ಮಂಗಳೂರು: ಬೋಟ್ನಿಂದ ಬಿದ್ದು ಮೀನುಗಾರ ನಾಪತ್ತೆ
ಮಂಗಳೂರು, ಆ.28: ಬೋಟ್ವೊಂದರಲ್ಲಿ ಮೀನುಗಾರಿಕೆಗೆ ತೆರಳಿದ ಯುವಕನೋರ್ವ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ದಕ್ಕೆಯಲ್ಲಿ ನಡೆದಿದೆ.
ನಾಪತ್ತೆಯಾದ ಮೀನುಗಾರರನ್ನು ತಮಿಳುನಾಡು ಮೂಲದ ವೇಲ್ ಮುರುಗನ್(24) ಎಂದು ಗುರುತಿಸಲಾಗಿದೆ.
ಮಂಗಳೂರಿನ ದಕ್ಕೆಯಿಂದ ಆ.24ರಂದು ರಾತ್ರಿ 10:30ರ ಸುಮಾರಿಗೆ ಅಲ್ ಕೌಸರ್ ಎಂಬ ಬೋಟ್ನಲ್ಲಿ 10 ಮೀನುಗಾರರ ಜೊತೆ ವೇಲ್ ಮುರುಗನ್ ಮೀನುಗಾರಿಕೆಗೆ ತೆರಳಿದ್ದಾರೆ. ರಾತ್ರಿ 11:15ರ ಸುಮಾರಿಗೆ ವೇಲ್ ಮುರುಗನ್ ಕಾಣೆಯಾಗಿದ್ದು, ಜೊತೆಗಿದ್ದ ಮೀನುಗಾರರು ಆಸುಪಾಸಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಅಲೆಗಳ ಅಬ್ಬರಕ್ಕೆ ವೇಲ್ ಮುರುಗನ್ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಮುರುಗನ್ ನಾಲ್ಕು ತಿಂಗಳಿಂದ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story