varthabharthi


ಸಿನಿಮಾ

ಎಲ್ಲರಿಗೂ ಅಚ್ಚುಮೆಚ್ಚು, ಈ ಅಪ್ಪು

ವಾರ್ತಾ ಭಾರತಿ : 30 Oct, 2021
ಬಸವರಾಜು ಮೇಗಲಕೇರಿ

ಪುನೀತ್‌ಗೆ ಈಗಿನ್ನು 46(17.3.1975), ಸಾಯುವ ವಯಸ್ಸಲ್ಲ. ಒಬ್ಬ ಮನುಷ್ಯ ತನ್ನ ಬದುಕಿನಲ್ಲಿ ಉತ್ತುಂಗಕ್ಕೇರಿ, ಸುಖ-ದುಃಖಗಳನ್ನು ಸಮಾನವಾಗಿ ಕಂಡುಂಡು ಮೆರೆಯುವ, ಮಾಗುವ ವಯಸ್ಸು. ಇಂತಹ ವಯಸ್ಸಲ್ಲೂ ಪುನೀತ್ ದೈಹಿಕವಾಗಿ ಫಿಟ್ ಆ್ಯಂಡ್ ಫೈನ್ ಆಗಿದ್ದರು. ನಡೆ-ನುಡಿಯಲ್ಲಿ ಮಾದರಿಯಾಗಿದ್ದರು. ಸಹನೆ-ತಾಳ್ಮೆ-ಕರುಣೆ-ಪ್ರೀತಿಗಳ ಸಂಗಮದಂತಿದ್ದರು. ವಿದ್ಯೆ-ಬುದ್ಧಿ-ಗ್ರಹಿಕೆಯಲ್ಲಿ ಭಿನ್ನವಾಗಿದ್ದರು. ಗರ್ವ-ಗತ್ತುಗಳನ್ನು ಗಾವುದ ದೂರದಲ್ಲಿಟ್ಟಿದ್ದರು. ಸೂಪರ್ ಸ್ಟಾರ್ ಎಂಬ ಭುಜಕೀರ್ತಿಗೆ ಬಲಿಯಾಗದವರು. ನಟನೆಯಲ್ಲಿ ಅಪ್ಪನನ್ನು ಅನುಕರಿಸಿದರೂ, ತಮ್ಮದೇ ಆದ ಹೊಸದೊಂದು ಹಾದಿಯನ್ನು ಹುಡುಕಿಕೊಂಡಿದ್ದರು. ಪುಟಿ ದೇಳುವ ಚಿಲುಮೆಯಂತಿದ್ದರು. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕನ್ನಡಿಗರಿಗಷ್ಟೇ ಅಲ್ಲ, ಬೇರೆ ಭಾಷೆಯ ಜನರೊಂದಿಗೂ ಪ್ರೀತಿ-ವಿಶ್ವಾಸದಿಂದಿದ್ದು ‘ಕರ್ನಾಟಕದ ಹೆಮ್ಮೆ’ ಎನಿಸಿಕೊಳ್ಳಲು ಸೂಕ್ತವಾಗಿದ್ದರು. ಇಂತಹ ಅಪ್ಪುಇವತ್ತಿಲ್ಲ ಎನ್ನುವುದು ನಿಜಕ್ಕೂ ನಂಬಲಾಗದ ಸುದ್ದಿ.


 

‘‘ಅಯ್ಯೋ ದೇವರೆ, ಇಲ್ಲಾ... ಈ ಸುದ್ದಿಯನ್ನು ನಂಬಲು ನಾನು ಸಿದ್ಧಳಿಲ್ಲ..’’-ಇದು ಮಧ್ಯಾಹ್ನ 12:30ಕ್ಕೆ ಟ್ವಿಟರ್‌ನಲ್ಲಿ ಕಾಣಿಸಿಕೊಂಡ ಸಣ್ಣ ಸುದ್ದಿ ತುಣುಕು. ಅದೇ ಸಮಯಕ್ಕೆ ಸರಿಯಾಗಿ ಜೋರು ಮಳೆ. ಆ ಅಭಿಮಾನಿಯ ಅಳಲು, ತೊಳಲಾಟ, ಸಂಕಟ; ಹೊರಗೆ ಸುರಿಯುತ್ತಿರುವ ಮಳೆ-ಪುನೀತ್‌ರಿಗೆ ಅಂತಿಮ ವಿದಾಯ ಹೇಳುತ್ತಿತ್ತೆ? ಇದು ಅಪ್ಪು ಅಭಿಮಾನಿಗಳಿಗಷ್ಟೇ ಅಲ್ಲ, ಯಾರಿಗೇ ಆದರೂ, ಅನಿರೀಕ್ಷಿತ ಆಘಾತವನ್ನುಂಟು ಮಾಡಿದ ಸುದ್ದಿ. ಅರಗಿಸಿಕೊಳ್ಳಲಾಗದ ಸುದ್ದಿ. ತುಂಬಾ ದಿನ ಕಾಡುವ ಸಾವಿನ ಸುದ್ದಿ. ಹಾಗೆ ನೋಡಿದರೆ ಪುನೀತ್‌ಗೆ ಈಗಿನ್ನು 46(17.3.1975), ಸಾಯುವ ವಯಸ್ಸಲ್ಲ. ಒಬ್ಬ ಮನುಷ್ಯ ತನ್ನ ಬದುಕಿನಲ್ಲಿ ಉತ್ತುಂಗಕ್ಕೇರಿ, ಸುಖ-ದುಃಖಗಳನ್ನು ಸಮಾನವಾಗಿ ಕಂಡುಂಡು ಮೆರೆಯುವ, ಮಾಗುವ ವಯಸ್ಸು. ಇಂತಹ ವಯಸ್ಸಲ್ಲೂ ಪುನೀತ್ ದೈಹಿಕವಾಗಿ ಫಿಟ್ ಆ್ಯಂಡ್ ಫೈನ್ ಆಗಿದ್ದರು. ನಡೆ-ನುಡಿಯಲ್ಲಿ ಮಾದರಿಯಾಗಿದ್ದರು. ಸಹನೆ-ತಾಳ್ಮೆ-ಕರುಣೆ-ಪ್ರೀತಿಗಳ ಸಂಗಮದಂತಿದ್ದರು. ವಿದ್ಯೆ-ಬುದ್ಧಿ-ಗ್ರಹಿಕೆಯಲ್ಲಿ ಭಿನ್ನವಾಗಿದ್ದರು. ಗರ್ವ-ಗತ್ತುಗಳನ್ನು ಗಾವುದ ದೂರದಲ್ಲಿಟ್ಟಿದ್ದರು. ಸೂಪರ್ ಸ್ಟಾರ್ ಎಂಬ ಭುಜಕೀರ್ತಿಗೆ ಬಲಿಯಾಗದವರು. ನಟನೆಯಲ್ಲಿ ಅಪ್ಪನನ್ನು ಅನುಕರಿಸಿದರೂ, ತಮ್ಮದೇ ಆದ ಹೊಸದೊಂದು ಹಾದಿಯನ್ನು ಹುಡುಕಿಕೊಂಡಿದ್ದರು. ಪುಟಿದೇಳುವ ಚಿಲುಮೆಯಂತಿದ್ದರು. ಪ್ರಪಂಚದಾದ್ಯಂತ ಅಪಾರ ಅಭಿಮಾನಿ ಗಳನ್ನು ಹೊಂದಿದ್ದರು. ಕನ್ನಡಿಗರಿಗಷ್ಟೇ ಅಲ್ಲ, ಬೇರೆ ಭಾಷೆಯ ಜನರೊಂದಿಗೂ ಪ್ರೀತಿ-ವಿಶ್ವಾಸದಿಂದಿದ್ದು ‘ಕರ್ನಾಟಕದ ಹೆಮ್ಮೆ’ ಎನಿಸಿಕೊಳ್ಳಲು ಸೂಕ್ತವಾಗಿದ್ದರು.

