varthabharthi


ರಾಷ್ಟ್ರೀಯ

ಪತ್ನಿ, ಅತ್ತೆಯ ಕತ್ತು ಸೀಳಿ ಬರ್ಬರ ಹತ್ಯೆ

ವಾರ್ತಾ ಭಾರತಿ : 22 Oct, 2021

ಗುರುಗ್ರಾಮ, ಅ.22: ಫರೀದಾಬಾದ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ 32 ವರ್ಷದ ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿ ಮತ್ತು ಅತ್ತೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಜತೆಗೆ ಆರೋಪಿ, ನಿದ್ದೆಯಲ್ಲಿದ್ದ ಬಾವ ಹಾಗೂ ವ್ಯವಹಾರ ಪಾಲುದಾರನತ್ತ ಗುಂಡು ಹಾರಿಸಿದ್ದಾನೆ.

ಗೋಥಡ ಮೊಹಬತಾಬಾದ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಆರೋಪಿಯ ಪತ್ನಿ ಆಯೇಷಾ (32) ಮತ್ತು ಆಕೆಯ ತಾಯಿ ಸುಮನ್ (50) ಮೃತಪಟ್ಟಿರುವುದನ್ನು ಆಸ್ಪತ್ರೆಯಲ್ಲಿ ದೃಢಪಡಿಸಲಾಯಿತು. ಆರೋಪಿಯ ಬಾವನ ಸ್ನೇಹಿತ ಕೂಡಾ ಗುಂಡೇಟಿಗೆ ಬಲಿಯಾಗಿದ್ದಾನೆ. ಭಾವ ಗಗನ್ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ಆರೋಪಿಯನ್ನು ನೀರಜ್ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿಯ ಬಳಿಕ 2:30ರ ವೇಳೆಗೆ ನೀರಜ್ ತನ್ನ ಸ್ನೇಹಿತ ಲೇಖರಾಜ್ ಜತೆಗೆ ಬಂದೂಕಿನೊಂದಿಗೆ ತೆರಳಿ ತನ್ನ ಪತ್ನಿ ವಾಸಿಸುತ್ತಿದ್ದ ಮನೆಯ ಬಾಗಿಲು ಬಡಿದಿದ್ದಾನೆ. ದಂಪತಿಯ 12 ವರ್ಷದ ಮಗ ಬಾಗಿಲು ತೆಗೆದಿದ್ದಾನೆ ಎನ್ನಲಾಗಿದೆ.

ಮೊದಲು ಚಾಕುವಿನಿಂದ ಪತ್ನಿ ಮತ್ತು ಅತ್ತೆಯ ಕತ್ತು ಸೀಳಿ ಬಳಿಕ ಮತ್ತೊಂದು ಕೊಠಡಿಗೆ ತೆರಳಿ ಗಗನ್ ಮತ್ತು ರಾಜನ್‌ಗೆ ಗುಂಡು ಹೊಡೆದ ಎನ್ನಲಾಗಿದೆ. 20 ನಿಮಿಷ ಅವಧಿಯಲ್ಲಿ ನಾಲ್ವರ ಮೇಲೆ ದಾಳಿ ಮಾಡಿದ ಆರೋಪಿಗಳು ಪಲಾಯನ ಮಾಡಿದರು. 12 ವರ್ಷದ ಬಾಲಕ ಈ ಘಟನೆಯಿಂದ ಆಘಾತಗೊಂಡು ಅಳುತ್ತಾ ಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಂಟ್ರಿ ಪಿಸ್ತೂಲ್‌ನಿಂದ ಕನಿಷ್ಠ ನಾಲ್ಕು ಗುಂಡು ಹೊಡೆಯಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಳಿಕ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ನಡೆಯುತ್ತಿದ್ದು, ಹತ್ಯೆಗೆ ಕಾರಣ ತಿಳಿದುಬಂದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)