varthabharthi


ಸಂಪಾದಕೀಯ

ಹೊಟೇಲ್ ತಿನಿಸುಗಳು ದುಬಾರಿ

ವಾರ್ತಾ ಭಾರತಿ : 9 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೊರೋನ ಎರಡೂ ಅಲೆಗಳ ಹೊಡೆತದಿಂದ ತತ್ತರಿಸಿರುವ ಹೊಟೇಲ್ ಉದ್ಯಮಕ್ಕೆ ಮೋದಿ ಸರಕಾರ ದಿಢೀರ್ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿರುವುದು ಉರಿಯುವ ಗಾಯಕ್ಕೆ ಉಪ್ಪಿನ ಹುಡಿ ಎರಚಿದಂತಾಗಿದೆ. ಹೀಗಾಗಿ ಸೋಮವಾರದಿಂದ ಊಟ, ತಿಂಡಿ, ತಿನಿಸುಗಳ ಬೆಲೆಯನ್ನು ಹತ್ತು ರೂಪಾಯಿಯಿಂದ ಹದಿನೈದು ರೂಪಾಯಿಗೆ ಹೆಚ್ಚಿಸಲು ಹೊಟೇಲ್ ಮಾಲಕರ ಸಂಘ ತೀರ್ಮಾನಿಸಿದೆ. ಈ ದರ ಏರಿಕೆಯ ನೇರ ಪರಿಣಾಮ ನಿತ್ಯದ ಹಸಿವನ್ನು ಇಂಗಿಸಿಕೊಳ್ಳಲು ಹೊಟೇಲನ್ನೇ ಅವಲಂಬಿಸಿರುವ ದುಡಿಯುವ ಜನರು, ಆಟೊ ಚಾಲಕರು, ವಿದ್ಯಾರ್ಥಿಗಳು ಅಸಂಘಟಿತ ವಲಯದ ಶ್ರಮಜೀವಿಗಳು ಹಾಗೂ ಪ್ರವಾಸಿಗರ ಮೇಲೆ ಆಗಲಿದೆ. ಬೆಲೆ ಹೆಚ್ಚಳ ಮಾಡದಿದ್ದರೆ ಹೊಟೇಲ್ ನಡೆಸುವುದೇ ಕಷ್ಟ ಎಂಬ ಹೊಟೇಲ್ ಮಾಲಕರ ಸಮಸ್ಯೆಯನ್ನು ತಳ್ಳಿ ಹಾಕಲು ಆಗುವುದಿಲ್ಲ. ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಜೊತೆಗೆ ಸರಕಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಿಸಿದೆ. ಇದು ಸಾಲದೆಂಬಂತೆ ಶೇ. 18ರಷ್ಟು ಸರಕು ಸಾಗಣೆ ತೆರಿಗೆಯನ್ನು (ಜಿಎಸ್‌ಟಿ) ಹೇರಲಾಗಿದೆ. ಹೀಗಾಗಿ ಪ್ರತಿ ಸಿಲಿಂಡರ್‌ಗೆ 2,230 ರೂಪಾಯಿ ಪಾವತಿ ಮಾಡುತ್ತಿರುವುದಾಗಿ ಹೊಟೇಲ್ ಮಾಲಕರ ಅಳಲು. ಹೀಗಾಗಿ ಜನಸಾಮಾನ್ಯರ ದೈನಂದಿನ ಜೀವನ ಇನ್ನಷ್ಟು ತೊಂದರೆಗೆ ಸಿಲುಕಿದೆ.

 ಕಳೆದ ವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಾಟಾಚಾರಕ್ಕೆ ಒಂದಿಷ್ಟು ಕಡಿಮೆ ಮಾಡಿದ ಸರಕಾರ ಅಡಿಗೆ ಅನಿಲವನ್ನು ಕಡಿಮೆ ಮಾಡುವ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಹೀಗಾಗಿ ಹೊಟೇಲ್, ರೆಸ್ಟೋರೆಂಟ್‌ಗಳ ತಿಂಡಿ ಪದಾರ್ಥಗಳ ಬೆಲೆ ಹೆಚ್ಚಳ ಅನಿವಾರ್ಯ ಎಂಬುದು ಕೂಡ ನಿಜ. ಮನೆ ಬಳಕೆಯ ಸಿಲಿಂಡರ್ ಬೆಲೆ 2014ರಲ್ಲಿ ಕೇವಲ 400 ರೂಪಾಯಿ ಇದ್ದುದು ಈಗ ಒಂದು ಸಾವಿರ ರೂಪಾಯಿ ದಾಟಿದೆ. ಕಳೆದ ಜನವರಿಯಿಂದ ಮನೆ ಬಳಕೆಯ ಎಲ್‌ಪಿಜಿ ಅಡುಗೆ ಅನಿಲದ ದರದಲ್ಲಿ 190 ರೂಪಾಯಿ ಏರಿಕೆಯಾಗಿದೆ. 2020ರ ಸೆಪ್ಟಂಬರ್ ತಿಂಗಳಲ್ಲಿ 597 ರೂಪಾಯಿ ಇದ್ದ ಸಿಲಿಂಡರ್ ಬೆಲೆ 887 ರೂಪಾಯಿಗೆ ಹೆಚ್ಚಾಗಿದೆ. ಅಂದರೆ ಒಂದು ವರ್ಷದಲ್ಲಿ 290 ರೂಪಾಯಿ ಹೆಚ್ಚಳವಾದಂತಾಗಿದೆ. ಆದರೆ ಹೊಟೇಲ್, ರೆಸ್ಟೋರೆಂಟ್‌ಗಳು ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಎರಡು ಸಾವಿರ ರೂಪಾಯಿಗಿಂತ ಜಾಸ್ತಿಯಾಗಿದೆ. ಹೀಗಾಗಿ ಹೊಟೇಲ್ ಮತ್ತು ರೆಸ್ಟೋರೆಂಟ್ ಖಾದ್ಯಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ.

