varthabharthi


ಸಂಪಾದಕೀಯ

ಪುನೀತ್ ಉಳಿಸಿ ಹೋದ ಕನ್ನಡದ ಮೌಲ್ಯಗಳು

ವಾರ್ತಾ ಭಾರತಿ : 1 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕನ್ನಡ ರಾಜ್ಯೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಎಲ್ಲರ ಮನದೊಳಗೂ ಒಂದು ಸೂತಕ ಭಾವ. ಒಬ್ಬ ನಟ ಅಥವಾ ಸೂಪರ್ ಸ್ಟಾರ್ ಮೃತಪಟ್ಟ ಕಾರಣದಿಂದ ಹುಟ್ಟಿದ ಶೂನ್ಯ ಭಾವ ಇದಲ್ಲ. ಪುನೀತ್ ರಾಜ್‌ಕುಮಾರ್ ಎನ್ನುವ ಹರೆಯದ, ಇನ್ನೂ ಬೆಳೆಯಲು ಸಾಕಷ್ಟು ಅವಕಾಶಗಳಿದ್ದ ನಟ. ಸಾಧಿಸಲು ಇನ್ನೂ ಇತ್ತು. ಆತನೊಬ್ಬ ಅತ್ಯದ್ಭುತ ನಟನೆಂದೋ, ಸಿನೆಮಾದಲ್ಲಿ ಅದೇನೋ ಬಹುದೊಡ್ಡದನ್ನು ಸಾಧಿಸಿದ ನಟನೆಂದೋ ಭಾವಿಸಿ ಜನರು ಅವರ ಅಗಲಿಕೆಗೆ ಕೊರಗುತ್ತಿರುವುದಲ್ಲ. ಕನ್ನಡದೊಂದಿಗೆ ಅಪರೂಪದ ಬಾಂಧವ್ಯವೊಂದು ಪುನೀತ್‌ಗಿತ್ತು. ಆ ಬಾಂಧವ್ಯವನ್ನು ನೆನೆದು ಇಡೀ ಕರ್ನಾಟಕ ಕಣ್ಣೀರು ಹಾಕಿದೆ. ಆದುದರಿಂದಲೇ, ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಮನಸ್ಸುಗಳು ಭಾರವಾದ ಹೃದಯದೊಂದಿಗೆ ರಾಜ್ಯೋತ್ಸವವನ್ನು ಆಚರಿಸಬೇಕಾಗಿದೆ.

ಅನೇಕ ಸಂದರ್ಭದಲ್ಲಿ ಸೂಪರ್ ಸ್ಟಾರ್ ಮಕ್ಕಳಾಗಿ ಹುಟ್ಟುವುದು ಅವರ ಪ್ರತಿಭೆಗೆ ಭಾರೀ ದೊಡ್ಡ ಸವಾಲಾಗಿ ಬಿಡುತ್ತದೆ. ಡಾ. ರಾಜ್‌ಕುಮಾರ್ ಅವರ ಮೂವರು ಮಕ್ಕಳೂ ಆ ಸವಾಲನ್ನು ಭಾಗಶಃ ಗೆದ್ದಿದ್ದಾರೆ ಎನ್ನ ಬಹುದು. ರಾಜ್‌ಕುಮಾರ್‌ರ ಮಕ್ಕಳು ಎಂದಾಗ ಜನರು ಬರೇ ಸಿನೆಮಾ ನಟರಾಗಿ ಮಾತ್ರವಲ್ಲ, ಅವರಿಂದ ಇಡೀ ರಾಜ್‌ಕುಮಾರ್ ವ್ಯಕ್ತಿತ್ವವನ್ನೇ ನಿರೀಕ್ಷಿಸುತ್ತಾರೆ. ಗಾಂಧೀಜಿಯ ಮಗ ಹರಿಲಾಲ್ ಗಾಂಧಿ ಹೇಗೆ ಗಾಂಧೀಜಿಯ ಪ್ರಭಾವಳಿಯಲ್ಲಿ ಬದುಕಲು ಸಾಧ್ಯವಾಗದೇ ನಾಶವಾದರು ಎನ್ನುವುದರ ಉದಾಹರಣೆ ನಮ್ಮ ಮುಂದಿದೆ. ಒಬ್ಬ ಸರ್ವ ಶ್ರೇಷ್ಠ ಕ್ರಿಕೆಟರ್‌ನ ಮಗನಿಗೆ ಮೊದಲ ಸವಾಲೇ ತನ್ನ ತಂದೆಯಾಗಿರುತ್ತಾರೆ. ‘ಇಂಥವರ ಮಗ’ ಎನ್ನುವ ನಿರೀಕ್ಷೆ ಅವರಿಗೆ ಭಾರೀ ಒತ್ತಡವನ್ನು ಹಾಕುತ್ತದೆ. ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರೂ ಈ ಒತ್ತಡವನ್ನು ಭಾರೀ ಮಟ್ಟದಲ್ಲಿ ಎದುರಿಸಿದ್ದರು. ಆದರೆ, ತಮ್ಮದೇ ಸ್ವಂತಿಕೆಯ ಮೂಲಕ ಆ ಸವಾಲನ್ನು ಗೆದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರೂ ನೋಡುವುದಕ್ಕೆ ಸ್ಫುರದ್ರೂಪಿಯಲ್ಲದಿದ್ದರೂ, ‘ನಂಜುಂಡಿ ಕಲ್ಯಾಣ’ ಎನ್ನುವ ಒಂದು ಸಿನೆಮಾದ ಮೂಲಕವೇ ಇಡೀ ನಾಡಿಗೆ ಪರಿಚಯವಾಗಿ ಬಿಟ್ಟರು. ಇಂದಿಗೂ ಅದೊಂದೇ ಸಿನೆಮಾ ಅವರನ್ನು ಜನಮನದಲ್ಲಿ ಶಾಶ್ವತವಾಗಿ ಉಳಿಸಿದೆ. ಪುನೀತ್ ರಾಜ್‌ಕುಮಾರ್ ಉಳಿದವರಂತಲ್ಲ. ರಾಜ್‌ಕುಮಾರ್ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಕಾಲದಲ್ಲಿ ಅವರ ನೆರಳನ್ನೇ ಹಿಂಬಾಲಿಸುತ್ತಾ ಸಿನೆಮಾ ಪ್ರಿಯರಿಗೆ ಚಿರಪರಿಚಿತರಾದವರು.

ರಾಜ್‌ಕುಮಾರ್ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತ ಹೊತ್ತಲ್ಲೇ ಪುನೀತ್‌ಎಂಬ ಎಳೆ ಬಾಲಕ ತನ್ನ ‘ಬೆಟ್ಟದ ಹೂವು’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ. ಆದುದರಿಂದಲೇ ಸಿನೆಮಾ ಜಗತ್ತು, ಇಬ್ಬರು ಅಣ್ಣಂದಿರಿಗಿಂತ, ಈ ಎಳೆಯನ ಮೇಲೆಯೇ ಬಹುನಿರೀಕ್ಷೆಯನ್ನಿಟ್ಟಿತ್ತು. ಯಾಕೆಂದರೆ, ರಾಜ್‌ಕುಮಾರ್ ಅವರ ಹಲವು ಯಶಸ್ವೀ ಚಿತ್ರದಲ್ಲಿ ಬಾಲನಟನಾಗಿ ಅದಾಗಲೇ ಪುನೀತ್ ಚಿರಪರಿಚಿತರಾಗಿದ್ದರು. ತಂದೆಯ ಭಾಷೆ, ವಿನಯ, ಲವಲವಿಕೆ ಇವೆಲ್ಲವನ್ನೂ ಆ ಹಂತದಲ್ಲೇ ಅವರು ರೂಢಿಸಿಕೊಳ್ಳುತ್ತಾ ಬರುತ್ತಿದ್ದರು. ಬಾಲ ನಟನಾಗಿ ಹಲವು ಚಿತ್ರಗಳಲ್ಲಿ ಸಾಧನೆಗಳನ್ನು ಮಾಡಿದ ಬಳಿಕ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಬೆಳ್ಳಿತೆರೆಯಿಂದ ಇದ್ದಕ್ಕಿದ್ದಂತೆಯೇ ಮರೆಯಾಗಿ, ತನ್ನ ಅಣ್ಣಂದಿರಿಗೆ ದಾರಿ ಬಿಟ್ಟುಕೊಟ್ಟರು. ಆ ಖಾಲಿ ಜಾಗದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹೆಜ್ಜೆ ಯಿಟ್ಟರು. ಅವರಿಬ್ಬರು ಗಾಂಧಿನಗರದಲ್ಲಿ ಗಟ್ಟಿ ಬೇರನ್ನು ಊರಿದ ಬಳಿಕವೇ ಪುನೀತ್ ರಾಜ್‌ಕುಮಾರ್ ಚಿತ್ರ ಬದುಕಿನ ಎರಡನೇ ಅಧ್ಯಾಯಕ್ಕೆ ಬಂದು ಸೇರಿಕೊಂಡರು.

ಎಲ್ಲ ಸ್ಟಾರ್‌ಗಳ ನಡುವೆ ಅಪ್ಪು ವಿಭಿನ್ನವಾಗಿ ಗುರುತಿಸಿಕೊಳ್ಳತೊಡಗಿದರು. ಸಿನೆಮಾದಲ್ಲಿ ಮಾತ್ರವಲ್ಲದೆ, ಸಿನೆಮಾಗಳ ಹೊರಗೂ ತನ್ನ ಸ್ವಂತಿಕೆ ಯ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪತೊಡಗಿದರು. ಮುಖದಗಲ ವ್ಯಾಪಿಸಿದ ನಗು, ಸರಳತೆ, ಮುಗ್ಧತೆ, ಆತ್ಮೀಯತೆ, ತುಂಟತನ ಇವೆಲ್ಲವೂ ಬೆಳ್ಳಿತೆರೆಯೊಳಗೆ ಮಾತ್ರವಲ್ಲ, ಹೊರಗೂ ಜನರನ್ನು ಹತ್ತಿರವಾಗಿಸಿದವು. ರಾಜ್‌ಕುಮಾರ್‌ರ ಅಂಶಗಳನ್ನು ಪುನೀತ್ ಮೂಲಕ ಜನರು ಗುರುತಿಸತೊಡಗಿದರು. ಸಣ್ಣ ವಯಸ್ಸಾಗಿದ್ದರೂ ರಾಜ್‌ಕುಮಾರ್ ಸಾಮಿಪ್ಯದ ಪರಿಣಾಮವಾಗಿಯೋ ಏನೋ, ತಂದೆಯ ವೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳತೊಡಗಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಿನೆಮಾದಲ್ಲಿ ಮಾತ್ರವಲ್ಲ, ಸಿನಿಮೇತರ ಬದುಕಿನಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಳ್ಳತೊಡಗಿದರು. ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಅವರು ಆಡುವ ಮಾತುಗಳು ಬಹಳಷ್ಟು ಜನರಿಗೆ ಸ್ಫೂರ್ತಿಯಾಗುತ್ತಿತ್ತು. ಸಾಮಾಜಿಕ ಸೇವೆಯ ವಿಷಯದಲ್ಲೂ ಅವರು ಬದ್ಧತೆಯನ್ನು ವ್ಯಕ್ತಪಡಿಸಿದರು. ವಿವಿಧ ಸಂಸ್ಥೆಗಳನ್ನು ಕಟ್ಟಿ ಅನಾಥರಿಗೆ, ಮಹಿಳೆಯರಿಗೆ ಆಸರೆಯಾದರು.

