varthabharthi


ಸಂಪಾದಕೀಯ

ಸಂಪೂರ್ಣ ಲಸಿಕೀಕರಣ: ಭಾರತದ ಮುಂದಿರುವ ಸವಾಲು

ವಾರ್ತಾ ಭಾರತಿ : 30 Oct, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

2022ರ ಜೂನ್ ತಿಂಗಳೊಳಗೆ ತಮ್ಮ ಜನಸಂಖ್ಯೆಯ ಕನಿಷ್ಠ ಶೇ.70ರಷ್ಟು ಮಂದಿ ಸಂಪೂರ್ಣವಾಗಿ ಲಸಿಕೆ ಪಡೆಯುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಈ ವರ್ಷದ ಅಂತ್ಯದೊಳಗೆ ಶೇ.70ರಷ್ಟು ಜನಸಂಖ್ಯೆಗೆ ಲಸಿಕೆ ನೀಡುವ ಗುರಿಯನ್ನು ಭಾರತವು ಇರಿಸಿಕೊಂಡಿದ್ದು, ಇದು ಖಂಡಿತವಾಗಿಯೂ ಸ್ವಾಗತಾರ್ಹವಾದ ಬದ್ಧತೆಯಾಗಿದೆ. ಇದುವರೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ.20ರಷ್ಟು ಮಂದಿಗೆ ಮಾತ್ರವೇ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. 2021ರ ಜನವರಿಯಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭಗೊಂಡಿರುವುದರಿಂದ ಸಾಧ್ಯವಾದಷ್ಟು ಬೇಗನೆ ದೇಶದ ಶೇ.70ಕ್ಕಿಂತಲೂ ಅಧಿಕ ಜನಸಂಖ್ಯೆಯು ಎರಡೂ ಡೋಸ್ ಲಸಿಕೆ ಪಡೆಯುವಂತೆ ಮಾಡುವುದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಆದ್ಯತಾ ಕಾರ್ಯವಾಗಿದೆ.