ಇಂತಹ ಅಪ್ಪುಇವತ್ತಿಲ್ಲ ಎನ್ನುವುದು ನಿಜಕ್ಕೂ ನಂಬಲಾಗದ ಸುದ್ದಿ. ಕಲಾವಿದರ ಕುಟುಂಬದಿಂದ ಬಂದ ಅಪ್ಪು, ಬಾಲ್ಯದಿಂದಲೇ ಅಪ್ಪನ ನಟನೆಯನ್ನು, ಗುಣವನ್ನು ಆವಾಹಿಸಿಕೊಂಡು ಬೆಳೆದವರು. ತಾಯಿ ಪಾರ್ವತಮ್ಮನವರನ್ನು ಬಹಳವಾಗಿ ಇಷ್ಟಪಡುತ್ತಿದ್ದರು. ಪಾರ್ವತಮ್ಮನವರೂ ಅಷ್ಟೇ, ಅಪ್ಪುಎಂದರೆ ಅಪ್ಪಟ ಹವಳ ಎನ್ನುತ್ತಿದ್ದರು. ‘‘ಶಿವಣ್ಣ-ರಾಘಣ್ಣ ಒಂದು ರೀತಿಯಾದರೆ, ಅಪ್ಪು-ಪೂರ್ಣಿಮಾ ಇನ್ನೊಂದು ಥರ. ಇವರಿಬ್ಬರು ಚಿಕ್ಕವರು ಎಂಬ ಕಾರಣಕ್ಕೆ ನಮ್ಮೋರಿಗೆ(ರಾಜ್‌ಗೆ) ಭಾರೀ ಇಷ್ಟ. ಎಲ್ಲಿಗೇ ಹೋದರೂ ಕರೆದುಕೊಂಡು ಹೋಗುತ್ತಿದ್ದರು. ಕೇಳಿದ್ದೆಲ್ಲ ಕೊಡಿಸುತ್ತಿದ್ದರು. ಅದರಲ್ಲೂ ಚಿತ್ರೀಕರಣದ ತಾಣಗಳಲ್ಲಿ ಇವರನ್ನು ಹಿಡಿಯುವವರೇ ಇರಲಿಲ್ಲ. ಎಲ್ಲರ ಕೈ ಕೂಸಾಗಿ, ಮುದ್ದಿನ ಮಕ್ಕಳಾಗಿ ಬೆಳೆದವರು ಎಂದು ಪಾರ್ವತಮ್ಮನವರು ಹೇಳಿದ್ದು ಇನ್ನೂ ಕಿವಿಯಲ್ಲಿದೆ. ಹೌದು, ಅಂಬೆಗಾಲಿಡುವ ಕಾಲದಿಂದಲೇ ಅಪ್ಪು ಕಲೆಯನ್ನು ಉಸಿರಾಡಿದವರು. ಆ ಕಾರಣಕ್ಕೋ ಏನೋ, 1976 ರಲ್ಲಿ ತೆರೆಕಂಡ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಅಪ್ಪುಮಗುವಿನ ಪಾತ್ರಧಾರಿಯಾಗಿ ಅಭಿನಯಿಸಿದ್ದರು. ಆಗ ಅವರು ಆರು ತಿಂಗಳ ಕೂಸು. ಅಲ್ಲಿಂದಲೇ ಅಪ್ಪುಬಣ್ಣದ ಬದುಕಿಗೆ ಅಡಿ ಇಟ್ಟಿದ್ದರು. ಆನಂತರ 1982ರಲ್ಲಿ ಬಂದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ, ರಾಜ್ ಮತ್ತು ಅಂಬಿಕಾ ಜೋಡಿ ನೋಡಿ, ‘‘ಏನ್ ಸಾರ್, ಹನಿಮೂನ’’ ಎಂಬ ಸಂಭಾಷಣೆಯಲ್ಲಿ ಅಪ್ಪನನ್ನೇ ಅಚ್ಚರಿಗೊಳಿಸಿದ್ದರು. ಕನ್ನಡಿಗರ ಹೃದಯಕ್ಕಿಳಿದಿದ್ದರು. ಅಲ್ಲಿಂದ ಅಪ್ಪು, ‘ಸನಾದಿ ಅಪ್ಪಣ್ಣ’, ‘ತಾಯಿಗೆ ತಕ್ಕ ಮಗ’, ‘ವಸಂತಗೀತ’, ‘ಭಾಗ್ಯವಂತ’, ‘ಭೂಮಿಗೆ ಬಂದ ಭಗವಂತ’, ‘ಭಕ್ತ ಪ್ರಹ್ಲಾದ’, ‘ಎರಡು ನಕ್ಷತ್ರಗಳು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’.. ಹೀಗೆ ಒಟ್ಟು 14 ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಭಕ್ತ ಪ್ರಹ್ಲಾದ ಚಿತ್ರದ ಪುಟ್ಟ ಪ್ರಹ್ಲಾದನಾಗಿ ನೀಡಿದ ದಿಟ್ಟ ನಟನೆಗೆ ಸ್ವತಃ ರಾಜ್‌ರೇ ಬೆರಗಾಗಿದ್ದರು. ಆ ನಂತರ ನಿರ್ಮಾಪಕ-ನಿರ್ದೇಶಕರೇ ಮುಂದೆ ನಿಂತು ಅಪ್ಪುಚಿತ್ರದಲ್ಲಿರುವಂತೆ ಪಾತ್ರ ಸೃಷ್ಟಿಸುತ್ತಿದ್ದರು. ಪ್ರತಿ ಚಿತ್ರದಲ್ಲೂ ಅಪ್ಪುಗೆ ಗೀತೆಯೊಂದು ಇದ್ದೇ ಇರುವಂತೆ ನೋಡಿಕೊಳ್ಳುತ್ತಿದ್ದರು. ‘ಬಾನ ದಾರಿಯಲ್ಲಿ ಸೂರ್ಯ...’, ‘ಕಣ್ಣಿಗೆ ಕಾಣುವ ದೇವರು..’, ‘ಕಾಣದಂತೆ ಮಾಯವಾದನು ನಮ್ಮ ಶಿವ..’ ಒಂದಾ ಎರಡಾ? ನಟನೆ, ನೃತ್ಯ ಎರಡರಲ್ಲೂ ಸೈ ಎನಿಸಿಕೊಂಡಿದ್ದರು. ತಂದೆ ರಾಜಕುಮಾರ್ ಅವರ ಜೊತೆಗಿನ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುತ್ತಲೇ, ತಮ್ಮದೇ ಆದ ಭಿನ್ನ ಹಾದಿಯನ್ನು ಅಪ್ಪುಆರಿಸಿಕೊಂಡಿದ್ದರು. ಹತ್ತನೇ ವಯಸ್ಸಿನಲ್ಲಿ, 1985ರಲ್ಲಿ ಬಂದ, ಎನ್.ಲಕ್ಷ್ಮೀನಾರಾಯಣ ನಿರ್ದೇಶನದ ‘ಬೆಟ್ಟದ ಹೂ’ ಚಿತ್ರ ಪುನೀತ್‌ರ ನಟನಾಕೌಶಲ್ಯವನ್ನು ಹೊರಹಾಕಿತ್ತು. ‘ವಾಟ್ ದೆನ್ ರಾಮನ್’ ಇಂಗ್ಲಿಷ್ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಬೆಟ್ಟದ ಹೂ’ ಚಿತ್ರದಲ್ಲಿ ಪುನೀತ್, ಬಡ ಹುಡುಗ ರಾಮು ಆಗಿ, ‘ಜನಪ್ರಿಯ ವಾಲ್ಮೀಕಿ ರಾಮಾಯಣ’ ಪುಸ್ತಕ ಖರೀದಿಸಿ ಓದಬೇಕೆಂಬ ಆಸೆಗಣ್ಣಿನ ಹುಡುಗನಾಗಿ, ಇಂಗ್ಲಿಷ್ ಲೇಡಿಗೆ ಹೂ ತಂದುಕೊಡುವ ಮುಗ್ಧ ಬಾಲಕನಾಗಿ ಮನೋಜ್ಞವಾಗಿ ನಟಿಸಿದ್ದರು. ಆ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ಕನ್ನಡಕ್ಕೂ ಗೌರವ ತಂದುಕೊಟ್ಟಿದ್ದರು. ಆ ನಂತರ, ಸ್ವಲ್ಪಕಾಲ ಚಿತ್ರರಂಗದಿಂದ ಪುನೀತ್ ಕಣ್ಮರೆಯಾಗಿದ್ದರು.

