varthabharthi


ನಿಮ್ಮ ಅಂಕಣ

ಸಂವಿಧಾನ ತಿದ್ದುಪಡಿ: ಜಾತಿಗಳ ಹೊಸ ಸೇರ್ಪಡೆ ಕಗ್ಗಂಟು!

ವಾರ್ತಾ ಭಾರತಿ : 23 Oct, 2021
ಕೆ. ಎನ್. ಲಿಂಗಪ್ಪ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಮಾನವ ಘನತೆ- ಇವು ಸಮಕಾಲೀನ ಸಮಾಜದ ಮೂಲ ತತ್ವಗಳಾಗಿವೆ. ಅಂತೆಯೇ ಅನ್ಯಾಯ, ಅಸಮಾನತೆ ಮತ್ತು ತಾರತಮ್ಯ ನೀತಿಗಳೂ ಕೂಡ ಸಾಮಾಜಿಕ ಶ್ರೇಣೀಕರಣ ಮತ್ತು ಪುರೋಹಿತ ಪ್ರಭುತ್ವದಿಂದಾಗಿ ಎಲ್ಲ ರೀತಿಯಲ್ಲೂ ಜನ ಜೀವನದ ನಡುವೆ ಹಾಸುಹೊಕ್ಕಾಗಿವೆ. ಕುಲೀನ ಕುಲ-ಜನಾಂಗಗಳೆಂಬವು ತಮ್ಮಾಳಗೆ ಹುದುಗಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವೇ ತಾರತಮ್ಯದ ತಾಯಿ ಬೇರು. ಇಂತಹ ತಾರತಮ್ಯವೇ ಹಲವಾರು ನಕಾರಾತ್ಮಕ ಪರಿಣಾಮಗಳಿಗೂ ಮೂಲಧಾತು. ಈ ತಾರತಮ್ಯ ಭಾರತ ಮಾತ್ರವಲ್ಲದೆ, ಹಲವು ದೇಶಗಳಲ್ಲೂ ಆಚರಣೆಯಲ್ಲಿವೆ. ಇದಕ್ಕೆ ಪ್ರತಿಯಾಗಿ ಪರಿಹಾರಾತ್ಮಕ ರೂಪದಲ್ಲಿ ಪ್ರೊಟೆಕ್ಟಿವ್ ಡಿಸ್ಕ್ರಿಮಿನೇಶನ್, ಆ್ಯಂಟಿ ಡಿಸ್ಕ್ರಿಮಿನೇಶನ್, ಅಫರ್ಮ್ಯಾಟಿವ್ ಆ್ಯಕ್ಷನ್ ಹಾಗೂ ಸೋಶಿಯಲ್ ಜಸ್ಟೀಸ್ ಎಂಬಂತಹ ನಿವಾರಣಾ ಕ್ರಮಗಳನ್ನು ಅನುಸರಿಸಲಾಗಿದೆ. ಭಾರತದಲ್ಲಿ ಸಾಮಾಜಿಕ ನ್ಯೂನತೆಗೆ ಒಳಪಟ್ಟ ನಾಗರಿಕ ವರ್ಗಗಳನ್ನು ಹಿಂದುಳಿದ ವರ್ಗಗಳೆಂದೂ ಪರಿಗಣಿಸಲಾಗಿದೆ. ಅಂತಹ ವರ್ಗಗಳು ಸಾಮಾಜಿಕ ನ್ಯೂನತೆಯನ್ನು ಜಯಿಸುವ ನಿಟ್ಟಿನಲ್ಲಿ ನೆರವಾಗಲು ಭಾರತೀಯ ಸಂವಿಧಾನವು ರಕ್ಷಣೆ ಒದಗಿಸಿದೆ. ಆ ರಕ್ಷಣೆಯ ಭಾಗವಾಗಿ ಅಧಿಕಾರವನ್ನು ವರ್ಗವಾರು ಹಂಚಿಕೆ ಮಾಡಲಾಗಿದೆ ವಿಧಿ 16(4)ಶ್ರಿ. ಈ ಹಂಚಿಕೆಗೆ ಒತ್ತಾಸೆಯಾಗಿ, ನ್ಯಾ.ಸಾವಂತ್ ‘‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ನ್ಯೂನತೆಯಿಂದ ರಾಜ್ಯದ ಅಧಿಕಾರದಲ್ಲಿ ಯುಕ್ತ ಪಾಲನ್ನು ಪಡೆಯಲು ಸಾಧ್ಯವಾಗದ ವರ್ಗಗಳು, ಅದನ್ನು ಗಳಿಸಲು ಸಶಕ್ತವಾಗುವ ನಿಟ್ಟಿನಲ್ಲಿ ವಿಧಿ16(4) ಅನ್ನು ವಿಶೇಷವಾಗಿ ರೂಪಿಸಲಾಗಿದೆ’’ ಎಂದು ಅಭಿಪ್ರಾಯ ಪಡುವುದರ ಮೂಲಕ ವಿಧಿ16(4)ರ ಮಹತ್ತನ್ನು ಹೆಚ್ಚಿಸಿದ್ದಾರೆ.

