varthabharthi


ಸಂಪಾದಕೀಯ

ಭಾಗವತ್‌ರ ಚುನಾವಣಾ ಭಾಷಣ

ವಾರ್ತಾ ಭಾರತಿ : 20 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೆಸರಿಟ್ಟುಕೊಂಡಿರುವ ಸಂಘಟನೆ ರಾಜಕೀಯಕ್ಕೂ ಸಂಘಕ್ಕೂ ಸಂಬಂಧವಿಲ್ಲ ಎಂದು ಆಗಾಗ ಹೇಳಿಕೊಳ್ಳುತ್ತಿರುತ್ತದೆ. ಹೀಗೆ ಹೇಳುತ್ತಲೇ ಅದು ಮಾಡುತ್ತಾ ಬಂದ ರಾಜಕೀಯ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಈ ಸಂಘಟನೆಯ ರಾಜಕೀಯ ವೇದಿಕೆ. ಈಗ ಅದು ಒಕ್ಕೂಟ ಸರಕಾರದ ಸೂತ್ರ ಹಿಡಿದಿದೆ. ಚುನಾವಣೆಯಲ್ಲಿ ಬಹುಮತ ಗಳಿಸಲು ಆಗದಿದ್ದರೂ ಕರ್ನಾಟಕ ಮಾದರಿಯ ಆಪರೇಶನ್ ಕಮಲದ ತಂತ್ರದ ಮೂಲಕ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಶಾಸಕರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಕೆಲ ರಾಜ್ಯಗಳಲ್ಲಿ ಸರಕಾರಗಳನ್ನೂ ರಚಿಸಿದೆ. ಬಿಜೆಪಿಗೆ ಯಾರೇ ಅಧ್ಯಕ್ಷರಾಗಿರಲಿ ಇದರ ಆಗು ಹೋಗುಗಳನ್ನು ನಿರ್ಧರಿಸುವುದು ನಾಗಪುರದಲ್ಲಿರುವ ಸಂವಿಧಾನೇತರ ಅಧಿಕಾರ ಕೇಂದ್ರ. ಇದನ್ನು ಎಲ್ಲರೂ ಆರೆಸ್ಸೆಸ್ ಎಂದು ಕರೆಯುತ್ತಾರೆ. ಈ ಸಂಘದ ಸರಸಂಘಚಾಲಕ ಮೋಹನ್ ಭಾಗವತರ ಈ ಸಲದ ವಿಜಯ ದಶಮಿ ಭಾಷಣ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಭಾಷಣದಂತಿದೆ ಅಂದರೆ ಅತಿಶಯೋಕ್ತಿಯಲ್ಲ.

ಭಾರತದ ಬಹುಸಂಖ್ಯಾತ ಹಿಂದೂಗಳು ಸೇರಿದಂತೆ ನೂರ ಮೂವತ್ತೈದು ಕೋಟಿ ಜನರು ಬೆಲೆ ಏರಿಕೆ, ನಿರುದ್ಯೋಗ, ಕೊರೋನ ಎರಡೂ ಅಲೆಗಳ ಆನಂತರದ ಆರ್ಥಿಕ ದುಸ್ಥಿತಿಯಲ್ಲಿ ಬೆಂದು ಬಸವಳಿದು ಹೋಗುತ್ತಿರುವಾಗ ಜನಸಾಮಾನ್ಯರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದ ಭಾಗವತರಿಗೆ ಒಮ್ಮಿಂದೊಮ್ಮೆಲೆ ಜನಸಂಖ್ಯಾ ನೀತಿಯ ಪುನಾರಚನೆಯ ನೆನಪಾಗಿದೆ. ಅಂದರೆ ಭಾರತೀಯ ಮೂಲದ ಧರ್ಮಗಳಿಗೆ ಸೇರಿದವರ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ಉಂಟಾಗಿದೆ. ಜನರನ್ನು ಬಾಧಿಸುತ್ತಿರುವ ನೈಜ ಸಮಸ್ಯೆಗಳ ಅರಿವು ಭಾಗವತರಿಗೆ ಇಲ್ಲವೆಂದಲ್ಲ, ಅವರಿಗೆ ಅದರ ಅರಿವಿದೆ. ಆದರೆ ಜನಸಾಮಾನ್ಯರಿಗೆ ತಮ್ಮನ್ನು ಸುಡುತ್ತಿರುವ ಸಮಸ್ಯೆಗಳ ಅರಿವು ಬಾರದಂತೆ ಮಾಡುವ ಅನಸ್ತೆಷಿಯಾ ಮಾದರಿಯ ಮಾತುಗಳು ಅವರ ಬಾಯಿಯಿಂದ ಹೊರಬಂದಿವೆ.

