varthabharthi


ಕರ್ನಾಟಕ

ಮೈಸೂರು: ತಂದೆ ಹಾಗೂ ಅವರ ಪ್ರೇಯಸಿಯ ಕೊಲೆಗೈದ ಪುತ್ರ

ವಾರ್ತಾ ಭಾರತಿ : 22 Oct, 2021

ಕೊಲೆಯಾದ ಶಿವಪ್ರಕಾಶ್

ಮೈಸೂರು, ಅ.22: ತಂದೆ ಮತ್ತು ತಂದೆಯ ಪ್ರೇಯಸಿ ಎನ್ನಲಾದ ಮಹಿಳೆಯನ್ನು ಮಗನೇ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಶ್ರೀನಗರ ದಡದಹಳ್ಳಿಯಲ್ಲಿ ನಡೆದಿರುವುದು ವರದಿಯಾಗಿದೆ.

ಹತ್ಯೆಯಾದವರು ನಗರದ ಕೆ.ಜಿ.ಕೊಪ್ಪಲ್ ನಿವಾಸಿ ಶಿವಪ್ರಕಾಶ್(54) ಮತ್ತು ಅವರ ಪ್ರೇಯಸಿ ಶ್ರೀನಗರ ನಿವಾಸಿ ಲತಾ (48) ಎಂದು ಹೇಳಲಾಗಿದೆ. ಶಿವಪ್ರಕಾಶ್ ಪುತ್ರ ಸಾಗರ್ (30) ಕೊಲೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.

 ಗುರುವಾರ ರಾತ್ರಿ 9:30 ಗಂಟೆ ಸಮಯದಲ್ಲಿ ಶ್ರೀನಗರದಲ್ಲಿರುವ ಲತಾ ಅವರ ಮನೆಗೆ ನುಗ್ಗಿದ ಸಾಗರ್  ತಂದೆಯನ್ನು ರಸ್ತೆಗೆ ಎಳೆದುಕೊಂಡು ಬಂದವನೇ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿಹಾಕಿದ್ದಾನೆ. ನಂತರ ಲತಾ ಅವರನ್ನು ಹಿಡಿದುಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಲತಾಳ ಪುತ್ರ ನಾಗಾರ್ಜುನ್ (25) ಗೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು. ನಾಗರ್ಜುನನ್ನು ಸದ್ಯ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕಂಡು ಬೆಚ್ಚಿಬಿದ್ದ ಶ್ರೀನಗರ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಸಾಗರ್ ಪರಾರಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ.

ಸ್ಥಳಕ್ಕೆ ಎಸ್ಪಿ ಚೇತನ್, ಅಡಿಷನಲ್ ಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ:

ಶಿವಪ್ರಕಾಶ್ ಮತ್ತು ಲತಾ ಪತಿ ನಾಗರಾಜು ಸ್ನೇಹಿತರು, ನಾಗರಾಜು 2006ರಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಇದಾದ ನಂತರ ಶಿವಪ್ರಕಾಶ್ ಮತ್ತು ಲತಾ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ.

ಇದಾದ ನಂತರ ಶಿವಪ್ರಕಾಶ್ ಲತಾರಿಗೆ ಶ್ರೀನಗರದಲ್ಲಿ ಸ್ವಂತ ಮನೆಯನ್ನು ಕಟ್ಟಿಸಿಕೊಟ್ಟಿದ್ದು, ಈಕೆಯ  ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿದ್ದಾರೆ. ಮತ್ತು ಮಗನನ್ನು ಓದಿಸುತ್ತಿದ್ದರು ಎನ್ನಲಾಗಿದೆ.

ಇದರಿಂದ ಶಿವಪ್ರಕಾಶ್ ಪತ್ನಿ ಮತ್ತು ಮಗ ಸಾಗರ್ ತನ್ನ ತಂದೆಗೆ ಲತಾಳ ಸಹವಾಸ ಬಿಟ್ಟುಬಿಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಗಲಾಟೆಗಳೂ ನಡೆದಿತ್ತು ಎಂದು ತಿಳಿದು ಬಂದಿದೆ.

ತಂದೆ ಶಿವಪ್ರಕಾಶ್ ಪ್ರೇಯಸಿ ಲತಾರನ್ನು ಮತ್ತು ಅವರ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶದಿಂದ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ..

ಆರೋಪಿ ಸಾಗರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷರಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)