸ್ಸೆಸ್ ಹಿನ್ನೆಲೆಯ ಚಾಣಕ್ಯ ವಿವಿ ಸಹಿತ ಹಲವು ವಿಧೇಯಕಗಳ ಕುರಿತು ಚರ್ಚೆಯೇ ಆಗಲಿಲ್ಲ. ಆಡಳಿತ ಪಕ್ಷದ ಉತ್ತರದ ಬಗ್ಗೆ ಪ್ರತಿಪಕ್ಷವಾಗಿ ನಿಮಗೆ ತೃಪ್ತಿ ಇದೆಯೇ?

ರಮೇಶ್ ಕುಮಾರ್: ವಿಧಾನಸಭೆ ಕಲಾಪ ಎಂದರೆ ಅದು ಶಾಸನ ರಚನೆ. ಸದನದಲ್ಲಿ ಚರ್ಚಿಸಬೇಕಾದ ಹಲವು ವಿಚಾರಗಳಿವೆ. ಹೀಗಾಗಿ ಕಲಾಪದ ಅವಧಿ ವಿಸ್ತರಿಸಲು ನಾವು ಮಾಡಿದ ಮನವಿಗೆ ಸರಕಾರ ಸ್ಪಂದಿಸಲಿಲ್ಲ. ಯಾರೇ ಅಧಿಕಾರದಲ್ಲಿದ್ದರೂ ಆಡಳಿತ ನಡೆಸುವ ಅಧಿಕಾರಿಗಳು ನುಡಿಸುವ ಸಂಗೀತ ಇಂಪಾಗಿರುತ್ತದೆ. ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ ಏನೇ ಅಸಮಾಧಾನ, ಪ್ರಚೋದನೆ ಇದ್ದರೂ ಧರಣಿ ಮೂಲಕ ಕಲಾಪದ ಸಮಯ ವ್ಯರ್ಥ ಮಾಡಬಾರದು ಎಂದು ಕಾಂಗ್ರೆಸ್ ಮೊದಲೇ ತೀರ್ಮಾನಿಸಿತ್ತು. ಪ್ರತಿಭಟನೆ ಅನಿವಾರ್ಯವಿದ್ದರೆ ಸಭಾತ್ಯಾಗ ಮಾಡಬೇಕೆಂಬ ನಿರ್ಧಾರ ಮಾಡಿದ್ದೇವು. ಜನರ ದೃಷ್ಟಿಯಿಂದ ಪ್ರತಿಪಕ್ಷ ಖಳನಾಯಕ ಆಗಬಾರದು ಎಂದು ಜವಾಬ್ದಾರಿಯುತವಾಗಿಕೆಲಸ ಮಾಡುವ ಮೂಲಕ ಸರಕಾರಕ್ಕೆ ಸಹಕಾರ ನೀಡಿದ್ದೇವೆ. ಆಡಳಿತ ನಡೆಸುವವರಿಗೆ ಜವಾಬ್ದಾರಿ ಇರಬೇಕು. ಚರ್ಚೆಗೆ ಅವಕಾಶ ನೀಡಬೇಕೆಂಬ ಔದಾರ್ಯ ಇಲ್ಲದೆ ಹೋಯಿತು.

► ವಾ.ಭಾ: ನಮ್ಮ ರಾಜ್ಯದ ಅಧಿವೇಶನಕ್ಕೆ ಮುನ್ನ ನಡೆದ ತಮಿಳುನಾಡಿನ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ವಿರುದ್ಧ ನಿರ್ಣಯ ಕೈಗೊಂಡರು. ರಾಜ್ಯದಲ್ಲಿ ಮೊದಲ ಬಾರಿಗೆ ಎನ್‌ಇಪಿ ಜಾರಿಗೆ ಮುಂದಾಗಿದ್ದು ಅಧಿವೇಶನದಲ್ಲಿ ಚರ್ಚೆಯೇ ಆಗಲಿಲ್ಲ, ಈ ಬಗ್ಗೆ ಏನು ಹೇಳಬಯಸುತ್ತೀರಿ?