ಜಾಗತಿಕ ಹಸಿವಿನ ಸೂಚ್ಯಂಕ-2021ರಲ್ಲಿ ಭಾರತವು 101ನೇ ಸ್ಥಾನಕ್ಕೆ ಕುಸಿದಿದೆ. ನಮ್ಮ ಅಕ್ಕಪಕ್ಕದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಿಗಿಂತ ಕೆಳಗಿನ ಸ್ಥಾನಕ್ಕೆ ಭಾರತ ಕುಸಿದಿದೆ. ಇನ್ನೊಂದೆಡೆ ನೋಟು ಅಮಾನ್ಯದಿಂದ ಹಿಡಿದು ಕೊರೋನ ನಂತರದ ವಿದ್ಯಮಾನಗಳು ಹಾಗೂ ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆರ್ಥಿಕ ನೀತಿಗಳು ಭಾರತವನ್ನು ಬಿಕ್ಕಟ್ಟಿನ ಸುಳಿಗೆ ತಳ್ಳಿವೆ. ಸಾರ್ವಜನಿಕ ರಂಗದ ಸರಕಾರಿ ಸೊತ್ತನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿರುವುದು, ದಲಿತ ದಮನಿತ ಸಮುದಾಯದ ಜನರ ಮೇಲೆ ನಿತ್ಯವೂ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳು, ಕಳೆದ ಒಂದು ವರ್ಷದಿಂದ ಅಪಾಯಕಾರಿ ಕೃಷಿ ನೀತಿಗಳ ವಿರುದ್ಧ ಮಣ್ಣಿನ ಮಕ್ಕಳು ನಡೆಸಿರುವ ಹೋರಾಟ, ಅದನ್ನು ಹತ್ತಿಕ್ಕಲು ಸರಕಾರ ನಡೆಸಿರುವ ಮಸಲತ್ತು, ಆದಿತ್ಯನಾಥ್‌ರ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ನುಗ್ಗಿಸಿ ಅನೇಕರ ಸಾವಿಗೆ ಕಾರಣವಾದ ಕೇಂದ್ರ ಮಂತ್ರಿಯ ಮಗ, ಅದನ್ನು ಸಮರ್ಥಿಸಿಕೊಂಡ ಬಿಜೆಪಿ, ಇವೆಲ್ಲ ಮೋಹನ್ ಭಾಗವತರಿಗೆ ಗೊತ್ತಿದೆ. ಬಡವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಂದೂ ಅವರ ಆದ್ಯತೆಯ ಪಟ್ಟಿಯಲ್ಲಿ ಇಲ್ಲ. ಭಾಗವತರಿಗೆ ತುರ್ತಾಗಿ ತಮ್ಮ ಹಿಡನ್ ಅಜೆಂಡಾ ಜಾರಿಯಾಗಬೇಕಾಗಿದೆ. ಅಂದರೆ ಸಂಘದ ಹಿಂದಿನ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಕನಸನ್ನು ನನಸಾಗಿಸಲು ಸಮಾಜವಾದವನ್ನು ದುರ್ಬಲಗೊಳಿಸಿಯಾಗಿದೆ. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುವುದು ಅವರ ಕಾರ್ಯಸೂಚಿ. ಅದಕ್ಕೆ ಅಡ್ಡಿಯಾಗಿರುವುದು ಬಾಬಾಸಾಹೇಬರ ಸಂವಿಧಾನ. ಅದನ್ನು ಮುಗಿಸುವುದು ಅವರ ಸದ್ಯದ ಅಜೆಂಡಾ. ಅದು ಕೈಗೂಡಬೇಕಾದರೆ 2024ರ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು. ಅದಕ್ಕೆ ಅನುಕೂಲವಾಗಲು ಜನರನ್ನು ಹಿಂದೂ-ಮುಸ್ಲಿಂ-ಕ್ರೈಸ್ತ, ಜೈನ-ಬೌದ್ಧ-ಸಿಖ್ ಎಂದು ವಿಭಜಿಸಲೇಬೇಕಾಗಿದೆ. ಅದಕ್ಕಾಗಿ ಭಾಗವತರು ಜನಸಂಖ್ಯಾ ನೀತಿಯ ಹೊಸ ದಾಳ ಬೀಸಿದ್ದಾರೆ. ಅವರ ಕಣ್ಸನ್ನೆಯಂತೆ ಮತಾಂತರದ ನೆಪದಲ್ಲಿ ಕ್ರೈಸ್ತರ ಮೇಲೆ, ಗೋಹತ್ಯೆ ಹೆಸರಲ್ಲಿ ಮುಸಲ್ಮಾನರ ಮೇಲೆ ಕುತ್ಸಿತ ಅಪಪ್ರಚಾರ ಮತ್ತು ತಲವಾರು, ತ್ರಿಶೂಲಗಳ ದೀಕ್ಷಾ ಕಾರ್ಯಕ್ರಮಗಳು ನಡೆದಿವೆ.

