varthabharthi


ಕರಾವಳಿ

ಪೌರ ಕಾಮಿರ್ಕರಿಗೆ ಕನಿಷ್ಠ ಕೂಲಿ ಪಾವತಿ: ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಆಯೋಗ ತಾಕೀತು

ವಾರ್ತಾ ಭಾರತಿ : 28 Oct, 2021

ಮಂಗಳೂರು : ಪೌರ ಕಾರ್ಮಿಕರಿಗೆ ಗುತ್ತಿಗೆ ವಹಿಸಿದ ಸಂಸ್ಥೆ/ ಕಂಪನಿಗಳು ಕನಿಷ್ಠ ಕೂಲಿ ಪಾವತಿ, ಪಿ.ಎಫ್, ಇಎಸ್‌ಐ ಕಂತು ಪಾವತಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುತ್ತಿದೆಯೇ ಎನ್ನುವುದನ್ನು ಸಂಬಂಧ ಪಟ್ಟ ಇಲಾಖೆಗಳು ಖಾತರಿಪಡಿಸಬೇಕು ಎಂದು   ಎಂದು ರಾಜ್ಯ ಸಫಾಯಿ ಕಮರ್ಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಹೇಳಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಪೌರಕಾರ್ಮಿಕರ ಮುಖಂಡರ ಜೊತೆ ಅವರು ಸಂವಾದ ನಡೆಸಿದರು.

ಗುತ್ತಿಗೆದಾರರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸುತ್ತಿಲ್ಲ ಎನ್ನುವ ಕುರಿತು ಕೂಡ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗಬಾರದು ಎಂದು ಅವರು ಸ್ಪಷ್ಟ ಪಡಿಸಿದರು.

ವೇತನ, ಅಗತ್ಯ ಸೌಕರ್ಯಗಳನ್ನು ಒದಗಿಸುವ  ಬಗ್ಗೆ ಪಾಲಿಕೆ ಆಯುಕ್ತರು ಅಥವಾ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜವಾಬ್ದಾರಿ ಎಂದು ಅವರು ಹೇಳಿದರು.

ಪ್ರತೀ ತಿಂಗಳು 10 ತಾರೀಕಿನ ಒಳಗೆ ಹಿಂದಿನ ತಿಂಗಳ ವೇತನ ಕಾರ್ಮಿಕರ ಬ್ಯಾಂಕ್ ಖಾತೆಗೆ ಬೀಳಬೇಕು. ಗುತ್ತಿಗೆ ಕಂಪೆನಿಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಿಸಿದವರಿಗೆ ನೊಟೀಸ್ ಜಾರಿಗೊಳಿಸಬೇಕು. ತಪ್ಪು ತಿದ್ದಿಕೊಳ್ಳದ ಸಂಸ್ಥೆ/ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಒಳಚರಂಡಿ ಸಹಾಯಕರು ಹಾಗೂ ಚಾಲಕರ ಕೆಲಸ ಕಾಯಂಗೊಳಿಸುವ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಆಗಬೇಕು. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ಅವರು ಭರವಸೆ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಗುತ್ತಿಗೆಯಲ್ಲಿ ದುಡಿಯುತ್ತಿರುವ ಒಳಚರಂಡಿ ವಿಭಾಗದ ಕಾರ್ಮಿಕರನ್ನು ಮೊದಲು ನೇರ ನೇಮಕಾತಿ ಅಥವಾ ಕಾಯಂ ಕಾರ್ಮಿಕರೆಂದು ಪರಿಗಣಿಸುವಂತೆ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಮನವಿ ಮಾಡಿದರು.

ಕಳೆದ 6- 7 ವರ್ಷಗಳಿಂದ ವೇತನದಲ್ಲಿ ಹೆಚ್ಚಳವಿಲ್ಲ. ಇಪಿಎಫ್, ಇಎಸ್‌ಐ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಓಟಿ, ರಜೆ ಸಂಬಳವಿಲ್ಲ. ಆದರೂ ಪ್ರಾಮಾಣಿಕವಾಗಿ ಎಲ್ರೂ ದುಡಿದಿದ್ದೇವೆ. ಆದರೆ ಕಾರ್ಮಿಕರನ್ನು ನೇರ ನೇಮಕಾತಿ ಮಾಡುವ ಸಂದರ್ಭ ವಾಹನ ಚಾಲಕರನ್ನು ಕೈಬಿಟ್ಟಿರುವುದು ಅನ್ಯಾಯವಾಗಿದೆ. ಈ ಅಸಮಾನತೆಯನ್ನು ಸರಿಪಡಿಸುವಂತೆ ಮಂಗಳೂರು ಸಫಾಯಿ ಕರ್ಮಾಚಾರಿಗಳ ಸಂಘದ ಪ್ರತಿನಿಧಿಗಳು ಈ ಸಂದರ್ಭ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಆಯೋಗದ ಕಾರ್ಯದರ್ಶಿ ರಮಾ, ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕಿ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)