varthabharthi


ಕರಾವಳಿ

ಉಡುಪಿ ಜಿಲ್ಲೆಯಾದ್ಯಂತ 1ರಿಂದ 5ನೇ ತರಗತಿಗಳು ಪ್ರಾರಂಭ; ಬ್ಯಾಂಡ್ ವಾದ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ವಿಶಿಷ್ಟ ಸ್ವಾಗತ

ವಾರ್ತಾ ಭಾರತಿ : 25 Oct, 2021

ಉಡುಪಿ, ಅ.25: ಕೋವಿಡ್-19 ಕಾರಣಗಳಿಗಾಗಿ ಕಳೆದ ಒಂದೂವರೆ ವರ್ಷಗಳ ಕಾಲ ಮುಚ್ಚಿದ ಜಿಲ್ಲೆಯ 249 ಒಂದರಿಂದ ಐದನೇ ತರಗತಿಗಳಿರುವ ಪ್ರಾಥಮಿಕ ಶಾಲೆಗಳ ಬಾಗಿಲು ಇಂದು ಮಕ್ಕಳಿಗಾಗಿ ಮತ್ತೆ ತೆರೆದುಕೊಂಡವು. ಪರಸ್ಪರ ಸಂಪರ್ಕದಿಂದ ದೂರವಿದ್ದ ಮಕ್ಕಳು ಬಣ್ಣ ಬಣ್ಣದ ಸಮವಸ್ತ್ರ ಹಾಗೂ ಹಲವರು ಸಾಮಾನ್ಯ ಉಡುಪಿನೊಂದಿಗೆ ಕುಣಿದು ಕುಪ್ಪಳಿಸುತ್ತಾ ಶಾಲೆಗಳಿಗೆ ಬಂದರು.

ಹಲವು ಶಾಲೆಗಳಲ್ಲಿ ಹೀಗೆ ಬಂದ ಮಕ್ಕಳನ್ನು ಶಿಕ್ಷಕರು ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಿ ಮೆರವಣಿಗೆಯ ಮೂಲಕ ತರಗತಿಗಳಿಗೆ ಕರೆದುಕೊಂಡು ಬಂದರು. ಮಕ್ಕಳೊಂದಿಗೆ ಮಕ್ಕಳ ಪೋಷಕರೂ ಹೆಚ್ಚಿನ ಕಡೆಗಳಲ್ಲಿ ಶಾಲೆಗಳಿಗೆ ಬಂದರು. ಅವರಿಗೂ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಹಿರಿಯ ಪ್ರಾಥಮಿಕ ತರಗತಿಗಳು ಪುನರಾರಂಭಗೊಂಡಾಗ ಎಲ್ಲಾ ಮಕ್ಕಳು ಶಾಲೆಗಳಿಗೆ ಬಂದಿರಲಿಲ್ಲ. ಆದರೆ ಇಂದು ಶಿಕ್ಷಕರು ಹಾಗೂ ಅಧಿಕಾರಿಗಳ ನಿರೀಕ್ಷೆಗಳನ್ನು ಸುಳ್ಳಾಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಂದು ಶಾಲೆಗಳಿಗೆ ಆಗಮಿಸಿದರು. ಸುಮಾರು ಒಂದೂವರೆ ವರ್ಷದ ಬಳಿಕ ನಿಜವಾದ ಅರ್ಥದಲ್ಲಿ ಜಿಲ್ಲೆಯ ಶಾಲೆಗಳೆಲ್ಲಾ ‘ಮಕ್ಕಳ ಹೂವಿನ ತೋಟ’ಗಳಂತೆ ಗೋಚರಿಸಿದವು.

ಕೆಲವು ಕಡೆಗಳಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ ಮತ್ತು ಬಲೂನು ನೀಡಿ ಸ್ವಾಗತಿಸಿದರಲ್ಲದೇ ಆರತಿ ಎತ್ತಿ ಕುಂಕುಮ ವನ್ನು ಹಣೆಗಿಟ್ಟು ಬರಮಾಡಿ ಕೊಂಡರು.

249 ಶಾಲೆಗಳು: ಜಿಲ್ಲೆಯಲ್ಲಿ 1ರಿಂದ 5ನೇ ತರಗತಿಯವರೆಗಿನ ಒಟ್ಟು 220 ಸರಕಾರಿ, ಆರು ಅನುದಾನಿತ, 15 ಅನುದಾನ ರಹಿತ ಹಾಗೂ ಎಂಟು ಇತರ ಸೇರಿದಂತೆ ಒಟ್ಟಾರೆ 249 ಶಾಲೆಗಳಿವೆ. ಇವುಗಳಲ್ಲಿ ಸರಕಾರಿ ಶಾಲೆಯಲ್ಲಿ 29,861, ಅನುದಾನಿತ ಶಾಲೆಗಳಲ್ಲಿ 8,747, ಅನುದಾನ ರಹಿತ ಶಾಲೆಗಳಲ್ಲಿ 38,056 ಹಾಗೂ ಇತರ ಶಾಲೆಗಳಲ್ಲಿ 227 ಸೇರಿದಂತೆ ಒಟ್ಟು 76,891 ವಿದ್ಯಾರ್ಥಿಗಳ ದಾಖಲಾತಿ ಇದೆ.