ಓದುವುದಕ್ಕೋ ಅಥವಾ ಬದುಕಿಗೆ ಭಿನ್ನ ದಾರಿ ಆರಿಸಿಕೊಳ್ಳುವುದಕ್ಕೋ.. ಕೊಂಚ ಕಾಲ ಚಿತ್ರರಂಗದಿಂದ ದೂರವಾಗಿದ್ದರು. ಸ್ನೇಹಿತನ ಜೊತೆಗೂಡಿ ಗಣಿ ಗುತ್ತಿಗೆದಾರನಾಗಿಯೂ ಗುರುತಿಸಿಕೊಂಡಿದ್ದರು. ಸುದ್ದಿ ಮಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ಸುದ್ದಿಯಾಗಿ ರಾಜ್ ಕುಟುಂಬಕ್ಕೆ ಮುಜುಗರವನ್ನುಂಟು ಮಾಡಿದ್ದರು. ಆದರೆ ತಂದೆಯವರ ಹಿತನುಡಿಗೆ ಮಣಿದು, ಆ ವ್ಯವಹಾರವನ್ನು ಅಲ್ಲಿಗೇ ಬಿಟ್ಟಿದ್ದರು. ಆನಂತರ ಇಷ್ಟಪಟ್ಟು ಪ್ರೀತಿಸಿದ ಚಿಕ್ಕಮಗಳೂರಿನ ಅಶ್ವಿನಿಯವರನ್ನು 1999ರಲ್ಲಿ ವಿವಾಹವಾದರು. ಅಲ್ಲಿಗೆ ಎಲ್ಲರೂ ಪುನೀತ್ ಇನ್ನು ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದೇ ಭಾವಿಸಿದ್ದರು. ಆದರೆ, ಚಿತ್ರನಿರ್ಮಾಣ, ಹಂಚಿಕೆ, ವಿತರಣೆಗಳಲ್ಲಿ ಪಳಗಿದ್ದ ಪಾರ್ವತಮ್ಮನವರು, ಅಪ್ಪುವನ್ನು ನಾಯಕನಟನನ್ನಾಗಿ ನೋಡುವ ಕನಸನ್ನು ಕಾಪಿಟ್ಟುಕೊಂಡಿದ್ದರು. ಸೂಕ್ತ ಸಮಯಕ್ಕಾಗಿ ಕಾದಿದ್ದರು. 2002ರಲ್ಲಿ, ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ, ಮೊತ್ತ ಮೊದಲ ಬಾರಿಗೆ ಪುನೀತ್‌ರನ್ನು ನಾಯಕನಟನನ್ನಾಗಿ ‘ಅಪ್ಪು’ ಚಿತ್ರದ ಮೂಲಕ ನಾಡಿಗೆ ಪರಿಚಯಿಸಿದ್ದರು. ‘ಅಪ್ಪು’ ಚಿತ್ರದ ಅಭೂತಪೂರ್ವ ಯಶಸ್ಸು ಮತ್ತು ಅಸಾಧಾರಣ ಗಳಿಕೆ, ಪಾರ್ವತಮ್ಮನವರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ‘ಅಪ್ಪು’, ‘ಅಭಿ’, ‘ಆಕಾಶ್’, ‘ಅರಸು’.. ಒಂದಾದ ಮೇಲೆ ಒಂದರಂತೆ, ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಡಿ ಚಿತ್ರಗಳನ್ನು ತಯಾರಿಸಿದರು. ಡಾ.ರಾಜಕುಮಾರ್ ಚಿತ್ರಗಳ ಜನಪ್ರಿಯತೆ ಮತ್ತು ಗಳಿಕೆ-ಎರಡಕ್ಕೂ ಅಪ್ಪು ಚಿತ್ರಗಳು ಸೆಡ್ಡುಹೊಡೆದವು. ಅಪ್ಪು ಮೂಲಕ ಕನ್ನಡಕ್ಕೆ ಮತ್ತೊಬ್ಬ ರಾಜಕುಮಾರ್ ಸಿಕ್ಕರೆ, ಅಪ್ಪು ರಾಜಕುಮಾರನಾಗುವುದರತ್ತ ಹೆಜ್ಜೆ ಹಾಕತೊಡಗಿದರು.