ರಮೇಶ್ ಕುಮಾರ್: ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶವನ್ನೇ ನೀಡುವುದಿಲ್ಲ ಎಂದರೆ ಅದು ಅವರ ಮನೋಭಾವವನ್ನು ತೋರಿಸುತ್ತದೆ. ಎನ್‌ಇಪಿಯಲ್ಲಿ ಎಲ್ಲವೂ ಒಳ್ಳೆಯದೇ ಇದೆ. ಜನರಿಗೆ ಒಳ್ಳೆಯದೆ ಆಗುತ್ತದೆ ಎಂದರೆ ಆ ವಿಚಾರವನ್ನು ಸದನಕ್ಕೆ ಮನವರಿಕೆ ಮಾಡಿಕೊಡಬೇಕಲ್ಲ. ಮೈಸೂರಿನಲ್ಲಿ ಒಂದು ಘಟನೆ ನಡೆಯಿತು ಅದು ಸಾರ್ವಜನಿಕ ವಿಚಾರ ಅಲ್ಲವೇ? ಎಲ್ಲ ಪದಾರ್ಥಗಳ ಬೆಲೆ ಏರಿಕೆ ಜನರ ಬದುಕಿಗೆ ಹತ್ತಿರವಾದ ವಿಚಾರವಲ್ಲವೇ? ಎನ್‌ಇಪಿ ಜನರ ಬದುಕಿಗೆ ಸಂಬಂಧಿಸಿದ್ದು, ಇಷ್ಟು ವಿಚಾರವನ್ನಿಟ್ಟುಕೊಂಡು, ವಿಧೇಯಕಗಳ ಚರ್ಚೆಯೂ ಆಗಬೇಕು. ಆದರೆ ಕಲಾಪದ ಅವಧಿ ವಿಸ್ತರಣೆ ಆಗಬಾರದು ಎಂದರೆ ಹೇಗೇ ಸಾಧ್ಯ? ಕಲಾಪ ವಿಸ್ತರಿಸುವ ಜವಾಬ್ದಾರಿ ನಮ್ಮದಲ್ಲ, ಕಲಾಪಕ್ಕೆ ನಾವು ಯಾವುದೇ ತೊಂದರೆ ಮಾಡಿಲ್ಲ. ಕೊನೆಯದಿನ ಯಾವುದೇ ಗತ್ಯಂತರವಿಲ್ಲದೆ ಪ್ರತಿಭಟನೆ ನಡೆಸಬೇಕಾಯಿತು.

ಚಾಣಕ್ಯ ವಿವಿ ವಿಧೇಯಕ ಆತುರಾತುರವಾಗಿ ತಂದಿದ್ದಾರೆ. ನಾಲ್ಕು ಬಿಲ್ ಜಂಪ್ ಮಾಡಿ ಇಂದೇ ಅನುಮೋದನೆ ಆಗಬೇಕೆಂದರೆ ಅಂತಹ ತುರ್ತು ಏನಿದೆ. ಕೆಐಎಡಿಬಿ ಕೈಗಾರಿಕಾ ಉದ್ದೇಶಕ್ಕಾಗಿ ರೈತರಿಂದ ಭೂಸ್ವಾಧೀನ ಮಾಡಿ 175 ಕೋಟಿ ರೂ. ಕೊಟ್ಟು, ಅದನ್ನು ಚಾಣಕ್ಯ ವಿವಿಗೆ 50 ಕೋಟಿ ರೂ.ಗೆ ನೀಡಿದ್ದ್ದಾರೆ. ವಿವಿ ನಡೆಸಲು ಅನುಮೋದನೆ ನೀಡಬೇಕೆಂದರೆ ಅವರು ಏನು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆಂದು ನೋಡುವುದು ಬೇಡವೇ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರಕಾರ ದೊಡ್ಡ ಮೊತ್ತದ ಹಣವನ್ನು ಖೋತಾ ಮಾಡಿಕೊಂಡು ಕೊಡುವ ಅಗತ್ಯವೇನಿದೆ. ವೆಂಟಿಲೇಟರ್, ಹಾಸಿಗೆ, ರೆಮ್‌ಡೆಸಿವಿರ್ ಖರೀದಿಗೆ ಹಣವಿಲ್ಲ. 175 ಕೋಟಿ ರೂ.ಜಮೀನನ್ನು 50 ಕೋಟಿ ರೂ. ಚಾಣಕ್ಯ ವಿವಿಗೆ ನೀಡಿದ್ದಾರೆ. ಆದರೆ, ಅವರಿಗೆ ಒಂದು ಅಂಗನವಾಡಿ ನಡೆಸಿದ ಅನುಭವವೂ ಇಲ್ಲ. ಇದು ಆಗಲೇಬೇಕೆಂದು ಸ್ಪೀಕರ್ ಅವರು ಹೇಳಿದ್ದಾರೆ. ಇದನ್ನೇ ನಾವು ಸ್ಥಾಪಿತ ಹಿತಾಸಕ್ತಿ ಎಂದು ಹೇಳುವುದು. ಮಾತೆತ್ತಿದರೆ ನಾವು ಆರೆಸ್ಸೆಸ್, ಹೆಮ್ಮೆಯಿಂದ ಎದೆ ತಟ್ಟಿಕೊಂಡು ಇದು ನಮ್ಮ ನೀತಿ ಎಂದು ಹೇಳುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಖ್ಯಾಬಲದ ಮೇಲೆ ಜನಾದೇಶ ನಿಂತಿದೆ. ಆದರೆ, ಇವರು ಆ ಸಂಖ್ಯಾಬಲ ಪಡೆದಿದ್ದು ಹೇಗೆಂದು ರಾಜ್ಯದ ಜನರಿಗೆ ಗೊತ್ತಿದೆ. ಸ್ಪಷ್ಟ ಜನಾದೇಶ ಇಲ್ಲದೆ ಇದ್ದರೂ ಕಾನೂನು ಉಲ್ಲಂಘಿಸಿ ವಂಚನೆ ಮಾಡಿದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ.