ಕೇಂದ್ರ ಮತ್ತು ಕೇಂದ್ರ ಸರಕಾರದ ಅಂಗ ಸಂಸ್ಥೆಗಳ ಹುದ್ದೆಗಳ ನೇಮಕಕ್ಕೆ, ಅನುಕೂಲವಾಗುವಂತೆ ಅಂತಹ ವರ್ಗಗಳನ್ನು ಗುರುತಿಸಲು ಆಯೋಗ ರಚಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.(ವಿಧಿ.340). ಸಂವಿಧಾನ ಜಾರಿ ಲಾಗಾಯ್ತಿನಿಂದ ಈವರೆಗೆ, ಹಿಂದುಳಿದ ವರ್ಗಗಳನ್ನು ಗುರುತಿಸಲು ಶಕ್ಯವಾ ಗುವಂತೆ ಆಯೋಗವನ್ನು ರಾಷ್ಟ್ರಪತಿಗಳು ಎರಡು ಬಾರಿ ನೇಮಕ ಮಾಡಿದ್ದಾರೆ. ಅವು, 1953ರಲ್ಲಿ ನೇಮಿಸಿದ ಕಾಕಾ ಕಾಲೇಲ್ಕರ್ ಒಂದನೇ ಆಯೋಗ ಹಾಗೂ 1979ರಲ್ಲಿ ನೇಮಿಸಿದ ಎರಡನೇ ಬಿ.ಪಿ.ಮಂಡಲ್ ಆಯೋಗ. 1955ರಲ್ಲಿ ಕಾಕಾ ಕಾಲೇಲ್ಕರ್ ಆಯೋಗ ಸಲ್ಲಿಸಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ಆದರೆ, 1980ರಲ್ಲಿ ಬಿ.ಪಿ.ಮಂಡಲ್ ಆಯೋಗ ನೀಡಿದ ವರದಿಯನ್ನು ಕೇಂದ್ರ ಸರಕಾರ ಪುರಸ್ಕರಿಸಿತಲ್ಲದೆ, ಆ ವರದಿಯನ್ನು ಆಧರಿಸಿ, ಕಾರ್ಯನಿರ್ವಾಹಕ ಆದೇಶದ(executive order) ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿತು ಕೂಡ. ಇಲ್ಲಿ ಗಮನಿಸಬೇಕಾದ ಗುರುತರವಾದ ಅಂಶವೆಂದರೆ, ವರದಿ ಜಾರಿಗೊಳಿಸಲು ಯಾವುದೇ ಕಾಯ್ದೆಯ ಮೊರೆ ಹೋಗದಿರುವುದು. ಕಾರ್ಯನಿರ್ವಾಹಕ ಆದೇಶದ ಮೂಲಕ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದು ಅಸಿಂಧುವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೂ ಕೂಡ ಉಚ್ಚರಿಸಿದೆ.(AIR 1995 AP248).

ಮಂಡಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಹಿಂದುಳಿದ ವರ್ಗಗಳ ಕ್ಲೇಮು, ದೂರು, ಮನವಿಗಳ ಬಗ್ಗೆ ವಿಚಾರಣೆ ನಡೆಸಿ, ಸಮಯೋಚಿತ ಸಲಹೆಗಳನ್ನು ಸರಕಾರಕ್ಕೆ ಸಲ್ಲಿಸುವುದು ಮತ್ತು ಅರ್ಹ ವರ್ಗಗಳನ್ನು ಪಟ್ಟಿಯೊಳಗೆ ಸೇರಿಸುವುದು ಹಾಗೂ ಅನರ್ಹ ವರ್ಗಗಳನ್ನು ಪಟ್ಟಿಯಿಂದ ಹೊರಹಾಕುವುದು ಇವೇ ಮುಂತಾದ ಪ್ರಕ್ರಿಯೆಗಳ ಉದ್ದೇಶಿತ ಕಾರಣದಿಂದ, ಶಾಶ್ವತ ಆಯೋಗಗಳನ್ನು ನೆಲೆಗೊಳಿಸಲು ನೀಡಿರುವ ಆಜ್ಞೆಯ ಅನುಸಾರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಸನಬದ್ಧ ಆಯೋಗಗಳನ್ನು ಪ್ರತಿಷ್ಠಾಪಿಸಿದವು.

