varthabharthi


ಸಂಪಾದಕೀಯ

ಗೋಮಾಂಸ ರಫ್ತಿಗೆ ನಿಷೇಧವೆಂದು?

ವಾರ್ತಾ ಭಾರತಿ : 21 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂಬ ಗಾದೆಯಂತೆ, ಇತ್ತೀಚೆಗೆ ಕರಾವಳಿಯಲ್ಲಿ ಗೋಹತ್ಯೆಯ ಗದ್ದಲ ಅಂತಿಮವಾಗಿ ಪರಿಣಾಮ ಬೀರಿದ್ದು ಮೀನು ತಿನ್ನುವವರ ಮೇಲೆ. ಗಂಗೊಳ್ಳಿಯ ಗೋಹತ್ಯೆ ವಿವಾದ, ಈ ಹತ್ಯೆಯ ಜೊತೆಗೆ ಯಾವ ಸಂಬಂಧವೂ ಇಲ್ಲದ ಸ್ಥಳೀಯ ಮೀನುಮಾರುವ ಮಹಿಳೆಯರು ಮತ್ತು ಮೀನು ಕೊಳ್ಳುವ ಮುಸ್ಲಿಮರ ನಡುವೆ ಅಸಮಾಧಾನಕ್ಕೆ ಕಾರಣವಾಯಿತು. ಈ ಮೂಲಕ ಸಂಘಪರಿವಾರದ ಗುರಿಯೂ ಈಡೇರಿತು. ಅವರಿಗೆ ಗೋಹತ್ಯೆ ಎಂಬುದು ನೆಪ ಮಾತ್ರ. ಗದ್ದಲ ಎಬ್ಬಿಸಿ ವಿವಿಧ ಸಮುದಾಯಗಳ ನಡುವಿನ ಕೊಡುಕೊಳ್ಳುವಿಕೆಯ ಸಂಬಂಧಗಳನ್ನು ಕೆಡಿಸುವುದೇ ಅವರ ಗುರಿ. ಈಗಾಗಲೇ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಇದು ವಾಸ್ತವದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಲ್ಲ. ಬದಲಿಗೆ, ಜಾನುವಾರು ಮಾರಾಟಕ್ಕೆ ನಿಯಂತ್ರಣ ಹೇರಲಾಗಿರುವ ಕಾಯ್ದೆಯಾಗಿದೆ. ಈ ಕಾಯ್ದೆ ಎಲ್ಲೂ ‘ಗೋಮಾಂಸವನ್ನು ಸೇವಿಸಬಾರದು’ ಎಂದು ಹೇಳುವುದಿಲ್ಲ. ನಿರ್ದಿಷ್ಟ ವಯಸ್ಸಿನ, ನಿರ್ದಿಷ್ಟ ಜಾನುವಾರುಗಳನ್ನು ಮಾರಾಟ ಮಾಡಲು, ಹತ್ಯೆ ಮಾಡಲು ಕಠಿಣ ನಿಯಮಗಳನ್ನು ಹೇರಿದೆ.

