varthabharthi


ಕರ್ನಾಟಕ

ಸ್ಮಾರಕಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಟ್ಟರೆ, ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಚಾರ: ಸಚಿವ ಆನಂದ್ ಸಿಂಗ್

ವಾರ್ತಾ ಭಾರತಿ : 28 Oct, 2021

ಬೆಂಗಳೂರು 28: ಪಾರಂಪರಿಕ ಸ್ಮಾರಕಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ನಟ ಅಕ್ಷಯ್ ಕುಮಾರ್ ಅವರ ರಾಥೋಡ್ ಎಂಬ ಚಿತ್ರವೊಂದಕ್ಕೆ ಚಿತ್ರೀಕರಣ ಮಾಡಲು ಅಧಿಕಾರಿಯೊಬ್ಬರು ಅವಕಾಶ ನೀಡಿರಲಿಲ್ಲ. ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದರಿಂದ ಚಿತ್ರಗಳ ಮೂಲಕ ಪ್ರೇಕ್ಷಣಿಯ ಪ್ರವಾಸಿ ತಾಣಗಳ ಪರಿಚಯವಾಗುತ್ತದೆ. ಈ ಮೂಲಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿನ ಕೆಲವೊಂದು ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ. ದೇವಸ್ಥಾನಗಳನ್ನು ಮುಟ್ಟಲು ಅವಕಾಶ ನೀಡದಿದ್ದರೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದರು.

ಹಂಪಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಆ ಬಗ್ಗೆ ಸಂತೋಷವಿದೆ. ಎಎಸ್‌ಐ (ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ) ಹಾಗೂ ಸ್ಥಳೀಯ ಜನರ ಜತೆ ನಡುವೆ ಭಿನ್ನಾಭಿಪ್ರಾಯ ಇದೆ. ಈ ವಿಷಯ ಕೇಂದ್ರ ಸರ್ಕಾರಕ್ಕೆ ತಲುಪಲಿ ಎನ್ನುವ ಮೂಲಕ ಸಮ್ಮೇಳನದಲ್ಲಿದ್ದ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ಗಮನ ಸೆಳೆದರು.

ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡಿದರೆ ಬೆಂಬಲ: ಇಡೀ ಜಾಗತಿಕ ಪ್ರವಾಸೋದ್ಯಮ ಕೋವಿಡ್‌ನಿಂದಾಗಿ ಹಲವು ಸವಾಲು ಎದುರಿಸಿದ್ದು, ಇತ್ತೀಚೆಗೆ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಉತ್ತಮ ಯಶಸ್ಸು ಪಡೆಯುವ ಮೂಲಕ ರಾಜ್ಯ ಪ್ರವಾಸೋದ್ಯಮ ಸಂಪೂರ್ಣ ಗರಿಗೆದರಿದೆ. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದರೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಉಡುಗೊರೆಯನ್ನು ನೀಡಿದೆ. ಇಲ್ಲಿರುವ ಪ್ರವಾಸಿ ತಾಣಗಳು ದೇಶ-ವಿದೇಶಗಳಿಗೆ ಕಡಿಮೆ ಇಲ್ಲ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಹಂಪಿ, ಪಟ್ಟದಕಲ್ಲು, ಪಶ್ಚಿಮಘಟ್ಟ, ಪಾರಂಪರಿಕ ತಾಣಗಳು ಯುನೆಸ್ಕೋ ಈ ಪಟ್ಟಿಯಲ್ಲಿವೆ. ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ನಾವು ಶ್ರಮಿಸುತ್ತಿದ್ದೇವೆ. ರಾಜ್ಯದಲ್ಲಿ ಐದು ರಾಷ್ಟ್ರೀಯ ಪಾರ್ಕ್, 30 ವನ್ಯಜೀವಿ ಅಭಯಾರಣ್ಯ, 17 ಗಿರಿಧಾಮಗಳು, 40 ಜಲಪಾತಗಳಿವೆ ಎಂದು ಹೇಳಿದರು.