ಕೇಂದ್ರ ಸರಕಾರ ಈ ದಿಸೆಯಲ್ಲಿ ಕಾಯ್ದೆಯೊಂದನ್ನೂ ಜಾರಿಗೆ ತಂದಿತು (ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಕಾಯ್ದೆ, 1993). ಸರ್ವೋಚ್ಚ ನ್ಯಾಯಾಲಯದ ಉದ್ದೇಶಿತ ಆದೇಶಗಳೆಲ್ಲವೂ ಕಾಯ್ದೆಯಲ್ಲಿ ಅಡಕಗೊಂಡಿದ್ದವು. ಮುಖ್ಯವಾಗಿ, ಮೇಲೆ ಹೇಳಿರುವ ಅಂಶಗಳೂ ಕೂಡ (ಕಲಂ.9). 1992ರ ನವೆಂಬರ್ ತಿಂಗಳಲ್ಲಿ, ಹಿಂದುಳಿದ ವರ್ಗಗಳ ಮೀಸಲಾತಿಯ ಸಂವಿಧಾನ ಬದ್ಧತೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದು, ಮೀಸಲಾತಿಯ ಅನುಷ್ಠಾನಕ್ಕೆ ಆವರಿಸಿಕೊಂಡಿದ್ದ ಅಡಚಣೆಗಳೆಲ್ಲವನ್ನೂ ನಿವಾರಿಸಿತು( ಮಂಡಲ್ ಪ್ರಕರಣ). ಅದರ ಪರಿಣಾಮವಾಗಿ, 1993ರಲ್ಲಿ ಮಂಡಲ್ ಆಯೋಗ ಶಿಫಾರಸು ಮಾಡಿದ್ದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಕೇಂದ್ರ ಸರಕಾರ ಅಧಿಕೃತ ಜ್ಞಾಪನದ(official memorandum) ಮೂಲಕ ಪ್ರಕಟಿಸಿತು (ಕರ್ನಾಟಕಕ್ಕೆ ಸಂಬಂಧಿಸಿದಂತೆ 323 ಜಾತಿ-ಉಪಜಾತಿಗಳು ಪಟ್ಟಿಯಲ್ಲಿ ಅಂದು ಸೇರಿದ್ದವು). ಪಟ್ಟಿ ಪ್ರಕಟಿಸಲು ಸಂಸತ್ ಅನುಮೋದನೆ ಹಾಗೂ ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದ, ಸರಳ ವಿಧಾನ ಅನುಸರಿಸಿ ಪಟ್ಟಿಯನ್ನು ಪ್ರಕಟಿಸಿರುವುದು ವಿಶೇಷ.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ (1993), ಯಾವುದೇ ಜಾತಿ-ಉಪಜಾತಿ ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಬೇಕೆಂದರೆ, ಅಂತಹ ಜಾತಿ-ಉಪಜಾತಿಯ ಸಂಘ-ಸಂಸ್ಥೆಗಳು, ರಾಜ್ಯ ಸರಕಾರದ ಮೂಲಕವಾಗಲಿ ಅಥವಾ ಮುದ್ದಾಂ ಆಗಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಬೇಕಿತ್ತು. ಮನವಿಯ ಬಗ್ಗೆ ಆಯೋಗ ಸೂಕ್ತ ವಿಚಾರಣೆ ನಡೆಸಿ, ಅಂತಹ ಜಾತಿ-ಉಪಜಾತಿಯು ಹಿಂದುಳಿದ ವರ್ಗ ಎಂದು ಪರಿಗಣಿಸಲು ಅರ್ಹತೆ ಪಡೆದಿದೆ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತಿತ್ತು (ಕಲಂ 9.1). ಕೇಂದ್ರ ಸರಕಾರ ಆಯೋಗದ ಶಿಫಾರಸನ್ನು ಪರಿಗಣಿಸಿ ಅಂತಹ ಜಾತಿ-ಉಪಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಕ್ರಮ ರೂಢಿಯಲ್ಲಿತ್ತು. ಇಂತಹ ಸರಳ ವಿಧಾನವನ್ನು ಸಂವಿಧಾನ ತಿದ್ದುಪಡಿಗೆ (102) ಮೊದಲು ಅನುಸರಿಸಿಕೊಂಡು ಬರಲಾಗುತ್ತಿತ್ತು. ಕರ್ನಾಟಕದಲ್ಲಿ ಆವರೆಗೂ ಬಹಳಷ್ಟು ಜಾತಿ-ಉಪಜಾತಿಗಳನ್ನು (ಅಂದಾಜು 283) ಇದೇ ಕ್ರಮ ಅನುಸರಿಸಿ ಕೇಂದ್ರ ಮೀಸಲಾತಿ ಪಟ್ಟಿಗೆ ಸೇರಿಸಲಾಗಿದೆ(ಪ್ರಸ್ತುತ, 606 ಜಾತಿ-ಉಪಜಾತಿಗಳು ಪಟ್ಟಿಯಲ್ಲಿವೆ).

ಇಂತಿರುವಲ್ಲಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ 2010ರಲ್ಲಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಪ್ರಸ್ತಾವನೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ಕೇಂದ್ರ ಸರಕಾರವನ್ನು ತನ್ನ ಕೈವಶ ಮಾಡಿಕೊಂಡ ನಂತರ ಈ ದಿಸೆಯಲ್ಲಿ ಕ್ರಮಕ್ಕೆ ಮುಂದಾಯಿತು. ತಿದ್ದುಪಡಿ ತರುವ ನಿಟ್ಟಿನಲ್ಲಿ, ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ,(102ನೇ ತಿದ್ದುಪಡಿ) ಅಂಗೀಕಾರ ಪಡೆಯುವಲ್ಲಿ ಬಿಜೆಪಿ ನೇತೃತ್ವದ ಸರಕಾರ ಯಶಸ್ವಿಯಾಯಿತು. ತಿದ್ದುಪಡಿಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸಾಂವಿಧಾನಿಕ ಸ್ಥಾನಮಾನವೇನೋ ದೊರಕಿತು(ವಿಧಿ 338ಬಿ). ಆದರೆ ಸರಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕರುಣಿಸುವ ನೆವದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಜಾತಿ-ಉಪಜಾತಿಗಳ ಹೊಸ ಸೇರ್ಪಡೆಗೆ ಸರಕಾರಕ್ಕೆ ನೇರ ಶಿಫಾರಸು ಮಾಡಲು ಇದ್ದ ಆಯೋಗದ ಅಧಿಕಾರವನ್ನು ಕಸಿದುಕೊಂಡಿತು.

