varthabharthi


ಅನುಗಾಲ

ಕ್ರಿಕೆಟಿನಲ್ಲೂ ಮತ?

ವಾರ್ತಾ ಭಾರತಿ : 28 Oct, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದೇಶವನ್ನು ಪ್ರತಿನಿಧಿಸುವ ಮಂದಿಗಳನ್ನು ನಮ್ಮ ಸಂಕುಚಿತ ದೃಷ್ಟಿಕೋನದಿಂದ ಬಂಧಿಸಬಾರದು ಮಾತ್ರವಲ್ಲ ಅವರ ನೈತಿಕ ಸ್ಥೈರ್ಯವನ್ನು ಕುಂದಿಸುವ ಯಾವ ನಡತೆಯನ್ನೂ ಪ್ರದರ್ಶಿಸಬಾರದು ಎಂಬ ಕನಿಷ್ಠ ಸೌಜನ್ಯ, ನೈತಿಕತೆಯನ್ನು ಈ ದೇಶದ ಪ್ರಜೆಗಳು ಯಾವಾಗ ಕಳೆದುಕೊಳ್ಳುತ್ತಾರೋ ಆಗ ದೇಶಕ್ಕೆ ಭವಿಷ್ಯವಿಲ್ಲ. 1960-70ರ ಕನ್ನಡ ಸಿನೆಮಾ/ನಾಟಕಗಳಲ್ಲಿ (ಪ್ರಾಯಃ ಇತರ ಭಾಷೆಯ ಸಿನೆಮಾಗಳಲ್ಲೂ) ಸಾಮಾಜಿಕ ಅದರಲ್ಲೂ ಗ್ರಾಮೀಣ ಕುಟುಂಬಗಳ, ಸಮಾಜದ ಕತೆಯಿರುತ್ತಿತ್ತು. ಅಲ್ಲಿ ಜೇನುಗೂಡಿನಂತಹ ಕುಟುಂಬ, ಸಮಾಜವಿದ್ದರೆ ಅದಕ್ಕೆ ಹೊಗೆಯಿಡುವ, ಹಾಲಿಗೆ ಹುಳಿ ಹಿಂಡುವ, ವಿಷವಿಕ್ಕುವ ಖಳನಾಯಕ ಮತ್ಸರಿಯೊಬ್ಬ ಇರುತ್ತಿದ್ದ. ಎಲ್ಲವೂ ಹಾಳಾಗಿ ಕೊನೆಗೆ 18ನೇ ರೀಲಿನಲ್ಲೋ ಕೊನೆಯ ದೃಶ್ಯದಲ್ಲೋ ಆ ಖಳನಾಯಕನ ಅಂತ್ಯವೋ ಬಂಧನವೋ ಆಗಿ ‘ಭದ್ರಂ/ಶುಭಂ/ಮಂಗಳಂ’ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿತ್ತು. ನಾಟಕದಲ್ಲಾದರೂ ಇಷ್ಟೇ: ಎಲ್ಲ ಪಾತ್ರಗಳೂ ರಂಗದ ಮೇಲೆ ಮತ್ತೆ ಬಂದು ಪ್ರೇಕ್ಷಕರ ಕರತಾಡನಕ್ಕೆ ವಂದಿಸಿ ನೇಪಥ್ಯಕ್ಕೆ ಮರಳುತ್ತಿದ್ದವು. ಇದಕ್ಕೂ ಮೊದಲೇ ಸಿನೆಮಾ ನಾಟಕಗಳು ಹೇಗಿರುತ್ತಿದ್ದವೆಂಬ ಬಗ್ಗೆ ನನಗೆ ಪ್ರಾಥಮಿಕ ಜ್ಞಾನವಿಲ್ಲ. ಓದಿಕೊಂಡದ್ದೆಷ್ಟೋ ಅಷ್ಟೇ. ಆದರೆ ಹಿಂದೆ ಹೋದರೆ ರಾಮಾಯಣ ಭಾರತಗಳ ಕಾಲದಲ್ಲೂ ಕುಟುಂಬದ, ಸಮಾಜದ ಒಳಿತನ್ನು ಬಯಸದ ಕೇಡಿಗರು ಇರುತ್ತಿದ್ದರು. ಆದರೆ ಸತ್ಯಕ್ಕೆ ಜಯವೆಂಬ ದಿವ್ಯಮಂತ್ರವನ್ನು ಜಪಿಸುತ್ತಲೇ ಮನುಷ್ಯರು ಅಳಿದರು; ಉಳಿದರು. ಕುಟುಂಬದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂಬುದು ಕಾಲಾತೀತ ನೀತಿ. ಇದನ್ನು ನಾವು ನಮ್ಮ ಪರಂಪರೆ, ಸಂಸ್ಕೃತಿ ಎಂದು ಹೇಳುತ್ತೇವೆ. ಇದನ್ನು ಧಿಕ್ಕರಿಸುವ ಯಾವುದೇ ಆಚಾರ-ವಿಚಾರವೂ ವಿಕೃತಿಯಾಗುತ್ತದೆ.