ಅಪ್ಪು ಚಿತ್ರಗಳ ಯಶಸ್ಸಿಗೆ ಕಾರಣ, ಮನೆ ಮಂದಿಯೆಲ್ಲ ಕುಳಿತು ನೋಡವಂತಹ ಚಿತ್ರಗಳನ್ನು ತಯಾರಿಸಿದ ಪಾರ್ವತಮ್ಮ ಎಂಬ ಬುದ್ಧಿವಂತ ನಿರ್ಮಾಪಕಿ. ಜೊತೆಗೆ ಇಡೀ ಕುಟುಂಬವೇ ಚಿತ್ರನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡು, ನಟ-ನಟಿಯರನ್ನು, ತಂತ್ರಜ್ಞರನ್ನು ಮನೆಯವರಂತೆ ಪ್ರೀತಿ-ಗೌರವಗಳಿಂದ ಕಾಣುವ ಬಗೆ. ಚಿತ್ರೀಕರಣ ತಾಣಗಳಲ್ಲಿ ಈ ಆಪ್ತ ವಾತಾವರಣವನ್ನು ಸೃಷ್ಟಿಸುತ್ತಿದ್ದ ಪಾರ್ವತಮ್ಮನವರು, ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ಅಪ್ಪುವಿನ ಪ್ರತಿ ಹೊಸ ಚಿತ್ರಕ್ಕೂ ಹೊಸ ನಾಯಕಿಯರನ್ನು ಪರಿಚಯಿಸುತ್ತಿದ್ದ, ಅವರನ್ನು ಸ್ಟಾರ್ ನಟಿಯನ್ನಾಗಿ ರೂಪಿಸಿ, ನೆಲೆಗೊಳಿಸುತ್ತಿದ್ದ ರೀತಿ ಅನನ್ಯವಾದುದು.

