varthabharthi


ಕರಾವಳಿ

ಖಾಸಗಿ ಒಡೆತನದಲ್ಲಿರುವ ಶಾಲಾ ಕಟ್ಟಡ ಬಾಡಿಗೆ ಬಾಕಿ ಪ್ರಕರಣ

ಭಟ್ಕಳ; ಕೋರ್ಟ್ ಆದೇಶ ಪಾಲಿಸದ ಶಿಕ್ಷಣ ಇಲಾಖೆ: ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

ವಾರ್ತಾ ಭಾರತಿ : 28 Oct, 2021

ಭಟ್ಕಳ: ಕಳೆದ 40 ವರ್ಷಗಳಿಂದ ಖಾಸಗಿ ಒಡೆತನದಲ್ಲಿರುವ ಶಾಲಾ ಕಟ್ಟಡಕ್ಕೆ ಬಾಡಿಗೆ ಪಾವತಿಸದ ಶಿಕ್ಷಣ ಇಲಾಖೆಯ ವಿರುದ್ಧ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲವು ಮಹತ್ತರ ತೀರ್ಪು ನೀಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಸಾಗರ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗಣಕ ಯಂತ್ರ, ಪೀಠೋಪಕರಣ ಸೇರಿದಂತೆ ವಿವಿಧ ವಸ್ತುಗಳನ್ನು ನ್ಯಾಯಾಲವು ವಶಕ್ಕೆ ಪಡೆದುಕೊಂಡಿತು.

ನಗರದ ಮುಗ್ದುಂ ಕಾಲನಿಯಲ್ಲಿರುವ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಗೆ 1.50 ಲಕ್ಷ ರೂ. ಬಾಡಿಗೆ ನೀಡುವಂತೆ ಭಟ್ಕಳ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ತೀರ್ಪು ಪಾಲಿಸದ ಕಾರಣ, ಶಿಕ್ಷಣ ಇಲಾಖೆಯ ಕಚೇರಿ ಪೀಠೋಪಕರಣ ಹಾಗೂ ವಾಹನವನ್ನು ನ್ಯಾಯಾಲಯ ಜಪ್ತಿ ಮಾಡಿದೆ ಎಂದು ಸಂಸ್ಥೆಯ ಪರವಾಗಿ ವಾದ ಮಾಡಿದ್ದ ನ್ಯಾಯಾವಾದಿ ಆರ್.ಜಿ.ನಾಯ್ಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಪ್ರತಿಕ್ರಿಯೆ: ಈ ಕುರಿತಂತೆ ಉ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕ ಹರೀಶ್ ಗಾಂವ್ಕರ್ ಪ್ರತಿಕ್ರಿಯೆ ನೀಡಿದ್ದು ಮಗ್ಗೂಮ್ ಕಾಲನಿಯ ಶಾಲಾ ಕಟ್ಟಡವು ಸರ್ಕಾರದ ಜಾಗದಲ್ಲಿದೆ. ಕೋರ್ಟ್‍ಗೆ ಈ ಕುರಿತು ಮನವರಿಕೆ ಮಾಡಲಾಗಿದೆ. ಸದ್ಯ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತ ಹಣ ಪಾವತಿಗಾಗಿ 15 ದಿನಗಳ ಕಾಲಾವಾಕಾಶವನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲದ ಆದೇಶಕ್ಕಾಗಿ ಸ್ಟೇ (ತಡೆ) ಕೋರಲಾಗಿತ್ತು. ಆದರೆ ಸ್ಟೇ ದೊರೆಯದ ಕಾರಣ ನ್ಯಾಯಾಲಯವು ಪೀಠೋಪಕರಗಳನ್ನು ಜಪ್ತಿ ಮಾಡಿಕೊಂಡಿದೆ. ನ್ಯಾಯಾಲಯಕ್ಕೆ ಹಣ ತುಂಬಲು ಕಾಲಾವಾಕಾಶ ಕೇಳಲಾಗಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)