varthabharthi


ರಾಷ್ಟ್ರೀಯ

ಗುರ್ಗಾಂವ್: ಮತ್ತೊಮ್ಮೆ ಶುಕ್ರವಾರದ ನಮಾಝ್‌ ವೇಳೆ ಘೋಷಣೆ ಕೂಗಿದ ಹಿಂದುತ್ವ ಕಾರ್ಯಕರ್ತರು

ವಾರ್ತಾ ಭಾರತಿ : 22 Oct, 2021

ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಅ.22: ಗುರ್ಗಾಂವ್ ನ 12-ಎ ಸೆಕ್ಟರ್ನ ಖಾಸಗಿ ಜಾಗದಲ್ಲಿ ಶುಕ್ರವಾರ ಶಾಂತಿಯುತವಾಗಿ ನಮಾಝ್ ಸಲ್ಲಿಸುತ್ತಿದ್ದ ಮುಸ್ಲಿಮರು ಸ್ಥಳೀಯರ ಗುಂಪಿನಿಂದ ವ್ಯತ್ಯಯಗಳನ್ನು ಎದುರಿಸುವಂತಾಗಿತ್ತು. ಬಜರಂಗ ದಳ ಕಾರ್ಯಕರ್ತರು ಸೇರಿದಂತೆ ಗುಂಪಿನಲ್ಲಿದ್ದವರು ಜೈ ಶ್ರೀ ರಾಮ ಘೋಷಣೆಗಳನ್ನು ಕೂಗುತ್ತಿದ್ದು,ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಅಂತಹ ಉದ್ವಿಗ್ನತೆಗೆ ಸೆಕ್ಟರ್ 47 ಕೂಡ ಸಾಕ್ಷಿಯಾಗಿತ್ತು. ಅಲ್ಲಿ ಸರಕಾರಿ ಜಾಗದಲ್ಲಿ ನಮಾಝ್ ಸಲ್ಲಿಕೆಗೆ ಪ್ರತಿಭಟನೆಗಳು ವ್ಯಕ್ತವಾಗಿದ್ದು,ಪ್ರಾರ್ಥನೆಯನ್ನು ನಿಲ್ಲಿಸುವಂತೆ ಅಥವಾ ಒಳಾಂಗಣದಲ್ಲಿ ಮುಂದುವರಿಸುವಂತೆ ಗುಂಪು ಆಗ್ರಹಿಸಿತ್ತು.

ಮುಸ್ಲಿಮರು ನಮಾಝ್ ಸಲ್ಲಿಸುತ್ತಿದ್ದ ಎರಡೂ ಸ್ಥಳಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಉಪಸ್ಥಿತರಿದ್ದರು.ಕೆಲವು ಲೋಹದ ಬ್ಯಾರಿಕೇಡ್ಗಳ ಹಿಂದೆ ಕಾವಲು ಕಾಯುತ್ತಿದ್ದ ಪೊಲೀಸರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತ ಮುನ್ನುಗ್ಗುತ್ತಿದ್ದ ಗುಂಪನ್ನು ತಡೆಯುತ್ತಿದ್ದ ದೃಶ್ಯಗಳನ್ನು ವೀಡಿಯೊಗಳು ತೋರಿಸಿವೆ.

ನಮಾಝ್ ಅನ್ನು ಪ್ರತಿಭಟಿಸುತ್ತಿದ್ದವರಲ್ಲಿ ಸ್ಥಳೀಯ ವಕೀಲ ಹಾಗೂ ಮಾಜಿ ಬಿಜೆಪಿ ನಾಯಕ ಕುಲಭೂಷಣ ಭಾರದ್ವಾಜ್ ಅವರೂ ಇದ್ದು, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಕೋಮುವಾದಿ ಭಾಷಣ ಮಾಡಿದ್ದಕ್ಕಾಗಿ ಗುರ್ಗಾಂವ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಜಾಮಿಯಾ ಮಿಲ್ಲಿಯಾ ಶೂಟರ್ ಪರ ಇದೇ ಭಾರದ್ವಾಜ್ ವಕಾಲತ್ ವಹಿಸಿದ್ದರು.