ವರ್ಣ, ಭಾಷೆ ಮತ್ತು ಮತ (ಮತವನ್ನು ತಪ್ಪಾಗಿ ಧರ್ಮ ಎಂದು ವ್ಯಾಖ್ಯಾನಿಸಲಾಗುತ್ತದೆ!)ಗಳೂ ಇದಕ್ಕೆ ಹೊರತಲ್ಲ. ಆದರೆ ವಿಶ್ವಾದ್ಯಂತ ಇಂದು ವರ್ಣದ್ವೇಷ ತನ್ನ ಸಾವಿರ ವಿಕೃತಿಗಳೊಂದಿಗೆ ವಿಜೃಂಭಿಸುತ್ತಿದೆ. ವ್ಯಂಗ್ಯವೆಂದರೆ ಇದು ‘ಉಸಿರಾಡಲು ಕಷ್ಟವಾಗುವ’ ಅಂದರೆ ‘ನೋಯಬೇಕಾದ, ಸಾಯಬೇಕಾದ’ ಸ್ಥಿತಿಯನ್ನು ತಲುಪುತ್ತಿದೆ. ಇನ್ನೂ ವಿಷಾದದ ವಿಚಾರವೆಂದರೆ ಜಗತ್ತು ದೇಶಗಳಾಗಿ ವಿಭಜನೆಯಾಗಿರುವುದರಿಂದ ಪ್ರತಿಯೊಂದು ದೇಶವೂ ತನಗೆ ಮಾತ್ರ ಬದುಕುವ ಹಕ್ಕಿದೆಯೆಂದು ಯೋಚಿಸುತ್ತಿದೆ. ಎಲ್ಲ ದೇಶಗಳೂ ಹೀಗೆಯೇ ಭಾವಿಸುವುದರಿಂದ ಮತ್ತು ಯುದ್ಧದಂತಹ ಅಶಾಂತಿಯ ಪ್ರಸಂಗವು ಸಂಭವಿಸಿದಲ್ಲಿ ಸ್ವವಿನಾಶದ ಸಾಧ್ಯತೆಯಿರಬಹುದಾದ್ದರಿಂದ ತಕ್ಷಣದ ಯುದ್ಧಕ್ಕೆ ಯಾರೂ ಸಿದ್ಧರಿಲ್ಲ. ಆದ್ದರಿಂದ ಮನುಷ್ಯನ ಮತ್ತು ಮುಖ್ಯವಾಗಿ ಅಧಿಕಾರದಲ್ಲಿರುವವರಲ್ಲಿ, ಅಳುವವರಲ್ಲಿ ಅಂತರ್‌ರಾಷ್ಟ್ರೀಯ/ಜಾಗತಿಕ ಶಾಂತಿಗೆ ಇನ್ನೂ ಬೇಡಿಕೆಯಿದೆ. ಇನ್ನೂ ಒಂದು ‘ಆದರೆ’ಯ ವಿಚಾರವೆಂದರೆ ಪ್ರತಿಯೊಂದು ದೇಶವೂ ಅಪಾರ ವೈರುಧ್ಯಗಳನ್ನೊಳಗೊಂಡಿದೆ. ಒಂದೇ ಭಾಷೆ, ಬಣ್ಣ, ಮತಗಳಿದ್ದರೂ ಯಾವುದೇ ದೇಶವು ಶಾಂತಿ, ಸಮಾಧಾನಗಳನ್ನೊಳಗೊಂಡ ಸಮಾಜವನ್ನು ಹೊಂದಿದೆಯೆಂದು ಭಾವಿಸಬಾರದು. ಅಲ್ಲೆಲ್ಲ ವಿವಿಧ ರೀತಿಯ ಕುಹಕತನಗಳು, ವಿಕೃತಿಗಳು ಸದಾ ಕಾರ್ಯೋನ್ಮುಖವಾಗಿವೆ. ಲೋಕೋ ಭಿನ್ನ ರುಚಿಃ ಎಂಬ ಮಾತನ್ನು ಸೂಚ್ಯಾರ್ಥದಲ್ಲಾಗಲೀ ವಾಚ್ಯಾರ್ಥದಲ್ಲಾಗಲೀ ಸಹಿಸಲು ದೇಶ, ಸಮಾಜ, ಕೊನೆಗೆ ಅದರೊಳಗಿರುವ ಮತ್ತು ಅದರ ಅಸ್ತಿತ್ವಕ್ಕೆ ಕಾರಣರಾದ ಜೀವಿಗಳು ಸಿದ್ಧವಿಲ್ಲ. ಬದಲಾಗಿ ‘ಭಿನ್ನ’ವೆಂದರೆ ತನ್ನದಲ್ಲದ್ದು ಮತ್ತು ತಾನು ನಾಶಮಾಡಬೇಕಾದ್ದು ಎಂಬ ಮನಸ್ಥಿತಿಯಿದೆ; ಮತ್ತು ಯಾವುದರ ಮೂಲಕ ಮೇಲ್ಮೆಯನ್ನು ಸಾಧಿಸಬಹುದೋ ಅದನ್ನು ತನ್ನ, ತಮ್ಮ ಸಿದ್ಧಾಂತವೆಂದು ಬಗೆದು ಇನ್ನೊಬ್ಬರ ಮೇಲೆ ಹೇರಲು ಸಿದ್ಧವಿವೆ. ಇದು ಎಷ್ಟು ವಿಕೃತವಾಗಿ ವ್ಯಾಪಿಸಿದೆಯೆಂಬುದಕ್ಕೆ ಮೊನ್ನೆ ಮೊನ್ನೆ ವಿಶ್ವ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರದ ಪ್ರತಿಕ್ರಿಯೆಗಳೇ ಸಾಕ್ಷಿ.

ಕ್ರೀಡೆಯೂ ಒಂದು ಕಲೆಯೆಂದೇ ಭಾವಿಸುವುದಾದರೆ ಅದನ್ನು ಅದರ ಪೂರ್ಣಸ್ವರೂಪದಲ್ಲಿ ಮೆಚ್ಚಬೇಕು. ನಮ್ಮ ದೇಶವು ಗೆದ್ದರೆ ಸಂತೋಷವಾಗುವುದು ದೇಶಭಕ್ತಿ ಅಥವಾ ದೇಶಪ್ರೇಮದ ಸಂಕೇತವಲ್ಲ; ಪಂದ್ಯಾವಳಿಯಲ್ಲಿ ದೇಶದ ಮೂಲಕ ಪ್ರತಿನಿಧಿಸುವ ಕಾರಣಕ್ಕೆ ಮಾತ್ರ. ಒಲಿಂಪಿಕ್ಸ್‌ನಲ್ಲೂ ದೇಶಗಳ ಹೆಸರಿನಲ್ಲೇ ಕ್ರೀಡಾಪಟುಗಳು ಭಾಗವಹಿಸುವುದರಿಂದ ನಮ್ಮ ದೇಶದ ಕ್ರೀಡಾಪಟು ಗೆದ್ದಾಗ ಸಂತೋಷಪಡುತ್ತೇವೆ. ಅದರರ್ಥ ಇತರ ದೇಶಗಳ ಕ್ರೀಡಾಪಟುಗಳನ್ನು ನಾವು ದ್ವೇಷಿಸುತ್ತೇವೆಂದಲ್ಲ; ಅಥವಾ ಆ ಕ್ರೀಡಾಪಟುಗಳ ಮೇಲೆ ನಮ್ಮ ಕ್ರೀಡಾಪಟು ಯುದ್ಧವನ್ನು ಸಾರಿದ್ದಾನೆಂದಲ್ಲ. ಸ್ಪರ್ಧೆಗೂ ಯುದ್ಧಕ್ಕೂ ವ್ಯತ್ಯಾಸವಿರುವುದನ್ನು ಗುರುತಿಸದಿದ್ದರೆ ಭಾರತವು ಸೋತಾಗಲೆಲ್ಲ ನಾವು ಹಾಗೆ ಗೆದ್ದ ಎದುರಾಳಿ ದೇಶವು ನಮಗಿಂತ ದುರ್ಬಲವಾಗಿದ್ದರೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಾದೀತು. ಪಾಕಿಸ್ತಾನವು ಭಾರತಕ್ಕಿಂತ ಆ ದಿನ ಚೆನ್ನಾಗಿ ಆಡಿತು ಎಂಬುದನ್ನು ಯಾವುದೇ ನೈಜ ಕ್ರೀಡಾಭಿಮಾನಿಯಾದರೂ ಒಪ್ಪಿಕೊಳ್ಳಬೇಕು. ಇದರಲ್ಲಿ ದೇಶಭಕ್ತಿ, ರಾಷ್ಟ್ರೀಯತೆಯ ಪ್ರಶ್ನೆಯಿಲ್ಲ. ವಿದೇಶದ ಅನ್ಯಭಾಷೆಯ, ಸಿನೆಮಾವೋ, ಪುಸ್ತಕವೋ ಚೆನ್ನಾಗಿದ್ದರೆ ಅದನ್ನು ಮೆಚ್ಚಿಕೊಳ್ಳುತ್ತೇವಲ್ಲ, ಹಾಗೆ. ಆ ದಿನ ಭಾರತದ ಬ್ಯಾಟಿಂಗ್ ವಿರಾಟ್ ಕೊಹ್ಲಿಯ ಹೊರತಾಗಿ ತೀರಾ ಸಾಧಾರಣವಾಗಿತ್ತು. ಕೊಹ್ಲಿಯ ಆಟವೂ ಟಿ-20 ಮಾನದಂಡದಲ್ಲಿ ನಿಧಾನಗತಿಯದ್ದೇ ಆಗಿದ್ದರೂ ಆತ ಮೈದಾನಕ್ಕೆ ಇಳಿದ ಮತ್ತು ತಂಡದ ಅನಂತರದ ಸ್ಥಿತಿಯನ್ನು ಗಮನಿಸಿದರೆ ಅದು ಸಹಜವೇ ಆಗಿತ್ತು. ಶಾಹಿನ್ ಅಫ್ರಿದಿಯ ಅದ್ಭುತ ಬೌಲಿಂಗಿಗೆ ರೋಹಿತ್‌ಶರ್ಮ ಮತ್ತು ಕೆ.ಎಲ್.ರಾಹುಲ್‌ರಂತಹ ಶಕ್ತ ಆರಂಭಿಕ ಆಟಗಾರರು ಶೂನ್ಯ ಇಲ್ಲವೇ ಒಂದಂಕಿಯ ಸ್ಕೋರಿಗೆ ಔಟಾದರೆ ಕೊಹ್ಲಿ ಇನ್ನೇನು ಮಾಡಬೇಕು? ಆನಂತರ ಬಂದ ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಇವರೂ ವಿಫಲರಾದರು. ಒಟ್ಟಿನಲ್ಲಿ ಭಾರತವು ಸ್ಪರ್ಧಾತ್ಮಕ ಮೊತ್ತವನ್ನು ತಲುಪಲಿಲ್ಲ.

 ಕ್ರಿಕೆಟ್‌ನಲ್ಲಿ ಸಾಧಾರಣ ಮೊತ್ತವನ್ನು ಬೆನ್ನಟ್ಟುವಾಗ ಯಾವುದೇ ತಂಡಕ್ಕೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ಆತ್ಮವಿಶ್ವಾಸವು ಅತಿಯಾದರೆ ಮತ್ತು ನಿರ್ಲಕ್ಷ್ಯಕ್ಕೆ ಕಾರಣವಾದರೆ ಮಾತ್ರ ಎದುರಾಳಿ ತಂಡಕ್ಕೆ ಅನುಕೂಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಮೊತ್ತವನ್ನು ಪೇರಿಸಿದ ತಂಡಗಳು ಗೆಲುವನ್ನು ಸಾಧಿಸಿದ್ದೂ ಇದೆ. ಆದರೆ ಇವು ಅಪರೂಪ.

