varthabharthi


ಸಂಪಾದಕೀಯ

ಮುಚ್ಚಿದ ದಾರಿ ತೆರೆಯುವುದೆಂದು?

ವಾರ್ತಾ ಭಾರತಿ : 23 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

 ‘‘ಮೂರು ಕೃಷಿ ಕಾಯ್ದೆಗಳ ವಿರುದ್ಧ್ಧ ದಿಲ್ಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಪ್ರತಿಭಟನೆಯ ಹಕ್ಕು ಇದೆ. ಆದರೆ ಅವರು ಅನಿರ್ದಿಷ್ಟಾವಧಿ ರಸ್ತೆಗಳನ್ನು ನಿರ್ಬಂಧಿಸುವಂತಿಲ್ಲ’’ ಎಂದು ಸುಪ್ರೀಂಕೋರ್ಟ್ ರೈತ ಒಕ್ಕೂಟಕಗಳಿಗೆ ಸೂಚನೆ ನೀಡಿದೆ. ‘ಪ್ರಕರಣ ನ್ಯಾಯಾಲಯದಲ್ಲಿದ್ದರೂ ರೈತರು ಪ್ರತಿಭಟಿಸುವ ಹಕ್ಕಿಗೆ ತಾನು ವಿರುದ್ಧವಾಗಿಲ್ಲ. ಆದರೆ ಅಂತಿಮವಾಗಿ ಏನಾದರೂ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಯಾವುದೇ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸುವ ಹಕ್ಕನ್ನು ರೈತರು ಹೊಂದಿರಬಹುದು. ಆದರೆ ರಸ್ತೆಗಳನ್ನು ಹೀಗೆ ನಿರ್ಬಂಧಿಸುವಂತಿಲ್ಲ. ಜನರಿಗೆ ರಸ್ತೆಗಳಲ್ಲಿ ಸಂಚರಿಸುವ ಹಕ್ಕಿದೆ ’’ ಎಂದು ಅದು ಹೇಳಿದೆ. ಈ ಬಗ್ಗೆ ಉತ್ತರಿಸುವುದಕ್ಕಾಗಿ ರೈತ ಒಕ್ಕೂಟಗಳಿಗೆ ಮೂರು ವಾರಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ.

ರಸ್ತೆತಡೆಯ ಕುರಿತಂತೆ ಈಗಾಗಲೇ ಸುಪ್ರೀಂಕೋರ್ಟ್ ತನ್ನ ಆತಂಕವನ್ನು ಹಲವು ಬಾರಿ ವ್ಯಕ್ತಪಡಿಸಿದೆ. ‘ಸಾರ್ವಜನಿಕರ ಬದುಕಿಗೆ ತೊಂದರೆ ಕೊಡುವ ಹಕ್ಕು ಪ್ರತಿಭಟನಾಕಾರರಿಗಿಲ್ಲ’ ಎಂದು ಅದು ಈ ಹಿಂದೊಮ್ಮೆ ಹೇಳಿತ್ತು. ಆದರೆ ತಕ್ಷಣ ಸ್ಥಳವನ್ನು ತೆರವುಗೊಳಿಸಿ ಎಂಬ ಆದೇಶ ನೀಡುವುದಕ್ಕೆ ಅದು ಹಿಂದೇಟು ಹಾಕುತ್ತಿದೆ. ತನ್ನ ಹೇಳಿಕೆಯ ಪರಿಣಾಮಗಳನ್ನು ಅಧ್ಯಯನ ನಡೆಸಿ, ಬಳಿಕ ರಸ್ತೆ ತೆರವಿನ ಆದೇಶವನ್ನು ನೀಡುವುದಕ್ಕೆ ಸುಪ್ರೀಂಕೋರ್ಟ್ ಸಿದ್ಧತೆ ನಡೆಸುತ್ತಿರುವಂತಿದೆ. ಒಂದೆಡೆ ಪ್ರತಿಭಟನೆಯನ್ನು ಬೆಂಬಲಿಸಿದಂತೆ ನಟಿಸುತ್ತಲೇ, ಮಗದೊಂದೆಡೆ ಸಾರ್ವಜನಿಕರಿಗೆ ಆಗಿರುವ ಸಮಸ್ಯೆಗಳ ಕುರಿತಂತೆ ಆತಂಕ ಪಡುತ್ತಿದೆ ನ್ಯಾಯಾಲಯ. ಇದೇ ಸಂದರ್ಭದಲ್ಲಿ ‘‘ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ, ಪ್ರತಿಭಟನೆ ಎಷ್ಟು ಸರಿ?’’ ಎಂದೂ ಇದೇ ರೈತರನ್ನು ಈ ಹಿಂದೆ ಸುಪ್ರೀಂಕೋರ್ಟ್ ಕೇಳಿದೆ. ಒಟ್ಟಿನಲ್ಲಿ, ರೈತರ ಪ್ರತಿಭಟನೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಧೈರ್ಯ ನ್ಯಾಯಾಲಯಕ್ಕೆ ಇದ್ದಂತಿಲ್ಲ. ಆದುದರಿಂದ, ಸಾರ್ವಜನಿಕರ ಸಮಸ್ಯೆಗಳನ್ನು ಮುಂದೊಡ್ಡಿ, ಪ್ರತಿಭಟನೆಯನ್ನು ಪ್ರಶ್ನಿಸುವುದಕ್ಕೆ ಮುಂದಾಗಿದೆ.