ಹಿಂದೆಲ್ಲಾ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ತಿಂಡಿ ಪದಾರ್ಥಗಳ ಬೆಲೆ ಹೆಚ್ಚಳವಾದರೆ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಸರಕಾರ ಮಧ್ಯಪ್ರವೇಶ ಮಾಡಿ ಒಂದು ನ್ಯಾಯ ಬೆಲೆಯನ್ನು ನಿಗದಿ ಪಡಿಸುತ್ತಿತ್ತು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿ ಹೊಟೇಲ್ ತಿಂಡಿ ಪದಾರ್ಥಗಳ ಬೆಲೆ ಹೆಚ್ಚಳವಾದಾಗ ಅಂದಿನ ಆಹಾರ ಸಚಿವ ರಾಮುಲು ಅವರು ಹೊಟೇಲ್ ಮಾಲಕರ ಸಭೆ ಕರೆದು ಇಡ್ಲಿ, ದೋಸೆ, ಚಹಾ, ಕಾಫಿ ಸೇರಿ ಯಾವುದೇ ಪದಾರ್ಥದ ತಯಾರಿಕಾ ವೆಚ್ಚ ಎಷ್ಟಾಗುತ್ತದೆ ಎಂದು ಪರಾಮರ್ಶಿಸಿ ಜನಸಾಮಾನ್ಯರಿಗೆ ಎಟಕುವ ನಿರ್ದಿಷ್ಟ ಬೆಲೆಯನ್ನು ನಿಗದಿಮಾಡಿದ್ದರು. ಅಷ್ಟು ಹಿಂದೆ ಬೇಡ. ಐದು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಗಳನ್ನು ತೆರೆದು ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಪಡದಂತೆ ಕ್ರಮ ಕೈಗೊಂಡಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ನಂತರ ಬಡವರ ಹಸಿವು ಇಂಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲು ಮುಂದಾಯಿತು. ಹೀಗಾಗಿ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾದ ಜನಸಾಮಾನ್ಯರು ಹೊಟೇಲ್ ತಿಂಡಿ ಪದಾರ್ಥಗಳ ಬೆಲೆ ಏರಿಕೆಯಿಂದ ಇನ್ನಷ್ಟು ಕಂಗಾಲಾಗಿದ್ದಾರೆ.