ಅಪ್ಪುವಿನ ಎರಡು ಚಿತ್ರಗಳು ತೆರೆಕಂಡು, ಭರ್ಜರಿ ಯಶಸ್ಸು ಗಳಿಸಿದ ಸಂದರ್ಭದಲ್ಲಿ ನಾನು, ಪುನೀತ್‌ರನ್ನು ಅವರ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಭೇಟಿ ಮಾಡಿದ್ದೆ. ‘ಅಗ್ನಿ’ಯ ಅಂದಿನ ಸಂಪಾದಕರಾದ ಶ್ರೀಧರ್ ಅವರ ಒತ್ತಾಸೆಯ ಮೇರೆಗೆ, ಪುನೀತ್ ಅವರನ್ನು ಸಂದರ್ಶಿಸಲು ಹೋಗಿದ್ದೆ. ಆಗ ನನಗೆ ಕಂಡಿದ್ದು, ಪುನೀತ್ ಕೇವಲ ಒಬ್ಬ ನಟನಲ್ಲ, ಅತ್ಯುತ್ತಮ ತಂತ್ರಜ್ಞನಾಗಿ. ಸಂದರ್ಶನದುದ್ದಕ್ಕೂ ಅವರು ಹಾಲಿವುಡ್ ಚಿತ್ರಗಳ ಬಗ್ಗೆ, ಅವುಗಳ ಮೇಕಿಂಗ್ ಬಗ್ಗೆ, ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗಾಗಿಸುವ ಬಗ್ಗೆ ಮಾತನಾಡಿದ್ದರು. ಹಾಗೆಯೇ ಭಾರತೀಯ ಭಾಷೆಗಳ ಇತರ ಚಿತ್ರಗಳ ಗುಣಾತ್ಮಕ ಅಂಶಗಳ ಬಗ್ಗೆ ಮಾತನಾಡಿ, ಅದನ್ನು ನಾವು ಅಳವಡಿಸಿಕೊಳ್ಳಬೇಕು ಎಂದಿದ್ದರು. ಅದರಲ್ಲೂ ಆಧುನಿಕ ತಂತ್ರಜ್ಞಾನವನ್ನು ನಮ್ಮ ಕನ್ನಡ ಚಿತ್ರಗಳಲ್ಲಿ ಬಳಸಿಕೊಳ್ಳುವ ಬಗೆಗೆ ಒತ್ತುಕೊಟ್ಟು ಮಾತನಾಡಿದ್ದರು. ಅದಕ್ಕೆ ಉದಾಹರಣೆಯಾಗಿ, ತಮ್ಮದೇ ಚಿತ್ರಗಳ ಕೆಲವೊಂದು ಶಾಟ್‌ಗಳನ್ನು ಹೇಗೆಲ್ಲ ಇಂಪ್ರೂವೈಸ್ ಮಾಡಬಹುದು, ಅದನ್ನು ನಮ್ಮ ಕನ್ನಡಿಗರ ಮುಂದಿಟ್ಟು ಕಣ್ಣರಳಿಸಿ ನೋಡುವಂತೆ ಮಾಡಬಹುದು ಎಂಬುದನ್ನು ಹೇಳಿದ್ದರು. ಇಂತಹ ತಂತ್ರಜ್ಞ ನಟ 2010ರ ನಂತರ ಬೇರೆ ಚಿತ್ರನಿರ್ಮಾಣ ಸಂಸ್ಥೆಗಳ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು.

‘ಹುಡುಗರು’, ‘ಜಾಕಿ’, ‘ಅಣ್ಣಾ ಬಾಂಡ್’, ‘ಪವರ್’, ‘ರಾಜಕುಮಾರ’, ‘ಪರಮಾತ್ಮ’, ‘ಯಾರೇ ಕೂಗಾಡಲಿ’, ‘ದೊಡ್ಮನೆ ಹುಡುಗ’.. ಸಾಲು ಸಾಲು ಚಿತ್ರಗಳಲ್ಲಿ ನಟಿಸಿ, ತಮ್ಮ ಯಶಸ್ಸಿನ ಬೆಳ್ಳಿಗೆರೆಯನ್ನು ಬೆಳೆಸುತ್ತಲೇ ಸಾಗಿದರು. ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನದ ಸಂಭ್ರಮ ಕಂಡು ದಾಖಲೆ ನಿರ್ಮಿಸಿದ್ದವು. ನಾಯಕ ನಟನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲಂಫೇರ್ ಪ್ರಶಸ್ತಿಗಳು, ಎರಡು ಸೈಮಾ ಅವಾರ್ಡ್ ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದರು. ಬೇರೆ ನಿರ್ಮಾಣ ಸಂಸ್ಥೆಗಳಿಗೆ ಒಪ್ಪಿಮಾಡಿದ ಚಿತ್ರಗಳಲ್ಲಿ ಕೆಲವು- ‘ನಮ್ಮ ಬಸವ’, ‘ವೀರ ಕನ್ನಡಿಗ’, ‘ರಾಜ್ ದಿ ಶೋಮ್ಯಾನ್’ ಫ್ಲಾಪ್ ಆಗಿದ್ದೂ ಉಂಟು. ಆದರೆ ಅದರಿಂದ ಅಪ್ಪುವಿನ ಜನಪ್ರಿಯತೆಯೇನೂ ಕುಗ್ಗಲಿಲ್ಲ. ಸಂಭಾವನೆಯೂ ಕಡಿಮೆಯಾಗಲಿಲ್ಲ. ಅವುಗಳ ನಡುವೆಯೇ ಬಂದ ‘ರಾಜಕುಮಾರ’, ‘ದೊಡ್ಮನೆ ಹುಡುಗ’, ‘ಅಂಜನೀಪುತ್ರ’ ಬಾಕ್ಸಾಫೀಸ್ ಸೂರೆ ಹೊಡೆದ ಚಿತ್ರಗಳಾಗಿ ಮಿಂಚಿದ್ದೂ ಇದೆ. ಇದರ ನಡುವೆಯೇ ಅಪ್ಪು ಗಾಯಕನಾದರು. ಚಿತ್ರನಿರ್ಮಾಣಕ್ಕೆ ಇಳಿದರು. ಕಿರುತೆರೆಯಲ್ಲಿ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.