ರೈತರ ಪ್ರತಿಭಟನೆೆ 10 ತಿಂಗಳು ದಾಟಿದೆ. ಈ ಪ್ರತಿಭಟನೆಯ ಹಾದಿಯಲ್ಲಿ ನೂರಾರು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಕೇಂದ್ರ ಸಚಿವರ ಪುತ್ರನೊಬ್ಬ ಕಾರು ಹರಿಸಿ, ರೈತರನ್ನು ಕೊಂದು ಹಾಕಿದ ಪ್ರಕರಣ ನಡೆಯಿತು. ಗಣರಾಜ್ಯೋತ್ಸವದ ದಿನ ಪೊಲೀಸರನ್ನು ಬಳಸಿ, ರೈತರ ಮೇಲೆ ದೌರ್ಜನ್ಯ ಎಸಗಲಾಯಿತು. ಕಳೆದ 10 ತಿಂಗಳಿಂದ ತಮ್ಮ ಮನೆ, ಊರನ್ನು ತೊರೆದು, ಮಳೆ, ಚಳಿ, ಗಾಳಿಯೆನ್ನದೆ ದಿಲ್ಲಿಯ ಗಡಿಯಲ್ಲಿ ಕುಳಿತಿರುವ ವೃದ್ಧ ರೈತರ ಬಗ್ಗೆ ನ್ಯಾಯಾಲಯ ಈವರೆಗೆ ತನ್ನ ಆತಂಕವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ, ಅವರ ಸ್ಥಿತಿಗತಿಗೆ ಮರುಗುವ ಹೃದಯವೇನಾದರೂ ನ್ಯಾಯಾಲಯಕ್ಕಿದ್ದಿದ್ದರೆ, ಪ್ರತಿಭಟನೆ ಇಲ್ಲಿಯವರೆಗೆ ಮುಂದುವರಿಯುತ್ತಿರಲಿಲ್ಲವೇನೋ? ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆಯೆನ್ನುವುದು ನಿಜವೇ ಆಗಿದ್ದರೆ, ನ್ಯಾಯಾಲಯ ತಕ್ಷಣ ಸರಕಾರವನ್ನು ಪ್ರಶ್ನಿಸಬೇಕಾಗಿದೆ. ‘‘ಕಳೆದ 10 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಆದಷ್ಟು ಬೇಗ ಅವರ ಬೇಡಿಕೆಗಳನ್ನು ಈಡೇರಿಸಿ. ಇಷ್ಟು ದಿನಗಳ ಅವರ ಬೇಡಿಕೆ ಈಡೇರಿಸದೇ ಇರುವುದಕ್ಕೆ ನಿಮಗಿರುವ ಸಮಸ್ಯೆಯಾದರೂ ಏನು?’’ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಸರಕಾರಕ್ಕೇ ಕೇಳಬೇಕಾಗಿದೆ.

ಇದೇ ಸಂದರ್ಭದಲ್ಲಿ ಪ್ರಕರಣದ ಗಂಭೀರತೆಯನ್ನು ಅರಿತು, ತನ್ನ ಬಳಿಯಿರುವ ಪ್ರಕರಣವನ್ನು ನ್ಯಾಯಾಲಯ ಬೇಗನೇ ವಿಚಾರಣೆ ನಡೆಸಿದ್ದರೂ ಸಮಸ್ಯೆ ಪರಿಹಾರವಾಗಿ ಬಿಡುತ್ತಿತ್ತು. ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಅದಕ್ಕೆ ಪರೋಕ್ಷವಾಗಿ ಸರಕಾರ ಮತ್ತು ನ್ಯಾಯಾಲಯಗಳೆರಡೂ ಹೊಣೆಯಾಗಿವೆ. ಆದುದರಿಂದ, ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದೇ ಇರಲು, ಕೃಷಿ ನೀತಿಯ ಕುರಿತಂತೆ ನ್ಯಾಯಾಲಯ ಆದಷ್ಟು ಬೇಗ ತನ್ನ ನಿಲುವನ್ನು ಸರಕಾರಕ್ಕೆ ಹೇಳಬೇಕು. ಜನಸಾಮಾನ್ಯರ ರಸ್ತೆಯನ್ನು ನಿರ್ಬಂಧಿಸುವ ಅಧಿಕಾರ ರೈತರಿಗಿಲ್ಲ ಎನ್ನುವ ನ್ಯಾಯಾಲಯದ ಮಾತನ್ನು ಒಪ್ಪೋಣ. ಇದೇ ಸಂದರ್ಭದಲ್ಲಿ , ರೈತರ ಭವಿಷ್ಯಕ್ಕೆ ಮಾರಕವಾಗಬಲ್ಲ ಕೃಷಿ ನೀತಿಯನ್ನು ಜಾರಿಗೊಳಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿದವರು ಯಾರು? ರೈತರು ತಡೆದಿರುವ ರಸ್ತೆ ಕೆಲವು ಕಿಲೋಮೀಟರ್‌ಗಳಿಗೆ ಸಂಬಂಧಿಸಿದ್ದು. ಆದರೆ, ಸರಕಾರ ತಡೆಯಲು ಹೊರಟಿರುವ ರೈತರ ದಾರಿ, ಭವಿಷ್ಯದ ಭಾರತಕ್ಕೆ ಸಂಬಂಧಿಸಿದ್ದು. ರೈತರ ದಾರಿಗೆ ಅಡ್ಡವಾಗಿ ನಿಲ್ಲಿಸಿರುವ ಕೃಷಿ ನೀತಿಗಳನ್ನು ತೆರವು ಗೊಳಿಸಿ, ನಾವು ರಸ್ತೆಯಿಂದ ತೆರವುಗೊಳ್ಳುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಕೃಷಿ ನೀತಿಯಿಂದ ಈ ದೇಶದ ಬೆರಳೆಣಿಕೆಯ ಕಾರ್ಪೊರೇಟ್ ಶಕ್ತಿಗಳಷ್ಟೇ ಲಾಭ ಮಾಡಿಕೊಳ್ಳುತ್ತವೆ.

