varthabharthi


ರಾಷ್ಟ್ರೀಯ

ಕೇಂದ್ರ ಸರಕಾರದಿಂದ ಬಡವರು, ಬುಡಕಟ್ಟು ಜನರು, ದಲಿತರ ನಿರ್ಲಕ್ಷ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್

ವಾರ್ತಾ ಭಾರತಿ : 28 Oct, 2021

Photo: twitter.com/HemantSorenJMM

ಮುಂಬೈ, ಅ. 28: ಹಣದುಬ್ಬರ ಹಾಗೂ ನಿರುದ್ಯೋಗ ಮೊದಲಾದ ಸಮಸ್ಯೆಗಳ ಕುರಿತಂತೆ ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕೇಂದ್ರ ಸರಕಾರ ಬಡವರು, ಬುಡಕಟ್ಟು ಜನರು ಹಾಗೂ ದಲಿತರನ್ನು ನಿರ್ಲಕ್ಷಿಸುತ್ತಿದೆ ಎಂದಿದ್ದಾರೆ.

ಐದು ದಿನಗಳ ‘ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವ ಹಾಗೂ ರಾಜ್ಯೋತ್ಸವ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಚತ್ತೀಸ್ಗಢದ ರಾಜಧಾನಿಯಲ್ಲಿರುವ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರಕಾರದ ಕಾರ್ಯ ನಿರ್ವಹಣೆ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಕೇಂದ್ರ ಸರಕಾರದ ನಿರ್ಧಾರಗಳು ರಾಜಕಾರಣಿಗಳ ಮೇಲೆ ಮಾತ್ರ ಪ್ರಭಾವ ಬೀರುವುದಲ್ಲ, ಸಾಮಾನ್ಯ ಪ್ರಜೆಗಳ ಮೇಲೂ ಪ್ರಭಾವ ಬೀರುತ್ತಿದೆ.

ಕೇಂದ್ರ ಸರಕಾರದ ಚಿಂತನಾ ಪ್ರಕ್ರಿಯೆಯಲ್ಲಿ ಮಧ್ಯಮ ವರ್ಗದ ಜನರು, ಬಡವರು, ಬುಡಕಟ್ಟು ಜನರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ನಿರ್ಲಕ್ಷಿತರಾಗಿದ್ದಾರೆ ’’ ಎಂದು ಅವರು ಹೇಳಿದರು. ನಕ್ಸಲ್ ಸಮಸ್ಯೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸೊರೇನ್, ನಕ್ಸಲ್ವಾದ ಜಾರ್ಖಂಡ್ನ ಸಮಸ್ಯೆ ಮಾತ್ರವಲ್ಲ. ಅದು ದೇಶದ ಸಮಸ್ಯೆ ಎಂದರು. ‘‘ನೀವು ಅಂಕಿ-ಅಂಶಗಳನ್ನು ನೋಡಿದರೆ, ಜಾರ್ಖಂಡ್ನಲ್ಲಿ ನಕ್ಸಲ್ ಚಟುವಟಿಕೆಗಳು ನಿರಂತರ ಇಳಿಕೆಯಾಗುತ್ತಿರುವುದು ಕಂಡು ಬಂದಿದೆ. ವಿವಿಧ ಸರಕಾರಗಳ ಪ್ರಯತ್ನದಿಂದಾಗಿ ನಕ್ಸಲ್ ಚಟುವಟಿಕೆಗಳು ನಿಯಂತ್ರಣಕ್ಕೆ (ನಕ್ಸಲ್ ಪ್ರಭಾವಿತ ರಾಜ್ಯಗಳು) ಬಂದಿವೆ. ಇದಕ್ಕೆ ಸಂಬಂಧಿಸಿ ನಾವು ಭವಿಷ್ಯದಲ್ಲಿ ಉತ್ತಮ ಕೆಲಸಗಳನ್ನು ಮಾಡಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)