ಅವರೇ ಒಂದು ಕಡೆ ಹೇಳಿಕೊಂಡಂತೆ, ‘‘ಈ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಒಂದು ರೀತಿಯಲ್ಲಿ ನನಗೆ ಇಡೀ ಕರ್ನಾಟಕವನ್ನು ಪರಿಚಯಿಸಿತು. ಅವರ ಆಚಾರ-ವಿಚಾರವನ್ನು ತಿಳಿಸಿಕೊಟ್ಟಿತು. ಆ ಜನರ ಅಪ್ಪಟ ಅಭಿಮಾನ ನನ್ನನ್ನು ಮಂತ್ರಮುಗ್ಧಗೊಳಿಸಿತು. ಈ ಜನಕ್ಕೆ ಇನ್ನು ಹೆಚ್ಚಿನದನ್ನು, ಒಳ್ಳೆಯದನ್ನು ಕೊಡಬೇಕು ಎನಿಸಿತು’’ ಎಂದಿದ್ದರು. ಅದಕ್ಕಿಂತ ಹೆಚ್ಚಾಗಿ, ಒಬ್ಬ ಸಾಮಾನ್ಯನಂತೆ, ಅಲ್ಲಿ ಬರುವ ಪ್ರತಿಯೊಬ್ಬ ಸ್ಪರ್ಧಿಯನ್ನು ಆತ್ಮೀಯ ಅಪ್ಪುಗೆಯಿಂದ ಬರಮಾಡಿಕೊಂಡು, ಗೌರವದಿಂದ ನಡೆಸಿಕೊಂಡು, ಆ ಕಾರ್ಯಕ್ರಮಕ್ಕೊಂದು ಕಳೆ ಕಟ್ಟಿಕೊಟ್ಟಿದ್ದರು. ಎಲ್ಲರೂ ಕುಳಿತು ನೋಡುವ, ನಾವೂ ಒಂದು ಸಲ ಅಲ್ಲಿಗೆ, ಅಪ್ಪುವನ್ನು ಅಪ್ಪಿಕೊಳ್ಳಲಿಕ್ಕಾದರೂ ಹೋಗಬೇಕು ಎಂಬ ಆಸೆ ಹುಟ್ಟಿಸಿದ್ದರು. ಆದರೆ ‘ಫ್ಯಾಮಿಲಿ ಪವರ್’ ಎಂಬ ಮತ್ತೊಂದು ಕಿರುತೆರೆ ಕಾರ್ಯಕ್ರಮ ಅಷ್ಟು ಜನಪ್ರಿಯವಾಗದೆ, ಅದನ್ನು ಅರ್ಧಕ್ಕೇ ನಿಲ್ಲಿಸಿದ್ದೂ ಇದೆ.

ಅಪ್ಪುಗಾಯಕರಾಗುವುದರಲ್ಲೂ ಒಂದು ವಿಶೇಷತೆ ಇತ್ತು. ಯಾರೇ ಹೊಸಬರು ಬಂದು, ನಮ್ಮ ಚಿತ್ರಕ್ಕೊಂದು ಹಾಡು ಹಾಡಿ ಎಂದರೆ, ಯಾವ ಹಮ್ಮು-ಬಿಮ್ಮು, ಸ್ಟಾರ್‌ಗಿರಿ ತೋರದೆ ಹೋಗಿ ಹಾಡುತ್ತಿದ್ದರು. ‘ಕವಲುದಾರಿ’, ‘ಮಾಯಾಬಜಾರ್’ ಚಿತ್ರ ನಿರ್ಮಿಸುವ ಮೂಲಕ ಹೊಸಬರನ್ನು ಉದ್ಯಮಕ್ಕೆ ಸ್ವಾಗತಿಸಿದರು. ತುಂಬುಹೃದಯದಿಂದ ಉತ್ತೇಜಿಸಿದರು. ಇಷ್ಟೇ ಅಲ್ಲದೆ, ಕಿರುತೆರೆಗಾಗಿ ಧಾರಾವಾಹಿಗಳನ್ನೂ ನಿರ್ಮಿಸಿದರು. ಅನೇಕ ನಟ-ನಟಿಯರಿಗೆ-ತಂತ್ರಜ್ಞರಿಗೆ ಅವಕಾಶ ಎಂಬ ಬಹುದೊಡ್ಡ ಬಾಗಿಲು ತೆರೆದು ನಿಜಅರ್ಥದಲ್ಲಿ ದೊಡ್ಮನೆ ಹುಡುಗನಾದರು. ಎಲ್ಲರ ಅಚ್ಚುಮೆಚ್ಚಿನ ಅಪ್ಪುವೇ ಆದರು.