ಒಂದು ರೀತಿಯಲ್ಲಿ ಯಾವುದೇ ಪ್ರಚಾರವನ್ನು ಬಯಸದೆ ತನ್ನದೇ ಮಿತಿಯಲ್ಲಿ ಜನರಿಗೆ ನೆರವಾಗುತ್ತಿದ್ದರು. ತನ್ನ ಸಿನೆಮಾ ಬದುಕಿನ ಇಮೇಜ್‌ಗೆ ಪೂರಕವಾಗಿ ಅವುಗಳನ್ನು ಯಾವತ್ತೂ ಬಳಸಿಕೊಳ್ಳುತ್ತಿರಲಿಲ್ಲ. ‘ಇನ್ನಷ್ಟು ಕೇಳಬೇಕು’ ಎನ್ನುವಾಗ ಒಬ್ಬ ಮಾತು ಮುಗಿಸಿದರೆ ಏನಾಗಬಹುದೋ ಅದೇ ಇಂದು ಕರ್ನಾಟಕದ ಜನತೆಗಾಗಿದೆ. ಪುನೀತ್ ಸಿನೆಮಾದಲ್ಲಾಗಲಿ, ಸಿನೆಮಾದ ಹೊರಗಡೆಯಾಗಲಿ ಇನ್ನಷ್ಟು ಮಾಡುವುದಕ್ಕಿತ್ತು. ಅವರಿಂದ ಜನರಿಗೆ ಭಾರೀ ನಿರೀಕ್ಷೆಗಳಿದ್ದವು. ಹಿರಿಯರ ಪಾಲಿಗೆ ಆತ ಮನೆಮಗನಂತೆ, ಯುವಕರಿಗೆ ಗೆಳೆಯನಂತೆ ಬದುಕಿದ್ದ. ಮಕ್ಕಳಿಗೂ ಸದಾ ಸ್ಫೂರ್ತಿಯಾಗಿದ್ದ. ಅತ್ಯುತ್ತಮ ಸಿನೆಮಾಗಳನ್ನು ಪುನೀತ್ ಮಾಡಿರಬಹುದು, ಆದರೆ ಅದರಾಚೆಗೆ ಸಿನೆಮಾದಲ್ಲಿ ಇನ್ನಷ್ಟು ಬೆಳೆಯುವ ಪ್ರತಿಭೆ, ಶಕ್ತಿ ಅವರಿಗಿತ್ತು. ಹಾಗೆಯೇ ಸಿನೆಮಾದ ಹೊರಗೆ ಅವರ ವ್ಯಕ್ತಿತ್ವ, ನಡೆ ನುಡಿಯಿಂದಾಗಿ ಸಮಾಜ ಕನ್ನಡಕ್ಕಾಗಿ ಇನ್ನೇನನ್ನೋ ಅವರಿಂದ ಇನ್ನೇನನ್ನೋ ನಿರೀಕ್ಷಿಸುತ್ತಿತ್ತು. ಈ ಸಮಯದಲ್ಲಿ ಅವರು ಅನಿರೀಕ್ಷಿತವಾಗಿ ವಿದಾಯ ಹೇಳಿದರೆ ಕರ್ನಾಟಕ ತಬ್ಬಿಬ್ಬಾಗದೇ ಇರುವುದು ಹೇಗೆ? ಆದರೆ 46 ವರ್ಷಗಳಲ್ಲಿ ಇತರರಿಗೆ ಮಾದರಿಯಾಗಿ ಹೇಗೆ ಬಾಳಬೇಕು ಎನ್ನುವುದನ್ನು ಅವರು ತೋರಿಸಿಕೊಟ್ಟು ಹೋಗಿದ್ದಾರೆ ಎನ್ನುವುದರಲ್ಲೇ ನಾವು ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಉದ್ಧಟತನ, ಅವಿವೇಕಿ ಮಾತುಗಳ ಮೂಲಕವೇ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗುವ ಕೆಲವು ಸೂಪರ್ ಸ್ಟಾರ್‌ಗಳು ಈ ಅಗಲಿದ ಕಿರಿಯನಿಂದ ಕಲಿಯಬೇಕಾಗಿರುವುದು ತುಂಬಾ ಇದೆ. ಕನ್ನಡವೆಂದರೆ, ಕೇವಲ ಸಿನೆಮಾದಲ್ಲಿ ಕನ್ನಡ ಭಾಷೆಯನ್ನಾಡುವುದು ಮಾತ್ರವಲ್ಲ. ಕನ್ನಡವೆಂದರೆ ಅದೊಂದು ವೌಲ್ಯ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಸಹೋದ್ಯೋಗಿಗಳೊಂದಿಗೆ, ಸಮವಯಸ್ಕರೊಂದಿಗೆ, ದುರ್ಬಲರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಆ ವೌಲ್ಯ ನಮಗೆ ಕಲಿಸಿಕೊಡುತ್ತದೆ. ಎತ್ತರಕ್ಕೇರಿದಂತೆ ವಿನಯವಂತರಾಗುವುದು ಹೇಗೆ ಎನ್ನುವುದುನ್ನು ಸೂಪರ್‌ಸ್ಟಾರ್‌ಗಳು ಪುನೀತ್ ಬದುಕಿನಿಂದ ತನ್ನದಾಗಿಸಿಕೊಳ್ಳಬೇಕು.