ಮನೆ ಬಳಕೆಯ ಸಿಲಿಂಡರ್ ಇರಲಿ, ಇಲ್ಲವೇ ಹೊಟೇಲ್‌ಗಳು ಬಳಸುವ ವಾಣಿಜ್ಯ ಸಿಲಿಂಡರ್‌ಗಳಿರಲಿ ಇವುಗಳಿಗೆ ಪರ್ಯಾಯ ಸದ್ಯಕ್ಕೆ ಬೇರಾವುದೂ ಇಲ್ಲ. ನಮ್ಮ ಆರ್ಥಿಕತೆ ಬಹುತೇಕ ಎಲ್‌ಪಿಜಿಯನ್ನು ಅವಲಂಬಿಸಿದೆ. ಇದರ ಬೆಲೆಯಲ್ಲಿ ಆಗುವ ಏರಿಳಿತದಿಂದ ಪ್ರತಿ ಮನೆಯ ಆಯವ್ಯಯದ ಮೇಲೆ ಪರಿಣಾಮ ಬೀರುತ್ತದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಿದರೂ ಅದರ ಅಂತಿಮ ಪರಿಣಾಮ ಬಳಕೆದಾರರ ಮೇಲೆ ಆಗುತ್ತದೆ. ಬಳಕೆದಾರರ ಕೊಳ್ಳುವ ಶಕ್ತಿ ಕಡಿಮೆಯಾದರೆ ಇಡೀ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ತೈಲೋತ್ಪನ್ನಗಳ ಮೇಲಿನ ತೆರಿಗೆಯ ಹಣದಿಂದ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಸರಕಾರ ನೆಪ ಹೇಳುತ್ತದೆ. ಆದರೆ ಕೊರೋನ ಕಾಲದಲ್ಲೂ ಲಕ್ಷಾಂತರ ಕೋಟಿ ರೂಪಾಯಿ ಗಳಿಸಿದ ಕಾರ್ಪೊರೇಟ್ ಕಂಪೆನಿಗಳಿಗೆ ವಿಶೇಷ ರಿಯಾಯಿತಿ ನೀಡಿ ಬಡ ಗ್ರಾಹಕರ ಜೇಬಿಗೆ ಕೈ ಹಾಕುವುದು ಸರಿಯಲ್ಲ. ಹಾಗಾಗಿ ಸರಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತಕ್ಷಣ ಕಡಿಮೆ ಮಾಡಲಿ. ಹೊಟೇಲ್ ತಿಂಡಿ, ಊಟ, ಚಹಾಗಳ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲಿ.

ರಾಜ್ಯ ಸರಕಾರ ಅದರಲ್ಲೂ ಮುಖ್ಯವಾಗಿ ಆಹಾರ ಸಚಿವರು ಹೊಟೇಲ್ ಉದ್ಯಮದ ಪ್ರಮುಖರ ಸಭೆ ಕರೆದು ಆಹಾರ, ತಿಂಡಿ ಪದಾರ್ಥಗಳ ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾಗಿದೆ. ಒಕ್ಕೂಟ ಸರಕಾರ ಮನೆ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಕ್ಷಣ ಕಡಿಮೆ ಮಾಡಲಿ.ಅವುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಡಲಿ.

ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸುವುದಾಗಿ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದಾಗಲೂ ತೈಲೋತ್ಪನ್ನಗಳ ಮೇಲೆ ಸುಂಕ ಹೆಚ್ಚಿಸುವುದು ನಿಯಂತ್ರಣ ಮುಕ್ತ ಗೊಳಿಸುವ ಸರಕಾರದ ಉದ್ದೇಶದ ಪ್ರಾಮಾಣಿಕತೆ ಬಗ್ಗೆ ಸಂದೇಹಕ್ಕೆ ಕಾರಣವಾಗುತ್ತದೆ.ಮನ ಬಂದಂತೆ ತೆರಿಗೆ ಹೆಚ್ಚಿಸುವ ಮೂಲಕ ಸರಕಾರವೇ ತೈಲೋತ್ಪನ್ನಗಳ ಬೆಲೆ ನಿಗದಿ ಪಡಿಸಿದಂತಾಗುತ್ತದೆ. ಇದಕ್ಕೆ ಸರಕಾರ ಅವಕಾಶ ಕೊಡಬಾರದು.

ಇತ್ತೀಚಿನ ಉಪಚುನಾವಣೆಗಳ ಫಲಿತಾಂಶದ ಹಿನ್ನೆಲೆಯಲ್ಲಿ ಹಾಗೂ ಮುಂಬರುವ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು ಐದರಿಂದ ಹತ್ತು ರೂಪಾಯಿ ಕಡಿಮೆ ಮಾಡಿದರೂ ಅದರ ಹೆಚ್ಚಿನ ಪ್ರಯೋಜನ ಜನಸಾಮಾನ್ಯರಿಗೆ ಆಗಿಲ್ಲ. ಕಾಟಾಚಾರದ ಇಂತಹ ಕ್ರಮಗಳು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ಆರ್ಥಿಕ ವ್ಯವಸ್ಥೆ ಚೇತರಿಕೆ ಕಾಣಬೇಕಾದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇನ್ನಷ್ಟು ಕಡಿಮೆ ಮಾಡಬೇಕು ಹಾಗೂ ಅಡಿಗೆ ಅನಿಲದ ಸಿಲಿಂಡರ್ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಕೊಳ್ಳುವ ಶಕ್ತಿ ಜಾಸ್ತಿಯಾದರೆ ದೇಶದ ಆರ್ಥಿಕತೆ ಚೇತರಿಸುತ್ತದೆ. ಅದರ ಬಗ್ಗೆ ಗಮನ ಹರಿಸದೆ ಸರಕಾರ ಕೈಗೊಳ್ಳುವ ಕ್ರಮಗಳೆಲ್ಲ ನಿಷ್ಪ್ರಯೋಜಕ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)