varthabharthi


ಕ್ರೀಡೆ

ಶಮಿಯವರನ್ನು ಟ್ರೋಲ್ ಮಾಡುವವರು ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕು ಎಂದ ಹರ್ಷ ಭೋಗ್ಲೆ

ಆನ್ ಲೈನ್ ಟ್ರೋಲ್ ಗೆ ಒಳಗಾಗಿರುವ ಶಮಿ ಪರ ನಿಂತ ಸಚಿನ್, ಲಕ್ಷ್ಮಣ್, ಪಠಾಣ್, ಚಾಹಲ್

ವಾರ್ತಾ ಭಾರತಿ : 25 Oct, 2021

ಹೊಸದಿಲ್ಲಿ: ರವಿವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ  ದ್ವೇಷಪೂರಿತ ಕಾಮೆಂಟ್‌ಗಳನ್ನು ಪಡೆಯುತ್ತಿರುವ ವೇಗಿ ಮುಹಮ್ಮದ್ ಶಮಿಯನ್ನು ಬೆಂಬಲಿಸಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಯುಜ್ವೇಂದ್ರ ಚಾಹಲ್ ಮಾತನಾಡಿದ್ದಾರೆ.

“ನಾನು ಶಮಿ ಹಾಗೂ  ಟೀಮ್ ಇಂಡಿಯಾದ ಹಿಂದೆ ನಿಂತಿದ್ದೇನೆ’’ ಎಂದು ಸಚಿನ್ ತೆಂಡುಲ್ಕರ್ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಶಮಿ ಅವರನ್ನು ಬೆಂಬಲಿಸುವಂತೆ ಅಭಿಮಾನಿಗಳನ್ನು ವಿವಿಎಸ್ ಲಕ್ಷ್ಮಣ್ ಒತ್ತಾಯಿಸಿದರು. ಕೇವಲ ಒಂದು ಪ್ರದರ್ಶನದಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಶಮಿಯವರನ್ನು ಟ್ರೋಲ್ ಮಾಡುವವರು ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದರು.

ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಶಮಿಗೆ ಬೆಂಬಲವಾಗಿ ಮಾತನಾಡಿದರು. "ನಾನು ಕೂಡ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾವು ಸೋತಾಗ ನನ್ನನ್ನು ಪಾಕಿಸ್ತಾನಕ್ಕೆ ಹೋಗಬೇಕೆಂದು ಯಾರೂ  ಎಂದಿಗೂ ಹೇಳಲಿಲ್ಲ!" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳನ್ನು 'ಆನ್‌ಲೈನ್ ಗುಂಪುದಾಳಿ' ಎಂದು ಕರೆದ ಸೆಹ್ವಾಗ್, "ಮುಹಮ್ಮದ್ ಶಮಿ ಮೇಲಿನ ಆನ್‌ಲೈನ್ ದಾಳಿ ಆಘಾತಕಾರಿಯಾಗಿದೆ. ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ಚಾಂಪಿಯನ್ ಆಗಿದ್ದಾರೆ ಹಾಗೂ ಆನ್‍ಲೈನ್ ಗುಂಪಿಗಿಂತಲೂ ಹೆಚ್ಚಾಗಿ ಭಾರತದ ಕ್ಯಾಪ್ ಧರಿಸುವ ಯಾರದ್ದೇ ಹೃದಯದಲ್ಲಾದರೂ ಭಾರತವು ತುಂಬಿರುತ್ತದೆ. ನಿಮ್ಮೊಂದಿಗಿದ್ದೇವೆ ಶಮಿ. ಆಗ್ಲೇ ಮ್ಯಾಚ್ ಮೇ ದಿಖಾದೊ ಜಲ್ವಾ’’ ಎಂದು ಟ್ವೀಟಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)