► ವಾ.ಭಾ.: ಇತ್ತೀಚೆಗೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಪಕ್ಷದೊಳಗೆ ಆರೆಸ್ಸೆಸ್ ಮನಸ್ಥಿತಿಯ ವ್ಯಕ್ತಿಗಳಿದ್ದಾರೆಂದು ಹೇಳಿಕೆ ನೀಡಿದ್ದರು, ಈ ಬಗ್ಗೆ ಏನು ಹೇಳ್ತೀರಿ?

ರಮೇಶ್ ಕುಮಾರ್: ಎಐಸಿಸಿ ಮುಖಂಡ ರಾಹುಲ್ ಗಾಂಧಿ ನಮ್ಮ ಪಕ್ಷದ ಶ್ರೇಷ್ಠ ನಾಯಕರು. ಅವರು ಯಾವ ಸಂದರ್ಭದಲಿ ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದರೂ ಗೊತ್ತಿಲ್ಲ. ಅವರಿಗೆ ಹಾಗೆ ಅನ್ನಿಸಲು ಏನು ಕಾರಣವೋ ತಿಳಿಯದು. ಹೀಗಾಗಿ ಆ ಕುರಿತು ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ.

► ವಾ.ಭಾ.: ಈ ಹಿಂದೆ ನಿಮ್ಮದೆ ಆಡಳಿತದ ಅವಧಿಯಲ್ಲಿ ‘ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ಮುಂದಾದ ಸಂದರ್ಭದಲ್ಲಿ ಅದಕ್ಕೆ ನಿಮ್ಮ ಪಕ್ಷದಿಂದಲೇ ವಿರೋಧ ವ್ಯಕ್ತವಾಯಿತು ಏಕೆ?

ರಮೇಶ್ ಕುಮಾರ್: ‘ಕಾಂಗ್ರೆಸ್ ಪಕ್ಷ ಎಡವೂ ಅಲ್ಲ, ಬಲವೂ ಅಲ್ಲ, ಮಧ್ಯಮ ಮಾರ್ಗದಲ್ಲಿದೆ. ಎಡ ಸಂಪೂರ್ಣ ಎಡವೇ. ಬಲ ಪೂರ್ಣ ಬಲಪಂಥೀಯವೇ. ಆದರೆ, ಕಾಂಗ್ರೆಸ್ ಮಧ್ಯಮ ಮಾರ್ಗದಲ್ಲಿದ್ದು ಇಲ್ಲಿಗೆ ಬಂದು-ಹೋಗುವವರು ಇರುತ್ತಾರೆ. ಹೀಗಾಗಿ ಕೆಲ ಸಂದರ್ಭಗಳಲ್ಲಿ ಹೀಗೆ ಆಗುತ್ತದೆ. ಅದನ್ನು ನಾನು ನಿರಾಕರಣೆ ಮಾಡುವುದಿಲ್ಲ’.

► ವಾ.ಭಾ.: ಇಂದಿರಾ ಕ್ಯಾಂಟೀನ್ ಸಹಿತ ಕಾಂಗ್ರೆಸ್ ಅವಧಿಯಲ್ಲಿದ್ದ ಹೆಸರುಗಳ ಬದಲಾವಣೆ ಬಗ್ಗೆ ನಿಮ್ಮ ಅನಿಸಿಕೆ?