ಪಾಕಿಸ್ತಾನ ತನ್ನ ಸಮತೋಲನವನ್ನು ಕಾಯ್ದುಕೊಂಡು ಗೆಲುವಿನ ಗುರಿಯನ್ನು ತಲುಪಿತು. ಕಳೆದ ಸುಮಾರು 3 ದಶಕಗಳಿಂದ ಸಾಧಿಸಲಾಗದ್ದನ್ನು ಸಾಧಿಸಿತು. ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಜಸ್ಪೀತ್ ಬುಮ್ರಾ. ಮುಹಮ್ಮದ್ ಶಮಿಯವರಂತಹ ಭಾರತದ ವಿಶ್ವದರ್ಜೆಯ ಬೌಲರ್‌ಗಳು ಮತ್ತು ಹೊಸ ಪ್ರತಿಭೆ ವರುಣ್ ಚಕ್ರವರ್ತಿ ವಿಫಲರಾದರು ಅನ್ನುವುದಕ್ಕಿಂತಲೂ ಅವರು ಸ್ಪರ್ಧಾತ್ಮಕವಾಗಿ ಬೌಲ್ ಮಾಡಬಲ್ಲ ಮೊತ್ತ ಅವರ ಹಿಂದಿರಲಿಲ್ಲ ಎನ್ನಬಹುದು. ಮಾತ್ರವಲ್ಲ ಯಾವ ತಂಡ ಯಾವ ದಿನ ಎದುರಾಳಿಗಿಂತ ಚೆನ್ನಾಗಿ ಆಡುತ್ತದೆಯೋ ಅದು ಗೆಲ್ಲುತ್ತದೆ. ಇದು ತಂಡಕ್ಕಾಗಲೀ ಕ್ರೀಡಾಪಟುವಿಗಾಗಲೀ ಶಾಶ್ವತ ಸತ್ಯ. ಇದು ಶಾಶ್ವತ ಶ್ರೇಷ್ಠತೆಯ ಸಂಕೇತವಲ್ಲ; ಪ್ರಾತಿನಿಧಿಕವೂ ಅಲ್ಲ. ಇದು ಅಪಮಾನಕ್ಕೆ ಕಾರಣವಾಗಬಾರದು. ಒಂದು ವೇಳೆ ಸೂಕ್ಷ್ಮಮನಸ್ಸನ್ನು ಘಾಸಿಗೊಳಿಸಿದರೂ ದ್ವೇಷಕ್ಕೆ ಕಾರಣವಾಗಬಾರದು.

ಯಶಸ್ಸಿಗೆ ಅನೇಕ ತಂದೆಯರಿದ್ದರೂ ಸೋಲು ಯಾವಾಗಲೂ ಅನಾಥ. ಭಾರತ ತಂಡದ ಆಟಗಾರರ ಆಯ್ಕೆಯನ್ನು ಅನೇಕ ಪರಿಣಿತರು, ಮಾಜಿ ಆಟಗಾರರು ಆಕ್ಷೇಪಿಸಿದರು. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಇವರ ಆಯ್ಕೆಯನ್ನು ಮತ್ತು ಇಶಾನ್ ಕಿಷನ್, ಶಾರ್ದೂಲ್ ಠಾಕೂರ್ ಇವರನ್ನು ಆಯ್ಕೆ ಮಾಡದ್ದನ್ನು ಅನೇಕರು ಟೀಕಿಸಿದರು. ಇವೆಲ್ಲ ಒಂದಲ್ಲ ಒಂದು ಕ್ರೀಡಾ ಮಾನದಂಡವನ್ನು ಬಳಸಿದ್ದವು. ಯಾವುದೇ ಆಯ್ಕೆಯೂ ಶತಾಂಶ ಸರಿಯಿರುವುದಿಲ್ಲ; ಇರಲಾರದು. ಫಲಿತಾಂಶವೇ ಇವುಗಳ ಸಮರ್ಥಕ. ಆದರೆ ಈ ವಿಶ್ವಕುಟುಂಬಿ ದೇಶದ ಅನೇಕರು ಒಮ್ಮೆಲೇ ಭಾರತ ತಂಡದ ಮುಹಮ್ಮದ್ ಶಮಿ ಎಂಬ ಒಬ್ಬನೇ ಒಬ್ಬ ಆಟಗಾರನ ಮೇಲೆ ಬೇಟೆ ನಾಯಿಗಳಂತೆ, ಹಸಿದ ಕ್ರೂರಮೃಗಗಳಂತೆ ತಮಗೆ ಸಾಂದರ್ಭಿಕವಾಗಿ ಲಭ್ಯವಿರುವ ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ದಾಳಿ ಮಾಡಿದವು. ಆತ ಬೌಲರ್‌ಗಳ ಗುಂಪಿನಲ್ಲಿ ಹೊಂದದ ಪದವಾಗಿ ಪರಿಣಮಿಸಿದ. ಶೂನ್ಯ ಸಂಪಾದಿಸಿದ ರೋಹಿತ್ ಶರ್ಮನ ಬಗ್ಗೆಯೂ ಆಕ್ಷೇಪಿಸದವರು ಶಮಿಯ ಕುರಿತು ಮಾತ್ರ ತೀವ್ರ ಮತ್ತು ಅನಾಗರಿಕ, ಸಂಸ್ಕೃತಿ/ಸಂಸ್ಕಾರಹೀನ ಪದಗಳನ್ನು ಬಳಸಿದರು. ‘‘ಪಾಕಿಸ್ತಾನಕ್ಕೆ ಹೋಗು’’ ಎನ್ನುವವರೆಗೆ ಈ ಟೀಕೆ ಮುಂದುವರಿಯಿತು. ಇದಕ್ಕೆಲ್ಲ ಕಾರಣ ಆತನ ಹುಟ್ಟು ಮತ್ತು ಮತ. ಈ ಕಾರಣಕ್ಕೆ ಟೀಕಿಸಿಲ್ಲ ಎನ್ನುವ ತಂತ್ರವನ್ನೂ ಈ ಮಂದಿ ಪ್ರದರ್ಶಿಸಿಲ್ಲ. ಒಂದು ವೇಳೆ ಯಾರಾದರೂ ಹೇಳಿದ್ದರೂ ಅದನ್ನು ನಂಬುವಂತಿರಲಿಲ್ಲ. ಏಕೆಂದರೆ ಮುಹಮ್ಮದ್ ಶಮಿಯೊಬ್ಬನೇ ‘ಭಿನ್ನ’ಮತಕ್ಕೆ ಸೇರಿದವನು. ಆ ಕಾರಣಕ್ಕೆ ಟೀಕೆಗೆ ಗುರಿಯಾದವನು.

ಸಂಗೀತ ಕಚೇರಿ ನಡೆಯುತ್ತಿರುವಾಗ ಮಗು ಮುಗ್ಧವಾಗಿ ಅತ್ತರೂ ಅದು ಸಂಗೀತದ ವಾತಾವರಣವನ್ನು ಭಂಗಗೊಳಿಸುತ್ತದೆ. ಹಾಗಿರುವಾಗ ಉ(ದುರು)ದ್ದೇಶಪೂರ್ವಕವಾಗಿ ಮಾಡುವ ಟೀಕೆಗಳು ಸಹಜವಾಗಿಯೇ ವ್ಯಕ್ತಿಯ, ತಂಡದ ಮನಸ್ಥಿತಿಯನ್ನು ಆತಂಕಕ್ಕೀಡುಮಾಡಬಹುದು. ಇದು ಒಬ್ಬ ವ್ಯಕ್ತಿಯ ಮಾತ್ರವಲ್ಲ, ತಂಡದ ಮನಸ್ಥೈರ್ಯವನ್ನೇ ಕುಂದಿಸಬಹುದು. ಭಾರತ ತಂಡ ಈ ಟೀಕೆಗಳನ್ನು ಲೆಕ್ಕಿಸಿರಲಾರದು. ಆದರೆ ಈ ಟೀಕೆಗಳು ಸೌಹಾರ್ದ ಮತ್ತು ಕ್ರೀಡಾ ಮನೋಭಾವವನ್ನು, ವಾತಾವರಣವನ್ನು ಹಾನಿಗೊಳಿಸಿತು; ಕಲುಷಿತಗೊಳಿಸಿತು. ವೀರೇಂದ್ರ ಸೆಹ್ವಾಗ್ ಇಂತಹ ಅಸಭ್ಯ ಟೀಕೆಗಳನ್ನು ಖಂಡಿಸಿದರು. ಆನಂತರ ಸಚಿನ್ ತೆಂಡುಲ್ಕರ್, ಲಕ್ಷ್ಮಣ್ ಮುಂತಾದ ಖ್ಯಾತನಾಮರೂ ಈ ನಡವಳಿಕೆಯನ್ನು ಪ್ರತಿಭಟಿಸಿ ಶಮಿಯ ಬೆಂಬಲಕ್ಕೆ ನಿಂತರು.

ಆನಂತರದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಶಮಿಯ ಬೆಂಬಲಕ್ಕೆ ನಿಂತಿತು. ಅಂತೂ ಮುಂದಿನ ಪಂದ್ಯಕ್ಕೆ ಶಮಿಯನ್ನು ಆಡಿಸುವುದು ತಂಡದ ಮತ್ತು ಕ್ರಿಕೆಟಿನ ನೈತಿಕ ಹೊಣೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮುಹಮ್ಮದ್ ಶಮಿ ಈ ದೇಶದ ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದು ಇಂದು ವಿಶ್ವಾದ್ಯಂತ ಕ್ರಿಕೆಟ್ ಆಟಗಾರರ, ಕ್ರೀಡಾಭಿಮಾನಿಗಳ, ಮೆಚ್ಚುಗೆ ಗಳಿಸಿದ ಆಟಗಾರರಲ್ಲೊಬ್ಬ. 54 ಟೆಸ್ಟ್ ಪಂದ್ಯಗಳಲ್ಲಿ 195 ವಿಕೆಟ್, 79 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 148 ವಿಕೆಟ್, 13 ಅಂತರ್‌ರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 12 ವಿಕೆಟ್ ಗಳಿಸಿದಾತ. ವಿಕೆಟ್ ಸಂಖ್ಯೆಗಳೇ ಪ್ರತಿಭೆ ಮತ್ತು ಪರಿಣತಿಯನ್ನು ಹೇಳಲಾರವು. ಅವು ಸೂಚ್ಯಂಕಗಳಷ್ಟೇ. 2019ರಲ್ಲಿ ನಡೆದ ವಿಶ್ವ ಏಕದಿನ ಪಂದ್ಯಾವಳಿಯಲ್ಲಿ ಸತತ 3 ಪಂದ್ಯಗಳಲ್ಲಿ 4, 4 ಮತ್ತು 5 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದಾತ ಶಮಿ. ಎಲ್ಲ ಶ್ರೇಷ್ಠ ಆಟಗಾರರಂತೆ ಈತನೂ ಭಾರತದ ಹೆಮ್ಮೆ. ಈತ ಭಾರತೀಯ ಮತ್ತು ಕ್ರೀಡಾಪಟು ಎಂದು ನೆನಪಾದರೆ ಸಾಕು. ಇದರಿಂದಾಚೆಗೆ ಕ್ರಿಕೆಟಿನಲ್ಲಿ ಆತನ ವ್ಯಕ್ತಿತ್ವವನ್ನು ಅಳೆಯಬಾರದು. ಆತ ಯಾವ ಜಾತಿ, ಮತದಲ್ಲಿ ಹುಟ್ಟಿದವನು, ಯಾವ ಭಾಷೆ ಮಾತನಾಡುವವನು, ಯಾವ ರಾಜಕೀಯ ಪಕ್ಷಕ್ಕೆ ಮತ ನೀಡಿದ ಅಥವಾ ನೀಡುತ್ತಾನೆ ಎಂಬ ವಿಷಯಗಳೆಲ್ಲ ಮನುಷ್ಯತ್ವಕ್ಕೆ ಹೊರತಾದದ್ದು.

ಆದರೆ ಸ್ವಘೋಷಿತ ದೇಶಪ್ರೇಮಿ ಭಾರತೀಯರಿಗೆ ಈ ತರ್ಕಗಳೆೆಲ್ಲ ಹಿಡಿಸವು. ಅವರೆಲ್ಲ ಮತಾಂಧತೆಯ ಬೆಳಕಿನಲ್ಲೇ ಕೊಬ್ಬುವವರು. ಡ್ರಾಕುಲಾ ಕತೆಯಲ್ಲಿ ಸೈತಾನನಿಗೆ ಮನುಷ್ಯರ ರಕ್ತ ನೀಡಿದಷ್ಟೂ ಆತ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಂತೆ ನಮ್ಮ ದೇಶದಲ್ಲೂ ಅನೇಕ (ಇವರಲ್ಲಿ ಅನೇಕರು ದುರದೃಷ್ಟವಶಾತ್ ನಾಯಕರು!) ಮಂದಿ ಹೀಗೆ ಮತಾಂಧತೆಯ ರಕ್ತದಲ್ಲೇ ಬದುಕುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇವರಿಗೆ ವಿಶಾಲ ದೃಷ್ಟಿಯಾಗಲೀ, ಅರಿವಿನ ಬೆಳಕಾಗಲೀ ಆಗದು. ಇವರನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತಮ್ಮ ಮೆಚ್ಚುಗೆಯಿಂದ, ಕೊನೆಗೆ ಮೌನದಿಂದ ಪ್ರೋತ್ಸಾಹಿಸುವ ಹಿರಿಯರು ಸಾಕಷ್ಟು ಅಲ್ಲ-ಸಾಕೋಸಾಕಷ್ಟು- ಇದ್ದಾರೆ. ಹಿಂದೊಮ್ಮೆ ಮೀಸಲಾತಿ ವಿರೋಧಿಯೊಬ್ಬರು ನಮ್ಮ ಕ್ರಿಕೆಟ್ ತಂಡಗಳಲ್ಲೂ ಮೀಸಲಾತಿಯನ್ನು ನೀಡುವರೇ ಎಂದು ಕುಹಕವಾಡಿದ್ದರು. ಮತಾಧಾರಿತ, ಜಾತ್ಯಾಧಾರಿತ ತಾರತಮ್ಯವಾದರೆ ಅಲ್ಲೂ ಮೀಸಲಾತಿ ಬೇಕು.