ಇತ್ತೀಚೆಗಷ್ಟೇ ಭಾರತ, 100 ಕೋಟಿ ಲಸಿಕೆ ನೀಡಿಕೆಯ ಗಡಿ ದಾಟಿರುವುದನ್ನು ಸಂಭ್ರಮಿಸಿತು. ಆದರೆ ಇದೊಂದು ಹುಸಿ ಸಂಭ್ರಮವೆನ್ನುವುದು ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. ಮುಖ್ಯವಾಗಿ ಶೇ.70ರಷ್ಟು ಮಂದಿಗೆ ಲಸಿಕೆಯನ್ನು ನೀಡುವ ಗುರಿಯ ಅರ್ಧದಷ್ಟು ದೂರವನ್ನು ಮಾತ್ರ ನಾವು ಕ್ರಮಿಸಿದ್ದೇವೆ. ಭಾರತವು ಹೆಚ್ಚುಕಡಿಮೆ 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಎರಡೂ ಡೋಸ್ ಲಸಿಕೆ ನೀಡಬೇಕಾದರೆ ನಮಗೆ 280 ಕೋಟಿ ಡೋಸ್‌ಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಪ್ರಸಕ್ತ ಭಾರತವು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಅರ್ಹರಿಗೂ (94 ಕೋಟಿ) ಲಸಿಕೆ ನೀಡುವ ಗುರಿಯನ್ನು ಹೊಂದಿದೆ. 12ರಿಂದ 17 ವರ್ಷದ ವಯೋಮಾನದವರಿಗೂ ಲಸಿಕೆಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಇನ್ನೂ 17 ಕೋಟಿ ಹೆಚ್ಚುವರಿ ಲಸಿಕೆ ಬೇಕಾಗುತ್ತದೆ. ಹೀಗಾಗಿ ಈಗ, 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಅರ್ಹರನ್ನೂ ಸಂಪೂರ್ಣವಾಗಿ ಲಸಿಕೀಕರಣಗೊಳಿಸಬೇಕಾದರೆ ನಮಗೆ 222 ಕೋಟಿ ಡೋಸ್‌ಗಳ ಅಗತ್ಯವಿದೆ. ಭಾರತವು ಈಗಾಗಲೇ 100 ಕೋಟಿ ಡೋಸ್‌ಗಳ ಆಡಳಿತಾತ್ಮಕ ಮೈಲುಗಲ್ಲನ್ನು ದಾಟಿದೆ ಎಂದು ಹೇಳುತ್ತಿದೆ. ಉಳಿದ 122 ಕೋಟಿ ಡೋಸ್ ನೀಡಿಕೆಯನ್ನು ಸೀಮಿತ ಕಾಲಾವಧಿಯೊಳಗೆ ನೀಡುವ ಪ್ರಕ್ರಿಯೆ ಅಷ್ಟು ಸುಲಭವೇನೂ ಇಲ್ಲ. 2021ರ ಮೇನಲ್ಲಿ ಭಾರತದಲ್ಲಿ ಪ್ರತಿದಿನ ಸರಾಸರಿ 19.69 ಲಕ್ಷ ಡೋಸ್‌ಗಳನ್ನು ನೀಡಲಾಗಿದ್ದು, 2021ರ ಜೂನ್‌ನಲ್ಲಿ ಇದು 39.89 ಲಕ್ಷಕ್ಕೇರಿದೆ. 2021ರ ಜುಲೈನಲ್ಲಿ ಸರಾಸರಿ ದೈನಂದಿನ ಡೋಸ್ ನೀಡಿಕೆಯ ಪ್ರಮಾಣವು 43.41 ಲಕ್ಷಕ್ಕೇರಿದೆ. 2021ರ ಆಗಸ್ಟ್‌ನಲ್ಲಿ ದಿನಂಪ್ರತಿ ಡೋಸ್ ನೀಡಿಕೆಯ ಸರಾಸರಿ ಪ್ರಮಾಣವು 59.29 ಲಕ್ಷವನ್ನು ತಲುಪಿದೆ. 2021ರ ಸೆಪ್ಟಂಬರ್‌ನಲ್ಲಿ ಸರಾಸರಿ ದೈನಂದಿನ ಡೋಸ್‌ಗಳ ಪ್ರಮಾಣವು 78.79 ಲಕ್ಷಕ್ಕೆ ಏರಿದೆ. 2021ರ ಅಕ್ಟೋಬರ್ ತಿಂಗಳ ಮೊದಲ 18 ದಿನಗಳಲ್ಲಿ ಸರಾಸರಿ ದೈನಂದಿನ ಡೋಸ್ ನೀಡಿಕೆಯ ಪ್ರಮಾಣವು 53.21 ಲಕ್ಷಕ್ಕೆ ಇಳಿಸಲಾಯಿತು. ದೇಶದ ಶೇ.70ರಷ್ಟು ಜನಸಂಖ್ಯೆಯನ್ನು ಈ ವರ್ಷದ ಅಂತ್ಯದೊಳಗೆ ಲಸಿಕೀರಣಗೊಳಿಸುವ ಗುರಿಯನ್ನು ಭಾರತ ತಲುಪಬೇಕಾದರೆ ಅದು ಪ್ರತಿದಿನವೂ 1 ಕೋಟಿ ಜನರಿಗೆ ಲಸಿಕೆಯನ್ನು ನೀಡಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಲಸಿಕೀಕರಣ ಪಾರದರ್ಶಕವಾಗಿಲ್ಲ. ಅಲ್ಲಿ ಅವ್ಯವಹಾರ ಮತ್ತು ಹಗರಣಗಳು ತಾಂಡವವಾಡುತಿವೆ. ದಾಖಲೆಗಳನ್ನು ಸಂಭ್ರಮಿಸುವುದಕ್ಕಾಗಿ, ಭಾರತ ಅಕ್ರಮ ದಾರಿಗಳನ್ನು ಅನುಸರಿಸುತ್ತಿದೆಯೇ ಎನ್ನುವ ಅನುಮಾನ ಜನರನ್ನು ಕಾಡತೊಡಗಿದೆ. ಹಲವೆಡೆ ಮೃತಪಟ್ಟವರ ಮೊಬೈಲ್‌ಗಳಿಗೆ ‘ನಿಮ್ಮ ಎರಡು ಲಸಿಕೆ ಪೂರ್ಣಗೊಂಡಿದೆ’ ಎಂಬ ಸಂದೇಶಗಳು ಭಾರತ ಪ್ರದರ್ಶಿಸುತ್ತಿರುವ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿವೆ. ಇದೇ ಸಂದರ್ಭದಲ್ಲಿ ಲಸಿಕೆಗಳ ಕುರಿತಂತೆ ಇರುವ ವದಂತಿ, ಅನುಮಾನಗಳನ್ನು ನಿವಾರಿಸುವಲ್ಲಿಯೂ ವ್ಯವಸ್ಥೆ ವಿಫಲಗೊಂಡಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಲಸಿಕೆ ಹಾಕಲು ಜನರು ಹಿಂಜರಿಯುತ್ತಿದ್ದಾರೆ. ಎರಡು ಬಾರಿ ಲಸಿಕೆ ಹಾಕಿದ ಜನರಲ್ಲೂ ವ್ಯಾಪಕವಾಗಿ ಕೊರೋನ ಕಾಣಿಸಿಕೊಂಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಲಸಿಕೀಕರಣಕ್ಕೆ ಒಂದು ಹಿನ್ನಡೆಯಾಗಿದೆ. ಇದೇ ಸಂದರ್ಭದಲ್ಲಿ ಕೋವ್ಯಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯನ್ನು ಇನ್ನೂ ಪಡೆದುಕೊಂಡಿಲ್ಲ. ಆದುದರಿಂದ ಕೋವ್ಯಾಕ್ಸಿನ್ ಒಂದು ಬಾರಿ ಹಾಕಿಸಿಕೊಂಡವರು ಎರಡನೇ ಬಾರಿ ಅದನ್ನು ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೂ ಲಸಿಕೀಕರಣ ತನ್ನ ಗುರಿಯನ್ನು ತಲುಪಲು ದೊಡ್ಡ ತಡೆಯಾಗಿದೆ. ಜನರ ಅನುಮಾನ, ಗೊಂದಲಗಳನ್ನು ನಿವಾರಿಸಿ ಅವರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಬದಲು, ಅವರನ್ನು ಬೆದರಿಸಿ ಲಸಿಕೆ ಹಾಕಿಸಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಅದರ ಭಾಗವಾಗಿ, ಲಸಿಕೆ ಹಾಕದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಒಂದು ಗುಂಪು ಈಗಾಗಲೇ ‘ಬಲವಂತದ ಲಸಿಕೀಕರಣ’ವನ್ನು ವಿರೋಧಿಸುತ್ತಿದೆ. ಸರಕಾರದ ಬೆದರಿಕೆ, ಅವರ ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಮೊದಲು ಲಸಿಕೆಯ ಕುರಿತಂತೆ ಜನರಲ್ಲಿ ಪೂರ್ಣ ಪ್ರಮಾಣದ ಆತ್ಮವಿಶ್ವಾಸವನ್ನು ಮೂಡಿಸಬೇಕು. ಲಸಿಕೀಕರಣದ ಅಂಕಿಅಂಶಗಳನ್ನು ಪ್ರದರ್ಶಿಸುವುದರಿಂದ ಕೊರೋನ ನಮ್ಮ ನಡುವಿನಿಂದ ದೂರವಾಗಲಾರದು. ಸಂಪೂರ್ಣ ಲಸಿಕೀಕರಣ ಸರಕಾರದ ಕರ್ತವ್ಯವೇ ಹೊರತು, ಅದು ಜನರಿಗೆ ಮಾಡುವ ಉಪಕಾರವಲ್ಲ. ಆದುದರಿಂದ, ಅನಗತ್ಯ ರಾಜಕೀಯ ಪ್ರಚಾರದ ಉದ್ದೇಶಕ್ಕಾಗಿ ಲಸಿಕೀಕರಣವನ್ನ್ನು ಬಳಸಬಾರದು. ಹಾಗೆಯೇ ಸಂಪೂರ್ಣ ಲಸಿಕೀಕರಣದ ಆರ್ಥಿಕ ಹೊರೆಯನ್ನು ನಿಭಾಯಿಸುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, ಇನ್ನಾದರೂ ಪಿಎಂ ಕೇರ್ಸ್‌ನ ತಿಜೋರಿಯನ್ನು ತೆರೆದು, ಕೊರೋನ ಸಂಬಂಧಪಟ್ಟಂತೆ ವಿನಿಯೋಗವಾಗಿರುವ ಹಣದ ವಿವರವನ್ನು ಜನರಿಗೆ ನೀಡಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)