ಬಿಜೆಪಿಯ ಮುಂದಿನ ಲೋಕಸಭಾ ಚುನಾವಣೆ ಪ್ರಚಾರದ ಸ್ವರೂಪ ಹೇಗಿರಬೇಕೆಂದು ಮೋಹನ್ ಭಾಗವತರು ಸೂಚ್ಯವಾಗಿ ತಿಳಿಸಿದ್ದಾರೆ. ಭಾರತದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಹಸಿವಿನ ನಿವಾರಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶೈಕ್ಷಣಿಕ ಏಳಿಗೆ ಎಂದೂ ಸಂಘಪರಿವಾರದ ಕಾರ್ಯಸೂಚಿಯಾಗಿರಲಿಲ್ಲ. ಈಗಲೂ ಆಗಿಲ್ಲ. ಜಾತಿ ಶ್ರೇಣೀಕರಣದ ಮನುವಾದಿ ಭಾರತ ಅದರ ಕಾರ್ಯಸೂಚಿ. ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಜನಾಂಗದ ಹೆಸರಿನಲ್ಲಿ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಅದರ ಏಕೈಕ ಕಾರ್ಯಸೂಚಿ. ಅಂತಲೇ ನರೇಂದ್ರ ಮೋದಿ ನೇತೃತ್ವದ ಸರಕಾರದ ಭಾರೀ ಲೋಪಗಳು ಭಾಗವತ್‌ರಿಗೆ ಕಾಣುವುದಿಲ್ಲ. ಜನಸಾಮಾನ್ಯರು ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆಯನ್ನು ಮರೆತು ಜನಸಂಖ್ಯಾ ಹೆಚ್ವಳ, ಮತಾಂತರ, ಲವ್ ಜಿಹಾದ್, ದನಗಳ ಸಾಗಾಟದ ಸುತ್ತ ಚರ್ಚಿಸುತ್ತ ದಿಕ್ಕುತಪ್ಪಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ಭಾಗವತರ ಬಯಕೆ. ಅವರು ವಿಜಯ ದಶಮಿ ಭಾಷಣದಲ್ಲಿ ಸೂಚಿಸಿದ ದಿಕ್ಕಿನಲ್ಲಿ ಮೋದಿ ಸರಕಾರ ಮತ್ತು ಬಿಜೆಪಿ ಮುಂದೆ ಸಾಗಲಿದೆ.