ರಮೇಶ್ ಕುಮಾರ್: ಇಬ್ಬರೇ ಸತ್ಯ, ಉಳಿದದ್ದೆಲ್ಲ ಮಿಥ್ಯ. ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೂರ್ಯ, ಚಂದ್ರ. ಅವರಿಬ್ಬರೇ ದೇಶಕ್ಕೆ ಬೆಳಕು ನೀಡುತ್ತಿದ್ದಾರೆ. ಬಹುಮತವಿದೆ ಎಂದು ಅದಕ್ಕೂ ಒಂದು ಕಾನೂನು ತರಬೇಕು. ಮತ, ಧರ್ಮ ನಿಮ್ಮ ನಿಮ್ಮ ವೈಯಕ್ತಿಕ. ಯಾವುದೇ ವಿಚಾರದಲ್ಲಿ ಬಲಾತ್ಕಾರ ಸಲ್ಲ. ಕ್ರೈಸ್ತ ಧರ್ಮ ಪ್ರಚಾರಕ ಗ್ರಾಹಂ ಸ್ಟಿವ್ಸ್ ಮತ್ತು ಆತನ ಪುತ್ರನನ್ನು ಕಾರಿನಲ್ಲಿ ಸಜೀವ ದಹನ ಮಾಡಿದರೂ ಆತನ ಪತ್ನಿ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು. ಆ ಮಹಿಳೆ ನಿಜವಾದ ಹಿಂದೂ. ಆರೆಸ್ಸೆಸ್‌ನವರು ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಎಲ್ಲರನ್ನು ತಮ್ಮ ವಿಚಾರಗಳ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಭಗವಂತನೂ ಆ ನಿಟ್ಟಿನಲ್ಲಿ ಸಹಾಯ ಮಾಡಬೇಕು. ನಾವು ಅಸಹಾಯಕರಾದಾಗ ಅಪರಿಚಿತ ಶಕ್ತಿಗಳನ್ನು ಅವಲಂಬಿಸುವುದು ಅನಿವಾರ್ಯ. ಹಿಟ್ಲರ್ ಕೊನೆಗಾಲದಲ್ಲಿ ಅಡಗಿಕೊಂಡು ಸತ್ತ ಎಂದು ಇತಿಹಾಸ ಹೇಳುತ್ತಿದೆ. ಇವರೆಲ್ಲರಿಗೂ ಅದೇ ಪರಿಸ್ಥಿತಿ ಬರಲಿದೆ.

► ವಾ.ಭಾ.: ನ್ಯಾಯಾಂಗ ವ್ಯವಸ್ಥೆ ಮಧ್ಯಪ್ರವೇಶ, ಸಿಬಿಐ ದುರ್ಬಳಕೆ ಬಗ್ಗೆ ಏನು ಹೇಳುತ್ತೀರಿ?

ರಮೇಶ್ ಕುಮಾರ್: ಜನರಿಗೆ ಎಲ್ಲೂ ನ್ಯಾಯ ದೊರೆಯದಿದ್ದರೆ ಅಂತಿಮವಾಗಿ ನ್ಯಾಯಾಂಗದ ಮೇಲೆ ಅವರಿಗೆ ಭರವಸೆ. ಕೆಪಿಎಂಇ ಕಾಯ್ದೆ ಜಾರಿಗೆ ಸರಕಾರ ಹಿಂದೇಟು ಹಾಕಿದ ಕಾರಣ ಹೈಕೋರ್ಟ್‌ಗೆ ನಾನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಅಂದಿನ ಮುಖ್ಯ ನ್ಯಾಯಮೂರ್ತಿ ಹಣ ನೀಡಬೇಕೆಂದು ಮೃತದೇಹವನ್ನು ಯಾವುದೇ ಕಾರಣಕ್ಕೂ ಆಸ್ಪತ್ರೆಗಳು ಇಟ್ಟುಕೊಳ್ಳುವಂತಿಲ್ಲ ಎಂದು ಆದೇಶ ಮಾಡಿದರು. ಸಿಬಿಐ ತಮ್ಮ ಅನುಕೂಲಕ್ಕಾಗಿ ಉಪ್ಪಿನಕಾಯಿ ನೆಕ್ಕಿದಂತೆ ನೆಕ್ಕಿದರು. ಸಂಖ್ಯಾಬಲ ಆಧರಿಸಿ ಆಡಳಿತ ನಡೆಸಲು ಸಂವಿಧಾನ ಅವಕಾಶ ನೀಡಲಿದೆ. ಹಾಗೆಂದು ನೀವು ಮನಸೋ ಇಚ್ಛೆ ಕಾನೂನು ಮಾಡಲು ಅವಕಾಶವಿಲ್ಲ. ನನ್ನ ದೇಶದ ಜನರಿಗೆ ಸಿಹಿ ಮತ್ತು ಕಹಿಗಳ ಅರಿವಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ದೇಶ, ಒಕ್ಕೂಟ ವ್ಯವಸ್ಥೆ ಉಳಿಯಲಿದೆ.

► ವಾ.ಭಾ.: ನೀವೇ ಆರೋಗ್ಯ ಸಚಿವರಾಗಿ ಖಾಸಗಿ ಆಸ್ಪತ್ರೆಗಳ ಮನಸೋ ಇಚ್ಛೆ ‘ವಸೂಲಿ’ ಮಾಡುವುದರ ನಿಯಂತ್ರಣಕ್ಕೆ ಕೆಪಿಎಂಎ ಕಾಯ್ದೆ ಜಾರಿಗೆ ತಂದರೂ ಅದರ ಅನುಷ್ಠಾನಕ್ಕೆ ನಿಮ್ಮ ಪಕ್ಷದ ಕೆಲವರು ಬಿಡಲಿಲ್ಲ ಏಕೆ?