ಅವರ ಲಾಭಕ್ಕಾಗಿ ರೈತರ ಬದುಕನ್ನು ಕತ್ತಲಿಗೆ ತಳ್ಳಲು ಹೊರಟಿರುವ ಸರಕಾರದ ಕ್ರಮ ಎಷ್ಟರಮಟ್ಟಿಗೆ ಸರಿ? ಈ ನಿಟ್ಟಿನಲ್ಲಿ ಪ್ರಕರಣವನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಿ, ಸರಕಾರಕ್ಕೆ ಮಾರ್ಗದರ್ಶನ ನೀಡಿದ್ದರೆ ರೈತರು ರಸ್ತೆಯಲ್ಲಿ ಕುಳಿತುಕೊಳ್ಳುವ ಅಗತ್ಯವೇ ಬೀಳುತ್ತಿರಲಿಲ್ಲ? ರೈತರು ನಮಗೆ ಬೇಡ ಎನ್ನುತ್ತಿರುವ ಕೃಷಿ ನೀತಿಯನ್ನು ಬಲವಂತವಾಗಿ ಹೇರಲು ಹೊರಟಿರುವ ಸರಕಾರಕ್ಕೆ ಯಾಕೆ ಸಾಮಾನ್ಯ ರೈತರ ಮೇಲೆ ಕಾಳಜಿಯಿಲ್ಲ? ನ್ಯಾಯಾಲಯ ಈ ನಿಟ್ಟಿನಲ್ಲಿ ನ್ಯಾಯಾಲಯ ಮೊದಲು ಸರಕಾರವನ್ನು ಪ್ರಶ್ನಿಸಬೇಕು. ರೈತರನ್ನು ಯಾವ ಕಾರಣಕ್ಕೂ ಬಲವಂತವಾಗಿ ರಸ್ತೆಯಿಂದ ತೆರವುಗೊಳಿಸಲು ನ್ಯಾಯಾಲಯ ಮುಂದಾಗಬಾರದು. ಅದು ಇನ್ನಷ್ಟು ಅನಾಹುತಗಳಿಗೆ ದಾರಿ ಮಾಡಿಕೊಡಬಹುದು. ರಸ್ತೆ ತಡೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಅರಿವು ರೈತರಿಗೂ ಇದೆ. ಆದರೆ ಅದಕ್ಕಿಂತಲೂ ದೊಡ್ಡ ಸಮಸ್ಯೆಯನ್ನು ಹಿಡಿದುಕೊಂಡು ಅವರು ರಸ್ತೆಯಲ್ಲಿ ಕುಳಿತಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ, ರಸ್ತೆ ತೆರವುಗೊಳಿಸುವ ಬಗ್ಗೆ ಸರಕಾರ ಯೋಚಿಸಬೇಕು. ಯಾವ ಕಾರಣಕ್ಕೂ, ನ್ಯಾಯಾಲಯವನ್ನು ಬಳಸಿಕೊಂಡು ಪ್ರಭುತ್ವ ತನ್ನ ಕಾರ್ಯಸಾಧಿಸುವಂತಾಗಬಾರದು. ದಾರಿ ತಪ್ಪಿರುವ ಸರಕಾರವನ್ನು ಸರಿದಾರಿಗೆ ತರುವ ಕೆಲಸ ನ್ಯಾಯಾಲಯದಿಂದ ನಡೆಯಬೇಕು. ಆಗ ಮಾತ್ರ ಭವಿಷ್ಯದ ದಾರಿ ತೆರೆದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)