320 ಕಿ.ಮೀ ಉದ್ದದ ನೈಸರ್ಗಿಕ ಕರಾವಳಿ ಹಾಗೂ ಕಡಲ ತೀರಗಳಿವೆ. ಈ ಪ್ರವಾಸಿ ತಾಣಗಳು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ವಿಶ್ವ ಭೂಪಟದಲ್ಲಿ ಕರ್ನಾಟಕ ಪ್ರಮುಖ ಸ್ಥಾನ ಪಡೆಯಬೇಕೆಂದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಬಳಿಕ ಸಚಿವ ಆನಂದ್ ಸಿಂಗ್ ಅವರು, ಮೈಸೂರು ಮತ್ತು ಹಂಪಿಯನ್ನು ‘ಪಾರಂಪರಿಕ ಸಿಟಿ’ ಎಂದು ಘೋಷಣೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ, ಭಗವಂತ್ ಖೂಬಾ, ನೆರೆ ರಾಜ್ಯಗಳ ಪ್ರವಾಸೋದ್ಯಮದ ಸಚಿವರಾದ ಶ್ರೀನಿವಾಸ್ ಗೌಡ, ಎಂ.ಮಥಿವೆಂತನ್, ಲಕ್ಷ್ಮೀನಾರಾಯಣ್ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆ ಬಳಸದ ಬಗ್ಗೆ ಸಚಿವರ ಖಂಡನೆ:

ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಬಳಕೆ ಮಾಡದಿರುವುದನ್ನು ಖಂಡಿಸುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ನಮ್ಮ ಭಾಷೆಗೆ ನಾವು ಗೌರವ ಕೊಡುವುದು ನಮ್ಮ ಕರ್ತವ್ಯ. ರಾಜ್ಯದೆಲ್ಲೆಡೆ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ನಡೆಯುತ್ತಿದೆ. ಆದರೂ ಇಂತಹ ತಪ್ಪು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹದ್ದೇ ಪುನರಾವರ್ತನೆ ಆದರೆ ಇದನ್ನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಮ್ಮೇಳನವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಆಯೋಜನೆ ಮಾಡಿದ್ದು, ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ಷಮೆಯಾಚಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೇ ಕನ್ನಡ ಭಾಷೆಯನ್ನು ಬ್ಯಾನರ್‌ನಲ್ಲಿ ಬಳಕೆ ಮಾಡದಿರುವುದನ್ನು ಸ್ವತಃ ನಾನೇ ಗಮಿನಿಸಿದೆ. ಅಷ್ಟೊತ್ತಿಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಕೂಡ ಬಿತ್ತರಗೊಂಡಿತು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಡಿಜಿಟಲ್ ಮೂಲಕ ಕನ್ನಡ ಭಾಷೆಯ ಬ್ಯಾನರ್ ಪ್ರದರ್ಶಿಸಲಾಯಿತು. ಇನ್ನು ಈ ವಿಚಾರವನ್ನು ದೊಡ್ಡದಾಗಿ ಮಾಡುವುದು ಬೇಡ ಎಂದು ಮನವಿ ಮಾಡಿದರು.


ವೇದಿಕೆಯ ಬ್ಯಾನರಲ್‌ನಲ್ಲಿ ಕನ್ನಡ ಭಾಷೆ ಬಳಕೆ ಮಾಡದ ಬಗ್ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಪ್ರವಾಸೋದ್ಯಮ ಇಲಾಖೆ ಮಹಾ ನಿರ್ದೇಶಕ ಗಂಜಿ ಕಮಲವರ್ಧನ್ ರಾವ್ ಅವರನ್ನು ಕರೆಯಿಸಿ, ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಏಕೆ ಕನ್ನಡ ಬಳಕೆ ಮಾಡಿಲ್ಲ. ಕೂಡಲೇ ಈ ತಪ್ಪನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರು. ಸಚಿವರ ಸೂಚನೆಯ ಬೆನ್ನಲ್ಲೇ ಅರ್ಧ ತಾಸಿನಲ್ಲೇ ವೇದಿಕೆಯ ಹಿಂಭಾಗ ಎರಡು ಬದಿ ಕನ್ನಡದಲ್ಲಿರುವ ಡಿಜಿಟಲ್ ಬ್ಯಾನರ್‌ನ್ನು ಪ್ರದರ್ಶಿಸಲಾಯಿತು.

ದೀಪಾವಳಿ ನಮ್ಮ ಸಂಪ್ರಾಯಿಕ ಹಬ್ಬ. ದೀಪ ಹಚ್ಚಬೇಕು, ಪಟಾಕಿ ಹೊಡೆಯಬೇಕು. ವರ್ಷನುಗಟ್ಟಲೇಯಿಂದ ನಡೆದು ಬಂದಿರುವ ಸಂಪ್ರಾದಯವನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಅದಷ್ಟು ಪಟಾಕಿ ಹೊಡೆಯುವುದನ್ನು  ಕಡಿಮೆ ಮಾಡಿ, ಎಚ್ಚರಿಕೆಯಿಂದ ಆಚರಿಸಬೇಕು ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)