ರಮೇಶ್ ಕುಮಾರ್: ಕೆಲವರು ಅಲ್ಲ, ಸಂಪೂರ್ಣ ವಿರೋಧ ಬಂತು. ನಮ್ಮಲ್ಲಿ ಆ ವೈರುದ್ಯವಿದೆ. ಬಡವರ ಪಕ್ಷ ಎನ್ನುತ್ತಲೇ ಮೆಡಿಕಲ್ ಕಾಲೇಜಿನವರೆಗೆ ಸೀಟು ಕೊಡ್ತೀವಿ. ಇದರಿಂದ ನಾವು ಸೋತಿದ್ದೇವೆ. ನಾನು ಸತ್ಯ ಹೇಳದಿದ್ದರೆ ಪಕ್ಷ ಉಳಿಸೋದು ಕಷ್ಟ. ಸ್ಥಾಪಿತ ಹಿತಾಸಕ್ತಿಗಳು ಎಲ್ಲ ಕಡೆಗಳಲ್ಲಿ ಇರುತ್ತಾರೆ. ಅದೇ ಶಕ್ತಿಗಳು ಕೆಪಿಎಂಎ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ನೀಡಲಿಲ್ಲ. ಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಹೊರೆ ಹೆಚ್ಚಾಗಿದೆ. ಸದುದ್ದೇಶದಿಂದ ಕಾಯ್ದೆ ಜಾರಿಗೆ ತಂದರೂ ನಾವೇ ಬೆಂಬಲ ನೀಡಿದ್ದ ಮೈತ್ರಿ ಸರಕಾರ ಅದರ ಅನುಷ್ಠಾನಕ್ಕೆ ಅವಕಾಶ ನೀಡಲಿಲ್ಲ.

► ವಾ.ಭಾ.: ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳ ಅನಿವಾರ್ಯ ಎಂಬ ಸ್ಥಿತಿ ಇದೆ. ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಹಲವು ವಿಚಾರಗಳಲ್ಲಿ ಮಾದರಿ. ರಾಜ್ಯದಲ್ಲಿ ಆ ವಿಚಾರ ಎಷ್ಟು ಅಗತ್ಯ?

ರಮೇಶ್ ಕುಮಾರ್: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಇತಿಹಾಸ ಮತ್ತು ಬೇರೆ ಪಕ್ಷಗಳ ಇತಿಹಾಸಕ್ಕೆ ಹೋಲಿಕೆ ಸರಿಯಲ್ಲ. ಆ ಪಕ್ಷ ಒಂದು ಬೌದ್ಧಿಕ ತತ್ವದ ಆಧಾರದ ಮೇಲೆ ಹುಟ್ಟಿಕೊಂಡು ಆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜನರ ಬೆಂಬಲ ಗಳಿಸಿದೆ. ನಾವೊಂದು ರಾಷ್ಟ್ರೀಯ ಪಕ್ಷ ಆಗಿದ್ದರೂ, ರಾಜ್ಯದ ವಿಚಾರಗಳಲ್ಲಿ ನಮ್ಮ ಸ್ಪಷ್ಟ ಅಭಿಪ್ರಾಯವನ್ನು ನಮ್ಮ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸ್ಥಳೀಯ ವಿಚಾರಗಳ ಬಗ್ಗೆ ನಾವು ಆಲೋಚಿಸಬೇಕಿದೆ. ಆ ವಿಚಾರದಲ್ಲಿ ಎರಡನೇ ಮಾತೇ ಇಲ್ಲ.

► ವಾ.ಭಾ.: ನೀವೇ ಪ್ರಸ್ತಾಪಿಸಿದಂತೆ ಬೌದ್ಧಿಕ ದಿವಾಳಿತನ ಆಗಬಾರದು. ವೈಚಾರಿಕ ವಿಚಾರಗಳ ಪ್ರತಿಪಾದನೆ ಮಾಡುವವರು ದೇಶ ವಿರೋಧಿಗಳು ಎಂಬ ಹಣೆಪಟ್ಟಿ ಹಚ್ಚುವ ಬಗ್ಗೆ ನಿಮ್ಮ ಅನಿಸಿಕೆ?