ಸಂವಿಧಾನ ತಿದ್ದುಪಡಿ ಕಾಯ್ದೆ ಅನ್ವಯ ಸಂವಿಧಾನ (102ನೇ ತಿದ್ದುಪಡಿ) ಕಾಯ್ದೆ, 2018 ರಾಷ್ಟ್ರಪತಿಗಳು ರಾಜ್ಯಪಾಲರ ಸಲಹೆ ಮೇರೆಗೆ ಯಾವುದೇ ರಾಜ್ಯಕ್ಕೆ ಸಂಬಂಧಪಟ್ಟಂತೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ನಿರ್ದಿಷ್ಟ ಪಡಿಸುತ್ತಾರೆ(ವಿಧಿ 342ಎ1). ಹೀಗೆ ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಿದ ಹಿಂದುಳಿದ ವರ್ಗಗಳನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಥವಾ ಪಟ್ಟಿಯಿಂದ ಹೊರಗಿಡುವ ಅಧಿಕಾರವನ್ನು ಸಂಸತ್ ಮಾತ್ರ ಹೊಂದಿದೆ(ವಿಧಿ 342ಎ2). ಹೀಗಾಗಿ ಸಂವಿಧಾನ ತಿದ್ದುಪಡಿಯ ನಂತರ ಜಾತಿ ಉಪಜಾತಿಗಳ ಹೊಸ ಸೇರ್ಪಡೆಗಳ ವಿಧಾನವು ಕಗ್ಗಂಟಾಗಿದೆ. ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸ ಜಾತಿ-ಉಪಜಾತಿಗಳನ್ನು ಸೇರ್ಪಡೆ ಮಾಡವ ವಿಧಾನವನ್ನು ಹೀಗೆ ಕ್ಲಿಷ್ಟಗೊಳಿಸಲು ಇರುವ ಚಿಂತನೆ ಮಾತ್ರ ನಿಗೂಢ ಕಾರ್ಯಸೂಚಿಯಂತಿದೆ!