ರಾಜ್‌ಕುಮಾರ್ ತಮ್ಮ ಬದುಕಿನಲ್ಲಿ ಕಷ್ಟ, ನಷ್ಟಗಳ ಅಗಾಧ ಅನುಭವಗಳನ್ನು ತನ್ನದಾಗಿಸಿಕೊಂಡು ಬೆಳೆದವರು. ಅಷ್ಟೊಂದು ಬದುಕಿನ ಅನುಭವ ಪುನೀತ್‌ಗಿಲ್ಲ. ಆದರೂ ತಂದೆಯ ಮೂಲಕ ಕಲಿತ ವೌಲ್ಯಗಳನ್ನು ಹೊಸ ತಲೆಮಾರುಗಳಿಗೆ ದಾಟಿಸಿ ಹೋಗಿದ್ದಾರೆ. ಇಂದು ಅವರ ವಿದಾಯ ಕಾರ್ಯಕ್ರಮದಲ್ಲಿ ಇಷ್ಟೊಂದು ಜನ ಸೇರಿರುವುದು ಅವರೊಬ್ಬ ಸಿನೆಮಾ ಸ್ಟಾರ್ ಎನ್ನುವುದಕ್ಕಾಗಿ ಮಾತ್ರವಲ್ಲ, ಅವರೊಬ್ಬ ಅಪ್ಪಟ ಕನ್ನಡದ ಮನುಷ್ಯ ಎನ್ನುವ ಕಾರಣಕ್ಕಾಗಿ. ಆ ಕನ್ನಡದ ವೌಲ್ಯಗಳನ್ನು ನಾವೂ ಉಳಿಸಿಕೊಳ್ಳಬೇಕಾಗಿದೆ. ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ಮಾತ್ರವಲ್ಲ, ಭಾಷೆಯ ಹೆಸರಿನಲ್ಲೂ ದ್ವೇಷ ರಾಜಕಾರಣವನ್ನು ಬಿತ್ತುವವರ ನಡುವೆ, ಭಾಷೆ ಎಂದರೆ ಪುನೀತ್ ಉಳಿಸಿ ಹೋದ ವಿನಯ, ಮಾನವೀಯತೆ, ವಿವೇಕ, ಸೌಹಾರ್ದ ಎನ್ನುವುದನ್ನು ಅರ್ಥಮಾಡಿಕೊಂಡು ಬದುಕಿದರೆ ಅದುವೇ ಪುನೀತ್ ಅವರಿಗೆ ನಾವು ನೀಡುವ ಅತ್ಯುತ್ತಮ ಶೃದ್ಧಾಂಜಲಿ. ರಾಜ್‌ಕುಮಾರ್, ಪುನೀತ್‌ನಂತಹ ಸಹೃದಯ ವ್ಯಕ್ತಿತ್ವಗಳು ನಮಗೆ ಮಾದರಿಯಾಗಿ ಉಳಿಸಿಕೊಟ್ಟ ಕನ್ನಡದ ವೌಲ್ಯಗಳ ಜೊತೆಗೆ ನಾವು ಮುಂದೆ ಸಾಗುವ ನಿರ್ಧಾರದೊಂದಿಗೆ ಈ ಬಾರಿಯ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)