ರಮೇಶ್ ಕುಮಾರ್: ಗರಿಷ್ಠ ಮೊತ್ತದ ನೋಟು ಅಮಾನ್ಯ ಮಾಡಿ ಹಲವು ದಿನಗಳ ಕಾಲ ಬಡಜನರು, ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಎಲ್ಲರನ್ನು ಸರದಿಯಲ್ಲಿ ನಿಲ್ಲಿಸಿ, ಚಿಲ್ಲರೆ ದೊರೆಯದ ಸ್ಥಿತಿ ನಿರ್ಮಿಸಿದ್ದು ಸರಿ ಎಂದು ಹೇಳಲು ಸಾಧ್ಯವೇ? ನೋಟು ಅಮಾನ್ಯ ಮಾಡಿದ್ದರಿಂದ ಆದ ಪ್ರಯೋಜನವೇನು ಎಂದು ಹೇಳಬೇಕಲ್ಲವೇ? ಎಷ್ಟು ಮೊತ್ತದ ಕಪ್ಪು ಹಣ ಬಂತು. ಉಗ್ರಗಾಮಿ ಚಟುವಟಿಕೆ ಎಷ್ಟು ನಿಗ್ರಹವಾಗಿದೆ. ಎಷ್ಟು ಆರ್ಥಿಕ ಸುಧಾರಣೆಯಾಗಿದೆ ಎಂದು ಯಾರೂ ಹೇಳಲೇ ಇಲ್ಲ. ಈ ವಿಫಲತೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇನ್ನೂ ಎಷ್ಟು ಸುಳ್ಳು ಹೇಳುತ್ತೀರಿ. ನಾವು(ಕಾಂಗ್ರೆಸ್) ಒಳ್ಳೆಯ ಕೆಲಸ ಮಾಡಿದರೂ ತಪ್ಪು ಎಂದು ಹೇಳುತ್ತಿದ್ದರು. ಆದರೆ, ಇಂದು ತಪ್ಪೇ ಮಾಡಿದರೂ ಕಣ್ಣಿಗೆ ಕಾಣುತ್ತಿದ್ದರೂ ಮಾಧ್ಯಮಗಳು ತಪ್ಪು ಎಂದು ಹೇಳುತ್ತಿಲ್ಲ. ರಾಜಕಾರಣಿಗಳು ಜನರು ಅತ್ಯಂತ ತುಚ್ಛವಾಗಿ ನೋಡುತ್ತಿದ್ದಾರೆ. ಇದೇ ಸ್ಥಿತಿ ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೂ ಬರಲಿದೆ.

‘ಭಾವನಾತ್ಮಕ ವಿಚಾರಗಳನ್ನು ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ’

► ವಾ.ಭಾ.: ಮಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು ನೀವು ಇದನ್ನು ಹೇಗೆ ನೋಡುತ್ತೀರಿ?

ರಮೇಶ್ ಕುಮಾರ್:ಮನುಸ್ಮತಿ ಪುರಾಣಕತೆಯಲ್ಲ. ಮನುಷ್ಯ ಸೃಷ್ಟಿಯ ಕಲ್ಪನೆಯ ಮೊದಲು ಈ ದೇಶದಲ್ಲಿ ವರ್ಣಗಳಿದ್ದವು. ಅವು ತಮ್ಮ ವೃತ್ತಿ ಕೌಶಲ್ಯವನ್ನು ಆಧರಿಸಿದ್ದವು. ಕಾಲ ಬದಲಾದಂತೆ ವರ್ಣಗಳು ನಾಲ್ಕು ವರ್ಗಗಳಾಗಿ ಪುನರ್ ಘಟಿಸಿದವು. ಆನಂತರ ಗುರುಕುಲ ಬಂತು. ಬುದ್ಧಿಗೆ ಅನುಗುಣವಾಗಿ ಜವಾಬ್ದಾರಿ ನೀಡಲಾಗುತ್ತಿತ್ತು. ಮನುಸ್ಮತಿ ಆಚರಣೆಗೆ ಬಂದ ಬಳಿಕ ಶ್ರೇಣೀಕೃತ ಸಮಾಜ ನಿರ್ಮಾಣವಾಯಿತು. ಲಿಂಗಭೇದ ಪ್ರಾರಂಭವಾಯಿತು. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತಪಾತ ಕಂಡು ಬೌದ್ಧದಮ್ಮ ರಾಜಧರ್ಮ ಎಂದು ಘೋಷಣೆ ಮಾಡಿದ. ಇದನ್ನೇ ಬಸವಣ್ಣ ಹೇಳಿದರು. ಮನುಸ್ಮತಿ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್, ‘ಹಿಂದೂವಾಗಿ ಹುಟ್ಟಿರುವೆ ಹಿಂದೂವಾಗಿ ಸಾಯಲಾರೆ’ ಎಂದು ಘೋಷಿಸಿ ಬೌದ್ಧ ದಮ್ಮಕ್ಕೆ ಮತಾಂತರವಾದರು. ಆರೆಸ್ಸೆಸ್‌ನವರು ಆಗ ಸಾಧ್ಯವಾಗದೇ ಇದ್ದ ಮನುಸ್ಮತಿಯನ್ನು ಇದೀಗ ಜಾರಿ ಮಾಡಲು ಹೊರಟಿದ್ದಾರೆ. ಅದನ್ನು ಧೈರ್ಯವಾಗಿ ಹೇಳಲು ಸಾಧ್ಯವಾಗದೆ ಅನ್ಯರೂಪದಲ್ಲಿ ಪ್ರತಿಪಾದಿಸುತ್ತಿದ್ದಾರೆ ಅಷ್ಟೇ. ಇವರೆಲ್ಲ ಗೋವಿನ ವೇಷತೊಟ್ಟ ವ್ಯಾಘ್ರಗಳು. ಇದನ್ನು ಹೇಳುವ ದೃಢತೆ, ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಇದ್ದಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಮತಾಂತರ ನಿಷೇಧ, ತಲಾಖ್ ಕಾನೂನು ತನ್ನಿ ಎಂದು ಯಾವುದೇ ಮುಸ್ಲಿಮ್ ಮಹಿಳೆಯರು ಮೋದಿಗೆ ಅರ್ಜಿ ಹಾಕಿರಲಿಲ್ಲ. ‘ಶರೀಯತ್’ ಕಾನೂನು ಬದಲಾವಣೆಗೆ ಲೋಕಸಭೆ ದುರ್ಬಳಕೆ ಎಷ್ಟು ಸರಿ ಎಂದು ಹೇಳಬೇಕು. ಆರ್ಥಿಕ ಕಾರಣದಿಂದ ಉಳಿದಿರುವ ಬಡತನ ನಿರ್ಮೂಲನೆ, ಅಭಿವೃದ್ಧಿ ಕುರಿತು ಪ್ರಗತಿಪರ ಆಲೋಚನೆ ಇಲ್ಲದೆ ಇರುವವರು ಇಂತಹ ಭಾವನಾತ್ಮಕ ವಿಚಾರಗಳನ್ನು ಎತ್ತಿ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ.