ಆರೆಸ್ಸೆಸ್ ರಾಜಕೀಯೇತರ ಸಂಘಟನೆ ಎಂಬುದೆಲ್ಲ ಬೂಟಾಟಿಕೆಯ ಮಾತು. ಬಿಜೆಪಿ ಪಕ್ಷದಲ್ಲಾಗಲಿ ಸರಕಾರದಲ್ಲಾಗಲಿ ಒಂದು ಕಡ್ಡಿ ಅಲುಗಾಡಬೇಕಾದರೂ ನಾಗಪುರದಿಂದ ಆದೇಶ ಬರಬೇಕು. ಕೇಂದ್ರ ಸಂಪುಟದಲ್ಲಿ ಯಾರು ಮಂತ್ರಿಯಾಗಬೇಕು, ಯಾವ ರಾಜ್ಯಕ್ಕೆ ಯಾರು ಮುಖ್ಯ ಮಂತ್ರಿಯಾಗಬೇಕು ಎಂಬುದನ್ನೆಲ್ಲ ಪ್ರಧಾನಿ ನರೇಂದ್ರ ಮೋದಿ ನಾಗಪುರದ ಗುರುಗಳನ್ನು ಕೇಳದೆ ತಾವೊಬ್ಬರೇ ತೀರ್ಮಾನಿಸುವಂತಿಲ್ಲ. ಭಾರತದ ಪ್ರಭುತ್ವದ ಮೇಲೆ ಹಿಡಿತ ಸಾಧಿಸುವಲ್ಲಿ ಆರೆಸ್ಸೆಸ್ ಬಹುತೇಕ ಯಶಸ್ವಿಯಾಗಿದೆ.ರಾಷ್ಟ್ರಪತಿ, ಪ್ರಧಾನಿ, ಬಹುತೇಕ ಕೇಂದ್ರ ಮಂತ್ರಿಗಳು ಮಾತ್ರವಲ್ಲ ಆಡಳಿತಾಂಗದ ಆಯಕಟ್ಟಿನ ಜಾಗಗಳಲ್ಲಿ ಸಂಘದ ನಿಷ್ಠರು ತುಂಬಿದ್ದಾರೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಲ್ಲೂ ಅದು ಹಿಡಿತ ಸಾಧಿಸುತ್ತಿದೆ.

ಅದರ ಬಹುದಿನದ ಕನಸಾದ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವ ಜನ ಚಳವಳಿಗಳನ್ನು ಈಗಾಗಲೇ ದುರ್ಬಲಗೊಳಿಸಲಾಗಿದೆ. ಅಪಾಯಕಾರಿಯಾದ ಕಾರ್ಮಿಕ ಕಾನೂನು ತಿದ್ದುಪಡಿ, ಅದರ ವಿರುದ್ಧ ದುಡಿಯುವ ಜನರ ಆಕ್ರೋಶ ಇನ್ನೂ ತೀವ್ರ ಹೋರಾಟದ ಸ್ವರೂಪ ತಾಳುತ್ತಿಲ್ಲ. ರೈತ ಹೋರಾಟ ಅವಿರತವಾಗಿ ನಡೆದಿದ್ದರೂ ಅದನ್ನು ಮುಗಿಸಲು ನಾನಾ ಮಸಲತ್ತುಗಳನ್ನು ಸಂಘ ಪರಿವಾರ ನಡೆಸುತ್ತಿದೆ. ಈಗ ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡಬೇಕಾದ ಜನರನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ವಿಭಜಿಸಲು ಜನಸಂಖ್ಯಾ ನೀತಿಯ ಹುಯಿಲೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಅನಗತ್ಯವಾಗಿ ಮತಾಂತರ ನಿಷೇಧ ಕಾನೂನು ತರಲಾಗಿದೆ. ಅದರ ಬೆನ್ನಲ್ಲೇ ಹುಬ್ಬಳ್ಳಿ ಮುಂತಾದ ಕಡೆ ಕ್ರೈಸ್ತರ ಮೇಲೆ ದಾಳಿಗಳು ನಡೆದ ವರದಿಗಳು ಬಂದಿವೆ. ಇದೆಲ್ಲ ಪೂರ್ವ ನಿರ್ಧರಿತ ಕಾರ್ಯಕ್ರಮ. ಆರೆಸ್ಸೆಸ್‌ನ ಇತ್ತೀಚಿನ ಅಖಿಲ ಭಾರತ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವುದನ್ನೇ ಭಾಗವತರು ವಿಜಯ ದಶಮಿ ಭಾಷಣದಲ್ಲಿ ಹೇಳಿದ್ದಾರೆ. ಆ ಮೂಲಕ 2024ರ ಲೋಕಸಭಾ ಚುನಾವಣೆಯ ಬಿಜೆಪಿಯ ಪ್ರಚಾರವನ್ನು ಪ್ರಧಾನಿ ಮೋದಿಯವರಿಗಿಂತ ಮೊದಲೇ ಭಾಗವತರು ಆರಂಭಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)