varthabharthi


ನಿಮ್ಮ ಅಂಕಣ

ವಣ್ಣಿಯಾರ್ ಸಮುದಾಯ ಮತ್ತು ಮದ್ರಾಸ್ ಹೈಕೋರ್ಟ್ ತೀರ್ಪು

ವಾರ್ತಾ ಭಾರತಿ : 9 Nov, 2021
ಕೆ.ಎನ್. ಲಿಂಗಪ್ಪ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಮದ್ರಾಸ್ ಉಚ್ಚ ನ್ಯಾಯಾಲಯ (ಮಧುರೈ ವಿಭಾಗೀಯ ಪೀಠ )ಇದೇ ನವೆಂಬರ್ ತಿಂಗಳ ಮೊದಲ ದಿನ, ತಮಿಳುನಾಡು ಸರಕಾರ ವಣ್ಣಿಯಾರ್ ಮತ್ತು ಅದರ ಉಪಜಾತಿಗಳಿಗೆ ಪ್ರತ್ಯೇಕ ಶೇ.10.5ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿ ಅನುಷ್ಠಾನಗೊಳಿಸಿದ್ದ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿ ರದ್ದುಗೊಳಿಸಿರುವುದು ಆ ಸಮುದಾಯಗಳಿಗೆ ಲಘು ಆಘಾತ! ತಂದಿರುವುದಲ್ಲದೆ, ಅವುಗಳು ಹೊಂದಿರುವ ಜನಸಂಖ್ಯಾ ಬಾಹುಳ್ಯದ ಕಾರಣ ರಾಜ್ಯದಲ್ಲಿ ಸಾಕಷ್ಟು ಸಂಚಲನವನ್ನೂ ಉಂಟುಮಾಡಿದೆ.

 ನ್ಯಾಯಾಲಯದ ಈ ತೀರ್ಪು, ಹಿಂದುಳಿದ ವರ್ಗಗಳ ಗುರುತಿಸುವಿಕೆಯಲ್ಲಿ ಅಳವಡಿಸಿಕೊಳ್ಳುವ ಮಾನದಂಡಗಳ ಬಗ್ಗೆ ಕೆಲಮಟ್ಟಿಗಾದರೂ ಬೆಳಕು ಚೆಲ್ಲುವುದರಿಂದ ತೀರ್ಪಿನ ಹಿನ್ನೆಲೆಯನ್ನು ಅವಲೋಕಿಸುವುದು ಅಗತ್ಯವಾಗಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವ ಮುಂಚೂಣಿ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಈ ನಿಟ್ಟಿನಲ್ಲಿ 1969ರಲ್ಲಿಯೇ, ತಮಿಳುನಾಡು ಸರಕಾರ ಎ.ಎನ್.ಸತ್ತನಾಥನ್ ಆಯೋಗ ನೇಮಿಸಿ, ಅದು ನೀಡಿದ ವರದಿ ಅನುಸರಿಸಿ, ಹಿಂದುಳಿದ ವರ್ಗಗಳನ್ನು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಎಂದು ಎರಡು ಪ್ರವರ್ಗಗಳಾಗಿ ವಿಂಗಡಿಸಿತು. ಅತ್ಯಂತ ಹಿಂದುಳಿದ ಪ್ರವರ್ಗದಲ್ಲಿ ವಣ್ಣಿಯಾರ್ ಮತ್ತು ವಿಮುಕ್ತ ಬುಡಕಟ್ಟುಗಳು (denotified tribes)ಸೇರಿದಂತೆ ಒಟ್ಟು 109 ಜಾತಿ-ಉಪಜಾತಿಗಳಿಗೆ ಶೇ. 20ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಲಾಯಿತು. (ತ.ನಾ.-ಹಿಂ.ವ./ಪ.ಜಾ./ಪ.ಪಂ. ಕಾಯ್ದೆ,1993).1982ರಲ್ಲಿ ನೇಮಕವಾದ ಜೆ.ಎ.ಅಂಬಾಶಂಕರ್ ಆಯೋಗ ಜಾತಿವಾರು ಸಮಾಜೋ-ಆರ್ಥಿಕ ಮತ್ತು ಶೈಕ್ಷಣಿಕ ಸಮಗ್ರ ಸಮೀಕ್ಷೆಯನ್ನು (ಶೇ. 100ರಷ್ಟು) ರಾಜ್ಯವ್ಯಾಪಿ ನಡೆಸಿ ನೀಡಿರುವ ವರದಿ(1985), ಶೇಕಡವಾರು ಕೋಟಾ ಮಿತಿಯನ್ನು 69ಕ್ಕೆ ಹೆಚ್ಚಿಸಲು ಆಧಾರವಾಗಿದೆ ಎಂಬುದು ಗಮನಾರ್ಹ ಅಂಶ. ಇದೇ ದತ್ತಾಂಶಗಳನ್ನೂ ಅತ್ಯಂತ ಹಿಂದುಳಿದ ಪ್ರವರ್ಗಗಳ ಉಪ ವರ್ಗೀಕರಣ ಕೈಗೊಳ್ಳಲು ಆಧಾರವಾಗಿ ಇಟ್ಟುಕೊಳ್ಳಲಾಗಿದೆ ಎಂಬುದನ್ನು ಸರಕಾರ ಹೇಳಿಕೊಂಡಿದೆ.

1980ರ ದಶಕದ ಲಾಗಾಯ್ತಿನಿಂದಲೂ, ವಣ್ಣಿಯಾರ್ ಸಮಾಜ,‘ವಣ್ಣಿಯಾರ್ ಸಂಘಮ್’ ಎಂಬ ಸಂಘಟನೆಯ ಮೂಲಕ ಪ್ರತ್ಯೇಕ ಮೀಸಲಾತಿ ಬೇಡಿಕೆಯನ್ನು ಸರಕಾರದ ಮುಂದಿಟ್ಟು ಹೋರಾಟ ಮುಂದುವರಿಸಿಕೊಂಡು ಬಂದಿತ್ತು. ಸೆಪ್ಟಂಬರ್ 1987ರ ಸಮಯದಲ್ಲಿ ಹೋರಾಟ, ಎಸ್.ರಾಮದಾಸ್ ನೇತೃತ್ವದಲ್ಲಿ ತೀಕ್ಷ್ಣ ಸ್ವರೂಪ ಪಡೆದುಕೊಂಡಿತು. ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಮುಷ್ಕರನಿರತರು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡುತ್ತಿದ್ದುದರಿಂದ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಪರಿಣಾಮವಾಗಿ ಆ ಭಾಗದ ಜನಜೀವನ ನಿಶ್ಚಲ ಸ್ಥಿತಿಗೆ ಬಂದಿತು. ಇದೇ ಸಮಯದಲ್ಲಿ ಪೊಲೀಸರ ಕ್ರಮದಿಂದ 21 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದರು. ಹೀಗೆ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು ಮುಂದುವರಿದಿತ್ತು. ಆದರೂ, ವಣ್ಣಿಯಾರ್ ಸಮಾಜದ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಸರಕಾರದ ಚದುರಂಗದಾಟವು ನಡೆದೇ ಇತ್ತು.

ಕೊನೆಗೂ, ಸರಕಾರ ವಣ್ಣಿಯಾರ್ ಸಮುದಾಯದ ಪ್ರತಿಭಟನೆಗೆ ಮಣಿದು, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು. 2012ರಲ್ಲಿ, ಸರಕಾರದ ಪರಿಶೀಲನಾಂಶದ (reference)ಮೇರೆಗೆ, ಎಂ.ಎಸ್.ಜನಾರ್ದನಮ್ ಹಿಂದುಳಿದ ವರ್ಗಗಳ ಆಯೋಗ, ಅತ್ಯಂತ ಹಿಂದುಳಿದ ವರ್ಗಗಳನ್ನು 3 ಭಾಗವಾಗಿ ಪ್ರತ್ಯೇಕಿಸಿ ಮೀಸಲಾತಿ ಕಲ್ಪಿಸಲು ಸರಕಾರಕ್ಕೆ ಶಿಫಾರಸು ಮಾಡಿತು.ಶೇ. 20ರ ಮೀಸಲಾತಿ ಕೋಟಾದಲ್ಲಿ, ವಣ್ಣಿಯಾರ್ ಸಮುದಾಯಗಳಿಗೆ ಶೇ. 10.5ರಷ್ಟು ಮತ್ತು ವಿಮುಕ್ತ ಜಾತಿಗಳನ್ನೂ ಒಳಗೊಂಡ 93 ಜಾತಿಗಳಿಗೆ ಶೇ. 7 ರಷ್ಟು ಹಾಗೂ ಉಳಿದ 22 ಜಾತಿಗಳಿಗೆ ಶೇ. 2.5ರಷ್ಟು ಕೋಟಾವನ್ನು ಹಂಚಿಕೆ ಮಾಡಲೂ ಆಯೋಗ ಶಿಫರಾಸು ಮಾಡಿತ್ತು. ಶಿಫಾರಸಿನ ವರದಿ ಸರಕಾರದ ಮುಂದಿದ್ದರೂ, ಶೀಘ್ರಗತಿಯ ಕ್ರಮಕ್ಕೆ ಸರಕಾರ ಉತ್ಸುಕತೆ ತೋರಲಿಲ್ಲ.ರಾಜಕೀಯ ಕಾಲಚಕ್ರದಲ್ಲಿ ಶಿಫಾರಸು ಸಿಲುಕಿಕೊಂಡಿತು. ವರ್ಷಗಳುರುಳಿದವು.