ಸಂವಿಧಾನ ತಿದ್ದುಪಡಿ(102) ಕೇವಲ ಕೇಂದ್ರ ಸರಕಾರದ ಹುದ್ದೆಗಳಿಗೆ ಮಾತ್ರ ಅನ್ವಯಿಸುವಂತಾಗಿರದೆ; ಅದು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ತನ್ನದೇ ಆದ ಉದ್ದೇಶಗಳಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸಲು ಇದ್ದ ಅಧಿಕಾರವನ್ನೂ ಪಲ್ಲಟಗೊಳಿಸುವುದಾಗಿತ್ತು. ಕೆಲವು ದಿನಗಳಲ್ಲೇ ಮರಾಠಾ ಸಮುದಾಯದ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವೊಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿಯ, ವಿಧಿ 342ಎ ರೀತ್ಯ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ರಾಜ್ಯಗಳಿಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಘೋಷಿಸುತ್ತದೆ. ಸರ್ವೋಚ್ಚ ನ್ಯಾಯಾಲಯದ ಈ ಘೋಷಣೆಯನ್ನು ಕೇಳಿ ಬೆಚ್ಚಿ ಬಿದ್ದ ಬಿಜೆಪಿಯೇತರ ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು, ಅಧಿಕಾರ ಮರುಸ್ಥಾಪನೆಗೆ ಹುಯಿಲೆಬ್ಬಿಸಿದವು. ಕೇಂದ್ರಸರಕಾರ ಗತ್ಯಂತರವಿಲ್ಲದೆ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕಾಯಿತು. ತಿದ್ದುಪಡಿ ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆಯಿತು( ಆಗಸ್ಟ್, 21). ವಿಧಿ 342ಎ(1) ಅನ್ನು ತಿದ್ದುಪಡಿಗೆ ಒಳಪಡಿಸಲಾಯಿತು. ಈ ತಿದ್ದುಪಡಿಯಿಂದಾಗಿ ರಾಜ್ಯಗಳಿಗೆ ಅಧಿಕಾರ ಮರುಸ್ಥಾಪನೆಯಾಯಿತಾದರೂ, ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸಂಬಂಧಿಸಿದಂತೆ ಯಾವ ಬದಲಾವಣೆಯೂ ಆಗಲಿಲ್ಲ. ವಿಧಿ342 ಎ(1)ರಲ್ಲಿರುವ ಕೆಲ ಅಂಶಗಳು ಹಾಗೇ ಉಳಿದು, ರಾಷ್ಟ್ರೀಯ ಆಯೋಗದ ಅಧಿಕಾರ ಮಾತ್ರ ಮರುಸ್ಥಾಪಿತವಾಗಲಿಲ್ಲ.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಾರಿಗೆ ಬಂದಿದ್ದ 1993ರ ಕಾಯ್ದೆಯಲ್ಲಿ, ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಬೇಕೆಂಬ ಅಂಶ ಒಳಗೊಂಡಿತ್ತು (ಕಲಂ 11). ಆದರೆ, ತಿದ್ದುಪಡಿ ವಿಧಿ(338ಬಿ)ಯಲ್ಲಿ ಆ ಬಗ್ಗೆ ಉಲ್ಲೇಖವಿಲ್ಲ. ಹಾಗಾದರೆ, ಸಾಕಷ್ಟು ಪ್ರಾತಿನಿಧ್ಯ ಗಳಿಸಿ ಹಿಂದುಳಿದ ವರ್ಗವಾಗಿ ಉಳಿಯಲು ಅರ್ಹತೆ ಇಲ್ಲದ ವರ್ಗಗಳನ್ನು ಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆಗೆ ಪೂರ್ಣ ವಿರಾಮವೇ ಎಂಬ ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರಿಸಬೇಕಾಗಿದೆ.

ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಯಾವುದೇ ಜಾತಿ -ಉಪಜಾತಿಗಳನ್ನು ಸೇರಿಸಲು ಆಯೋಗಕ್ಕೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ, ಸೇರ್ಪಡೆ ವಿಧಾನವನ್ನು ಜಟಿಲಗೊಳಿಸಿರುವ ಸಂವಿಧಾನದ 102ನೇ ತಿದ್ದುಪಡಿಯ ಸೂಕ್ಷ್ಮ ಅಂಶಗಳನ್ನು ಯಾವುದೇ ರಾಜ್ಯ ಸರಕಾರ ಅಥವಾ ನಾಗರಿಕರಾದಿಯಾಗಿ ಯಾವುದೇ ಸಂಸದರೂ ಗಮನಿಸದಿರುವುದು ವಿಷಾದನೀಯ.

ಜಾತಿ ಅಥವಾ ಉಪಜಾತಿಗಳನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ, ಪ್ರಸ್ತುತ ರಾಜ್ಯಗಳ ಪಾತ್ರದ ಬಗ್ಗೆ ಸ್ಪಷ್ಟತೆಯಿಲ್ಲ. ಅಂತೂ, ಜಾತಿಗಳ ಹೊಸ ಸೇರ್ಪಡೆಗೆ ದುಸ್ತರ ಸ್ಥಿತಿ ಬಂದೊದಗಿದೆ. ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಲು ಇನ್ನೂ ಅನೇಕ ದುರ್ಬಲ ಜಾತಿಗಳಿಗೆ ಸಾಧ್ಯವಾಗಿಲ್ಲ. ಹೀಗಿರುವಲ್ಲಿ, ಇಂತಹ ದುರ್ಗಮ ಹಾದಿ ಸವೆಸಿ ಅವು ಗುರಿ ಮುಟ್ಟುವುದಾದರೂ ಹೇಗೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)