ದೇಶವನ್ನು ಪ್ರತಿನಿಧಿಸುವ ಮಂದಿಗಳನ್ನು ನಮ್ಮ ಸಂಕುಚಿತ ದೃಷ್ಟಿಕೋನದಿಂದ ಬಂಧಿಸಬಾರದು ಮಾತ್ರವಲ್ಲ ಅವರ ನೈತಿಕ ಸ್ಥೈರ್ಯವನ್ನು ಕುಂದಿಸುವ ಯಾವ ನಡತೆಯನ್ನೂ ಪ್ರದರ್ಶಿಸಬಾರದು ಎಂಬ ಕನಿಷ್ಠ ಸೌಜನ್ಯ, ನೈತಿಕತೆಯನ್ನು ಈ ದೇಶದ ಪ್ರಜೆಗಳು ಯಾವಾಗ ಕಳೆದುಕೊಳ್ಳುತ್ತಾರೋ ಆಗ ದೇಶಕ್ಕೆ ಭವಿಷ್ಯವಿಲ್ಲ. ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಬಗ್ಗೆ ನಿತ್ಯದಲ್ಲಿ ಮಾಧ್ಯಮಗಳ ಮೂಲಕ ಮಾತನಾಡುವ, ಪುಟಗಟ್ಟಲೆ ಬರೆಯುವ, ಪುಸ್ತಕ ಪ್ರಕಟಿಸುವ ಮಂದಿಯೂ ಪ್ರತಿಭಟಿಸದೆ, ಮೌನವಾಗಿರುವ ಸಂಗತಿಗಳು ಇನ್ನೂ ಭಯಾನಕ ಭವಿಷ್ಯಕ್ಕೆ ದಿಕ್ಸೂಚಿಯಾಗಿವೆ. ಮಾಮೂಲಾಗಿ ಎಲ್ಲ ಗೆಲುವಿಗೂ ಟ್ವೀಟಿಸುವ, ಎಲ್ಲರ ಗೆಲುವನ್ನು ತಮ್ಮ ಹೆಗಲಿಗೇರಿಸಿಕೊಳ್ಳುವ ನಾಯಕರು ಇಂತಹ ಮಾನಗೇಡಿ ನಡವಳಿಕೆಗಳನ್ನು ಖಂಡಿಸಲು ಹಿಂಜರಿದದ್ದು ದೇಶದ ಮಾನವನ್ನೂ ಮಾರಾಟಮಾಡುವಂತಿದೆಯೆಂಬುದನ್ನು ಪ್ರಜ್ಞಾವಂತರು ಮರೆಯಬಾರದು. ಮತವೆಂದರೆ ಚುನಾವಣೆಯಲ್ಲಿ ಗಳಿಸುವ ‘ಮತ’ವಲ್ಲವೆಂಬುದು ಅನೇಕ ನಾಯಕರಿಗೆ ಗೊತ್ತಿಲ್ಲ. ಏಕೆಂದರೆ ಬಾಮಿಯಾನ್ ಬುದ್ಧನ ವಿಗ್ರಹಭಂಜನೆಯೂ ಈ ಪ್ರಸಂಗವೂ ಗಾತ್ರ-ಪಾತ್ರದಲ್ಲಿ ಭಿನ್ನವಾಗಿದ್ದರೂ ಮೌಲಿಕವಾಗಿ ಭಿನ್ನವಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)