ಜಾತಿವಾರು ನಿರ್ದಿಷ್ಟ ಜನಸಂಖ್ಯೆಯ ಅವಶ್ಯಕತೆ ಇದೆ ಎಂದು, ರಾಜ್ಯ ಸರಕಾರ 21.12.2020ರಂದು ನಿವೃತ್ತ ನ್ಯಾಯಮೂರ್ತಿ ಕುಲಶೇಖರನ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಸಮಗ್ರ ಜಾತಿ-ಸಮುದಾಯಗಳ ಪ್ರಾಮಾಣೀಕರಿಸುವ(quantifiable) ದತ್ತಾಂಶ ಸಂಗ್ರಹಿಸಿ, ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನೇಮಕ ಮಾಡಿ, ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ನೀಡಿತ್ತು.

ಈ ನಡುವೆ, ಕುಲಶೇಖರನ್ ಆಯೋಗದ ವರದಿಗೂ ಕಾಯದೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡುವ ಸ್ವಲ್ಪ ಸಮಯದ ಮುನ್ನ, ಆತುರಾತುರವಾಗಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರಕಾರ 26.2.2021ರಂದು, ವಣ್ಣಿಯಾರ್ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.10.5 ರಷ್ಟು ಮೀಸಲಾತಿ ಕೋಟಾ ನಿಗದಿಗೊಳಿಸಲು ಅನುಕೂಲವಾಗುವಂತೆ, ಮಸೂದೆಯೊಂದನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತು. ಅಂದೇ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಂದ ಅನುಮೋದನೆಯನ್ನೂ ಪಡೆದು, ಸಂಭವನೀಯ ತೊಡಕುಗಳಿಗೆ ಆತಂಕಗೊಂಡ ಸರಕಾರ ಆ ಕ್ಷಣವೇ ರಾಜ್ಯಪತ್ರದಲ್ಲಿಯೂ ಪ್ರಕಟಿಸಿತು. ಆ ಪ್ರಕಾರವಾಗಿ, ‘..Reservation for the most backward classes and denotified communities Act,2021' ಜಾರಿಗೆ ಬರುತ್ತದೆ. ಎಂ.ಎಸ್.ಜನಾರ್ದನಮ್ ಆಯೋಗದ ವರದಿಯ ಶಿಫಾರಸುಗಳನ್ನೇ ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಡಿಎಂಕೆ ಅಧಿಕಾರ ಗಳಿಸಿತು. ಎಂ.ಕೆ. ಸ್ಟಾಲಿನ್ ನೇತೃತ್ವದ ಸರಕಾರ ತತ್ಸಂಬಂಧ 27.7.2021ರಂದು ಆದೇಶ ಹೊರಡಿಸಿತು.
ಸರಕಾರ ತನ್ನ ಆದೇಶದಲ್ಲಿ, ಅತ್ಯಂತ ಹಿಂದುಳಿದ ವರ್ಗಗಳನ್ನು ಪ್ರತ್ಯೇಕ ಮೂರು ಭಾಗವಾಗಿ ವಿಂಗಡಿಸಿ, ಕ್ರಮವಾಗಿ ಮೀಸಲಾತಿ ಕೋಟಾ ನಿಗದಿಪಡಿಸುತ್ತದೆ. ಅವು ಹೀಗಿವೆ 1. ವಣ್ಣಿಕುಲ ಕ್ಷತ್ರಿಯ, ವಣ್ಣಿಯಾರ್, ವಣ್ಣಿಯ, ವಣ್ಣಿಯ ಗೌಂಡರ್, ಗೌಂಡರ್ ಅಥವಾ ಕಂದರ್, ಪಡಯಾಚಿ, ಪಳ್ಳಿ, ಮತ್ತು ಅಗ್ನಿಕುಲ ಕ್ಷತ್ರಿಯ (ಶೇ. 10.5) 2. ವಿಮುಕ್ತ ಬುಡಕಟ್ಟುಗಳು ಸೇರಿ 93 ಜಾತಿಗಳು(ಶೇ. 7) 3. 22 ಜಾತಿ -ಉಪಜಾತಿಗಳು(ಶೇ. 2.5).
ಸರಕಾರದ ಆದೇಶವನ್ನು ಪ್ರಶ್ನಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ, ಸರಿ ಸುಮಾರು 35 ರಿಟ್ (ವಿ.ವಿ ಸ್ವಾಮಿನಾಥನ್  vs ತಮಿಳುನಾಡು ಸರಕಾರ ) ಅರ್ಜಿಗಳು ಸಲ್ಲಿಕೆಯಾಗುತ್ತವೆ. ನ್ಯಾಯಮೂರ್ತಿಗಳಾದ ಎಂ.ದುರೈ ಸ್ವಾಮಿ ಮತ್ತು ಕೆ.ಮುರಳಿಶಂಕರ್ ಅವರ ವಿಭಾಗೀಯ ಪೀಠ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ 1.11.21ರಂದು ತೀರ್ಪು ನೀಡಿದೆ. ನ್ಯಾಯಾಲಯ ರಿಟ್ ಅರ್ಜಿಗಳನ್ನು ಪುರಸ್ಕರಿಸಿ, ಸರಕಾರದ ಆದೇಶ ಅಸಾಂವಿಧಾನಿಕ ಎಂದು ಘೋಷಿಸಿದೆ.