ಶುಕ್ರವಾರ ಪೊಲೀಸರು ಭರವಸೆ ನೀಡಿದ ನಂತರವೇ ಪ್ರತಿಭಟನಾಕಾರರ ಗುಂಪುಗಳು ಚದುರಿದ್ದವು. ಮುಸ್ಲಿಮರು ನಮಾಝ್ ಸಲ್ಲಿಸಲು ಜಾಗದ ಕುರಿತ ವಿವಾದಕ್ಕೆ ಈ ಭರವಸೆ ಸಂಬಂಧಿಸಿದೆ.

ಮುಸ್ಲಿಮರಿಗೆ ನಮಾಝ್ ಸಲ್ಲಿಸಲು ಅವಕಾಶ ಕಲ್ಪಿಸಿ ಗುರ್ಗಾಂವ್ ಜಿಲ್ಲಾಡಳಿತವು ನಿಗದಿಗೊಳಿಸಿರುವ 37 ಸ್ಥಳಗಳಲ್ಲಿ 47 ಮತ್ತು 12 ಎ ಸೆಕ್ಟರ್ನಲ್ಲಿಯ ಈ ಪ್ರಾರ್ಥನಾ ತಾಣಗಳೂ ಸೇರಿವೆ. 2018ರಲ್ಲಿ ಇಂತಹುದೇ ಘಟನೆಗಳ ಹಿನ್ನೆಲೆಯಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಜೊತೆ ಸಮಾಲೋಚನೆಗಳ ಬಳಿಕ ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿತ್ತು.

ಕಳೆದ ವಾರ ಸೆಕ್ಟರ್ 47ರಲ್ಲಿ ನಡೆದಿದ್ದ ಪ್ರತಿಭಟನೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು, ಪ್ರತಿಯೊಬ್ಬರಿಗೂ ಪ್ರಾರ್ಥಿಸುವ ಹಕ್ಕು ಇದೆ,ಆದರೆ ಪ್ರಾರ್ಥನೆಗಳನ್ನು ಸಲ್ಲಿಸುವವರು ರಸ್ತೆ ಸಂಚಾರಕ್ಕೆ ತಡೆಯನ್ನು ಒಡ್ಡಬಾರದು. ಯಾರೂ ಭಾವನೆಗಳಿಗೆ ನೋವನ್ನುಂಟು ಮಾಡಬಾರದು,ಪ್ರಾರ್ಥನೆಗಳಿಗೆ ವ್ಯತ್ಯಯವನ್ನೂ ಉಂಟು ಮಾಡಬಾರದು.

 ಜಿಲ್ಲಾಡಳಿತವು ಸೂಚಿಸಿರುವ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದರೆ ಅದಕ್ಕೆ ವ್ಯತ್ಯಯವನ್ನುಂಟು ಮಾಡಬಾರದು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದ್ದರು.‌ ಕಳೆದ ನಾಲ್ಕು ವಾರಗಳಿಂದಲೂ ಪ್ರತಿಭಟನೆಗಳು ನಡೆಯುತ್ತಿರುವ 47ನೇ ಸೆಕ್ಟರ್ನ ನಿವಾಸಿಗಳು ‘ಕಿಡಿಗೇಡಿಗಳು’ ಅಥವಾ ’ರೊಹಿಂಗ್ಯಾ ನಿರಾಶ್ರಿತರು ’ ಪ್ರದೇಶದಲ್ಲಿ ಅಪರಾಧಗಳನ್ನು ನಡೆಸಲು ಪ್ರಾರ್ಥನೆಯನ್ನು ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಒಂದು ದಿನಕ್ಕೆ ಮಾತ್ರ ನಮಾಝ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು ಎಂದೂ ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)