ಕರ್ನಾಟಕದಲ್ಲಿ ಈ ಕಾಯ್ದೆಯಿಂದ ಅತಿ ಹೆಚ್ಚು ನಷ್ಟಕ್ಕೀಡಾದವರು ಹೈನೋದ್ಯಮದಲ್ಲಿ ತೊಡಗಿಕೊಂಡಿರುವ ರೈತರು. ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ಮಾರುವ ಹಕ್ಕಿನಿಂದ ಅವರು ವಂಚಿತರಾದರು. ಈಗ ಮಾರಬೇಕಾದರೆ ಅನೈತಿಕ ಪೊಲೀಸರ ಅಥವಾ ನಕಲಿ ಗೋರಕ್ಷಕರ ಸಹಾಯವನ್ನು ಪಡೆಯಬೇಕು. ಒಂದೋ ಅವರಿಗೆ ಆ ದನವನ್ನು ಪುಕ್ಕಟೆಯಾಗಿ ಕೊಟ್ಟು ಬಿಡುತ್ತಾರೆ ಅಥವಾ ಸಣ್ಣ ಬೆಲೆಯನ್ನು ಪಡೆದುಕೊಂಡು ಗೋವುಗಳನ್ನು ಕೊಟ್ಟು ಅನುಪಯುಕ್ತ ದನದಿಂದ ಮುಕ್ತರಾಗುತ್ತಾರೆ. ಹೀಗೆ ಪಡೆದುಕೊಂಡ ಗೋವುಗಳನ್ನು ಅಕ್ರಮ ದಾರಿಯಲ್ಲಿ, ವ್ಯವಸ್ಥೆಯ ಪರೋಕ್ಷ ನೆರವಿನಿಂದ ನಕಲಿ ಗೋರಕ್ಷಕರು ಎಲ್ಲಿಗೆ ಸಾಗಿಸಬೇಕೋ ಅಲ್ಲಿಗೆ ಸಾಗಿಸುತ್ತಾರೆ. ಗೋವುಗಳ ಹೆಸರಲ್ಲಿ ಜನಸಾಮಾನ್ಯರ ಬದುಕನ್ನು ನಗಣ್ಯವಾಗಿ ಕಾಣುವವರ ಕುರಿತಂತೆ ಶತಮಾನದ ಹಿಂದೆಯೇ ಸ್ವಾಮಿ ವಿವೇಕಾನಂದರು ಚಾಟಿ ಏಟು ಬೀಸಿದ್ದರು. ಆರೆಸ್ಸೆಸ್‌ನ ಪ್ರಾತಸ್ಮರಣೀಯರು ಅನ್ನಿಸಿಕೊಂಡಿರುವ ವಿನಾಯಕ ದಾಮೋದರ ಸಾವರ್ಕರ್ ‘‘ಗೋರಕ್ಷಕರನ್ನು ಎಳೆದು ತಂದು ದೇಶದ ಉಳುಮೆಗಾಗಿ ದುಡಿಸಿ’’ ಎಂದು ಕಠಿಣವಾಗಿ ಹೇಳಿದ್ದರು. ಯಾಕೆಂದರೆ, ಗೋವನ್ನು ಪೂಜನೀಯ ದೃಷ್ಟಿಯಿಂದ ಈ ದೇಶದಲ್ಲಿ ಸಾಕುವುದು ವಾಸ್ತವಕ್ಕೆ ಹತ್ತಿರವಲ್ಲದ ಸಂಗತಿ ಎಂದು ಅವರು ಕಂಡುಕೊಂಡಿದ್ದರು. ಗೋವನ್ನು ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಕೋನವನ್ನಿಟ್ಟುಕೊಂಡು ಸಾಕಿದಾಗ ಮಾತ್ರ ಈ ದೇಶದಲ್ಲಿ ಗೋವುಗಳ ಸಂಖ್ಯೆ ಹೆಚ್ಚೀತು ಎನ್ನುವುದನ್ನು ಅವರು ಅರಿತುಕೊಂಡಿದ್ದರು. ‘ದ್ವೇಷ ರಾಜಕಾರಣಕ್ಕಾಗಿ’ ಸಾವರ್ಕರ್ ಹತ್ತು ಹಲವು ತಂತ್ರಗಳನ್ನು ತಮ್ಮ ಶಿಷ್ಯರಿಗೆ ಉಪದೇಶಿಸಿದ್ದಾರಾದರೂ, ಗೋಸಾಕಣೆ ವಿಷಯದಲ್ಲಿ ಮಾತ್ರ ಅವರು ಸ್ಪಷ್ಟ ನಿಲುವನ್ನು ಹೊಂದಿದ್ದರು. ‘ಗೋ ಪೂಜೆ’ಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು.