‘ಇಂದು ರಾಜಕಾರಣ ವ್ಯಾಪಾರ ಆಗಿದೆ’.

► ವಾ.ಭಾ: ಕಾಂಗ್ರೆಸ್ ರೂಪಿಸಿದ ಹಲವು ಯೋಜನೆಗಳ ಫಲಾನುಭವಿಗಳೇ ಇಂದು ನಿಮ್ಮ ವಿರೋಧಿಗಳು.. ಏನು ಹೇಳುತ್ತೀರಿ?

ರಮೇಶ್ ಕುಮಾರ್: ಬೌದ್ಧಿಕ ದಿವಾಳಿತನಕ್ಕೆ ಏನು ಹೇಳುವುದು. ವೈಚಾರಿಕತೆ ಇರಬೇಕು. ನಾವು ಭೂಸುಧಾರಣೆ ಕಾಯ್ದೆ ಜಾರಿಗೆ ತಂದೆವು. ಆದರೆ, ಇಂದು ಅದರ ಫಲಾನುಭವಿಗಳು ಬಿಜೆಪಿ ಬೆಂಬಲಿಗರಾಗಿದ್ದಾರೆ. ಅಂದರೆ ಅವರೆಲ್ಲ ನಮ್ಮ ಪಕ್ಷಕ್ಕೆ ಮತ ನೀಡುತ್ತೇವೆಂದು ಏನು ಆಗ್ರಿಮೆಂಟ್ ಮಾಡಿಕೊಂಡಿರಲಿಲ್ಲ. ಜನತೆಯ ವಿಶ್ವಾಸ ಗಳಿಸಲು ನಾವು ಯಾವ ಕೆಲಸ ಮಾಡಬೇಕಿತ್ತು ಅದನ್ನು ಮಾಡಿಲ್ಲ. ನಾವು ನಮ್ಮ ಇತಿಹಾಸ ತಿಳಿಯದೆ, ಅದನ್ನು ಬೇರೆಯವರಿಗೆ ತಿಳಿಸಲು ಸಾಧ್ಯವಿಲ್ಲ. ನಮ್ಮ ವಿಚಾರಧಾರೆಗಳ ಅರಿವು ಮತ್ತು ಬದ್ಧತೆ ನಮಗೆ ಇರಬೇಕು. ನಮ್ಮ ವೈಫಲ್ಯವನ್ನು ಬೇರೆಯವರು ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ರೂಪಿಸಿ, ಅನುಷ್ಠಾನಕ್ಕೆ ತಂದ ಎಲ್ಲ ಯೋಜನೆಗಳಿಗೆ ಇತಿಹಾಸವಿದೆ. ದುಡಿಯುವ ವರ್ಗದ ಜನರಿಗೆ ಕೊಳ್ಳುವ ಶಕ್ತಿ ನೀಡುವ ಮಹೋನ್ನತ ಉದ್ದೇಶಕ್ಕಾಗಿ ಇಂದಿರಾಗಾಂಧಿ ಸಬ್ಸಿಡಿ ಯೋಜನೆ ಜಾರಿಗೆ ತಂದಿದ್ದು. ಕಾಂಗ್ರೆಸ್ ಪಕ್ಷದ ಇತಿಹಾಸ ಅನೇಕ ಜನ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗೊತ್ತಿಲ್ಲ. ಕೂಲಿ ಕಾರ್ಮಿಕರ ಬಡತನವನ್ನು ಹಂಚಿಕೊಂಡಿದ್ದು ನಮ್ಮ ಸಿದ್ಧಾಂತ. ಅದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಆದರೆ, ಇಂದು ರಾಜಕಾರಣ ವ್ಯಾಪಾರ ಆಗಿದೆ.