ಇದು ಒಂದು ಕಡೆಯಾದರೆ, ಗಾಯಕನಾಗಿ ಇಲ್ಲಿಯವರೆಗೆ ಸುಮಾರು ಐವತ್ತು ಚಿತ್ರಗಳಿಗೆ ಹಾಡಿರುವ ಅಪ್ಪು, ಅದರಿಂದ ಬಂದ ಹಣವನ್ನು ಸಂಪೂರ್ಣವಾಗಿ ಸಮಾಜಸೇವೆಗೆ ವಿನಿಯೋಗಿಸುತ್ತಿದ್ದರು. ಸುಮಾರು 26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ ಹಾಗೂ 1,800 ಬಡ ಮಕ್ಕಳ ಸಂಪೂರ್ಣ ಶಿಕ್ಷಣಕ್ಕಾಗಿ ಗಾಯನದಿಂದ ಬಂದ ಸಂಭಾವನೆಯನ್ನು ಎತ್ತಿಟ್ಟಿದ್ದರು. ಈ ವಿಷಯವನ್ನು ಯಾರಿಗೂ ಹೇಳದೆ, ಪ್ರಚಾರ ಪಡೆಯದೆ ದೊಡ್ಡತನವನ್ನೂ ಮೊೆದಿದ್ದರು. ಇಷ್ಟಲ್ಲದೆ ಅಮ್ಮ ಪಾರ್ವತಮ್ಮನವರು ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ಮೈಸೂರಿನ ಶಕ್ತಿಧಾಮದ ಜವಾಬ್ದಾರಿಯನ್ನೂ ಹೊತ್ತಿದ್ದರು. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಲೇ ಸಾಗಿದ್ದರು. ಅಮ್ಮನನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಅಪ್ಪು, ಅಮ್ಮನ ನೆನಪಿಗಾಗಿ ‘ಪಿಆರ್‌ಕೆ’ ಎಂಬ ಹೆಸರಿನ ಆಡಿಯೊ ಕಂಪೆನಿಯೊಂದನ್ನು ಸ್ಥಾಪಿಸಿ, ಹಲವು ಗಾಯಕರಿಗೆ, ತಂತ್ರಜ್ಞರಿಗೆ ಅವಕಾಶದ ಬಾಗಿಲು ತೆರೆದಿದ್ದರು. ಇವೆಲ್ಲವುಗಳ ನಡುವೆಯೇ ನಾಡು ನುಡಿ ಜಲ ನೆಲದ ಬಗ್ಗೆ ಅಪಾರ ಪ್ರೀತಿಯಿಟ್ಟುಕೊಂಡು, ಸರಕಾರದ ಕಾರ್ಯಕ್ರಮಗಳ ಜೊತೆ ಕೈಜೋಡಿಸಿದ್ದರು.

ನಂದಿನಿ ಹಾಲು ಜಾಹೀರಾತಿಗೆ ಪರ್ಮನೆಂಟ್ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಒಂದು ಸಲ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಹುರುಪು-ಉತ್ಸಾಹ ತುಂಬಲು ರಾಯಭಾರಿಯಾಗಿ ಕೆಲಸ ಮಾಡಿದ್ದರು. ಫುಟ್‌ಬಾಲ್ ತಂಡಕ್ಕೆ ಧನಸಹಾಯ ಮಾಡಿ, ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಅಪ್ಪುವಿನ ಆಸಕ್ತಿ ಕ್ಷೇತ್ರಗಳು ಒಂದೆರಡಲ್ಲ. ಬಾಲನಟನಾಗಿ, ನಾಯಕನಟನಾಗಿ, ಗಾಯಕನಾಗಿ, ಚಿತ್ರನಿರ್ಮಾಪಕನಾಗಿ, ಸಮಾಜಸೇವಕನಾಗಿ, ಪರಿಪೂರ್ಣ ಮನುಷ್ಯನಾಗಿ ಮಾರ್ಪಡುವ ಹೊತ್ತಿನಲ್ಲಿಯೇ ಹಠಾತ್ ನಿಧನ ಅವರ ಅಭಿಮಾನಿಗಳನ್ನಷ್ಟೇ ಅಲ್ಲ, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಮ್ಮನೆಯ ಹುಡುಗನೊಬ್ಬನ ಸಾವಿಗೆ ಮರುಗುವಂತೆ, ಕೊರಗುವಂತೆ ಕಾಡುತ್ತಿದೆ.
ಕಲಾವಿದರಿಗೆ ಸಾವಿಲ್ಲ ಎಂಬ ಮಾತಿದೆ. ಅಪ್ಪುವಿನ ವಿಷಯದಲ್ಲಿಯೂ ಅದು ನಿಜವಾಗಲಿ. ಆತನ ಚಿತ್ರಗಳು, ಹಾಡುಗಳು, ತುಣುಕುಗಳು ಸದಾ ನಮ್ಮನ್ನು ನೇವರಿಸಲಿ. ಅಪ್ಪುನಮ್ಮುಂದಿಗಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)