ಒಬ್ಬ ಅಮಾಯಕ ವೃದ್ಧನ ಮನೆಯ ಫ್ರಿಜ್‌ನಲ್ಲಿ ಒಂದು ಕಿಲೋ ಗೋಮಾಂಸವಿತ್ತು ಎಂದು ಆರೋಪಿಸಿ ಅವರನ್ನು ಥಳಿಸಿ ಕೊಂದುಹಾಕುತ್ತಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ, ಅಮಾಯಕನ ಕೊಲೆ ಚರ್ಚೆಯಾಗದೆ, ಫ್ರಿಜ್‌ನಲ್ಲಿದ್ದುದು ಗೋಮಾಂಸವೋ, ಇತರ ಮಾಂಸವೋ ಎಂದು ಚರ್ಚೆ ನಡೆಯುತ್ತದೆ. ಹಾಗಾದರೆ, ನಿಜಕ್ಕೂ ಈ ದೇಶದಲ್ಲಿ ಗೋಮಾಂಸ ಸೇವನೆ ನಿಷೇಧಿಸಲಾಗಿದೆಯೇ? ನಿಷೇಧಿಸಲಾಗಿದೆಯಾದರೆ ಈ ದೇಶದಲ್ಲಿ ಬೃಹತ್ ಮಾಂಸ ಸಂಸ್ಕರಣಾ ಘಟಕಗಳು ಯಾಕೆ ಅಸ್ತಿತ್ವದಲ್ಲಿವೆ? ಮತ್ತು ಈ ಘಟಕಗಳಿಗೆ ಗೋವುಗಳು ಎಲ್ಲಿಂದ ಬರುತ್ತವೆ? ಇಂದು ಭಾರತದಿಂದ ಅತಿ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತದೆೆ. ಹೀಗೆ ರಫ್ತಾಗುವ ಗೋವುಗಳ ಹತ್ಯೆ ಎಲ್ಲಿ ನಡೆಯುತ್ತವೇ? ಅವರಿಗೆ ಯಾರು ಗೋವುಗಳನ್ನು ಪೂರೈಸುತ್ತಾರೆ? ಈ ಸಂಸ್ಕರಣಾ ಘಟಕಗಳು ಮತ್ತು ರಫ್ತು ನಡೆಯುತ್ತಿರುವುದು ಸರಕಾರದ ಅಧಿಕೃತ ಕಣ್ಗಾವಲಿನಲ್ಲಿ. ಈ ರಫ್ತಿಗೆ ಸರಕಾರ ಪ್ರೋತ್ಸಾಹಿಸುತ್ತ್ತಿದೆಯಾದರೆ, ಅದೇ ಗೋಮಾಂಸದ ಲಾಭಗಳನ್ನು ದೇಶದೊಳಗಿರುವ ಜನರು ಯಾಕೆ ಪಡೆಯಬಾರದು? ಗೋ ಮಾಂಸ ಉದ್ದಿಮೆಯಿಂದ ಪ್ರತಿವರ್ಷ ಕೋಟ್ಯಂತರ ವ್ಯವಹಾರ ನಡೆಯುತ್ತದೆ. ದೇಶದೊಳಗೆ ಗೋಮಾಂಸಕ್ಕೆ ಅಡ್ಡಿಯಾದುದರಿಂದ, ಈ ಲಾಭಗಳೆಲ್ಲ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಕೈ ತಪ್ಪಿ ಬೃಹತ್ ಘಟಕಗಳಿಗೆ ಹೋಗುತ್ತ್ತಿವೆ. ದೇಶದೊಳಗೆ ಹಂಚಿಕೆಯಾಗಬೇಕಾದ ಮಾಂಸ, ದೊಡ್ಡ ಮಟ್ಟದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆೆ. ಅಂದರೆ ದೇಶದೊಳಗಿರುವ ಮಾಂಸಾಹಾರಿಗಳ ಮತ್ತು ಸಣ್ಣ ಪುಟ್ಟ ಮಾಂಸ ವ್ಯಾಪಾರಿಗಳ ಕೈಯಿಂದ ಈ ವ್ಯವಹಾರವನ್ನು ಕಿತ್ತು ಕೆಲವೇ ಕೆಲವು ಉದ್ಯಮಿಗಳಿಗೆ ಲಾಭದಾಯಕವಾಗಿಸುವುದೇ ‘ಗೋ ಹತ್ಯೆ’ ಕಾನೂನಿನ ಪ್ರಮುಖ ಉದ್ದೇಶ. ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ ನಕಲಿ ಗೋರಕ್ಷಕರ ವೇಷದಲ್ಲಿರುವ ಗೂಂಡಾಗಳನ್ನು, ರೌಡಿಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.