ಉಚ್ಚ ನ್ಯಾಯಾಲಯ ತೀರ್ಪಿನಲ್ಲಿ ಎರಡು ತಾಂತ್ರಿಕ ಕಾರಣಗಳನ್ನೂ ನೀಡಿದೆ. ಸಂವಿಧಾನದ 102ನೇ ತಿದ್ದುಪಡಿಯ ನಂತರ ರಾಜ್ಯ ಸರಕಾರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರವಿಲ್ಲ(ಜಯಶ್ರೀ ಲಕ್ಷ್ಮಣರಾವ್ ಪಾಟೀಲ್  vs ಮಹಾರಾಷ್ಟ್ರ, 2021 scc, sc362) ಹಾಗೆಯೇ, 1993ರ ಕಾಯ್ದೆ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿರುವುದರಿಂದ ಆ ಕಾಯ್ದೆಯ ತಿದ್ದುಪಡಿ ಆಗದ ಹೊರತು ಯಾವುದೇ ಬದಲಾವಣೆ ತರುವ ಹಾಗಿಲ್ಲ ಮತ್ತು ಅತಿ ಮುಖ್ಯವಾಗಿ, ‘ಜಾತಿ’ಯನ್ನು ‘ವರ್ಗ’ಎಂದು ಪರಿಗಣಿಸಿರುವುದು ಸಂವಿಧಾನ ವಿರೋಧಿ ಎಂದು ಹೇಳಿದೆ. ಮೀಸಲಾತಿ ಕಲ್ಪಿಸುವುದು ‘ವರ್ಗ’ಗಳಿಗೆ ವಿನಾ, ‘ಜಾತಿ’ಗಳಿಗಲ್ಲ. ಒಂದೇ ಗುಂಪಿನಲ್ಲಿರುವ ವಣ್ಣಿಯಾರ್ ಮತ್ತು ಅದರ 6 ಉಪಜಾತಿಗಳನ್ನು ಪ್ರತ್ಯೇಕಿಸಿ ಅವುಗಳನ್ನು ‘ವರ್ಗ’ ಎಂದು ಪರಿಗಣಿಸಿರುವುದೂ ಸಂವಿಧಾನ ಬದ್ಧವಾಗಿಲ್ಲ. ಈ ಉಪಜಾತಿಗಳೆಲ್ಲವನ್ನೂ ‘ಒಂದೇ’ ಜಾತಿ ಎಂದು ಎಂದಿಗೂ ಪರಿಗಣಿಸಬೇಕು. ಯಾವುದೇ ‘ಏಕರೂಪ’ (homogenious) ಜಾತಿಯನ್ನು ಬೇರೆ ಬೇರೆ ‘ವರ್ಗಗಳು’ ಎಂದೂ ಪ್ರತ್ಯೇಕಿಸಕೂಡದು.ಆಕ್ಷೇಪಿತ ಕಾಯ್ದೆ, 2021 ಕೇವಲ ಜಾತಿವಾರು ಜನಸಂಖ್ಯೆಯ ಆಧಾರದಿಂದ ರಚಿತವಾಗಿದೆಯೇ ವಿನಾ, ಯಾವುದೇ ವಸ್ತುನಿಷ್ಠ ಮಾನದಂಡಗಳನ್ನು ಆಧರಿಸಿರುವುದಿಲ್ಲ; ಹಾಗೆಯೇ ಪ್ರಾಮಾಣೀಕರಿಸುವ ದತ್ತಾಂಶಗಳಿಲ್ಲದೆ ಅದು ರೂಪಿತಗೊಂಡಿರುವುದೇ ಆಗಿದೆ. ಆದಕಾರಣ ಸಂವಿಧಾನದ ವಿಧಿಗಳಾದ15(4),16(4) ಮತ್ತು 14ರ ಉಲ್ಲಂಘನೆ ಎಂದು ನ್ಯಾಯಾಲಯ ಘೋಷಿಸಿದೆ.
ಇತ್ತ ಕರ್ನಾಟಕದಲ್ಲಿ, ಸದ್ಯ ಪರಿಹಾರ ಕಾಣದ, ಬಹುತೇಕ ಇದೇ ಮಾದರಿಯ ವಿದ್ಯಮಾನವೊಂದು ಸರಕಾರದ ಮುಂದಿದೆ.