ಸರಕಾರಿ ಶಾಲೆಗಳು: ಇವುಗಳಲ್ಲಿ ಮೊದಲ ದಿನವಾದ ಇಂದು ಸರಕಾರಿ ಶಾಲೆಗಳಲ್ಲಿ ಮೊದಲ ತರಗತಿಗೆ ಶೇ.72, ಎರಡನೇ ತರಗತಿಗೆ ಶೇ.73, ಮೂರನೇ ತರಗತಿಗೆ ಶೇ.76, ನಾಲ್ಕನೇ ತರಗತಿಗೆ ಶೇ.71 ಹಾಗೂ ಐದನೇ ತರಗತಿಗೆ ಶೇ.74ರಷ್ಟು ಮಕ್ಕಳು ಕ್ಲಾಸ್‌ಗಳಿಗೆ ಭೌತಿಕವಾಗಿ ಹಾಜರಾಗಿದ್ದಾರೆ.

ಅನುದಾನಿತ ಶಾಲೆ: ಅನುದಾನಿತ ಶಾಲೆಗಳಲ್ಲಿ ಇಂದು ಮೊದಲ ತರಗತಿಗೆ ಶೇ.75, ಎರಡನೇ ತರಗತಿಗೆ ಶೇ.74, ಮೂರನೇ ತರಗತಿಗೆ ಶೇ.75, ನಾಲ್ಕನೇ ತರಗತಿಗೆ ಶೇ.77 ಹಾಗೂ ಐದನೇ ತರಗತಿಗೆ ಶೇ.77 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು.

ಅನುದಾನ ರಹಿತ ಶಾಲೆ: ಜಿಲ್ಲೆಯ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಒಂದನೇ ತರಗತಿಗೆ ಶೇ.65, ಎರಡನೇ ತರಗತಿಗೆ ಶೇ.64, ಮೂರನೇ ತರಗತಿಗೆ ಶೇ.67, ನಾಲ್ಕನೇ ತರಗತಿಗೆ ಶೇ.67 ಹಾಗೂ ಐದನೇ ತರಗತಿಗೆ ಶೇ.72 ವಿದ್ಯಾರ್ಥಿಗಳು ಮೊದಲ ದಿನವಾದ ಇಂದು ಖುದ್ದಾಗಿ ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತರಗತಿಗಳಿಗೆ ಹಾಜರಾಗುವ ಶೇ.100ರಷ್ಟು ಶಿಕ್ಷಕರು ಕೋವಿಡ್-19ರ ಎರಡೂ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. ಶಾಲೆಯಲ್ಲಿ ಸುರಕ್ಷತಾ ಅಂತರ ಹಾಗೂ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಯ ಎಲ್ಲಾ ಕೊಠಡಿಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಾಗೂರ ಹೇಳಿದರು.

ಸರಕಾರದ ಮಾರ್ಗದರ್ಶಿ ಸೂತ್ರಗಳು: ತರಗತಿಗಳು ಕೋವಿಡ್ ನಿಯಮದಂತೆ ನಡೆಯಬೇಕು. ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಸರಕಾರ ಶಾಲೆಗಳಿಗೆ ಅವಕಾಶ ಕೊಟ್ಟಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ತೆರೆಯಬೇಕು. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯ, ಸ್ಯಾನಟೈಸ್ ಮಾಡಬೇಕು.

ಒಂದರಿಂದ 5ನೇ ತರಗತಿ ಮಕ್ಕಳಿಗೆ ಅಕ್ಟೋಬರ್ ಅಂತ್ಯದವರಿಗೆ ಅರ್ಧದಿನ ಮಾತ್ರ ತರಗತಿಗಳಿರುತ್ತವೆ. ನ.2ರ ನಂತರ ಪೂರ್ಣದಿನದ ಶಾಲೆ ನಡೆಯಲಿವೆ. ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿ ಬೇಕು. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢೀಕರಿಸಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.

ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ ನೀಡಲಾಗಿದೆ. 15ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು. ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10ರಿಂದ ಅಪರಾಹ್ನ 1:30ರವರೆಗೆ ಮಾತ್ರ ತರಗತಿಗಳು ನಡೆಯಲಿವೆ.

ನವೆಂಬರ್ ಎರಡರಿಂದ ಶನಿವಾರ ಬೆಳಗ್ಗೆ 8 ರಿಂದ 11:40ರವರೆಗೆ ಮಾತ್ರ ತರಗತಿಗಳಿರುತ್ತವೆ. ಆದರೆ ಯಾವುದೇ ಶಾಲೆಯಲ್ಲಿ ಎಲ್ಕೆಜಿ ಮ್ತು ಯುಕೆಜಿ ತೆರೆಯಲು ಅವಕಾಶವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)