ರಾಜ್ಯದಲ್ಲಿ ಗೋಮಾಂಸಾಹಾರಿಗಳ ಮೇಲೆ, ಗೋ ವ್ಯಾಪಾರಿಗಳ ಮೇಲೆ, ಗೋ ಸಾಕುವ ರೈತರ ಮೇಲೆ ದಿನ ನಿತ್ಯ ದೌರ್ಜನ್ಯ ಎಸಗಲಾಗುತ್ತಿದ್ದರೂ ಸರಕಾರ ವೌನವಾಗಿದೆ. ಮುಖ್ಯಮಂತ್ರಿಯನ್ನು ಈ ಬಗ್ಗೆ ಪ್ರಶ್ನಿಸಿದರೆ ‘ಭಾವನಾತ್ಮಕ ವಿಷಯ’ ಎಂದು ತೇಲಿ ಬಿಡುತ್ತಾರೆ. ಆದರೆ ಇದೇ ಸಂದರ್ಭದಲ್ಲಿ, ನೆರೆಯ ಗೋವಾ ಸರಕಾರ, ‘ಕರ್ನಾಟಕದಿಂದ ಪ್ರತಿ ದಿನ ಎರಡು ಟನ್ ಗೋಮಾಂಸ ಪೂರೈಕೆಯಾಗುತ್ತಿದೆೆ’ ಎಂದು ಅಧಿಕೃತ ಹೇಳಿಕೆಯನ್ನು ನೀಡಿದೆ. ಕೊಡಗಿನಲ್ಲಿ ಎರಡು ಕೆ.ಜಿ. ಗೋಮಾಂಸವನ್ನು ಕೊಂಡೊಯ್ದರೆ ಆತನ ಮೇಲೆ ಹಲ್ಲೆ ನಡೆಯುತ್ತದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ನೇತೃತ್ವದಲ್ಲಿ, ಗೋವಾಕ್ಕೆ ಪ್ರತಿ ದಿನ ಎರಡು ಟನ್‌ಗೂ ಅಧಿಕ ಗೋಮಾಂಸ ಪೂರೈಕೆಯಾಗುತ್ತಿದೆ. ಕಳೆದ ಆರು ತಿಂಗಳಲ್ಲಿ 400 ಟನ್ ಗೋಮಾಂಸ ಕರ್ನಾಟಕದಿಂದ ಗೋವಾಕ್ಕೆ ಪೂರೈಕೆ ಆಗಿದೆ. ಗೋವಾದಲ್ಲಿರುವುದೂ ಬಿಜೆಪಿ ಸರಕಾರವೇ ಆಗಿದೆ. ಇದೇ ಸಂದರ್ಭದಲ್ಲಿ ಅನಧಿಕೃತವಾಗಿಯೂ ಗೋವಾಕ್ಕೆ ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಪೂರೈಕೆಯಾಗುತ್ತಿದೆೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕದ ಸಂಗತಿಯಿದು. ಈ ಗೋಮಾಂಸ ಸಾಗಾಟದ ತೆರೆಮರೆಯಲ್ಲಿ ಯಾರಿದ್ದಾರೆ ಎನ್ನುವುದರ ವಿಸ್ತೃತ ತನಿಖೆ ನಡೆದರೆ, ಅತ್ಯಂತ ಅಚ್ಚರಿದಾಯಕ ವಿವರಗಳು ಹೊರ ಬೀಳಬಹುದು. ‘ಗೋ ಹತ್ಯೆಯ ಹೆಸರಲ್ಲಿ’ ಪರಸ್ಪರ ಕಚ್ಚಾಟ ನಡೆಸಿದ ಜನಸಾಮಾನ್ಯರನ್ನು ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬರಬಹುದು.

ಗೋಹತ್ಯೆಯ ಹೆಸರಿನಲ್ಲಿ ಜನಸಾಮಾನ್ಯರ ನಡುವೆ ವಿಷ ಬಿತ್ತಿ ಜಗಳ ಹಚ್ಚುವ ಬದಲು, ಎಲ್ಲ ಗೋ ಹತ್ಯೆ ಸಂಸ್ಕರಣಾ ಘಟಕಗಳನ್ನು ಮುಚ್ಚಲು ಆರೆಸ್ಸೆಸ್ ಸರಕಾರವನ್ನು ಒತ್ತಾಯಿಸಲಿ. ಗೋಮಾಂಸ ರಫ್ತು ಸಂಪೂರ್ಣ ನಿಲ್ಲಿಸಲು ಆರೆಸ್ಸೆಸ್ ಮುಖಂಡರು ಸರಕಾರಕ್ಕೆ ‘ಆದೇಶ’ ನೀಡಲಿ. ಹಾಗೆಯೇ, ಗೋವಾಕ್ಕೆ ಗೋಮಾಂಸ ರಫ್ತಾಗುವುದನ್ನು ತಡೆಯಲು ರಾಜ್ಯ ಸರಕಾರಕ್ಕೆ ‘ಕೇಶವ ಕೃಪಾ’ ಒತ್ತಾಯಿಸಲಿ. ಗೋಮಾಂಸವನ್ನು ವಿವಿಧ ರಾಜ್ಯಗಳಿಂದ ಆಮದು ಮಾಡುವುದನ್ನು ನಿಲ್ಲಿಸಲು ಗೋವಾ ಸರಕಾರಕ್ಕೆ ಆಗ್ರಹಿಸಲಿ. ಅಲ್ಲಿಗೆ ಗೋಹತ್ಯೆ ಸಮಸ್ಯೆಯೂ ಮುಕ್ತಾಯವಾಗುತ್ತದೆ. ಈ ನಿಟ್ಟಿನಲ್ಲಿ ಆರೆಸ್ಸೆಸ್ ತನ್ನ ಆಂದೋಲನವನ್ನು ಆದಷ್ಟು ಬೇಗ ಆರಂಭಿಸುತ್ತದೆ ಎಂದು ನಿರೀಕ್ಷಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)