ಪಂಚಮಸಾಲಿ ಸಮುದಾಯವು ಪ್ರಸ್ತುತ ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-3ಬಿಯಲ್ಲಿ, ವೀರಶೈವ ಲಿಂಗಾಯತದ ಒಳ ಪಂಗಡವಾಗಿ ಸೇರಿದೆ. ಇತ್ತೀಚಿನ ಕೆಲ ವರ್ಷಗಳಿಂದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಪಟ್ಟಿಗೆ ವರ್ಗಾಯಿಸಿ ಕೊಡಬೇಕೆಂದು ಆ ಸಮುದಾಯದ ಜನ ಸರಕಾರದ ಮುಂದೆ ಬೇಡಿಕೆ ಇಟ್ಟು ಹೋರಾಟದಲ್ಲಿ ನಿರತರಾಗಿದ್ದಾರೆ. ಈ ವಿದ್ಯಮಾನವನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ಉದಾಹರಣೆಯಾಗಿ ಇಟ್ಟುಕೊಂಡು ಪರಿಶೀಲಿಸಿದಲ್ಲಿ ಕಂಡುಬರುವ ಅಂಶವೆಂದರೆ - ಪಂಚಮಸಾಲಿ ಸಮುದಾಯ ವೀರಶೈವ ಲಿಂಗಾಯತದ ಒಂದು ಉಪಜಾತಿಯಾಗಿ ಪರಿಗಣಿತವಾಗಿದೆ. ‘ಏಕರೂಪ’ದ ಜಾತಿಯನ್ನು ಬೇರೆ ಬೇರೆಯಾಗಿ ‘ವರ್ಗ’ ಅಥವಾ ವಿಭಿನ್ನ ‘ಜಾತಿ’ ಎಂದು ಪ್ರತ್ಯೇಕಿಸಲಾಗದು ಎಂಬ ತತ್ವದ ಹಿನ್ನೆಲೆಯಲ್ಲಿ ಸಮುದಾಯದ ಬೇಡಿಕೆಯನ್ನು ಸರಕಾರ ಇತ್ಯರ್ಥಗೊಳಿಸಬೇಕಾಗಿದೆ. ಹಾಗೆಯೇ, ಮೀಸಲಾತಿಯ ಸವಲತ್ತು -ಸೌಲಭ್ಯಗಳು ‘ಜಾತಿ’ ಆಧಾರಿತವಾಗಿ ಇರಬಾರದು; ಅವುಗಳೇನಿದ್ದರೂ ‘ವರ್ಗ’ ಆಧಾರಿತವಾಗಿರಬೇಕು. ಈ ಹಿನ್ನೆಲೆಯಲ್ಲಿ ಜಾತಿ ಆಧಾರಿತ ನಿಗಮಗಳ ಸ್ಥಾಪನೆ ಸರಿಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಅತ್ಯಂತ ಹಿಂದುಳಿದ ವರ್ಗವೆಂದು ಪರಿಗಣಿಸಲ್ಪಟ್ಟಿರುವ ವಣ್ಣಿಯಾರ್ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಲ್ಲಿ, ಆ ಜಾತಿಯ ಮೇಲಿರುವ ಕಳಕಳಿಗಿಂತ ರಾಜಕೀಯ ಲಾಭವೇ ಮೇಲುಗೈ ಪಡೆದ ಹಾಗೆ ಕಾಣಿಸುತ್ತಿದೆ.ರಾಜಕೀಯ ಲಾಭವನ್ನೇ ಮುಖ್ಯವಾಗಿರಿಸಿಕೊಂಡು ಯಾವುದೇ ಶಾಸನ ರೂಪಿಸಿದಲ್ಲಿನ್ಯಾಯಾಂಗ ಕೈಕಟ್ಟಿ ಕೂರುವ ಸಂಭವವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)