‘ಈ ವಿಚಾರದಲ್ಲಿ ನಾವು ಎಡವಿದ್ದೇವೆ’

► ವಾ.ಭಾ.: ಬಂಡವಾಳಶಾಹಿ, ಉದ್ಯಮಿಗಳು ದೊಡ್ಡ ಸಂಖ್ಯೆಯಲ್ಲಿಂದು ಜನಸೇವೆ ಹೆಸರಿನಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಏಕ ಕಾಲಕ್ಕೆ ಎರಡೂ ಪಾತ್ರ ಹೇಗೆ ಸಾಧ್ಯ?

ರಮೇಶ್ ಕುಮಾರ್: ಸೋಷಿಯಲಿಸ್ಟ್ ಪಾರ್ಟಿಯನ್ನು ಹೊರತುಪಡಿಸಿ ಭಾರತೀಯ ಜನಸಂಘ, ಜನತಾ ಪಾರ್ಟಿ, ಸಂಸ್ಥಾ ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ಜಮಿನ್ದಾರರು, ರಾಜಾಶ್ರಯದಲ್ಲಿದ್ದವರು, ಲೇವಾದೇವಿಗಾರರೇ ಇರುತ್ತಿದ್ದರು. ಕಮ್ಯುನಿಸ್ಟ್ ಪಾರ್ಟಿಯವರು ಕಾರ್ಮಿಕರು ಮತ್ತು ಶೋಷಣೆ ನಿರ್ಮೂಲನೆಗಾಗಿ ವರ್ಗ ಹೋರಾಟ ಮಾಡುತ್ತಿದ್ದರು. ಇವೆರೆಡರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ‘ಸ್ವಾತಂತ್ರ್ಯ ಹೋರಾಟದ ರಕ್ತ’ ಇತ್ತು. ಬಡವರ ಪರ ಮತ್ತು ಶೋಷಣೆ ವಿರುದ್ಧ ಅತ್ತ ಬಲವೂ ಅಲ್ಲದೆ, ಇತ್ತ ಕಮ್ಯುನಿಸ್ಟ್ ಅಲ್ಲದೆ ಮಧ್ಯಮ ಮಾರ್ಗದಲ್ಲಿ ವರ್ಗ ಆಧಾರಿತವಾಗಿತ್ತು. ಹೀಗಾಗಿಯೇ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಸಹಿತ ಹಲವು ಜನಪರ, ಬಡವರ ಪರ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿತು. ಹೀಗಾಗಿ ಆ ಸಂದರ್ಭದಲ್ಲಿ ಗೆಲುವು ಸುಲಭವಾಗಿತ್ತು. ಹಲವು ಜನರು ಅಧಿಕಾರಕ್ಕಾಗಿ ಇಲ್ಲಿಗೆ ಬಂದರು. ಅವರು ಯಾರೂ ಸಿದ್ಧಾಂತಕ್ಕಾಗಿ ಇಲ್ಲಿಗೆ ಬರಲಿಲ್ಲ. ನಮ್ಮಲ್ಲೇ ಇದ್ದ ನಿಷ್ಠಾವಂತರನ್ನು ನಾವು ಕಡೆಗಣಿಸಿ ಕೇವಲ ಭ್ರಮೆಗೆ ಬಿದ್ದ ಪರಿಣಾಮ ವರ್ಗ ಆಧಾರಿತ ಪಕ್ಷ ಇಂದು ಹಣ/ಜಾತಿ ಓಲೈಕೆ ಅನಿವಾರ್ಯವಾಗಿದೆ.ಇಂದು ಟಿಕೆಟ್ ನೀಡಬೇಕಾದರೂ ರಾಜ್ಯಸಭೆ, ಮೇಲ್ಮನೆ ಎಲ್ಲ ಕಡೆಗಳಲ್ಲಿ ಕೋಟ್ಯಧೀಶರೇ ಆಗಬೇಕಿದೆ. ಕೋಟ್ಯಧೀಶರು ದೇಶಸೇವೆಗೆ ಬರುವುದಿಲ್ಲ. ಈ ವಿಚಾರದಲ್ಲಿ ನಾವು ಎಡವಿದ್ದೇವೆ. ಸತ್ಯ ಹೇಳಲು ನನಗೆ ಯಾವುದೇ ಮುಜುಗರವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)