varthabharthi


ಕರಾವಳಿ

ಇಬ್ಬರು ಆಸ್ಪತ್ರೆಗೆ ದಾಖಲು

ತೋಡಾರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ವಾರ್ತಾ ಭಾರತಿ : 28 Oct, 2021

ಮೂಡುಬಿದಿರೆ, ಅ.28: ಇಲ್ಲಿನ ತೋಡಾರು ಸಮೀಪ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳ ಇತ್ತಂಡಗಳ ನಡುವೆ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಸಾಝ್ ಮತ್ತು ಸ್ವರೂಪ್ ಆಸ್ಪತ್ರೆಗೆ ದಾಖಲಾದವರು ಎಂದು ಗುರುತಿಸಲಾಗಿದೆ.

ತೋಡಾರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂದಿನ ಶನಿವಾರ ‘ಸಂಪ್ರದಾಯ’ ದಿನ ಕಾರ್ಯಕ್ರಮ ನಡೆಯಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಬುಧವಾರ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ತೃತೀಯ ವರ್ಷದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ ಗುಂಪು ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ನಡೆದ ಹೊಡೆದಾಟದ ಸಂಬಂಧ ಪ್ರಾಂಶುಪಾಲರು ಉಭಯ ತಂಡಗಳ ತಲಾ 4ರಂತೆ 8 ಮಂದಿಯನ್ನು ನಿನ್ನೆ ಅಮಾನತುಗೊಳಿಸಿ ಮನೆಗೆ ಕಳುಹಿಸಿದ್ದರು. ಮತ್ತೆ ಈ ಗುಂಪು ಕಾಲೇಜಿನ ಹೊರಗಡೆ ಹೊಡೆದಾಟ ನಡೆಸಿದ್ದು, ತೃತೀಯ ವರ್ಷದ ನಾಲ್ಕು ಮಂದಿಯ ಮೇಲೆ ಅಂತಿಮ ವರ್ಷದ ವಿದ್ಯಾರ್ಥಿಗಳ ನಲ್ವತ್ತು ಮಂದಿಯ ತಂಡ ಹಲ್ಲೆ ನಡೆಸಿದ್ದು, ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಎಫ್‌ಐ ಜಿಲ್ಲಾ ನಿಯೋಗ ಆಸ್ಪತ್ರೆಗೆ ಭೇಟಿ

ಕ್ಯಾಂಪಸ್ ಫ್ರಂಟ್ ಜಿಲ್ಲಾ ನಿಯೋಗ ಆಸ್ಪತ್ರೆಗೆ ಭೇಟಿಯಾಗಿ ಹಲ್ಲೆಗೈದ ವಿದ್ಯಾರ್ಥಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ಅರ್ಫಿದ್ ಅಡ್ಕಾರ್, ಮಂಗಳೂರು ನಗರ ಜಿಲ್ಲಾಧ್ಯಕ್ಷ ಶರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಕಾರ್ಯದರ್ಶಿ ಸರ್ಫರಾಝ್ ನಿಯೋಗದಲ್ಲಿದ್ದರು.

ಇಬ್ಬರು ಆಸ್ಪತ್ರೆಗೆ ದಾಖಲು

ಮೂಡುಬಿದಿರೆಯ ಯೆನೆಪೊಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅ.30ರಂದು ನಡೆಯಲಿರುವ ಕಾರ್ಯಕ್ರಮವೊಂದರ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಅಂತಿಮ ವರ್ಷದ ವಿದ್ಯಾರ್ಥಿಗಳ ಒಂದು ಗುಂಪು 3ನೇ ವರ್ಷದ ವಿದ್ಯಾರ್ಥಿಗಳ ಒಂದು ಗುಂಪಿನೊಂದಿಗೆ ಘರ್ಷಣೆ ಉಂಟಾಗಿದೆ. ಈ ಸಂದರ್ಭ ವಿದ್ಯಾರ್ಥಿಗಳ ಒಂದು ಗುಂಪಿನ ಮೇಲೆ ಹೆಲ್ಮೆಟ್, ಕಲ್ಲು ಮತ್ತು ಕೈಯಿಂದ ಹಲ್ಲೆ ನಡೆಸಲಾಗಿದೆ. ಇತ್ತಂಡಗಳು ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
-ಹರಿರಾಂ ಶಂಕರ್, ಉಪ ಆಯುಕ್ತರು ಕಾನೂನು ಸುವ್ಯವಸ್ಥಾ ವಿಭಾಗ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)